ಪ್ರಮುಖ ವಾಣಿಜ್ಯ

ಆರ್ಥಿಕ ಕುಸಿತದಿಂದ ಎಂಎಸ್‌ಎಂಇ ವಲಯಕ್ಕೆ ಸಮಸ್ಯೆ

ಸೂಕ್ಷ್ಮ, ಸಣ್ಣ- ಮಧ್ಯಮ ಉದ್ಯಮಗಳ ಸಮಾವೇಶದಲ್ಲಿ ಬಾಲಚಂದ್ರ ವೈ.ವಿ.

ಮಂಗಳೂರು: ಆರ್ಥಿಕ ಕುಸಿತದಿಂದ ದೇಶದ ಉತ್ಪಾದನಾ ರಂಗದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಸಮಸ್ಯೆಗೊಳಗಾಗಿವೆ. ಆದರೆ ಇದರಿಂದ ಸಂಸ್ಥೆಗಳ ಬೆಳವಣಿಗೆ ಮೇಲೆ ಒಟ್ಟಾರೆಯಾಗಿ ಅಷ್ಟೇನೂ ದೊಡ್ಡ ಹೊಡೆತ ಬಿದ್ದಿಲ್ಲ ಎಂದು ಕರ್ಣಾಟಕ ಬ್ಯಾಂಕ್ ಸಿಒಒ ಬಾಲಚಂದ್ರ ವೈ.ವಿ. ಹೇಳಿದರು.

ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಕರ್ಣಾಟಕ ಬ್ಯಾಂಕ್ ವತಿಯಿಂದ ಶನಿವಾರ ನಗರದ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕತೆಗೆ ಕೊಡುಗೆ: ಉದ್ಯೋಗ ಸೃಷ್ಟಿ, ರಫ್ತು, ಜಿಡಿಪಿ ವಿಚಾರದಲ್ಲಿ ಎಂಎಸ್‌ಎಂಇಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವುದರಿಂದ ಸರಕಾರಕ್ಕೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಮಸ್ಯೆಗಳ ಕುರಿತು ಅರಿವಿದೆ. ಹಾಗೆ ಕೆಲವೊಂದು ನಿವಾರಣೋಪಾಯಗಳನ್ನು ಕೂಡ ಸರಕಾರ ಸೂಚಿಸುತ್ತಿದೆ. ದೇಶದ ಬ್ಯಾಂಕಿಂಗ್ ವಲಯ ಕೂಡ ಎಂಎಸ್‌ಎಂಇಗಳ ಜತೆ ಹೆಚ್ಚು ಸರಳ ಹಾಗೂ ನಾಜೂಕಾದ ವ್ಯವಹಾರದಲ್ಲಿ ತೊಡಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿ ಉದ್ಯಮವಲ್ಲ, ಸಂಸ್ಕೃತಿ: ಜೈಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಗ್ರಿಕಲ್ಚರಲ್ ಮಾರ್ಕೆಟಿಂಗ್ ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಕೃಷಿಯನ್ನು ಸಂಸ್ಕೃತಿಯಾಗಿ ನೋಡಲಾಗುತ್ತಿದೆಯೇ ಹೊರತು ಉದ್ಯಮವಾಗಿ ಅಲ್ಲ. ಕೃಷಿ ಕ್ಷೇತ್ರದಲ್ಲಿ ಅವಕಾಶಗಳು ಸಾಕಷ್ಟಿದ್ದು, ಕೃಷ್ಯೋದ್ಯಮವಾದಾಗ ಮಾತ್ರ ಹೆಚ್ಚು ಲಾಭ ಪಡಯಲು ಸಾಧ್ಯ ಎಂದರು.

ನರ್ಸರಿ, ಬೀಜೋತ್ಪಾದನೆ, ಗೊಬ್ಬರ ತಯಾರಿಕೆ ಮೊದಲಾದ ಕೃಷಿ ಯಂತ್ರೋಪಕರಣಗಳ ತಯಾರಿ ಸೇರಿದಂತೆ ಹಲವು ಉದ್ದಿಮೆಗಳನ್ನು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಬಹುದಾಗಿದೆ ಎಂದು ಹೇಳಿದ ಅವರು, ಕೃಷಿ ಉದ್ಯಮಕ್ಕೆ ತರಬೇತಿ ಪಡೆದವರಲ್ಲಿ ಕೇವಲ ಶೇ.4ರಷ್ಟು ನಿರುದ್ಯೋಗಿಗಳು ಮಾತ್ರ ಬ್ಯಾಂಕ್ ಸಾಲ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನುಡಿದರು.

ಗ್ರಾಮಗಳು ವೃದ್ದಾಶ್ರಮ: ಪ್ರಸಕ್ತ ಕಾಲಘಟ್ಟದಲ್ಲಿ 100 ರೂ. ತರಕಾರಿಯಲ್ಲಿ ಕೇವಲ 28 ರೂ. ಮಾತ್ರ ರೈತರನ್ನು ತಲುಪುತ್ತಿದೆ. ಇದರಿಂದ ರೈತರು ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ಯುವ ಸಮುದಾಯ ನಗರ- ಪಟ್ಟಣದತ್ತ ವಲಸೆ ಹೋಗುತ್ತಿರುವುದರಿಂದ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ವಿಶಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಐಸಿಎಐ ಮಂಗಳೂರು ಶಾಖೆ ಉಪಾಧ್ಯಕ್ಷ ಹಾಗೂ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಹೆಡ್ ಎಚ್‌ಆರ್  ಡಾ. ಪ್ರಸನ್ನ ಮಾದಶೆಟ್ಟಿ, ವಿಪ್ರೋ ಗ್ಲೋಬಲ್ ಡೆಲಿವರಿಯ ಉಪಾಧ್ಯಕ್ಷ ಪ್ರವೀಣ್ ಕಾಮತ್, ಟಾಟಾ ಸ್ಟಾರ್ ಬಕ್ಸ್ ನ ನಿರ್ದೇಶಕ (ಎಚ್‌ಆರ್)ನವೀನ್ ಕುಮಾರ್, ಮುಂಬಯಿ ಎಎನ್‌ಬಿ ಅಸೋಸಿಯೇಟ್ ಡೈರೆಕ್ಟರ್ ಯೋಗೀಶ್ ಕುಲ್ಕರ್ಣಿ ಪಾಲ್ಗೊಂಡಿದ್ದರು.

ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಕೆ.ಶಂಕರನ್ ಸ್ವಾಗತಿಸಿದರು. ಕಾರ್ಪೋರೇಟ್ ಪ್ರೋಗ್ರಾಮ್ಸ್ ಡೀನ್ ಡಾ.ಎ.ಪಿ.ಆಚಾರ್ ಪ್ರಸ್ತಾವಿಸಿದರು. ಪ್ರಾಧ್ಯಾಪಕ ಡಾ.ಸುಧೀರ್ ರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಉದ್ದಿಮೆಗಳ ತವರು: ವಿಶಾಲ್ ಹೆಗ್ಡೆ
ಮಂಗಳೂರು ಉದ್ದಿಮೆಗಳ ತವರು. ಮಂಗಳೂರಿಗರು ದೇಶ -ವಿದೇಶಗಳಲ್ಲಿ ಉದ್ದಿಮೆಗಳನ್ನು ಆರಂಭಿಸಿದ್ದಾರೆ. ಆದರೆ ಇಂದಿನ ವಿದ್ಯಾರ್ಥಿಗಳು ಉದ್ದಿಮೆಗೆ ಸಿದ್ಧರಾಗಿಲ್ಲ ಎಂದು ನಿಟ್ಟೆ ವಿವಿ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.
ಎಂಎಸ್‌ಎಂಇಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಸಂವಾದ ನಡೆಸುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಆ ಮೂಲಕ ಮುಂದಿನ ತಲೆಮಾರಿನ ಉದ್ಯಮಿ, ಉದ್ದಿಮೆಗಳನ್ನು ಸಿದ್ಧಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ಉದ್ದಿಮೆಗಳ ಶೋಚನೀಯ:
ಉದ್ದಿಮೆಗಳ ಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದ್ದು, ಇದೊಂದು ಜಾಗತಿಕ ಸಮಸ್ಯೆ. ಮುಂದಿನ 10 ತ್ರೈಮಾಸಿಕದ ವರೆಗೂ ಇದು ಮುಂದುವರಿಯುವ ಸಾಧ್ಯತೆಯಿದೆ ಎಂದು ಮುಂಬಯಿ ಜ್ಯೋತಿ ಲ್ಯಾಬೋರೇಟರೀಸ್ ಲಿ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್ ಹೇಳಿದರು.

ಸಮಸ್ಯೆಯಲ್ಲಿರುವ ಉದ್ದಿಮೆಗಳನ್ನು ಬಲಗೊಳಿಸಲು ತಜ್ಞರ ಬಳಿಗೆ ಹೋಗುವ ಬದಲು ನಮ್ಮ ಉದ್ದಿಮೆದಾರರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಭಾರತದಲ್ಲಿ 8 ಲಕ್ಷಕ್ಕೇರಿದ ಕೊರೋನಾ ಪಾಸಿಟಿವ್ ಕೇಸ್‌ಗಳು. 22,000 ದಾಟಿದ ಸಾವಿನ ಸಂಖ್ಯೆ.

Upayuktha

‘ಕೈ’ಬಿಟ್ಟು ಕಮಲ ಹಿಡಿದ ಜ್ಯೋತಿರಾದಿತ್ಯ ಸಿಂಧಿಯಾ: ಮ.ಪ್ರ.ದಲ್ಲಿ ಬಿಜೆಪಿ ಸರಕಾರಕ್ಕೆ ಸಕಲ ಸಿದ್ಧತೆ

Upayuktha

ಕೋವಿಡ್‌ 19 ಅಪ್‌ಡೇಟ್ಸ್‌: ಇಂದು ರಾಜ್ಯದಲ್ಲೇ ಅತ್ಯಧಿಕ ಉಡುಪಿಯಲ್ಲಿ 73, ದ.ಕ. 4 ಕೊರೊನಾ ಪ್ರಕರಣ

Upayuktha