ಕ್ಷೇತ್ರಗಳ ವಿಶೇಷ

ಕಾರ್ತಿಕ ಮಾಸ ವಿಶೇಷ: ಎಲ್ಲೂರಿನ ಶ್ರೀ ವಿಶ್ವೇಶ್ವರ ದೇವಳದ ದೀಪೋತ್ಸವ

|”ಉಮಯಾ ಸಹವರ್ತತೇ ಇತಿ ಸೋಮಃ‌”|

ಶಿಷ್ಟ ಸಂಪ್ರದಾಯ, ನಡೆದು ಬಂದ ಪದ್ಧತಿ, ನಡವಳಿಕೆ, ಕ್ರಮಬದ್ಧತೆಗಳೇ ಪ್ರಧಾನವಾಗಿದ್ದು, “ಸೀಯಾಳ ಅಭಿಷೇಕ”ದ ಸೇವೆಯಿಂದ ಪ್ರಸಿದ್ಧವಾದ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಳವು 900- 1000 ವರ್ಷ ಪುರಾತನ ಸೀಮೆಯ ದೇವಾಲಯ. ಇಲ್ಲಿ ನೆರವೇರುವ ಪ್ರತಿಯೊಂದು ಪರ್ವಗಳಿಗೆ, ಆಚರಣೆಗಳಿಗೆ, ಉತ್ಸವಾದಿಗಳಿಗೆ ಅವುಗಳದ್ದೇ ಆದ ಹಿನ್ನೆಲೆಗಳಿವೆ. ನಿಯಮ ನಿಬಂಧನೆಗಳಿವೆ. ಕಾರ್ತಿಕ ಮಾಸದ ಸೋಮವಾರಗಳು ಮತ್ತು ಕಾರ್ತಿಕದ ಕೊನೆಯ ದಿನವಾದ ಅಮಾವಾಸ್ಯೆಯಂದು ಪೂರ್ಣಗೊಳ್ಳುವ ‘ಲಕ್ಷದೀಪೋತ್ಸವ’ ಧಾರ್ಮಿಕ- ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ, ಅಸಾಮಾನ್ಯ‌ ಲಕ್ಷಣವುಳ್ಳದ್ದಾಗಿದೆ. ಈ ನಂಬಿಕೆ- ಶಿಸ್ತು ಉಳಿದು ಕೊಂಡಿದೆ;‌ ನಡೆದು ಬರುತ್ತಿವೆ.

ವಾರಕ್ಕೊಮ್ಮೆ ಬರುವ ಸೋಮವಾರವೂ ಶಿವನ ಆರಾಧಕರಿಗೆ ಹಬ್ಬದ ದಿನವೇ. “ಉಮಯಾ ಸಹವರ್ತತೇ ಇತಿ ಸೋಮಃ‌” ಉಮೆಯೊಂದಿಗೆ ಈಶ್ವರನು‌ ಸೇರಿದಾಗ ‘ಸೋಮ’ನೆಂದು ಕರೆಯಲ್ಪಡುತ್ತಾನೆ. ಉಮೆಯೊಂದಿಗೆ ಆತನು ವಿಹರಿಸುವ, ಅವನಿಗೆ ಪ್ರಿಯವೆನಿಸಿದ ಸೋಮವಾರದಂದು ನಡೆಸುವ ಉಪವಾಸ, ಪೂಜೆ, ಅಭಿಷೇಕ‌ ಇತ್ಯಾದಿಗಳು ಅವನನ್ನು ಪ್ರಸನ್ನಗೊಳಿಸುತ್ತದೆ.

ಸೋಮವಾರ ಅಥವಾ ಶನಿವಾರ ದಿನಗಳಂದು ತ್ರಯೋದಶಿ ತಿಥಿ ಕೂಡಿ ಬಂದರೆ ಅದು ‘ಪ್ರದೋಷ’. ಈ ಪವಿತ್ರ ಮುಹೂರ್ತದಲ್ಲಿ ವಿಶ್ವೇಶ್ವರನನ್ನು ಆರಾಧಿಸಿದರೆ ದೇವರ ದೇವನು ಶೀಘ್ರ ಅನುಗ್ರಹಿಸುತ್ತಾನೆ.

ಕಾರ್ತಿಕ ಮಾಸದಲ್ಲಿ‌ ಬರುವ ಎಲ್ಲಾ ಸೋಮವಾರಗಳು ವಿಶ್ವನಾಥನ‌ ಆರಾಧನೆಯಿಂದ ಸಂತೃಪ್ತಿ ಪಡೆಯಲು‌ ಬಯಸುವ ಭಕ್ತರ ಪಾಲಿಗೆ ಅತ್ಯುತ್ಕ್ರಷ್ಟವೆಂದು‌ ವೇದಗಳು ಹೇಳಿವೆ. ಕಾರ್ತಿಕ ಸೋಮವಾರಗಳಲ್ಲಿ‌ ಶತರುದ್ರಾಭಿಷೇಕ, ದೀಪೋತ್ಸವ, ಲಕ್ಷ ಬಿಲ್ವಾರ್ಚನೆಗಳಿಂದ ಶಿವಾರಾಧನೆ ಮಾಡುವುದು ಶ್ರೇಯಸ್ಕರವೆನಿಸಿದೆ.

ಕಾರ್ತಿಕ ಸೋಮವಾರ:
ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಕಾರ್ತಿಕದ ನಾಲ್ಕು ಸೋಮವಾರಗಳು ಮಧ್ಯಾಹ್ನ ಅನ್ನಸಂತರ್ಪಣೆ ಸಹಿತವಾಗಿ ರಾತ್ರಿ ತುಳಸಿಪೂಜೆ, ದೊಡ್ಡರಂಗಪೂಜೆ, ದೀಪೋತ್ಸವ, ಉತ್ಸವ ಬಲಿ ನೆರವೇರುತ್ತಿದ್ದುವು- ಪರಂಪರೆಯ ಸೇವಾರ್ಥಿಗಳಿದ್ದರು. ‘ಸೋಮವಾರ ವ್ರತಸ್ಥರಾಗುವವರು ದೂರದ ಊರುಗಳಿಂದಲೂ ಬಹುಸಂಖ್ಯೆಯಲ್ಲಿ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಿದ್ದರು. ಕೊನೆಯ ಸೋಮವಾರ ಕಾರ್ತಿಕ ‘ಸೋಮವಾರ‌ ವ್ರತ’ದ ಶಿವಾರ್ಪಣೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು.

ಕಾಲ ಕಾರಣವಾಗಿ‌ ಕಾರ್ತಿಕ ಮಾಸದ ಮೊದಲ ಎರಡು ಸೋಮವಾರಗಳು ದೇವರ ಭಂಡಾರದಿಂದ ನೆರವೇರುವಂತಾಯಿತು. ಉಳಿದ ಎರಡು (ಮೂರನೇ ಮತ್ತು ನಾಲ್ಕನೇ) ಸೋಮವಾರಗಳು ನಿರ್ಧರಿತ ಮನೆತನದವರಿಂದ ವಿಸ್ತೃತವಾಗಿ ನಡೆದು ಬರುತ್ತಿವೆ. ಆದರೆ ಈ ವರ್ಷ ಮೊದಲೆರಡು ಸೋಮವಾರಗಳಲ್ಲಿ ಒಂದನ್ನು ನೆರವೇರಿಸಲು ಸೇವಾರ್ಥಿಗಳು ಒದಗಿ ಬಂದಿದ್ದಾರೆ. ಎರಡನೇ ಸೋಮವಾರದ ರಾತ್ರಿಯ ರಂಗಪೂಜೆ, ಉತ್ಸವಬಲಿ ನಡೆಸಲೂ ಸೇವಾರ್ಥಿಗಳು ಸಿದ್ಧರಾಗಿದ್ದಾರೆ. ಈ ನಡುವೆ ಕಾರ್ತಿಕ ಮಾಸದ ಹುಣ್ಣಿಮೆಯ ರಂಗಪೂಜೆಯು ಮಾಮೂಲಿನಂತೆ ಸೇವಾರ್ಥಿಗಳಿಂದ ನಡೆಯುವುದು.‌

‘ಎಲ್ಲೂರು ದೀಪ’
“ಎಲ್ಲೂರಿನ ಲಕ್ಷದೀಪ‌” ಪ್ರಸಿದ್ಧವಾದುದು. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ತುಳಸಿಪೂಜೆ, ದೊಡ್ಡರಂಗಪೂಜೆ ನೆರವೇರಿ ಬೆಳಗಿನಜಾವ ಸುಮಾರು ನಾಲ್ಕು ಗಂಟೆಗೆ ದೀಪಾರಾಧನೆ,ದೀಪೋತ್ಸವದ ಬಲಿ ಹೊರಡುತ್ತದೆ. ಕಾರ್ತಿಕ ಮಾಸದ ಅಮಾವಾಸ್ಯೆ ಕಳೆದು ಮಾರ್ಗಶಿರ ಮಾಸದ ಶುದ್ಧ ಪಾಡ್ಯದ ಸೂರ್ಯೋದಯಕ್ಕೆ ಎಲ್ಲೂರು ದೀಪೋತ್ಸವವು ಸಮಾಪನಗೊಳ್ಳುತ್ತದೆ.

ಕಾಲ ಬದಲಾಗುತ್ತಾ ಬಂತು, ಮನೋಧರ್ಮಗಳೂ ಬದಲಾದುವು, ಬೆಳಗಿನ ಜಾವದ ಲಕ್ಷದೀಪೋತ್ಸವದ ಬಲಿಯನ್ನು ಸಂಜೆಯಾಗುತ್ತಿರುವಂತೆ ಅಥವಾ ರಾತ್ರಿ ಬೇಗನೇ‌ ಏಕೆ ಮುಗಿಸಬಾರದು, ಪಕ್ಕದ ಗ್ರಾಮಗಳಲ್ಲಿ, ತಾಲೂಕಿನಲ್ಲಿ, ಜಿಲ್ಲೆಗಳಲ್ಲಿ ಎಲ್ಲೂರಿನಂತೆ ಅಮಾವಾಸ್ಯೆಯಂದು ‌ಬೆಳಗಿನ ಜಾವ ಲಕ್ಷದೀಪೋತ್ಸವ ನಡೆಯುತ್ತಿದ್ದ ಬಹುತೇಕ ದೇವಾಲಯಗಳಲ್ಲಿ ಬೇಗನೇ ನೆರವೇರುತ್ತಿವೆ, ಎಲ್ಲೂರಿನಲ್ಲಿ ಏಕೆ ಬೇಗನೇ ಮುಗಿಸಬಾರದು ಎಂಬ ಪ್ರಶ್ನೆಗಳು ಸಹಜವಾಗಿ‌ ಕಳೆದ ಹತ್ತು- ಹದಿನೈದು ವರ್ಷಗಳಿಂದ ಕೇಳಲಾಗುತ್ತಿದೆ.

‘ದೀಪಪ್ರಭೆ’ ಸೂರ್ಯಕಿರಣದಲ್ಲಿ‌ ಐಕ್ಯ:
ಈಗ ಎಲ್ಲೂರು ದೇವರನ್ನು ಮುಟ್ಟಿ, ತಮ್ಮ ಪರಂಪರೆಯ ತಂತ್ರ ನಿರ್ವಹಿಸುತ್ತಿರುವ ಎಲ್ಲೂರು ಸೀಮೆಯ ಒಂಬತ್ತು ಮಂದಿ ತಂತ್ರಿಗಳ ಹಿಂದಿನ‌‌ ತಲೆಮಾರಿನ ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ತಂತ್ರಾಗಮ ತಜ್ಞರಲ್ಲಿ ಸುಮಾರು ನಲ್ವವತ್ತು‌ ವರ್ಷಗಳಷ್ಟು ಹಿಂದೆಯೇ ಈ ಲೇಖಕ‌ “ನಮ್ಮಲ್ಲಿ ಯಾಕೆ ಬೆಳಗಿನ ಜಾವ ಲಕ್ಷದೀಪೋತ್ಸವ” ಎಂಬ ಪ್ರಶ್ನೆಯನ್ನು‌ ಕೇಳಿದ್ದು; ಆಕಾಲದ ವಿದ್ವಾಂಸರು ವಿವರಿಸಿದ್ದ ಉತ್ತರ ಹೀಗಿದೆ: “ವಿಶ್ವೇಶ್ವರನ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ನಿರಂತರ ದೀಪಾರಾಧನೆಯ ದೀಪದ ಜ್ಯೋತಿಯು (ಪ್ರಕಾಶ, ಕಾಂತಿ) ಮಧ್ಯರಾತ್ರಿ ಕಾಲದಲ್ಲಿ ಅಥವಾ ಕತ್ತಲಲ್ಲಿ ಕರಗಿಹೋಗಬಾರದು. ಬೆಳಗಿನಜಾವ ಉತ್ಸವಬಲಿ ಹೊರಟಾಗ ದೇವಳದ ಒಳ ,ಹೊರ ಅಂಗಣಗಳಲ್ಲಿ ದಳಿ ಅಳವಡಿಸಿ ಹಣತೆಗಳಲ್ಲಿ ಬೆಳಗುವ ಬಹುಸಂಖ್ಯೆಯ ದೀಪಗಳು ಉರಿಯುತ್ತಿರುವಂತೆ ಉತ್ಸವ ಮುಗಿಯುತ್ತದೆ, ಆಗ ಬೆಳಗಾಗುತ್ತಾ ಅರುಣೋದಯ ಅನಂತರ ಸೂರ್ಯೊದಯವಾಗುತ್ತದೆ. ದೇವಳದ ಸುತ್ತಲೂ ಬೆಳಗಿದ ದೀಪಗಳು ನಂದಿಹೋಗಲು (ಆರಿಹೋಗಲು) ಆರಂಭವಾಗುತ್ತವೆ, ಹೀಗೆ ನಂದಿಹೋಗುವ ದೀಪದ ‘ಪವಿತ್ರ ಜ್ಯೋತಿಯು’ ಸೂರ್ಯಕಿರಣದೊಂದಿಗೆ ಐಕ್ಯವಾಗುತ್ತದೆ. ಆಗ ಬೆಳಗಾಗುತ್ತದೆ. ಅಂದರೆ ದೀಪ- ಜ್ಯೋತಿ ಆರಿಹೋಗದೆ ಸೂರ್ಯ ಪ್ರಭೆಯೊಂದಿಗೆ ನಿರಂತರ ಬೆಳಗುತ್ತಿರುತ್ತವೆ” ಎಂಬ ಧಾರ್ಮಿಕ- ಸಾಂಸ್ಕೃತಿಕ ವಸ್ತು ಸ್ಥಿತಿಯ ವಿವರಣೆ ನೀಡಿದ್ದರು.

ಈ ಮೇಲಿನ ವಿವರಣೆಯ ಹೊರತಾಗಿ ದೇವಾಲಯದ ಪುರಾತನ ಶಿಸ್ತು ಅಥವಾ ಒಪ್ಪಿಗೆಯೂ ಬೆಳಗಿನ ಜಾವದ ಲಕ್ಷದೀಪ ಹಾಗೂ ಆಯನೋತ್ಸವವನ್ನು ದೃಢೀಕರಿಸುತ್ತದೆ. ಎಲ್ಲೂರಿನಲ್ಲಿ ಲಕ್ಷದೀಪದ ಉತ್ಸವ ಇಂದಿಗೂ ಬೆಳಗಿನ ಜಾವದಲ್ಲೆ ಆರಂಭವಾಗಿ ಸೂರ್ಯೋದಯಕ್ಕೆ ಸಮಾಪನಗೊಳ್ಳುತ್ತದೆ. ಇದು ಇಲ್ಲಿಯ ವಿಶೇಷ.

ಕನಿಷ್ಠ ನೂರು ವರ್ಷಗಳಿಂದ ಲಕ್ಷದೀಪೋತ್ಸವ, ಆಯನೋತ್ಸವಗಳಂದು ರಾತ್ರಿ ಯಕ್ಷಗಾನ ತಾಳಮದ್ದಳೆ- ಬಯಲಾಟಗಳು‌ ಬೆಳಗಿನ ಜಾವ ಬಲಿ ಹೊರಡುವವರೆಗೆ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಈ ಲಕ್ಷದೀಪ, ಆಯನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರ್ಥ ಹೇಳಿದ್ದ ಆ ಕಾಲದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳ ಜೀವನ ವೃತ್ತಾಂತಗಳಲ್ಲಿ‌ (ಮುದ್ರಿತ) ಉಲ್ಲೇಖಗಳು ಸಿಗುತ್ತವೆ. ಸ್ಥಳೀಯ ಉತ್ಸಾಹಿ ಯಕ್ಷಗಾನಾಸಕ್ತರು ಇದ್ದರು, ಅವರು ಅರ್ಥ ಹೇಳುತ್ತಿದ್ದ, ಹಿಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆಯೂ ವಿವರಗಳು ಸಿಗುತ್ತವೆ.

ಎಲ್ಲೂರು ದೇವಾಲಯವು ಜಿಲ್ಲೆಯ ಯಾವುದೇ ಧಾರ್ಮಿಕ ಕೇಂದ್ರಗಳ, ಮಂದಿರ, ದೇವಸ್ಥಾನ, ಗುಡಿಗಳನ್ನು ಅನುಸರಿಸಬೇಕಾದ ಅಗತ್ಯವಿಲ್ಲ. ಇಲ್ಲಿ ಎಲ್ಲವೂ ಇದೆ. ನೋಡಬೇಕು- ತಿಳಿಯಬೇಕು. ಇದ್ದುದರಲ್ಲೆ ಮಹತ್ತನ್ನು ಸಾಧಿಸಬಹುದು.

“ಲಕ್ಷ್ಯ”ವನ್ನು ಬೆಳಗುವ ‘ಲಕ್ಷದೀಪೋತ್ಸವ’:
ದೀಪವು ಲೌಕಿಕ- ಅಲೌಕಿಕಗಳನ್ನು ಬೆಸೆಯುತ್ತಾ ಭವ್ಯದಲ್ಲಿ ದಿವ್ಯವನ್ನು ಸೃಷ್ಟಿಸುತ್ತದೆ. ಅಂಧಕಾರದಲ್ಲಿ ಅಸಂಖ್ಯ ದೀಪಗಳ ಪ್ರಜ್ವಲನೆ, ಗಗನದ ತಾರೆಗಳು ಭುವಿಗಿಳಿದು ಭವವೆಲ್ಲ ಬೆಳ್ಳಂಬೆಳಗು. ಈ ಪರ್ವ‌ ಭಗವಂತನ ಹಲವು ಆರಾಧನೆಗಳಲ್ಲಿ ಒಂದು ಪರ್ವ; ದೀಪದ ಪರ್ವ. ಈ ಪರ್ವ ಒದಗಿಬರುವ ಮಾಸವೇ ಕಾರ್ತಿಕ ಮಾಸ. ‘ಲಕ್ಷ್ಯ’ವನ್ನು ಬೆಳಗುವ ‘ದೀಪೋತ್ಸವ’.

ವ್ಯಕ್ತಿ ಜೀವನದ ಸಿದ್ಧಿ ದೃಷ್ಟಾಂತವನ್ನು ದೃಢ ಪಡಿಸಲು ‘ದೀಪ’ವು ಲಕ್ಷಣವಾದಾಗ ‘ಲಕ್ಷ್ಯ” ಸಾಧಿಸಲ್ಪಡುತ್ತದೆ. ಆಗ ಸಹಜವಾಗಿ ಅಜ್ಞಾನ, ದಾಷ್ಟ್ಯ, ದುರಹಂಕಾರ ನಾಶವಾಗಿ‌ ಸುಜ್ಞಾನ ಪ್ರಾಪ್ತಿಯಾಗುತ್ತದೆ. ಬೆಳಗಿದ ‘ದೀಪ’ ಅರ್ಥಪೂರ್ಣ ‘ಜ್ಞಾನ’ವೇ ಆಗುತ್ತದೆ. ಉದ್ದೇಶ ಸಫಲವಾಗುತ್ತದೆ. ಅಂದರೆ “ದೀಪ” ಗೆದ್ದಂತೆ.

ಲಕ್ಷ ಅಲ್ಲ ಲಕ್ಷ ಲಕ್ಷ ಸಂಖ್ಯೆಯ ದೀಪ ಬೆಳಗಿದರೂ ದೀಪದ “ಜ್ಞಾನ” ಪ್ರತಿಪಾದ್ಯ ಧರ್ಮವು ವಿಜೃಂಭಿಸಬೇಕೆಂದಿಲ್ಲ. ಅಜ್ಞಾನ, ದಾಷ್ಟ್ಯ ಮತ್ತು ದುರಹಂಕಾರಗಳ ಪ್ರಖರತೆಯ ಮುಂದೆ ಕೆಲವೊಮ್ಮೆ “ದೀಪ – ಜ್ಞಾನ” ತನ್ನ ಸಹಜ ‘ಲಕ್ಷ್ಯ’ವನ್ನು ಸಾಧಿಸಲಾಗದೆ ಸೋಲುವುದಿದೆ. ಇದು ದೀಪದ ಸೋಲಲ್ಲ; ಬದಲಿಗೆ ಸಮುದಾಯದ ಪರಾಭವ.
(ಸಂಗ್ರಹ)

“ದೀಪ ಬೆಳಗಲಿ, ದೀಪ ಗೆಲ್ಲಲಿ‌” ಇದು ದೀಪೋತ್ಸವದ ಆಶಯವಾಗಲಿ‌.
-ಕೆ. ಎಲ್.ಕುಂಡಂತಾಯ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಆದಿನಾಥೇಶ್ವರನ ಸನ್ನಿಧಿಯಲ್ಲಿ ನ. 30ರಂದು ಕಾರ್ತಿಕ ಮಾಸದ ಏಕಾದಶ ರುದ್ರಾಭಿಷೇಕ

Upayuktha

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂ.1ರಿಂದ ದೇವರ ದರ್ಶನಕ್ಕೆ ಅವಕಾಶ

Upayuktha

ತುಲಾಸಂಕ್ರಮಣ: ಮುಜುಂಗಾವು ಕ್ಷೇತ್ರದಲ್ಲಿ ಅ.17ರಂದು ಕಾವೇರಿ ತೀರ್ಥಸ್ನಾನ

Upayuktha