ಜೀವನ-ದರ್ಶನ

ಬಾಳಿಗೆ ಬೆಳಕು: ಇಲ್ಲಿ ನಿಷ್ಪ್ರಯೋಜಕ ಎನ್ನುವ ವಸ್ತು ಇಲ್ಲವೇ ಇಲ್ಲ

ಈ ಭೂಮಿಯಲ್ಲಿ ನಿಷ್ಪ್ರಯೋಜಕವೆನ್ನುವಂಥ ಒಂದು ವಸ್ತುವೇ ಇಲ್ಲ. ಎಲ್ಲ ಜೀವಿಗಳೂ, ಹಾಗೆಯೇ ಎಲ್ಲ ಮಾನವರೂ ಅತ್ಯಮೂಲ್ಯರೇ. ಹಾಗೆಯೇ ಜೀವ ಜೀವರಲ್ಲಿ ಭೇದವಿರಬಹುದು, ಇರಬೇಕಾದದ್ದೇ. ಆದರೆ ಮೇಲು ಕೀಳೆಂಬುದು ಖಂಡಿತ ಇಲ್ಲ. ಈ ಕಲ್ಪನೆ ಮಾನವನೆಂಬ ಪ್ರಾಣಿಯ ಮಿಥ್ಯಾಸೃಷ್ಟಿ. ನಾವು ಮಾಡಿಕೊಂಡ ಹಲವಾರು ಸ್ವಯಂಕೃತಾಪರಾಧಗಳಲ್ಲಿ ಇದೂ ಒಂದು.

ಸಾಮಾನ್ಯವಾಗಿ ನಾವು ನಮಗೇ ಒಂದು ಚೌಕಟ್ಟನ್ನು ನಿರ್ಮಿಸಿಕೊಂಡು ಅದರೊಳಗೆಯೇ ವ್ಯವಹರಿಸುವುದು ಲೋಕರೂಢಿ. ಇದು ಅಲಿಖಿತ ನಿಯಮವಾದರೂ ಸರ್ವತ್ರ ಪ್ರಸ್ತುತ.

ಉದಾಹರಣೆಗೆ ಒಬ್ಬ ವ್ಯಕ್ತಿ ಯಾವುದೋ ಒಂದು ವಿದ್ಯೆಯಲ್ಲಿ ತುಂಬಾ ಪಳಗಿದವನಾಗಿರುತ್ತಾನೆ. ಆತನಿಗೆ ಒಂದಷ್ಟು ಅಭಿಮಾನಿಗಳೂ ಇರುತ್ತಾರೆ. ಇದೆಲ್ಲ ಸಹಜ. ಆತನ ವಿದ್ಯೆಗೆ ಗೌರವಿಸುವುದೂ ಸಹಜ. ಆದರೆ ಆತನನ್ನು ನೋಡಿದಾಗ ತಾನು ಅವನಂತೆ ಇಲ್ಲವೆಂದುಕೊಂಡು ಕೀಳರಿಮೆಯಲ್ಲಿ ಬಿದ್ದರೆ, ಅದು ಮಾತ್ರ ಅಸಹಜ. ಯಾವನನ್ನು ಕಂಡರೂ ಗೌರವಿಸುವುದು ಧರ್ಮ. ಆದರೆ ತನಗಿಂತ ಆತ ಶ್ರೇಷ್ಠನೆಂದುಕೊಂಡಲ್ಲಿ ತನ್ನನ್ನು ತಾನೇ ಅವಮಾನಿಸಿಕೊಂಡಂತೆ. ಯಾಕೆಂದರೆ ಆತನಿಗೆ ತಿಳಿದಿರದ ಎಷ್ಟೋ ವಿಷಯಗಳು ನಮಗೆ ತಿಳಿದಿರುತ್ತದೆ. ಉದಾಹರಣೆಗೆ ಒಬ್ಬ ಸಂಗೀತಜ್ಞನಿರಬಹುದು, ಒಬ್ಬ ವೈದ್ಯನಿರಬಹುದು, ಒಬ್ಬ ಪ್ರವಚನಕಾರನಿರಬಹುದು, ಒಬ್ಬ ನಟನಿರಬಹುದು, ಒಬ್ಬ ಪತ್ರಕರ್ತನಿರಬಹುದು, ಒಬ್ಬ ರಾಜಕಾರಣಿ ಇರಬಹುದು, ಒಬ್ಬ ಕ್ರೀಡಾಪಟು ಇರಬಹುದು.. ಹೀಗೇ ವಿವಿಧ ರೀತಿಯ ಸಾಧಕರು ಅವರವರ ಕ್ಷೇತ್ರದಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬಹದು.

ಆದರೆ ಅವರೂ ನಮ್ಮಂತೆ ಮನುಷ್ಯರೇ ತಾನೆ. ಅವರಂತೆ ನಾವು ಕೂಡ ಯಾವುದೋ ಒಂದು ವಿಷಯದಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುತ್ತೇವೆ. ಆಗ ಅವರಿಗಿಂತ ನಮ್ಮ ಸಾಧನೆಯೇ ಶ್ರೇಷ್ಠ. ಅವರದ್ದಲ್ಲದ ಕ್ಷೇತ್ರದಲ್ಲಿ ಅವರು ಕೂಡ ನಮ್ಮಂತೆ ಅಜ್ಞಾನಿಗಳೇ. ಆದರೆ ಇಂದು ಏನಾಗಿದೆ ಎಂದರೆ ಯಾವನೋ ಒಬ್ಬ ಪ್ರಖ್ಯಾತ ವ್ಯಕ್ತಿಯನ್ನು ಕೇಂದ್ರೀಕೃತವಾಗಿಟ್ಟು ಆತನನ್ನೇ ಆಶ್ರಯಿಸಿದವರಂತೆ ವರ್ತಿಸುತ್ತಿದ್ದರೆ ಆತನಿಗೆ ಕೊಡಬೇಕಾದ್ದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಂತೆಯೆ. ಆಗ ನಾವೇ ನಮ್ಮನ್ನು ಅವಮಾನಿಸಿದಂತೆ.

ಒಬ್ಬ ಮಠಾಧೀಶ ಹೇಗೆ ತನ್ನ ಕ್ಷೇತ್ರದಲ್ಲಿ ಶ್ರೇಷ್ಠನೋ ಅದೇ ರೀತಿ ಒಬ್ಬ ಕೃಷಿಕನೂ ತನ್ನ ಕ್ಷೇತ್ರದಲ್ಲಿ ಶ್ರೇಷ್ಠನೇ. ಆದರೆ ಕೃಷಿಕ ಸ್ವಾಮೀಜಿಗೆ ನಮಸ್ಕರಿಸಬಹುದಾದರೆ, ಒಬ್ಬ ಸ್ವಾಮೀಜಿ ಕೃಷಿಕನಿಗೆ ಪಾದ ಪೂಜೆ ಮಾಡಿದ ದಾಖಲೆ ಇರಬಹುದೇ..? ಒಬ್ಬ ಧಾರ್ಮಿಕ ಕ್ಷೇತ್ರದಲ್ಲಿ ಸಾಧಕನಾದರೆ ಇನ್ನೊಬ್ಬ ಸ್ವಾಮೀಜಿಗೂ ಅನ್ನ ಕೊಡುವ ಸಾಧಕ. ಕೃಷಿಕನು ತನ್ನನ್ನು ತಾನು ಕೀಳೆಂದುಕೊಂಡದ್ದೇ ಸ್ವಾಮೀಜಿಯ ಪಾದಪೂಜೆ ಮಾಡಲು ಕಾರಣವಾಯಿತು. ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಕರು ಸಾವಿರ ಇದ್ದಾರೆ. ಯಾರೂ ಯಾರನ್ನೂ ಹೋಲಿಸಿಕೊಳ್ಳಲಾಗುವುದಿಲ್ಲ.

ಯಾರ್ಯಾರ ಪ್ರತಿಭೆ ಎಲ್ಲೆಲ್ಲಿ ಅವಕಾಶ ಸಿಗುವುದೋ ಅಲ್ಲಲ್ಲೇ ಶೋಭಿಸುವುದು. ಆದ್ದರಿಂದ ಪ್ರತಿಯೊಂದು ಮಾನವರೂ ಪ್ರತಿಯೊಂದು ಜೀವಿಯೂ ತನ್ನತನ್ನ ವ್ಯಾಪ್ತಿಯಲ್ಲಿ ಅಮೂಲ್ಯರೇ. ಹಾಗಾಗಿ ಯಾರನ್ನೂ ಅತಿಯಾಗಿ ಗೌರವಿಸುವುದು ಹಾಗೂ ಅತಿಯಾಗಿ ಕೀಳಾಗಿ ಕಾಣುವುದು ಎರಡೂ ಸಲ್ಲದು. ಸರಕಾರಿ ಬಸ್ಸಿನಲ್ಲಿ, ಮತದಾನದಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ ಹೇಗೆ ಎಲ್ಲರೂ ಸಮಾನರು ಎಂಬ ತತ್ವ ಕಾರ್ಯಗತವಾಗಿದೆಯೋ ಅದೇ ರೀತಿ ನಾವೆಲ್ಲರೂ ಸಮಾನರು ಎಂಬ ತತ್ವ ಎಲ್ಲೆಡೆಯೂ ಇದ್ದರೆ ಮೇಲು ಕೀಳೆಂಬ ಭಾವ ದೂರಾಗಬಹುದೇನೋ…
**********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ದಾರಿ ದೀಪ: ಅಗ್ನಿಯೂ ಆತ್ಮವೂ

Upayuktha

ಗೀತಾಮೃತ: ನಹಿ ಜ್ಞಾನೇನ ಸದೃಶಂ….

Upayuktha

ಬಾಳಿಗೆ ಬೆಳಕು: ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೆ

Upayuktha