ನಿಧನ ಸುದ್ದಿ

ಖ್ಯಾತ ವಿಜ್ಞಾನ ಶಿಕ್ಷಕ ಇಂದುಹಾಸ ರಾಮರಾವ್ ಜೇವೂರ (81) ನಿಧನ

ಧಾರವಾಡ: ಹೆಸರಾಂತ ವಿಜ್ಞಾನ ಶಿಕ್ಷಕರು, ಕೆ.ಇ. ಬೋರ್ಡ್ಸ್ ಸಂಸ್ಥೆಯಲ್ಲಿ ಸುಧೀರ್ಘ 40 ವರ್ಷಗಳ ಕಾಲ ಶಿಷ್ಯ ವತ್ಸಲ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇಂದುಹಾಸ ರಾಮರಾವ್ ಜೇವೂರ ಇಂದು ಬೆಳಗಿನ ಜಾವ (ಅಕ್ಟೋಬರ್ 7) 2 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಧಾರವಾಡದ ಮಾಳಮಡ್ಡಿಯ ನಾರಾಯಣ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದ ಅವರು, ಪತ್ನಿ ರಂಗಭೂಮಿ ಕಲಾವಿದೆ, ಖ್ಯಾತ ನಾಟಕಕಾರ್ತಿ ಶ್ರೀಮತಿ ವಿಷಯಾ ಜೇವೂರ ಸೇರಿದಂತೆ, ಮಕ್ಕಳಾದ ವಿಕಾಸ, ಸುಹಾಸ ಮತ್ತು ಇಬ್ಬರು ಮೊಮ್ಮಕ್ಕಳು ಹಾಗೂ ಶಿಷ್ಯ ಬಳಗವನ್ನು ಅಗಲಿದ್ದಾರೆ.

ಧಾರವಾಡದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ, ಅನೇಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ಪ್ರೇರಕ, ಪೋಷಕ ಮತ್ತು ಸಂಘಟನಾ ಶಕ್ತಿಯಾಗಿದ್ದ ಆದರ್ಶ ಮೇಷ್ಟ್ರು. ಸ್ವತಃ ರಂಗಭೂಮಿ ಕಲಾವಿದರೂ ಅವರಾಗಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರು.

ಹೊಸಯಲ್ಲಾಪುರದ ದಹನಕ್ರಿಯಾ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜರುಗಲಿದೆ.

ಮೇಷ್ಟ್ರ ಪರಿಚಯ:
ಶ್ರೀ ಇಂದುಹಾಸ ಜೇವೂರ್ ಇವರು 20 ಮೇ 1940 ವಿಜಾಪುರದ ಬೇನಾಳದಲ್ಲಿ ಜನಿಸಿದರು. ಬಿ.ಎಸ್ಸಿ, ಬಿ.ಎಡ್ ಪದವಿ ಪೂರ್ಣಗೊಳಿಸಿ ಧಾರವಾಡದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಕೆ. ಇ ಬೋರ್ಡ್, ಕ. ನಾ. ಕ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದವರು.

ಅವರು ಸಾಹಿತಿಗಳು, ರಂಗಭೂಮಿ ನಟರು ಹಾಗೂ ನಿರ್ದೇಶಕರು. ಅವರ ಪತ್ನಿ ಶ್ರೀಮತಿ ವಿಷಯ ಜೇವೂರ್ ಸಹ ಹಿರಿಯ ರಂಗನಟಿ. ಕಾಲೇಜು ದಿನಗಳಿಂದಲೇ ಇವರ ರಂಗ ಪಯಣವು ಪ್ರಾರಂಭವಾಯಿತು. 1969- 70 ರಲ್ಲಿ ನಾಟಕ- ಮಂದಿ ಮದುವೆ ಇವರು ನಟಿಸಿದಂತಹ ಪ್ರಪ್ರಥಮ ನಾಟಕ. ಗೆಳೆಯ ನೀನು ಹಳೆಯ ನಾನು, ಹೊಸ ಸಂಸಾರ ಮುಂತಾದ ನಾಟಕಗಳಲ್ಲಿ ಅಭಿನಯಿಸಿದವರು.

ನಿರ್ದೇಶನ:
ಬಾದಲ್ ಸರ್ಕಾರ್ ವಿರಚಿತ ಏವಂ ಇಂದ್ರಜಿತ್, ವಿಜಯ ತೆಂಡೂಲ್ಕರ್ ವಿರಚಿತ ಶಾಂತತ ಕೋರ್ಟ್ ಚಾಲು ಆಹೆ, ಸಖಾರಾಮ್ ಬೈಂಡರ್, ಬೆಂಗಾಲಿ ಇಂದ ಅನುವಾದಿತ ನಾಟಕ ಹುಚ್ಚು ಕುದುರೆ, ಜಿ.ಬಿ ಜೋಷಿ ವಿರಚಿತ ಕದಡಿದ ನೀರು ಹೀಗೆ ಅನೇಕ ನಾಟಕಗಳ ನಿರ್ದೇಶನ ಮಾಡಿದವರು.

ತಮ್ಮ ಸ್ವಂತ ರಚನೆಯ ಮರಿಚಿಕೆ, ಮುತ್ತಿನ ಬಲೆ, ಮಕ್ಕಳ ನಾಟಕಗಳಾದ ವೆಸಲಿಸ, ಸತ್ಯವೆಂಬುದು ಹರನೋ ಹರನೆಂಬುದೇ ಸತ್ಯ, ಸಿದ್ಧಾರ್ಥ ಮುಂತಾದ ನಾಟಕಗಳ ನಿರ್ದೇಶನ ಹಾಗೂ ನಿರ್ಮಾಣವನ್ನು ಕೈಗೊಂಡವರು.

ಸಾಹಿತ್ಯ:
ಅವರ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಮಯೂರ, ತುಷಾರ, ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಗಳಲ್ಲಿ ಪ್ರಕಟಗೊಂಡಿವೆ.

ಕರ್ಮವೀರ ಪತ್ರಿಕೆಯಲ್ಲಿ “ಮಕ್ಕಳಿಗಾಗಿ ವಿಜ್ಞಾನ”ಎನ್ನುವ ಅಂಕಣ ಬರಹ 30 ಕಂತುಗಳಲ್ಲಿ ಪ್ರಕಟಗೊಂಡಿದೆ. ಅತೃಪ್ತ, ವರಾಹ ಪುರಾಣ, ಮುತ್ತಿನ ಬಲೆ ಇನ್ನೂ ಹಲವು ರೇಡಿಯೋ ನಾಟಕಗಳನ್ನು ರಚಿಸಿದ್ದಾರೆ ಹಾಗೂ ಆಕಾಶವಾಣಿಯಲ್ಲಿ ಈ ನಾಟಕಗಳು ಪ್ರಸಾರಗೊಂಡಿವೆ.

‘ಬೇವಿನ ಮರ’ ರೇಡಿಯೋ ನಾಟಕವು ಏಕಕಾಲದಲ್ಲಿ ಆಕಾಶವಾಣಿಯ ಅನೇಕ ಪ್ರಸಾರ ಕೇಂದ್ರಗಳಿಂದ ಪ್ರಸಾರಗೊಂಡಿದೆ. ಅಲ್ಲದೆ ಅನೇಕ ಕಥೆಗಳು, ಏಕ ವ್ಯಕ್ತಿ ಕಾವ್ಯ ನಾಟಕಗಳು, ರೂಪಕಗಳನ್ನು ರಚಿಸಿದ್ದಾರೆ.

ಜೇವೂರ್ ಅವರು 81ರ ಹರೆಯದಲ್ಲೂ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಜಿರೆ: ಅಶ್ವಿನಿ ಟೆಕ್ಸ್​ಟೈಲ್ಸ್​​ ಮಾಲಕಿ ಅಮಿತಾ ಕಾಮತ್ ನಿಧನ

Sushmitha Jain

ಭೂಗತ ಲೋಕದ ಮಾಜಿ ದೊರೆ ಎನ್ ಮುತ್ತಪ್ಪ ರೈ ನಿಧನ

Upayuktha

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಮಹಾಬಲೇಶ್ವರ ಹೆಗಡೆ ನಿಧನ

Upayuktha