ಕ್ಷೇತ್ರಗಳ ವಿಶೇಷ ನಗರ ಪ್ರಮುಖ ಸ್ಥಳೀಯ

ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ಅತಿರುದ್ರ ಮಹಾಯಾಗ ಫೆ.25ರಿಂದ ಮಾ.2ರ ವರೆಗೆ

ಮಂಗಳೂರು: ಕಾಸರಗೋಡಿನ ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ಫೆಬ್ರವರಿ 25ರಿಂದ ಮಾರ್ಚ್‌ 2ರ ವರೆಗೆ ಬ್ರಹ್ಮಕಲಶೋತ್ಸವ ಮತ್ತು ಅತಿ ಅಪರೂಪದ ಅತಿರುದ್ರ ಮಹಾಯಾಗ ನೆರವೇರಲಿದೆ.

ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅತಿರುದ್ರ ಮಹಾಯಾಗದ ಗೌರವ ಸಲಹೆಗಾರರಾಗಿರುವ ರವೀಶ್ ತಂತ್ರಿ ಕುಂಟಾರು ಅವರು ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅತಿರುದ್ರ ಮಹಾಯಾಗದ ಸಮಿತಿಯ ಅಧ್ಯಕ್ಷ ಸಿ.ವಿ ಪೊದುವಾಳ್, ಕಾರ್ಯಾಧ್ಯಕ್ಷರಾದ ಡಾ| ಅನಂತ ಕಾಮತ್ ಕಾಸರಗೋಡು, ನ್ಯಾಯವಾದಿ ಸತೀಶ್ ಕೋಟೆಕಣಿ ಮುಂತಾದವರು ಹಾಜರಿದ್ದರು.

ತಂತ್ರಿಗಳಾದ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ, ನಾಡಿನ ಹಿರಿಯ ವೈದಿಕ ವಿದ್ವಾಂಸ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟ ಅಧ್ವರ್ಯುತನದಲ್ಲಿ 100ಕ್ಕೂ ಹೆಚ್ಚು ಋತ್ವಿಜರಿಂದ ಬ್ರಹ್ಮಕಲಶೋತ್ಸವ ಮತ್ತು ಅತಿರುದ್ರ ಮಹಾಯಾಗ ನೆರವೇರಲಿದೆ.

ಪುರಾತನ ದೇವಸ್ಥಾನ:
ದೇವರ ಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರವು ಕೇರಳ ಕರ್ನಾಟಕ ಗಡಿನಾಡು ಪ್ರವೇಶವಾದ ಕಾಸರಗೋಡಿನಲ್ಲಿ, ಕರಂದಕ್ಕಾಡು ಮಧೂರು ರಸ್ತೆಯಲ್ಲಿ ಕಾಸರಗೋಡಿನಿಂದ 2 ಕಿ ಮೀ ದೂರದ ರಾಮದಾಸ ನಗರದಲ್ಲಿದೆ.

ಪುರಾತನ ದೇವಸ್ಥಾನವು ಸುಮಾರು 500 ವರ್ಷಗಳ ಹಿಂದೆ ಮತೀಯ ಆಕ್ರಮಣಗಳಿಂದ ಸಂಪೂರ್ಣ ನಾಶವಾಗಿತ್ತು. ಕಾಲಂತರದಲ್ಲಿ ಕಾಡಿನ ಮಧ್ಯದಲ್ಲಿ ಶಿವಲಿಂಗ ಗೋಚರಿಸಿದ್ದು 1999ರಲ್ಲಿ ತಂತ್ರಿ ಶ್ರೇಷ್ಥರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರ ನೇತೃತ್ವದಲ್ಲಿ ಸುಂದರವಾದ ಪವಿತ್ರ ಕ್ಷೇತ್ರ ನಿರ್ಮಾಣವಾಗಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಿತು. 2012 ರಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಹಾ ರುದ್ರಯಾಗ ನಡೆದು 2016 ರಿಂದ ಪ್ರತ ವರ್ಷ ಧನು ಮಾಸ ಪೂಜೆ ಕೂಡ ನಡೆದು ಬರುತ್ತಿದ್ದು ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಇದೀಗ ಫೆಬ್ರವರಿ 25 ರಿಂದ ಮಾರ್ಚ್ 2 ರ ತನಕ ಶ್ರೀ ಕ್ಷೇತ್ರದಲ್ಲಿ ಅತಿ ರುದ್ರ ಮಹಾಯಾಗ ನಡೆಯಲಿದೆ. ಫೆಬ್ರವರಿ 25ರಂದು ಬೆಳಗ್ಗೆ ಮಹಾ ಯಾಗ ಆರಂಭವಾಗಿ ಮಾರ್ಚ್ 2 ರಂದು ಪೂರ್ಣಾಹುತಿ ನಡೆಯಲಿದೆ. ಈ ದಿನಗಳಲ್ಲಿ ಅಷ್ಟೋತ್ತರ ಶತ ನಾಳಿಕೇರ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಆಶ್ಲೇಷ ಬಲಿ ಸೇವೆ ಕೂಡ ನಡೆಯಲಿದೆ. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯತಿ ಶ್ರೇಷ್ಟರು, ಆಚಾರ್ಯರು, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.

ಅತಿ ರುದ್ರ ಮಹಾಯಾಗ ಯಶಸ್ವಿಗಾಗಿ ವಿವಿಧ ಸಂತರ ಮಾರ್ಗದರ್ಶಕರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಮುಖಂಡರು (ಪೋಷಕರು), ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು (ಗೌರವಾಧ್ಯಕ್ಷರು), ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಡಾ ಅನಂತ ಕಾಮತ್, ಕಾಸರಗೋಡು (ಕಾರ್ಯಾಧ್ಯಕ್ಷರು) ಪಿವಿ ಪೊದುವಾಳ್ (ಅಧ್ಯಕ್ಷರು) ಹಾಗೂ ಡಾ. ಜಯಪ್ರಕಾಶ್ ನಾಯ್ಕ್ (ಟ್ರಸ್ಟಿ) ಅವರನ್ನೊಳಗೊಂಡ ಅತಿರುದ್ರ ಮಹಾಯಾಗ ಸಮಿತಿ ನಾನಾ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದೆ.

ಬ್ರಹ್ಮಶ್ರೀ ರವೀಶ್ ತಂತ್ರಿ ಕುಂಟಾರು, ಸೀತಾರಾಮ ಕೆದಿಲಾಯರು, ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಈ ಸಮಿತಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯವಾದಿ ಸತೀಶ್ ಕೋಟೆಕಣಿಯವರು ಪ್ರಧಾನ ಸಂಚಾಲಕರಾಗಿದ್ದು, ಅತಿರುದ್ರ ಮಹಾಯಾಗ ಸಮಿತಿಯ ನೇತೃತ್ವದಲ್ಲಿ ಕಾರ್ಯಚಟುವಟಿಕೆಗಳು ಭರದಿಂದ ಸಾಗುತ್ತಿವೆ.

ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು ಉಪಯೋಗಿಸದೆ ಕಲ್ಲು, ಮಣ್ಣು, ಸೆಗಣಿ, ಸೆಂಗಿನ ಗರಿ, ಬಿದಿರು, ಕಂಗು, ಹುಲ್ಲು ಹಾಸಿದ ಬೃಹತ್‌ ಯಾಗಶಾಲೆಯು ಈಗಾಗಲೇ ನಿರ್ಮಾಣಗೊಂಡಿದೆ. ಧಾರ್ಮಿಕ ಸಭಾಭವನಕ್ಕೆ ಅಗತ್ಯವಿರುವ ಸುಮಾರು 60,000 ಚದರ ಅಡಿ ವಿಸ್ತೀರ್ಣದ ಚಪ್ಪರದ ಕೆಲಸವೂ ಪೂರ್ತಿಗೊಂಡಿದೆ. ಯಾಗದಲ್ಲಿ ಅರ್ಪಿಸಲು ಬೇಕಾಗುವ ಹವಿಸ್ಸುಗಳಾದ ಭತ್ತವನ್ನು ಬೇಳ ಗ್ರಾಮದ ಕರ್ಪಿತ್ತಿಲುವಿನಲ್ಲಿ ಊರ ಕೃಷಿಕರೇ ಬೆಳೆಸಿದ್ದಾರೆ. ಎಳ್ಳನ್ನು ಭಗವತಿ ನಗರದ ಶ್ರೀ ಐವರ್ ಭಗವತಿ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ಸಾವಯವ ಕೃಷಿಯ ಮೂಲಕ ಉತ್ಪಾದಿಸಲಾಗಿದೆ.

ಕಾಸರಗೋಡು ತಳಿಯ ದನದ ತುಪ್ಪವನ್ನು ಹವಿಸ್ಸಾಗಿ ಉಪಯೋಗಿಸಲಾಗುತ್ತದೆ. ಅನ್ನ ಸಂತರ್ಪಣೆಗೆ ಅಗತ್ಯವಿರುವ ವಿವಿಧ ತರಕಾರಿಗಳನ್ನು ಸಾವಯವ ಕೃಷಿ ಮೂಲಕ ಈಗಾಗಲೇ ಬೆಳೆಸಲಾಗಿದೆ. ಯಾಗದ ಪೂರ್ವಭಾವಿಯಾಗಿ ಸುಮಾರು 2,000 ಮನೆಗಳಲ್ಲಿ ತುಳಸಿ ವನಗಳನ್ನು ನಿರ್ಮಿಸುವ ಯೋಜನೆ ಸಫಲವಾಗಿದೆ. ಸುಮಾರು 1500ಕ್ಕೂ ಹೆಚ್ಚು ಔಷಧಿ ಸಸ್ಯಗಳನ್ನು ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಸಲು ವಿತರಿಸಲಾಗಿದೆ.

ಅತ್ಯಂತ ಶ್ರೇಷ್ಠವಾದ ಈ ಯಾಗದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಆಗಮಿಸುವ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ಮಾಡಲಾಗುತ್ತದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಗ್ರಾಮೀಣ ಪ್ರದೇಶವೇ ಪ್ರೀತಿಯ ಅಕ್ಷಯ ಪಾತ್ರ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

Upayuktha

ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ

Upayuktha

ಏ.11ಕ್ಕೆ ಕೆ-ಸೆಟ್ ಪರೀಕ್ಷೆ

Sushmitha Jain