ನಗರ ಸ್ಥಳೀಯ

ಮುಖ ಮುಚ್ಚಿಕೊಳ್ಳಿ ಇಲ್ಲವಾದಲ್ಲಿ ದೇಹ ಮುಚ್ಚಬೇಕಾದೀತು: ಡಾ|| ಚೂಂತಾರು

ಮಂಗಳೂರು: ಕೊರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ವೈರಾಣು ಸೋಂಕು ಈಗ ಸಮಾಜದಲ್ಲಿ ವೇಗವಾಗಿ ಹರಡುತ್ತಿದೆ. ಎರಡನೇ ಅಲೆಯ ಅಬ್ಬರ ಜೋರಾಗಿದೆ. ಈ ನಿಟ್ಟಿನಲ್ಲಿ ಬಹಳ ಕಟ್ಟುನಿಟ್ಟಾಗಿ ಮುಖಕವಚ ಧರಿಸುವಿಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸೋಪು ಹಾಗೂ ಸ್ಯಾನಿಟೈಸರ್ ಬಳಸಿ ಕೈ ತೊಳೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಇಲ್ಲವಾದರೆ ರೋಗ ಶೀಘ್ರವಾಗಿ ಸಮುದಾಯದಲ್ಲಿ ಹರಡಿ ಸಮಾಜದ ಸ್ವಾಸ್ಥ್ಯ ಕೆಡುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕ ಡಾ|| ಮುರಲೀಮೋಹನ ಚೂಂತಾರು ಅಭಿಪ್ರಾಯಪಟ್ಟರು.

ಈ ಕಾರಣದಿಂದ ಎಲ್ಲ ಸಮಾಜ ಬಾಂಧವರು ಮತ್ತು ಸಾರ್ವಜನಿಕರು ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ ಕೊರೋನಾ ವಿರುದ್ಧದ ಸಮರವನ್ನು ಗೆಲ್ಲಲು ಸಾಧ್ಯವಿದೆ. ಉಡಾಫೆಯಾಗಿ ಮಾತನಾಡುತ್ತಾ, ಬೇಜವಾಬ್ದಾರಿಯುತಾಗಿ ವರ್ತಿಸಿದಲ್ಲಿ ಮಾರಣಾಂತಿಕವಾಗಿ ಕೊರೋನಾ ಕಾಡುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಜಿಲ್ಲಾಡಳಿತ, ಪೊಲೀಸರು ಮತ್ತು ಸರಕಾರದ ಜೊತೆ ಕೈಜೋಡಿಸಲೇಬೇಕಾದ ಅನಿವಾರ್ಯತೆ ಇದೆ. ಎಲ್ಲವನ್ನು ಸರಕಾರವೇ ಮಾಡಬೇಕು ಎಂದು ವಾದಿಸಬಾರದು. ಜನರು ಸಹಕರಿಸದಿದ್ದರೆ ಸರಕಾರಕ್ಕೆ ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಆರೋಗ್ಯ ಕಾಪಾಡುವುದು ಸಾಧ್ಯವಿಲ್ಲ ಎಂದು ಅವರು ನುಡಿದರು.

ದ.ಕ.ಜಿಲ್ಲಾ ಗೃಹರಕ್ಷಕ ದಳ ಉಳ್ಳಾಲ ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ತಂಡದ ವತಿಯಿಂದ ನಗರದ ತೊಕ್ಕೊಟ್ಟಿನಲ್ಲಿ ನಡೆದ ‘ಕೆಂಪು ಗುಲಾಬಿ ಮತ್ತು ಮುಖಗವಸು’ ವಿತರಣೆ ಅಭಿಯಾನವನ್ನು ಉದ್ಘಾಟಿಸಿ ಡಾ|| ಚೂಂತಾರು ಅವರು ಮಾತನಾಡಿದರು.

ಇಂದು ಬುಧವಾರ ತೊಕ್ಕೊಟ್ಟು ಬಸ್ ನಿಲ್ದಾಣ ಪರಿಸರದಲ್ಲಿ ಈ ಅಭಿಯಾನ ಜರುಗಿತು. ಉಳ್ಳಾಲ ಘಟಕದ ಘಟಕಾಧಿಕಾರಿ ಭಾಸ್ಕರ್, ಹಿರಿಯ ಗೃಹರಕ್ಷಕರಾದ ಸುನಿಲ್ ಪೂಜಾರಿ, ಸುನಿಲ್ ಕುಮಾರ್, ದಿವಾಕರ್, ಅಬ್ದುಲ್ ಸಮದ್, ಹಮೀದ್ ಪಾವ್ಲ, ಜೀವನ್ ಕುಮಾರ್, ಜೀವನ್‍ರಾಜ್ ಡಿ’ಸೋಜಾ, ಸವೇರಾ ಡಿ’ಸೋಜ, ಶ್ರವಣ್, ರಂಜಿತ್, ಪ್ರವೀಣ್ ಡಿ’ಸೋಜ, ಸಂತೋಷ್ ಕುಮಾರ್ ಚಿತ್ರಾಕ್ಷಿ, ರಾಜೇಶ್ವರಿ, ಪುಷ್ಪಲತಾ ಬಜಾಲ್, ಯಶವಂತಿ, ಉಷಾ ಜೀವನ್ ಮುಂತಾದವರು ಈ ಅಭಿಯಾನದಲ್ಲಿ ಪಾಲ್ಗೊಂಡರು.

ಉಳ್ಳಾಲ ನಗರದ ಸೇವೆಗೆ ನೇಮಕಗೊಂಡಿದ್ದ 10 ಮಂದಿ ಕೋವಿಡ್ ಮಾರ್ಷಲ್‍ಗಳಾಗಿ ಕೆಲಸ ನಿರ್ವಹಿಸುವ ಗೃಹರಕ್ಷಕರೂ ಈ ಅಭಿಯಾನದಲ್ಲಿ ಪಾಲ್ಗೊಂಡರು. ಸುಮಾರು 250 ಮುಖಗವಸು ಮತ್ತು ಕೆಂಪು ಗುಲಾಬಿ ನೀಡಿ ಮುಖಗವಸು ಧರಿಸದವರಿಗೆ ಪ್ರೀತಿಯಿಂದ ಮುಖಗವಸು ಧರಿಸುವಂತೆ ಮನವೊಲಿಸಲಾಯಿತು.

ಕಳೆದ ಭಾನುವಾರದಂದು ಮಂಗಳೂರು ಹಂಪನಕಟ್ಟೆಯ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು 100 ಗುಲಾಬಿ ಹೂವು ಮತ್ತು 100 ಮುಖಗವಸು ನೀಡಿ ಜನರನ್ನು ಜಾಗೃತಗೊಳಿಸಿ ಮನವೊಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಒಟ್ಟಿನಲ್ಲಿ ಪ್ರೀತಿ ಮತ್ತು ಆದರದಿಂದ ಜನರನ್ನು ಗೆಲ್ಲಬಹುದು ಎಂಬುದನ್ನು ಗೃಹರಕ್ಷಕರು ಸಾಧಿಸಿ ತೋರಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಧರ್ಮಸ್ಥಳದಲ್ಲಿ ಯಶಸ್ವಿಯಾಗಿ ನೆರವೇರಿದ ‘ಪ್ರಾರ್ಥನಾ ಸಮಾವೇಶ’

Upayuktha

ಏಪ್ರಿಲ್ 26: ಮಂಗಳೂರಿನಲ್ಲಿ ಕನ್ನಡ ಕವಿ ಕಾವ್ಯ ಕಲರವ; ರಾಜ್ಯಮಟ್ಟದ ಆನ್‌ಲೈನ್ ವೀಡಿಯೋ ಕವಿ ಸಮ್ಮೇಳನ

Upayuktha

ಪೌರ ರಕ್ಷಣಾ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣಾ ಕಾರ್ಯಾಗಾರ

Upayuktha