ಕತೆ-ಕವನಗಳು

ಅಮರ ಕೋಗಿಲೆ: ಗಾನಗಂಧರ್ವ ಎಸ್‌ಪಿಬಿಗೆ ಅಕ್ಷರ ನಮನ

ಇನ್ನಿನಿಸು ನೀ ಬದುಕ ಬೇಕಿತ್ತು
ಸಿರಿಕಂಠ ಕೋಗಿಲೆಯೆ |
ಕಾಯವಳಿದರು ನೀನು ತೊಲಗದಿರು
ನನ್ನೆದೆಯ ಗುಡಿಯಿಂದ ||

ನಿನ್ನ ಹಾಡನು ಕೇಳಿ ಮರೆತು ಬನ್ನವನು
ಹಾಯಾಗಿದ್ದೆ ನಾನಿದು ತನಕ |
ಸಗ್ಗದಲಿಹ ಪರಮಾತ್ಮ ಕರೆದಾಗ ನಿನ್ನನ್ನು
ಕುಗ್ಗದೆಯೆ ಹೋದೆ ನೀನಲ್ಲಿಗೆ ||

ತಬ್ಬಿಕೊಂಡಿದೆ ನಿನ್ನ ಶಾರೀರ ಗಾಳಿಯನು
ಸದ್ದುಗದ್ದಲವಿರದ ಮೌನದಲಿ |
ಸುಸ್ಪಷ್ಟ ಕಂಠದಲಿ ಅಸ್ಪಷ್ಟವಿನಿತಿರದು
ಕಷ್ಟವೆಲ್ಲವ ಮರೆಸುತಿಹುದು ||

ಮೌನವಾಗಿಹೆ ನೀನಿಂದೇಕೆ ಗಾಯಕನೆ
ತಂತಿ ಕಡಿಯಲು ಹಾಡು ನಿಂತೀತೆ |
ಸದ್ದಡಗಿ ನಿದ್ರಿಸಲು ನಿನಗೆ ಬಿಡುವಿಹುದೆ
ಮೋನದಲು ಧ್ಯಾನ ತುಂಬಿರಲು ||

ಸಲಿಸುವೆನು ನಿನಗಿಂದು ನಾನಶ್ರು ತರ್ಪಣವ
ಸ್ಮರಿಸುವೆನು ಮನದೊಳಗೆ ನಿನ್ನಾತ್ಮವ |
ನಿನ್ನ ಗಾಯನಕಿರದು ಬೇರಿರದು ಸರಿಸಾಟಿ
ನಮಿಸುವೆನು ನಿನಗಿಂದು ನಾನು ತಲೆವಾಗಿ||

ಜನಿಸಿ ಬರಬೇಕು ನೀನಿನ್ನೊಮ್ಮೆ ಬಾಲಣ್ಣ
ಕನಸಿನಲು ನಿನ್ನ ಹಾಡ ಕೇಳಿಸುತ |
ನಿನಗೆ ನಮಿಸುತ ಧನ್ಯರಾಗಿಹೆವು ನಾವೆಲ್ಲ
ಇನ್ನೊಮ್ಮೆ ಅವತರಿಸಿ ಬಾ ನಮ್ಮ ನಾಡಿನಲಿ ||

ಇಂದು ನಮ್ಮನ್ನಗಲಿದ ಗಾನ ಗಂಧರ್ವ ಶ್ರೀ ಎಸ್ಪೀಬಿಯವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುವೆನು.
-ವಿ.ಬಿ.ಕುಳಮರ್ವ, ಕುಂಬ್ಳೆ ✍🙏🙏🙏😭

Related posts

ಕವನ: ಅವಲೋಕನ

Upayuktha

ಕವನ: ನಿನಗಿದೋ ಶತನಮನ

Upayuktha

*ಪ್ರೇಯಸಿ*

Harshitha Harish