ಆರೋಗ್ಯ ಪ್ರಮುಖ ಲೇಖನಗಳು

ಕಿವಿ ತಮಟೆಯ ತೊಂದರೆಗಳು; ಉಂಟಾಗೋದು ಯಾಕೆ, ಹೇಗೆ, ಪರಿಹಾರವೇನು?

ಕಿವಿ ತಮಟೆ ಎನ್ನುವುದು ಅತ್ಯಂತ ತೆಳುವಾದ ಪದರವಾಗಿದ್ದು ಹೊರಭಾಗದ ಕಿವಿಯ ಭಾಗವನ್ನು ಮದ್ಯಭಾಗದ ಕಿವಿಯಿಂದ ಬೇರ್ಪಡಿಸುತ್ತದೆ. ಆಂಗ್ಲಭಾಷೆಯಲ್ಲಿ ಟಿಂಪಾನಿಕ್ ಮೆಂಬ್ರೇನ್ ಅಥವಾ ಮಿರಿಂಗಾ ಎಂದು ಕರೆಯುತ್ತಾರೆ. ಕಿವಿಯ ಹೊರಭಾಗದ ಗಾಳಿಯಿಂದ ಶಬ್ದದ ತರಂಗಗಳನ್ನು ಮಧ್ಯಭಾಗದ ಕಿವಿಯಲ್ಲಿರುವ ಸಣ್ಣ ಎಲುಬಾದ ‘ಆಡಿಟರಿ ಓಸಿಕಲ್ಸ್’ಗಳಿಗೆ ವರ್ಗಾಯಿಸುತ್ತದೆ.

ಇದೊಂದು ಶಂಖಾಕೃತಿಯ (ಕೋನ್) ತೆಳು ಪದರವಾಗಿದ್ದು ಅದರ ತುದಿ ಒಳಭಾಗಕ್ಕೆ ಬಗ್ಗಿರುತ್ತದೆ. ಬದಿಗಳಲ್ಲಿ ಈ ತಮಟೆ ‘ಟಿಂಪಾನಿಕ್ ಆನುಲಸ್’ ಎಂಬ ಉಂಗುರಾಕಾರದ ಎಲುಬಿಗೆ ಕೂಡಿಕೊಂಡಿರುತ್ತದೆ. ಈ ತಮಟೆಯಲ್ಲಿ ಮೂರು ಪದರವಿದ್ದು ಹೊರಭಾಗದ ಪದರ ಹೊರಗಿನ ಕಿವಿಯ ಚರ್ಮದ ಜೊತೆ ಕೂಡಿಕೊಂಡಿರುತ್ತದೆ. ಒಳಭಾಗದ ಪದರ ಮದ್ಯಭಾಗದ ಕಿವಿಯ ತೆಳುವಾದ ಪದರದ ಜೊತೆ ಕೂಡಿರುತ್ತದೆ. ಈ ಎರಡು ಪದರಗಳ ನಡುವೆ ವ್ರತ್ತಾಕಾರದ ಮತ್ತು ಅಡ್ಡವಾಗಿ ತೆಳುವಾದ ನಾರುಯುಕ್ತ ಎಳೆಗಳು ಕೂಡಿರುತ್ತದೆ. ಈ ನಾರುಗಳು ಕಿವಿ ತಮಟೆಗೆ ಶಕ್ತಿ ಮತ್ತು ಒತ್ತಡ ತಡೆಯುವ ಶಕ್ತಿ ನೀಡುತ್ತದೆ.

ಈ ಪದರದಲ್ಲಿ ನರಗಳು ಇರುವ ಕಾರಣದಿಂದ ಈ ತಮಟೆ ನೋವಿನ ಸಂದೇಶಗಳಿಗೆ ಬಹಳ ಬೇಗನೆ ಸ್ಪಂದಿಸುತ್ತದೆ. ಸಾಮಾನ್ಯವಾಗಿ ಈ ಪದರ ಗ್ರೇ ಬಣ್ಣ ಹೊಂದಿರುತ್ತದೆ. ಮದ್ಯಭಾಗದ ಕಿವಿಯ ರೋಗ ಬಂದಾಗ ಈ ಕಿವಿ ತಮಟೆಯ ಬಣ್ಣ ಬದಲಾಗುತ್ತದೆ ಮತ್ತು ಬಹಳ ನೋವು ಇರುತ್ತದೆ. ತಮಟೆಯ ಚಲನೆಯಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ.

ಕಿವಿ ತಮಟೆ ಯಾಕೆ ಹರಿಯುತ್ತದೆ?
ಕಿವಿ ತಮಟೆಯಲ್ಲಿ ತೂತಾಗುವುದು ಅಥವಾ ಹರಿಯುವುದಕ್ಕೆ ಹಲವಾರು ಕಾರಣಗಳು ಇವೆ. ಭಾರತ ದೇಶವೊಂದರಲ್ಲಿಯೇ ವಾರ್ಷಿಕವಾಗಿ 1 ಮಿಲಿಯನ್ ಮಂದಿ ಈ ತೊಂದರೆಗೆ ಸಿಲುಕುತ್ತಾರೆ.
1. ಬಹಳ ಸಾಮಾನ್ಯ ಕಾರಣವೆಂದರೆ ಮಧ್ಯಭಾಗದ ಕಿವಿಯಲ್ಲಿನ ಸೋಂಕು. ಮಕ್ಕಳಲ್ಲಿ ಇದು ಸರ್ವೆಸಾಮಾನ್ಯ. ಮದ್ಯಭಾಗದ ಕಿವಿಯಲ್ಲಿ ಸೋಂಕು ತಗುಲಿ ಕೀವು ತುಂಬಿಕೊಂಡು ಕಿವಿ ತಮಟೆಯ ಮೇಲೆ ಇನ್ನಿಲ್ಲದ ಒತ್ತಡ ಹೇರಿ ತಮಟೆ ತೂತಾಗುತ್ತದೆ.
2. ಕಿವಿಗೆ ಹೊಡೆತ ಬಿದ್ದಾಗೂ ಏಟಿನಿಂದಾಗಿ ಕಿವಿ ತಮಟೆ ಹರಿಯಬಹುದು. ತಲೆಗೆ ಏಟು ಬಿದ್ದಾಗ, ದವಡೆಯ ಕೀಲು ತುಂಡಾದಾಗಲೂ ಕಿವಿ ತಮಟೆ ಹರಿಯುವ ಸಾಧ್ಯತೆ ಇದೆ.
3. ವಾತವರಣದ ಒತ್ತಡದಲ್ಲಿ ಅತಿಯಾದ ಏರಿಳಿತವಾದಾಗ (ಸ್ಕೂಬಾ ಡೈವರ್ಸ್‍ಗಳಲ್ಲಿ)ಅಥವಾ ಸಮುದ್ರ ಮಟ್ಟದಿಂದ ಅತೀ ಎತ್ತರದ ಪ್ರದೇಶಕ್ಕೆ ಹೋದಾಗ ಒತ್ತಡ ಹೆಚ್ಚಾಗಿ ತಮಟೆ ಹರಿಯಬಹುದು.
4. ಕಿವಿಯಿಂದ ಮೇಣ ಅಥವಾ ಗುಗ್ಗೆ ತೆಗೆಯುವಾಗ ಅತಿಯಾದ ಒತ್ತಡ ಬಳಸಿ ಅಜಾಗರೂಕತೆಯಿಂದ ವರ್ತಿಸಿದಾಗ ಕಿವಿ ತಮಟೆ ತೂತಾಗಬಹುದು.
5. ಪೆನ್ಸಿಲ್, ರಬ್ಬರ್, ಪೆನ್ ಅಥವಾ ಇನ್ನಾವುದೇ ವಸ್ತುಗಳನ್ನು ಮಕ್ಕಳ ಕಿವಿಯೊಳಗೆ ಹಾಕಿ ಆಟವಾಡುವಾಗ ಆಕಸ್ಮಿಕವಾಗಿ ತೂತಾಗುವ ಸಾಧ್ಯತೆ ಇರುತ್ತದೆ.
6. ಅತೀ ಹೆಚ್ಚು ದೊಡ್ಡದಾದ ಶಬ್ದದಿಂದಾಗಿ ತಮಟೆ ಹರಿಯುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಕಿವಿ ತಮಟೆ ಹರಿದಾಗ ದೇಹ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತದೆ. ಹೆಚ್ಚಾಗಿ ತನ್ನಿಂತಾನೇ ಕಿವಿ ತಮಟೆ ಸರಿಯಾಗುತ್ತದೆ. ಕಿವಿಯೊಳಗೆ ಕೀವಿನಿಂದಾಗಿ ಕಿವಿ ತಮಟೆ ಹರಿದಿದ್ದಲ್ಲಿ, ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳತಕ್ಕದ್ದು. ಕೀವು ತುಂಬಿರುವಾಗ ಕಿವಿ ತಮಟೆ ಸರಿಯಾಗುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಒಂದೆರಡು ತಿಂಗಳುಗಳಲ್ಲಿ ಕಿವಿ ತಮಟೆ ಹರಿತ ಸರಿಯಾಗುತ್ತದೆ. ಈ ಸಮಯದಲ್ಲಿ ಕಿವಿ ಕೇಳುವಿಕೆಗೆ ತೊಂದರೆಯಾಗಬಹುದು. ಗಾಯದಿಂದಾಗಿ ಉಂಟಾದ ಕಿವಿ ತಮಟೆ ತೂತು 4 ವಾರಗಳಲ್ಲಿ ಕೂಡಿಕೊಳ್ಳುತ್ತದೆ. ಕಿವಿ ತಮಟೆ ತೂತು ತುಂಬ ದೊಡ್ಡದಾಗಿದ್ದಲ್ಲಿ ಸರ್ಜರಿ ಬೇಕಾಗಬಹುದು.

ಕಿವಿ ನೋವು ಇದ್ದಾಗ ನೋವಿನ ಮಾತ್ರೆ ಮತ್ತು ಕಿವಿಯ ಸುತ್ತ ಬಿಸಿ ಬಟ್ಟೆಯಿಂದ ಶಾಖ ನೀಡಿ ರಕ್ತ ಪರಿಚಲನೆ ಹೆಚ್ಚಿಸುವಂತೆ ಮಾಡಲಾಗುತ್ತದೆ. ಕಿವಿ ತಮಟೆ ತೂತಾಗಿರುವವರಿಗೆ ಬಾಯಿಯೊಳಗೆ ಗಾಳಿ ತುಂಬಿಸಿ ಮೂಗು ಮುಚ್ಚುವಂತೆ ಮಾಡಬಾರದು .ಹಾಗೆ ಮಾಡಿದಾಗ ಕಿವಿಯ ಮಧ್ಯಭಾಗದಲ್ಲಿ ಒತ್ತಡ ಜಾಸ್ತಿಯಾಗಿ ಕಿವಿಯ ತಮಟೆ ತೂತು ಮತ್ತಷ್ಟು ದೊಡ್ಡದಾಗಬಹುದು ಸೊಂಕಿನಿಂದಾಗಿ ಕಿವಿ ತಮಟೆ ತೂತಾದ್ದಲ್ಲಿ ತಕ್ಪಣವೇ ವೈದ್ಯರನ್ನು ಕಾಣಬೇಕು. ಯಾಕೆಂದರೆ ಕಿವಿ ತಮಟೆ ತೂತಾಗಿ ಕೀವು ಕಿವಿಯಿಂದ ಸೋರುತ್ತದೆ. ನೋವು ವಾಸನೆ ಇರುತ್ತದೆ. ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡದಿದ್ದಲ್ಲಿ ಸೋಂಕು ಮೆದುಳಿನ ಕೆಳಭಾಗಕ್ಕೆ ಹರಡುವ ಸಾಧ್ಯತೆ ಮುಕ್ತವಾಗಿರುತ್ತದೆ.

ಕಿವಿ ತಮಟೆ ತೂತಿನ ಲಕ್ಷಣಗಳು
1. ಕಿವಿ ತಮಟೆ ಹರಿದಾಗ ಶಬ್ದಗಳ ತರಂಗಗಳು ಮಧ್ಯ ಕಿವಿಗೆ ಹಾದು ಹೋಗದಿದ್ದಾಗ ಕಿವಿ ಕೇಳುವುದಿಲ್ಲ. ಶಬ್ದಗಳು ಸ್ಪಪ್ಟವಾಗಿ ಕೇಳಿಸುವುದಿಲ್ಲ.
2. ಕಿವಿಯಲ್ಲಿ ನೋವು ಇರುತ್ತದೆ. ಕೆಲವೊಮ್ಮೆ ಕಿವಿಯೊಳಗೆ ತುರಿಕೆಯೂ ಇರುತ್ತದೆ. ಕಿವಿಯಿಂದ ರಕ್ತ ಸೋರಬಹುದು
3. ಕಿವಿಯಿಂದ ಕೀವು ಅಥವಾ ದ್ರವ ಸೋರಿಕೆ ಇರುತ್ತದೆ.
4. ಕಿವಿಯಲ್ಲಿನ ಸೋಂಕು ಇದ್ದಲ್ಲಿ ಜ್ವರ ಇರುತ್ತದೆ.
5. ಕಿವಿಯೊಳಗೆ ಒಂದು ರೀತಿಯ ವಿಚಿತ್ರವಾದ ಸದ್ದು, ಅಸ್ಪಪ್ಟವಾದ ನೀರು ಹಾದು ಹೋಗುವಂತಹಾ ಸದ್ದುಇರುತ್ತದೆ ಕಿವಿ ತಮಟೆ ಹರಿದಿರುವಾಗ ವಿಮಾನ ಪ್ರಯಾಣ ಮಾಡಬಹುದು. ಆದರೆ ಕಿವಿ ತಮಟೆ ಸರಿಪಡಿಸಲು ಸರ್ಜರಿ ಮಾಡಿಸಿ ಕೊಂಡಿದಿದ್ದಲ್ಲಿ ವೈದ್ಯರ ಅನುಮತಿ ಇಲ್ಲದೆ ವಿಮಾನ ಪ್ರಯಾಣ ಮಾಡುವಂತಿಲ್ಲ. ಕಿವಿ ತಮಟೆ ಹರಿದಿರುವಾಗ ಹೊರಬಾಗದಿಂದ ಬ್ಯಾಕ್ಟಿರಿಯಾ ಅಥವಾ ಇನ್ನಾವುದೇ ಸೂಕ್ಷ್ಮಾಣು ಜೀವಿ ಕಿವಿಯ ಮಧ್ಯಭಾಗಕ್ಕೆ ಸೇರಿ ಸೋಂಕು ಆಗುವ ಸಾಧ್ಯತೆ ಇರುತ್ತದೆ. ಕಿವಿ ತಮಟೆ ತೂತಾದಾಗ ಯಾವುದೇ ರೀತಿಯ ಎಣ್ಣೆ, ಕುದಿಸಿದ ನೀರು, ಅಥವಾ ಹೈಡ್ರೋಜನ್ ಪರಾಕ್ಸೆಡ್ ದ್ರಾವಣ ಬಳಸಬಾರದು. ವೈದ್ಯರ ಅನುಮತಿ ಮತ್ತು ಸೂಚನೆ ಇಲ್ಲದೇ ಯಾವುದೇ ದ್ರವ ವಸ್ತುಗಳನ್ನು ಕಿವಿಯೊಳಗೆ ಹಾಕುವಂತಿಲ್ಲ. ಯಾಕಾಗಿ ಕಿವಿ ತಮಟೆ ಹರಿದಿದೆ, ಎಷ್ಟು ದೊಡ್ಡ ತೂತು ಇದೆ ಮತ್ತು ದೇಹದ ಇತರ ಲಕ್ಷಣಗಳನ್ನು ವೈದ್ಯರು ಪರೀಕ್ಪಿಸಿ ಸೂಕ್ತವಾದ ಔಷಧಿ ನೀಡುತ್ತಾರೆ. ಮನೆಮದ್ದು ಅಥವಾ ಇನ್ನಾವುದೇ ಹಳ್ಳಿ ಮದ್ದು ಮಾಡುವುದು ಅಪಾಯಕಾರಿ.
6. ವಾಕರಿಕೆ, ವಾಂತಿ, ತಲೆ ಸುತ್ತುವಂತಾಗುವುದು ಕೆಲವೊಮ್ಮೆ ಕಂಡುಬರುತ್ತದೆ.

ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಕಿವಿ ತಮಟೆ ಹರಿದಾಗ ಸರ್ಜರಿಯ ಅವಶ್ಯಕತೆ ಇರುವುದಿಲ್ಲ. ಸಣ್ಣ ತೂತು ತನ್ನಿಂತಾನೇ 4 ವಾರಗಳಲ್ಲಿ ಸರಿಯಾಗುತ್ತದೆ. ಗಾಯದಿಂದಾಗಿ ಉಂಟಾಗಿದ್ದಲ್ಲಿ ವೈದ್ಯರು ಔಷಧಿ ನೀಡಿ ಸೋಂಕು ತಗುಲದಂತೆ ನೋಡಿಕೊಳ್ಳುತ್ತಾರೆ. ಸೋಂಕಿನಿಂದಾಗಿ ಕಿವಿ ತಮಟೆ ತೂತಾಗಿದ್ದಲ್ಲಿ ಸೋಂಕು ಹರಡದಂತೆ ಆಂಟಿಬಯೊಟಿಕ್ ನೀಡಿ ಸೋಂಕು ಕಡಿಮೆ ಮಾಡಿದ ಬಳಿಕ ಕಿವಿ ತಮಟೆ ತೂತು ಸರಿಪಡಿಸಲಾಗುತ್ತದೆ. ದೊಡ್ಡದಾದ ತೂತು ಇದ್ದಲ್ಲಿ ಸರ್ಜರಿ ಅವಶ್ಯಕತೆ ಇರುತ್ತದೆ. ಯಾವಾಗ ಮಾಡಬೇಕು ಯಾವ ರೀತಿ ಸರ್ಜರಿ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ತಡೆಗಟ್ಟುವುದು ಹೇಗೆ?
1. ಕಿವಿಯಲ್ಲಿ ಸೋಂಕು ಮತ್ತು ನೋವು ಇದ್ದಾಗ ನಿರ್ಲಕ್ಷಿಸಲೇಬಾರದು. ತಕ್ಷಣವೇ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅಗತ್ಯ.
2. ವಿಮಾನ ಪ್ರಯಾಣ ಮಾಡುವಾಗ ಕಿವಿಯೊಳಗೆ ಹತ್ತಿ ಇಡಬಹುದು. ಕಿವಿಯ ಹೊರಭಾಗ ಮತ್ತು ಮಧ್ಯಕಿವಿಯ ಭಾಗದ ಒತ್ತಡ ಒಂದೇ ರೀತಿ ಇರುವಂತೆ ನೋಡಿಕೊಳ್ಳಬೇಕು. ಪದೇ ಪದೇ ಬಾಯಿ ತೆರೆಯುವುದು ಅಥವಾ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಎರಡೂ ಬದಿಯ ಒತ್ತಡ ಸರಿಯಾಗುವಂತೆ ಮಾಡಬೇಕು.
3. ಕಿವಿಯೊಳಗೆ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳಾದ ಪೆನ್, ಪೆನ್ಸಿಲ್, ರಬ್ಬರ್, ಕಡ್ಡಿ, ಹರಿತವಾದ ವಸ್ತು ಹಾಕದಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಈ ಗೀಳು ಬಹಳವಾಗಿರುತ್ತದೆ.
4. ಅತಿಯಾದ ಶಬ್ಧಗಳಿಂದ ಕಿವಿಯನ್ನು ರಕ್ಷಿಸಿಕೊಳ್ಳಬೇಕು. ಆಕಸ್ಮಿಕ ಶಬ್ದವಾದರೆ ತಡೆಯಲು ಸಾಧ್ಯವಿಲ್ಲ. ಆದರೆ ದಿನಾವೂ ದೊಡ್ಡ ಸದ್ದಿಗೆ ಕಿವಿ ತೆರೆದುಕೊಳ್ಳುವುದನ್ನು ತಪ್ಪಿಸಬೇಕು. ಉದಾ: ದಿನವೂ ಜನರೇಟರ್ ಬಳಿ ಕೆಲಸ ಮಾಡುವುದು ಅನಿವಾರ್ಯವಾದಲ್ಲಿ ಕಿವಿಯನ್ನು ರಕ್ಷಿಸುವ ಕಿವಿರಕ್ಷಕ ಧಾರಣವನ್ನು ಬಳಸಬೇಕು.
5. ಅತೀ ಎತ್ತರದ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗುವ ಮೊದಲು ಅಥವಾ ಸ್ಕೂಬಾ ಡೈವಿಂಗ್ ಮಾಡುವ ಮೊದಲು ವೈದ್ಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆದುಕೊಳ್ಳಬೇಕು.

ಕೊನೆ ಮಾತು:
ಕಿವಿ ತಮಟೆ ಎನ್ನುವುದು ಅತ್ಯಂತ ಸೂಕ್ಷ್ಮವಾದ ತೆಳುವಾದ ಪದರವಾಗಿದ್ದು, ನಿರ್ಲಕ್ಷ್ಯವಹಿಸಿದಲ್ಲಿ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿವಿ ತಮಟೆ ಹರಿದಲ್ಲಿ ಜೀವಕ್ಕೆ ತೊಂದರೆಯಾಗದಿದ್ದರೂ, ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬಹಳ ಕಿರಿಕಿರಿ ಉಂಟುಮಾಡುತ್ತದೆ. ಕಿವಿ ನೋವು, ಕಿವಿಯಲ್ಲಿ ತುರಿಕೆ, ಕಿವಿ ಸೋರುವಿಕೆ, ಅಸಹ್ಯಕರವಾದ ಮುಜುಗರ ಹುಟ್ಟಿಸುವ ವಾಸನೆ, ತಲೆ ಸುತ್ತುವಿಕೆ, ವಾಂತಿ, ವಾಕರಿಕೆಯಿಂದಾಗಿ ಬದುಕು ಅಸಹನಿಯವೆನಿಸುತ್ತದೆ. ತಕ್ಷಣ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅಗತ್ಯ ಕಿವಿಯ ನಿರ್ಲಕ್ಷ ವಹಿಸಿದ್ದಲ್ಲಿ ಶಾಶ್ವತವಾಗಿ ಕಿವಿ ಕಿವುಡುತನ ಉಂಟಾಗುವ ಸಾಧ್ಯತೆಯೂ ಇದೆ.

ಕಿವಿಯ ಸೋಂಕಿನಿಂದಾಗಿ ಕಿವಿ ತಮಟೆ ಹರಿದ್ದಿದ್ದಲ್ಲಿ, ಚಿಕಿತ್ಸೆ ತೆಗೆದುಕೊಳ್ಳದೆ ವಿಧಿಯಿರುವುದಿಲ್ಲ. ನೋವು ಮತ್ತು ವಾಸನೆಯನ್ನು ಸಹಿಸಲಾಗದೆ ಎಲ್ಲರೂ ಚಿಕಿತ್ಸೆ ಪಡೆದೇ ಪಡೆಯುತ್ತಾರೆ. ಆದರೆ ಗಾಯದಿಂದ, ಅಪಘಾತದಿಂದ ಮತ್ತು ಅಜಾಗರೂತೆಯಿಂದ ಕಿವಿ ತಮಟೆ ಹರಿದಾಗ ಹೆಚ್ಚಿನವರು ನಿರ್ಲಕ್ಷ ವಹಿಸುತ್ತಾರೆ. ಈ ಸಂದರ್ಭದಲ್ಲಿ ಕಿವಿಯ ಹೊರಭಾಗದಿಂದ ಕೀಟಾಣುಗಳು ಮಧ್ಯಭಾಗದ ಕಿವಿಗೆ ಸೇರಿಕೊಂಡು ಸೋಂಕು ಉಂಟುಮಾಡುವ ಮುಕ್ತ ಅವಕಾಶವಿರುತ್ತದೆ. ಈ ಕಾರಣದಿಂದ ತಕ್ಷಣವೇ ಕಿವಿ ತಜ್ಲರ ಸಲಹೆ ಮತ್ತು ಚಿಕಿತ್ಸೆ ಅನಿವಾರ್ಯವಾಗಿರುತ್ತದೆ. ಒಟ್ಟಿನಲ್ಲಿ ಕಿವಿ ತಮಟೆ ತೂತು ಎನ್ನುವುದು ತಕ್ಷಣವೇ ಸರಿಪಡಿಸಬೇಕಾದ ವೈದ್ಯಕೀಯ ಪರಿಸ್ಥಿತಿ ಎಂಬುದನ್ನು ರೋಗಿಗಳು ಅರಿತುಕೊಂಡು ಚಿಕಿತ್ಸೆ ಪಡೆದಲ್ಲಿ ಮುಂದೆ ಬರುವ ಅಪಾಯವನ್ನು ತಪ್ಪಿಸಬಹುದು.

– ಡಾ|| ಮುರಲೀ ಮೋಹನ್ ಚೂಂತಾರು

Related posts

ಏನಿದು ವೆರುಕಸ್ ಕಾರ್ಸಿನೋಮಾ? ಇದು ಅಪಾಯಕಾರಿಯೇ?

Upayuktha

ಕೈ ಎತ್ತಿದಾಗ…

Harshitha Harish

ಮಧ್ಯಪ್ರದೇಶ: ಪ್ರಧಾನಿ ಮೋದಿ ಅವರಿಂದ ಇಂದು 1.75 ಲಕ್ಷ ಮನೆಗಳ ಉದ್ಘಾಟನೆ

Upayuktha