ಸಾಧಕರಿಗೆ ನಮನ

ಸಾಧಕರಿಗೆ ನಮನ: ಕಲಾಂ ಸರ್ ಅವರಿಗೊಂದು ಪ್ರೇಮ ಪತ್ರ

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮದಿನದ ಸ್ಮರಣೆ

ಸರ್, ನೀವು ಗತಿಸಿ ಐದು ವರ್ಷ ಸಂದಿತು. ಆದರೂ ನೀವು ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿ. ನಿಮ್ಮ ಬದುಕಿನ ಸಂದೇಶಗಳಿಗೆ ಮತ್ತು ನೆನಪುಗಳಿಗೆ ಸಾವಿಲ್ಲ. ದೇಶದ ರಾಷ್ಟ್ರಪತಿ ಆದ ಮೊದಲ ವಿಜ್ಞಾನಿ ನೀವು! ರಾಷ್ಟ್ರಪತಿ ಹುದ್ದೆಗೆ ನಿಮ್ಮಷ್ಟು ಘನತೆಯನ್ನು ತಂದುಕೊಡಲು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಮುಂದೆಯೂ ಕಷ್ಟ. ಏಕೆಂದರೆ ನೀವು ಜನರ ರಾಷ್ಟ್ರಪತಿ. ನಡೆದಾಡುವ ವಿಶ್ವಮಾನವ! ಭಾರತದಲ್ಲಿ ಗಾಂಧಿ ಮತ್ತು ಕಲಾಂ ಆಗುವುದು ತುಂಬಾ ಕಷ್ಟ ಸರ್.

ನಿಮ್ಮೊಳಗೆ ಇದ್ದ ಮುಗ್ಧವಾದ ಮಗು ಅದೊಂದು ಅದ್ಭುತ! ಎಲ್ಲಾ ತಿಳಿದಿದ್ದೂ ನನಗೆ ಏನೂ ಗೊತ್ತಿಲ್ಲ ಎಂಬ ಭಾವ, ಶಾಲೆಯ ಮಕ್ಕಳ ಮುಂದೆ ಪೋಸ್ ಕೊಡದೆ, ಮುಖವಾಡ ಹಾಕದೆ ಅವರೊಂದಿಗೆ ಸಂವಾದಕ್ಕೆ ಇಳಿಯುವ ನಿಮ್ಮ ನಿರಹಂಕಾರ ಭಾವ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ! ನಿಮಗೆ ಭಾರತರತ್ನ ದೊರೆತಾಗ “ನನಗಿಂತ ಮೊದಲು ನನ್ನ ಗುರುಗಳಾದ ವಿಕ್ರಮ ಸಾರಾಭಾಯಿ ಅವರಿಗೆ ಸಿಗಬೇಕಿತ್ತು” ಎಂದು ನೀವು ಹೇಳಿದ್ದು ನನಗೆ ಇಷ್ಟವಾಗಿತ್ತು. ನಿಮ್ಮ ಬಾಲ್ಯದ ಬಡತನ, ಹಸಿವು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದ್ದು ನಿಜಕ್ಕೂ ಗ್ರೇಟ್. ಬಾಲ್ಯದಲ್ಲಿ ರಾಮೇಶ್ವರದ ಮಸೀದಿ, ಚರ್ಚ್, ಮಂದಿರ ಮೂರಕ್ಕೂ ಭೇದ ಮಾಡದೆ ಹೋದದ್ದು, ಪ್ರಾರ್ಥನೆಯಲ್ಲಿ ಭಾಗವಹಿಸಿದ್ದು, ಎಲ್ಲಾ ಧರ್ಮಗ್ರಂಥ ಓದಿ ಎಲ್ಲಾ ಧರ್ಮದ ಸಂದೇಶಗಳು ಒಂದೇ ಎಂದು ಎಲ್ಲಾ ವೇದಿಕೆಯಲ್ಲೂ ಹೇಳಿದ್ದು ನಿಮ್ಮ ಜೀವನದ ಪ್ರಮುಖವಾದ ಮಾದರಿಗಳು.

ಕರ್ನಾಟಕ ಸಂಗೀತವನ್ನು ಪ್ರೀತಿ ಮಾಡಿದ್ದು, ರುದ್ರ ವೀಣೆಯನ್ನು ಕಲಿತದ್ದು, ಕಾಂಚಿ ಕಾಮಕೋಟಿ ಶ್ರೀಗಳ ಆಶೀರ್ವಾದ ಪಡೆದದ್ದು, ಸಂಗೀತ ದೇವತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರನ್ನು ಅಮ್ಮಾ ಎಂದು ಕರೆದದ್ದು, ನಿಮ್ಮ ಬಾಲ್ಯದ ಗುರುಗಳನ್ನು ಹೃದಯದಲ್ಲಿ ಇಟ್ಟು ಪೂಜೆ ಮಾಡಿದ್ದು, ನಿಮ್ಮ ಜೀವನದ ಸೋಲುಗಳನ್ನು ಕೂಡ ವಿದ್ಯಾರ್ಥಿಗಳ ಮುಂದೆ ತೆರೆತೆರೆದು ಇಟ್ಟದ್ದು… ಇಂತಹ ನೂರಾರು ಘಟನೆಗಳನ್ನು ಗಮನಿಸಿದಾಗ ನೀವು ನಿಜವಾದ ವಿಶ್ವಮಾನವ ಎಂದು ನನಗೆ ಅನ್ನಿಸಿದೆ. ನಿಮ್ಮನ್ನು ಪ್ರೀತಿಸಲು ಇಂತಹ ಸಾವಿರಾರು ಮಾದರಿ ದೊರೆಯುತ್ತವೆ. ನೀವು ನಿಜಕ್ಕೂ ಗ್ರೇಟ್ ಸರ್.

ಪದವಿ ಮುಗಿದ ಮೇಲೆ ಪೈಲಟ್ ಪರೀಕ್ಷೆ ಬರೆದು ಫಿಸಿಕಲ್ ಫಿಟ್ನೆಸ್ ಕಾರಣಕ್ಕೆ ಫೇಲ್ ಆದದ್ದು, ಆತ್ಮಹತ್ಯೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದು, ಮಹರ್ಷಿ ರಾಮ ತೀರ್ಥರ ತತ್ವಗಳ ಪ್ರಭಾವದಿಂದ ಮತ್ತೆ ಬದುಕಿಗೆ ಮರಳಿದ್ದು ಇದನ್ನೆಲ್ಲಾ ಗಮನಿಸಿದಾಗ ಅವುಗಳು ದೈವಸಂಕಲ್ಪ ಎಂದು ನನಗೆ ಅರ್ಥವಾಗಿದೆ. ಇವೆಲ್ಲವು ಕೂಡ ನೀವು ಭಾರತ ರತ್ನ ಆಗುವ ಹಾದಿಯ ಮೈಲಿಗಲ್ಲುಗಳು ಅನ್ನಿಸುತ್ತದೆ. ನಂತರ DRDO, ISRO ಸೇರಿದ ನೀವು ಶ್ರೇಷ್ಟ ವಿಜ್ಞಾನಿಗಳ ತಂಡದಲ್ಲಿ ಕೆಲಸ ಮಾಡಿದ್ದು, ಕ್ಷಿಪಣಿಗಳನ್ನು ಹಾರಿಸಿ ‘ಕ್ಷಿಪಣಿ ಜನಕ’ ಎಂದು ಕರೆಸಿಕೊಂಡದ್ದು, ಮುಂದೆ ದೇಶದ ಪ್ರಧಾನಿಗಳಿಗೆ ವೈಜ್ಞಾನಿಕ ಸಲಹೆಗಾರ ಆದದ್ದು, ನ್ಯೂಕ್ಲಿಯರ್ ಟೆಸ್ಟ್ ಮಾಡಿದ್ದು, ಮುಂದೆ 2002ರಲ್ಲೀ ದೇಶದ ಹನ್ನೊಂದನೆಯ ರಾಷ್ಟ್ರಪತಿ ಆದದ್ದು, ವಿಷನ್ 2020 ರೂಪಿಸಿದ್ದು, ಯುವಕರು ದೇಶದ ಭವಿಷ್ಯ ಅಂದದ್ದು, ಭಾರತ ಸೂಪರ್ ಸ್ಟಾರ್ ರಾಷ್ಟ್ರ ಆಗುತ್ತದೆ ಎಂದು ಭವಿಷ್ಯ ನುಡಿದದ್ದು, ಯುವಜನತೆಯಲ್ಲಿ ಭರವಸೆ ತುಂಬಿದ್ದು, ಭಾರತವನ್ನು ಉತ್ಕಟವಾಗಿ ಪ್ರೀತಿಸುವಂತೆ ಮಾಡಿದ್ದು… ಒಂದೇ ಎರಡೇ! ಹೀಗೆ ನೂರಾರು ನಿದರ್ಶನಗಳು ನಿಮ್ಮನ್ನು ದಂತಕತೆಯಾಗಿ ರೂಪಿಸಿದವು. “ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು” ಎಂದು ನಿಮ್ಮ ಬದುಕಿನ ಮೂಲಕ ಸಾಧಿಸಿ ತೋರಿಸಿದ ನೀವು ಗ್ರೇಟ್ ಸರ್! ನಿಮಗೆ ನೀವೇ ಉಪಮೆ.

ನೀವು ಬದುಕಿದ ರೀತಿಯೇ ಹಾಗೆ. ಒಂದು ಸೂಟ್ಕೇಸ್ ತೆಗೆದುಕೊಂಡು ರಾಷ್ಟ್ರಪತಿ ಭವನ ಪ್ರವೇಶ ಮಾಡಿದ ನೀವು ಅಧಿಕಾರದಿಂದ ನಿರ್ಗಮಿಸುವ ಸಂದರ್ಭದಲ್ಲಿ ಕೂಡ ಅದೇ ಸೂಟ್ಕೇಸ್ ಜೊತೆಗೆ ನಿರ್ಗಮಿಸಿದ್ದು, ರಾಷ್ಟ್ರಪತಿ ಭವನದ ಗೋಡೆಗಳಲ್ಲಿ ನಿಮ್ಮ ಪ್ರಾಥಮಿಕ ಶಾಲೆಯ ಗುರುಗಳ ಫೋಟೋ ಹಾಕಿ ಸಂಭ್ರಮ ಪಟ್ಟದ್ದು, ರಾಷ್ಟ್ರಪತಿ ಭವನದ ಎಲ್ಲಾ ಪ್ರೋಟೋಕಾಲಗಳನ್ನೂ ಬದಿಗೆ ಸರಿಸಿ ಜನರೊಂದಿಗೆ ಬೆರೆತದ್ದು, ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಮರುದಿನ ಚಾಕ್ ಪೀಸ್ ಹಿಡಿದು ಪಾಠ ಮಾಡಿದ್ದು, ಗ್ರಾಮೀಣ ಆರೋಗ್ಯ ಸೇವೆಗಾಗಿ ವಿಶೇಷ ಟ್ಯಾಬ್ಲೆಟ್ ರೂಪಿಸಿದ್ದು… ಇವುಗಳನ್ನೆಲ್ಲಾ ನೋಡಿದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಲ್ಲೂ ನಿಮ್ಮ ಬಗ್ಗೆ ಗೌರವ, ಪ್ರೀತಿ, ಅಚ್ಚರಿ ಹಾಗೂ ಅಭಿಮಾನ ಮೂಡಿದ್ದನ್ನು ನಾನು ಗಮನಿಸಿದ್ದೇನೆ. ಅಬ್ದುಲ್ ಕಲಾಂ ಎಂಬ ವ್ಯಕ್ತಿ ನಮ್ಮ ನಡುವೆ ನಡೆದಾಡಿಕೊಂಡಿದ್ದರು ಎನ್ನುವುದೇ ನನ್ನ ಕಾಲದ ಹೆಮ್ಮೆ. ಲವ್ ಯು ಸರ್.

ಇಂದು ನಿಮ್ಮ ಹುಟ್ಟಿದ ಹಬ್ಬ. ನಿಮ್ಮ ಹಂಬಲದಂತೆ ಇದು ರಾಷ್ಟ್ರೀಯ ವಿದ್ಯಾರ್ಥಿ ದಿನ. ಬದುಕಿನ ಉದ್ದಕ್ಕೂ ವಿದ್ಯಾರ್ಥಿ ಸಮೂಹಕ್ಕೆ ಪ್ರೇರಣೆ ನೀಡಿದ ನಿಮ್ಮನ್ನು ನಾನು ಮರೆಯಲು ಸಾಧ್ಯವಿಲ್ಲ. ನೀವು ಬರೆದ ಅಗ್ನಿಯ ರೆಕ್ಕೆಗಳು, ಪ್ರಜ್ವಲಿಸುವ ಮನಸ್ಸುಗಳು, ಶಕ್ತಿ ಸಾರಥಿ ಮೊದಲಾದ ಪುಸ್ತಕಗಳನ್ನು ಮತ್ತೆ ಮತ್ತೆ ಓದಿದಾಗ ನೀವು ಮತ್ತೆ ಮತ್ತೆ ನನ್ನೊಳಗೆ ಆವಿರ್ಭಾವ ಆಗುತ್ತೀರಿ. ನನ್ನನ್ನು ಕೈ ಹಿಡಿದು ಮುನ್ನಡೆಸುತ್ತ ಇರುತ್ತೀರಿ. ನಿಮ್ಮ ನೆನಪುಗಳು ಚಿರಾಯು. ನೀವು ಚಿರಂಜೀವಿ ಸರ್.

-ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಂದಿನ ಐಕಾನ್: ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರಣ್

Upayuktha

ಇಂದಿನ ಐಕಾನ್ – ಜನರ ಪ್ರೀತಿಗಾಗಿ ಏಳು ಗುಡ್ಡ ಅಗೆದು ರಸ್ತೆ ಮಾಡಿದ ರಾಜಾರಾಂ ಭಾಪ್ಕರ್ ಮೇಷ್ಟ್ರು

Upayuktha

ಯಶೋಗಾಥೆ: ಬಿಹಾರದ ಜಲಯೋಧ ಲಾಂಗಿ ಭುಯಾನ್

Upayuktha