ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಯನ್ನು ಡಿಜಿಟಲ್ ರೂಪದಲ್ಲಿ ಉದ್ಘಾಟಿಸಿದರು.
ಇದೇ ವೇಳೆ ಪಶು ಸಂಗೋಪನೆ, ಹೈನುಗಾರಿಕೆ ನಡೆಸುವ ಕೃಷಿಕರಿಗೆ ನೆರವಾಗಲು ತಳಿ ಸಂವರ್ಧನೆಯ ಸಮಗ್ರ ಮಾಹಿತಿ ಮತ್ತು ರೈತರು ನೇರವಾಗಿ ಬಳಸಬಹುದಾದ ಪೋರ್ಟಲ್ ಒಳಗೊಂಡಿರುವ ಇ-ಗೋಪಾಲ ಆಪ್ ಅನ್ನೂ ಪ್ರಧಾನಿ ಬಿಡುಗಡೆ ಮಾಡಿದರು.
ಮೀನುಗಾರಿಕೆ ಮತ್ತು ಬಿಹಾರದ ಪಶುಪಾಲನೆ ವಲಯದ ಹಲವು ವಿನೂತನ ಉಪಕ್ರಮಗಳನ್ನೂ ಪ್ರಧಾನಿ ಉದ್ಘಾಟಿಸಿದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ದೇಶದಲ್ಲಿ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿ 20 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ ಪ್ರಮುಖ ಯೋಜನೆಯಾಗಿದೆ.
ಮೀನುಗಾರಿಕೆ ವಲಯದಲ್ಲಿ ಈ ವರೆಗಿನ ಅತಿದೊಡ್ಡ ಹೂಡಿಕೆ ಇದಾಗಿದೆ. 2024-25ರ ವೇಳೆಗೆ 70 ಲಕ್ಷ ಟನ್ಗಳಷ್ಟು ಹೆಚ್ಚುವರಿ ಮೀನುಗಳ ಉತ್ಪಾದನೆ ಮಾಡುವ ಉದ್ದೇಶ ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಈ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದ ಉದ್ದೇಶವೆಂದರೆ ಹಳ್ಳಿಗಳನ್ನು ಬಲಪಡಿಸಿ 21ನೇ ಶತಮಾನದಲ್ಲಿ ಸದೃಢ ಮತ್ತು ಆತ್ಮನಿರ್ಭರ ಭಾರತ ನಿರ್ಮಿಸುವುದೇ ಆಗಿದೆ ಎಂದು ತಿಳಿಸಿದರು.
ದೇಶದ 21 ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಇಂದು ಜಾರಿಗೊಳಿಸಲಾಗಿದೆ. ಮುಂದಿನ 4-5 ವರ್ಷಗಳಲ್ಲಿ ಇದಕ್ಕಾಗಿ 20 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಹಾರದ ಪಾಟ್ನಾ, ಸೀತಾಮಡಿ, ಮಾಧೇಪುರ, ಕಿಶನ್ಗಂಜ್ ಮತ್ತು ಸಮಷ್ಟಿಪುರದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಲಾಯಿತು.
ಈ ಸೌಲಭ್ಯಗಳೊಂದಿಗೆ ಮೀನುಗಳ ಉತ್ಪಾದಕರಿಗೆ ಅತ್ಯಾಧುನಿಕ ಸಲಕರಣೆಗಳು, ಹೊಸ ಮಾರುಕಟ್ಟೆಗಳು ಮತ್ತು ನವೀನ ಮೂಲಸೌಕರ್ಯಗಳು ಲಭಿಸುತ್ತವೆ ಎಂದು ಪ್ರಧಾನಿ ಹೇಳಿದರು.
ದೇಶದ ಎಲ್ಲ ಭಾಗಗಳಲ್ಲೂ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಇಂತಹದೊಂದು ಬೃಹತ್ ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ದೇಶದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 10 ಕೋಟಿ ಗೂ ಅಧಿಕ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆ ಫಲಾನುಭವಿಗಳ ಪೈಕಿ 75 ಲಕ್ಷ ರೈತರು ಬಿಹಾರದವರೇ ಆಗಿದ್ದಾರೆ. ಬಿಹಾರದ ರೈತರ ಖಾತೆಗಳಿಗೆ ಈ ವರೆಗೆ 6 ಸಾವಿರ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಮೋದಿ ಹೇಳಿದರು.
ಇ-ಗೋಪಾಲ ಆಪ್ ದೇಶದ ಜಾನುವಾರು ಮಾಲೀಕರಿಗೆ ಸುಧಾರಿತ ಮೇವಿನ ಆಯ್ಕೆಗೆ ನೆರವಾಗಲಿದೆ. ಜತೆಗೆ ಜಾನುವಾರುಗಳ ಉತ್ಪಾದಕತೆ, ಆರೋಗ್ಯ, ಮತ್ತು ಆಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಂದೇ ಕಡೆ ಒದಗಿಸಲಿದೆ ಎಂದು ಅವರು ತಿಳಿಸಿದರು.
ಕೊರೊನಾ ಕಾಲದಲ್ಲಿ ದೇಶದ ಜನತೆ ಅತ್ಯಂತ ಹೆಚ್ಚು ಜಾಗರೂಕತೆವಹಿಸಬೇಕು. ಕೊರೊನಾ ಸಾಂಕ್ರಾಮಿಕವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಪ್ರಧಾನಿ ಮನವಿ ಮಾಡಿದರು.
ಕೊರೊನಾ ಲಸಿಕೆ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿ ಬರುತ್ತಿವೆ. ಆದರೆ ಸಾಮಾಜಿಕ ಅಂತರ ಎಂಬ ವ್ಯಾಕ್ಸಿನ್ ಅನ್ನು ನಾವೇ ಅಳವಡಿಸಿಕೊಳ್ಳುವ ಮೂಲಕ ಸುರಕ್ಷಿತವಾಗಿರಬಹುದು. ಮಾಸ್ಕ್ ಧರಿಸುವುದಕ್ಕೆ ಮತ್ತು ಸಾಮಾಜಿಕ ಅಂತರ ಕಾಪಾಡುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಪ್ರಧಾನಿ ಒತ್ತಾಯಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.