ಲೇಖನಗಳು

ಮನ ಮಂದಿರ: ಪ್ರತಿ ಹೆಜ್ಜೆ ಗುರುತು ಗುರುತರವಾಗಿರಲಿ

ಒಂದೇ ಸಮನೆ ಓಡಿ ಓಡಿ ಸುಸ್ತಾದಂತೆನಿಸುತ್ತೆ. ಆಗ ಏನು ಮಾಡೋದು, ಏದುಸಿರು ಬಿಡುವುದು, ನೀರು ಕುಡಿಯುವುದು ಅಥವಾ ಆಯಾಸ ಪರಿಹರಿಸಿಕೊಳ್ಳಲು, ಮತ್ತು ದಣಿವಾರಿಸಿಕೊಳ್ಳಲು ಸುಮ್ಮನೇ ಕುಳಿತುಕೊಳ್ಳುವುದು, ಇಲ್ಲವೇ ಶವಾಸನದಲ್ಲಿ ಮಲಗುವುದು. ಈ ಬದುಕು ಈಗೀಗ ಹಾಗೆಯೇ ಆಗುತ್ತಿದೆ. ಕಾಲದೊಂದಿಗೆ ಟೊಂಕ ಕಟ್ಟಿ ಓಡುವುದೊಂದೇ ಕೆಲಸವಾಗಿ ವಿಪರೀತ ದಣಿವು ತುಂಬಿಸಿಕೊಳ್ಳುತ್ತಿದ್ದೇವೆ. ಆದರೆ ಅದರಿಂದ ಲಾಭವೇನೂ ಆಗದು. ದೇಹ ಹಾಗೂ ಮನಸ್ಸನ್ನು ವಿಶ್ರಾಂತಿಯಿಲ್ಲದೇ ಸುಸ್ತುಪಡಿಸುತ್ತಾ ಇದ್ದರೆ ನಾಳೆಯೂ ಅದೇ ರೀತಿ ಓಡುವ ತಾಳ್ಮೆಗೆ ಮನಸ್ಸು ಒಗ್ಗಿಕೊಳ್ಳದೇ ಕುಗ್ಗಲಾರಂಭಿಸುತ್ತದೆ. ಹಾಗಾಗಿ ಆ ರೀತಿ ಆಗದಿರಲು ನಿರ್ದಿಷ್ಟ ಕಾರ್ಯಗಳ ವೇಳಾಪಟ್ಟಿ ಮನಸ್ಸಿನಲ್ಲಿ ತಯಾರು ಮಾಡಿ ಕೊಂಡಿರಲೇಬೇಕಾಗುತ್ತದೆ.

ಜೀವನದ ಪ್ರತಿ ಸಮಯವೂ ಅಮೂಲ್ಯವಾದುದು. ಅದರಲ್ಲಿ ಕೆಟ್ಟ ಸಮಯ, ಒಳಿತಿನ ಸಮಯವೆಂಬ ವ್ಯತ್ಯಾಸವಿರುವುದಿಲ್ಲ. ಆದರೆ ನಾವು ನಮ್ಮೊಳಗಿನ ಭಾವನೆಗಳು ವ್ಯಕ್ತಪಡಿಸುವ ಸುಖ, ನೆಮ್ಮದಿಯಿಂದ ಒಳ್ಳೆಯ ಸಮಯ ಎಂದು ವಿಭಾಗಿಸುತ್ತೇವೆ. ಹಾಗೆಯೇ ನಮ್ಮ ಮನಸ್ಸಿಗೆ ತದ್ವಿರುದ್ಧವಾಗಿ ಕಾರ್ಯಗಳು ನಡೆದು ಒಳಿತಾಗದೇ ಹೋದರೆ ಆಗ ಅದನ್ನು ಕೆಟ್ಟ ಸಮಯವೆಂದು ಪರಿಗಣಿಸುತ್ತೇವೆ. ಸಮಯ ಅಥವಾ ಕಾಲ ನಿರಂತರವಾದುದು. ಅದರಲ್ಲಿ ಭೇದಭಾವವೆಂಬುದೇನೂ ಇರುವುದಿಲ್ಲ. ಕಳೆದು ಹೋದ ಕಾಲವು ಗತಕಾಲಕ್ಕೆ ಸೇರಲ್ಪಡುತ್ತದೆ. ಅದರ ಬಗ್ಗೆ ಚಿಂತಿಸದೇ ಒಳಿತಾದುದನ್ನು ಪರಿಗಣಿಸಿ ಮುಂದಿನ ಕಾರ್ಯಕ್ಕೆ ಸೇರಿಸಿಕೊಳ್ಳುತ್ತ, ಸರಪಳಿಯನ್ನು ಹೆಚ್ಚಿಸುತ್ತ ನೆಮ್ಮದಿಯ ಸಂಭ್ರಮದಲ್ಲಿ ಕುಣಿಯುತ್ತಿರಬೇಕು.

ಬಾಳೆಗೊನೆಯ ಕಾಯಿ ಹಣ್ಣಾದಾಗ ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುವ ಕೆಲವು ಮಹತ್ಸಂದೇಶಗಳಿರುತ್ತವೆ. ಅರೆಹಣ್ಣು ಆಗಿರುವಾಗ ಸಿಪ್ಪೆ ಸುಲಿಯಲು ಪ್ರಯತ್ನಿಸಿದರೆ ತುಂಡು ತುಂಡಾಗಿ ಸಿಪ್ಪೆಗಳು ಬರುತ್ತವೆ. ಅಲ್ಲದೇ ಒತ್ತಾಯ ಪೂರ್ವಕವಾಗಿ ಎಳೆಯಬೇಕಾಗುತ್ತದೆ. ಅದೇ ಸಾದಾ ತಾಜವಾಗಿ ಸಹಜವಾಗಿಯೇ ಹಣ್ಣಾದಾಗ ಸಿಪ್ಪೆ ತುಂಬ ಸುಲಭವಾಗಿ ತೆಗೆಯಲು ಬರುತ್ತದೆ. “ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ” ಎಂದು ಹೇಳುವ ಮಾತು ಇದಕ್ಕೇ. ಅಷ್ಟು ಸರಳವಾಗಿ, ಸುಲಲಿತವಾಗಿ ಯಾವುದೇ ಉಪಕರಣವಿಲ್ಲದೇ ತೆಗೆಯಬಹುದಾಗಿದೆ. ಯಾವುದೇ ಕಷ್ಟವೂ ಇಲ್ಲ. ಕೈಗೆ ಅಂಟುವುದೂ ಇಲ್ಲ.

ಆದರೆ ಹಾಗೆ ತಾಜಾ ಹಣ್ಣಾದ ಮೇಲೆಯೂ ಮತ್ತೂ ಒಂದೆರಡು ದಿನ ಹಾಗೇ ಇಟ್ಟು ನೋಡಿದ ಬಳಿಕ ಸಿಪ್ಪೆ ತೆಗೆಯಲು ಪುನಃ ಕೊಂಚ ತ್ರಾಸ ಪಡಬೇಕಾಗುತ್ತದೆ. ಆದರೆ ಸಿಪ್ಪೆಯ ಸತ್ವಾಂಶಗಳು ಹಣ್ಣಿನೊಡನೆ ಸೇರಿಕೊಂಡು ಹಣ್ಣನ್ನು ಇನ್ನಷ್ಟು ಸ್ವಾದಭರಿತವಾಗಿಸುತ್ತದೆ. ತಿಂದಾಗ ರುಚಿಯ ಅನುಭವವೂ ಆಗುತ್ತದೆ. ಅದೇ ರೀತಿಯಲ್ಲಿ ಈ ಜೀವನವು ಕೂಡಾ ಅನುಭವಗಳ ಪಾಕವೇ ಆಗಿದೆ. ಎಳೆಯರಿರುವಾಗ ಕೆಲವರು ಎಷ್ಟು ಹಠ ಸ್ವಭಾವ ಹೊಂದಿರುತ್ತಾರೆಂದರೆ ಹಣ್ಣಾಗದ ಅರೆ ಬಾಳೆಹಣ್ಣನ್ನು ಸುಲಿಯಲು ಪಡುವ ಪ್ರಯತ್ನದಂತೆ ಕಷ್ಟ ಕೊಡುತ್ತಾರೆ. ಅದು ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತಹ ಕಾಲಘಟ್ಟವೇ ಸರಿ. ತಾಜಾ ಹಣ್ಣಿನ ರೀತಿಯಲ್ಲಿ ಮನಸ್ಸಿದ್ದಾಗ ಎಲ್ಲವೂ ಸತ್ಯ ಸುಂದರವೆನಿಸುತ್ತದೆ. ತಿಳಿವಳಿಕೆ ತುಂಬಿದಾಗ ಮನಸ್ಸಿನ ಭಾವನೆಗಳು ತಾಜಾತನದಿಂದ ಕೂಡಿರುತ್ತವೆ. ಅಂತೆಯೇ ಕಾಲ ಮಾಗಿದಂತೆ ದೇಹಕ್ಕೆ ಪುನಃ ಜಡತೆಗಳು ಆವರಿಸುವುದುಂಟು. ತಾಜಾ ಹಣ್ಣುಗಳನ್ನು ಮತ್ತೂ ಹಣ್ಣಾಗಲಿ ಎಂದೇ ಇಟ್ಟರೆ ಸಿಪ್ಪೆ ತೆಳುವಾಗಿ ತೆಗೆಯಲು ಹರಸಾಹಸ ಪಡಬೇಕಾಗುತ್ತದೆ.

ಅದೇ ರೀತಿ ಜೀವನದ ಮಾಗಿದ ದಿನಗಳಲ್ಲಿ, ಅಂದರೆ ಸಿಪ್ಪೆ ಸುಲಿಯಲು ಕೊಂಚ ತ್ರಾಸ ಕೊಡುವ ಹಣ್ಣಿನಂತೆ, ಅನ್ನುವುದು ಸಮರ್ಪಕವಲ್ಲ ಎನಿಸಿದರೂ, ಅನುಭವಗಳ ಮೂಟೆ ಅವರ ಸುಪ್ತ ಚೇತನಕ್ಕೆ ದಿವ್ಯಪ್ರಭೆಯನ್ನು ಕೊಟ್ಟಿರುತ್ತದೆ. ಹಾಗಾಗಿ ಅದನ್ನು ಪಡೆದುಕೊಳ್ಳಬೇಕೇ ಹೊರತು ಮಾಗಿದ ಜೀವನದ ದಾರಿಯಲ್ಲಿ ಹಿರಿಯರ ಜೀವನ ಚರ್ಯೆಯನ್ನು ಬದಲಾಯಿಸುವುದು ಕಷ್ಟವೇ ಸರಿ. ಹಾಗೂ ಅದು ನ್ಯಾಯವೂ ಅಲ್ಲ. ಒಂದರ್ಥದಲ್ಲಿ ಹಿರಿಯರು ಕೆಲವರು ಸವೆಸಿದ ಹಾದಿ ಅದು ಪರಿಶುದ್ಧವಾದ ಗಾಳಿಯನ್ನು ಉಚ್ಛ್ವಾಸ ಮಾಡಿದಂತೆ. ಅನುಸರಿಸದೇ ಹೋದರೆ ಉಚ್ಛ್ವಾಸ ಮಾಡಿ ಹಿಡಿದಿರಿಸಿದ ಗಾಳಿಯನ್ನು ನಿಶ್ವಾಸಗೊಳಿಸಿದಂತೆ ಅತೀ ಸುಲಭವಾಗಿದೆ !

ಬೆಟ್ಟವನ್ನೇರಲು ಪಡುವ ತ್ರಾಸ ಅದೇ ಬೆಟ್ಟವನ್ನು ಇಳಿಯುವಾಗ ಬೇಕಾಗುವುದಿಲ್ಲ. ಏರಿದಷ್ಟು ಸಮಯವೂ ಬೇಡ. ಹಾಗೆಯೇ ಜೀವನವೆಂಬ ಈ ಬೆಟ್ಟದ ಒಂದೊಂದೇ ಹೆಜ್ಜೆಯನ್ನು ಅತೀ ಜಾಗರೂಕತೆಯಿಂದ ಇಡಬೇಕಾದ ಅನಿವಾರ್ಯತೆ ಇಂದು ಎಲ್ಲರಿಗೂ ಇರಬೇಕಾಗಿದೆ. ಅಲ್ಲದೆ ಅತ್ತಿತ್ತ ಗಿರಿ ಕಂದರ, ಕಣಿವೆಗಳು, ಕಲ್ಲು ಮುಳ್ಳುಗಳು ಇರುವುದು ಅರಿವಿಗೆ ಬಾರದೇ ಹೋಗಿರುತ್ತವೆ. ಇಡುವ ಪ್ರತಿಯೊಂದು ಹೆಜ್ಜೆಯ ಕಡೆಗೆ ಧ್ಯಾನ ಸದಾ ಇರಬೇಕು. “ಗಮನಿಸುತ್ತಿದ್ದರೆ ಆಗಮನ ನಿರ್ಗಮನ ಸುಲಭವಾಗುವುದು” ಪ್ರತಿಯೊಂದೂ ಹೆಜ್ಜೆಯ ನಡಿಗೆಯ ಗುರುತು ಬೇರೆ ಬೇರೆಯಾಗಿರುತ್ತದೆ. ಕ್ಷಣಗಳೂ ಬದಲಾಗಿರುತ್ತದೆ. ಆ ಗುರುತು ಯಾವಾಗಲೂ ಗುರುತರವಾಗಿರಲೆಂದು ಎಲ್ಲರ ಆಶಯವಾಗಿರಲಿ.

-ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು
mallikajrai9@gmail.com

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದಿನದ 24 ಗಂಟೆಯೂ ರೋಗಿಗಳ ಸೇವೆ ಮಾಡುತ್ತಿರುವ ದಾದಿಯರಿಗೊಂದು ನಮನ

Upayuktha

ಅಪಸ್ಮಾರ ಮತ್ತು ಅಪನಂಬಿಕೆಗಳು: ವಿಶ್ವ ಅಪಸ್ಮಾರ ಜಾಗೃತಿ ದಿನ – ಮಾರ್ಚ್ 26

Upayuktha

ದಂತ ಚಿಕಿತ್ಸೆಯಲ್ಲಿ ಲೇಸರ್ ಬಳಕೆ: ನೋವಿಲ್ಲದ ಸುಲಭ ಚಿಕಿತ್ಸೆ

Upayuktha