ಓದುಗರ ವೇದಿಕೆ ಕೃಷಿ

ಬಾಳೆ ಗೊನೆ ಬೆಲೆ ಕುಸಿತ… ಕಥೆಯೋ! ವ್ಯಥೆಯೋ!!

ಬಾಳೆ ಹಣ್ಣು ಪೌಷ್ಟಿಕಾಂಶಯುಕ್ತ ಆಹಾರ. ಹಳ್ಳಿಗಳಲ್ಲಿ ಸಾಮಾನ್ಯ ವಿಷರಹಿತವಾಗಿ ಬೆಳೆಯುವ ಉತ್ತಮ ಹಣ್ಣುಗಳಲ್ಲಿ ಒಂದು ಎಂಬುದು ನಿಸ್ಸಂಶಯ. ಆದರೆ ಇವತ್ತು ಬೆಳೆಯುವ ಪ್ರದೇಶ ಹೆಚ್ಚಾಗಿಯೋ ಏನೋ, ಬಾಳೆ ಎಂಬುದು ಕೃಷಿಕನ ಮನಸ್ಸಿನಿಂದ ದೂರವಾಗುತ್ತಿದೆ.

ಯಾವುದೇ ಬೆಳೆಗೆ ಬೆಲೆ ಬಂತು ಎಂದಾದರೆ ಎಲ್ಲರೂ ಅದೇ ಬೆಳೆಯನ್ನು ಬೆಳೆಯುವುದು ಇದಕ್ಕೆ ಕಾರಣ ಇರಲು ಬಹುದು.. ಬೆಳೆ ಬೆಳೆಯಿರಿ, ಅದಕ್ಕಾಗಿ ಉಚಿತ ಬಾಳೆಯ ಕಂದುಗಳನ್ನು ಕೊಡುತ್ತೇವೆ! ಎಂದು ಕೃಷಿ ಇಲಾಖೆ “ಉಚಿತ ಸಲಹೆ” ಕೊಡುತ್ತಿದೆ. ಬೆಳೆದ ಬಾಳೆಗೆ ಮಾರುಕಟ್ಟೆ ಇಲ್ಲದೇ ಇರುವ ಇವತ್ತು ಈ ಸಲಹೆಯ ಔಚಿತ್ಯ ವಾದರು ಏನು?. ನಮ್ಮ ಕೃಷಿ ಇಲಾಖೆ ಅಧಿಕಾರಿಗಳು ಮೇಲಿಂದ ಬಂದ ಆದೇಶವನ್ನು ಪಾಲಿಸಿಕೊಂಡು ಅವರ ಕೆಲಸ ಮಾಡುತ್ತ ಇರುವರು ಹೊರತು, ಕೃಷಿ ಬೆಳೆಗಳ ಸಮತೋಲನ ಕಾಪಾಡಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ “ಈ ಕೃಷಿ ಭವನ” ಎಂಬ ಇಲಾಖೆಯ ಅಗತ್ಯತೆ ಕೃಷಿಕರಿಗೆ ಇಲ್ಲ. ಇದ್ದರೂ, ಇಲ್ಲವಾದರೂ ಅದರ ಫಲಿತಾಂಶ ಒಂದೇ ಆದರೆ ಅದರ ಅಗತ್ಯತೆ ಆದರೂ ಏನು ಎಂಬ ಪ್ರಶ್ನೆ ಬರುವುದು ಸಹಜ.

ನೇಂದ್ರ ಬಾಳೆ ಹಣ್ಣು, ಯಾರಿಗೂ ಬೇಡದ ಸ್ಥಿತಿ ಇರುವ ಸಂದರ್ಭದಲ್ಲೇ ಉಚಿತ ಕಂದು ವಿತರಣೆ ಎಂಬ ಒಂದು ಪ್ರಹಸನ.

ಇವತ್ತು ಬಾಳೆಯ ಗೊನೆ ಕೊಂಡು ಹೋದರೆ, ಅಂಗಡಿಯವ ಕೂಗುವ ಪರಿ ನೋಡಿದರೆ ಯಾರಿಗೂ ಕನಿಕರ ಹುಟ್ಟಿಸುವ ಹಾಗೆ ಇದೆ. “ನೋಡಿ ಸ್ವಾಮಿ 5ಕಿಲೋ ನೇಂದ್ರ ನೂರು ರೂಪಾಯಿಗೆ ಯಾರಿಗೂ ಬೇಡ”, ನೀವು ಕದಳಿಯನ್ನು 13 ರೂಪಾಯಿಗೆ ಕೊಟ್ಟು 20 ರೂಪಾಯಿಗೆ ನೇಂದ್ರ ಕೊಂಡು ಹೋಗಿ. ಇಲ್ಲಿ ಇರುವುದು, ವ್ಯಾಪಾರಿ ಹೇಗೋ ಐದು ರೂಪಾಯಿ ಮಾಡಿಯಾದರೂ ಬದುಕು ಸಾಗಿಸಿಯಾನು, ಕೃಷಿಕ ಕೂಲಿ, ಗೊಬ್ಬರ, ನೀರು, ಸಾಗಾಟ ಎಲ್ಲಾ ಸೇರಿ 10/15ರ ಒಳಗೆ ಬಾಳೆ ಕಾಯಿ ಮಾರಿ ಅವನ ನಷ್ಟವನ್ನು ಹೇಗೆ ಭರ್ತಿ ಮಾಡುತ್ತಾನೆ? ಎಂಬುದೇ ವಿಷಯ. ಇದು ಕೃಷಿಕನನ್ನು “ಬಾಳೆಕಾಯಿ”ಯಿಂದ ದೂರ ಹೋಗಲೇ ಬೇಕಾದ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ.. ಇದು ಇನ್ನೂ ಇಲಾಖೆಗೆ ಅರ್ಥವಾಗಿಲ್ಲ.. ಬಾಳೆಹಣ್ಣಿನ ಮೌಲ್ಯವರ್ಧನೆ ಮಾಡುವ ಕ್ರಮವನ್ನು ಕೃಷಿಕರಿಗೆ ಪರಿಚಯಿಸಿದರೆ ಅದು ಒಳ್ಳೆಯ ಒಂದು ಸಲಹೆ ಆಗಬಹುದು.. ಹೊರತು ಕಂದುಗಳಿಂದಲ್ಲ..

ಸರಕಾರಗಳು ಬರುವುದು, ಹೋಗುವುದು; ಸಂಬಳ ತೆಗೆದುಕೊಂಡು ತನ್ನ ಜೀವನವನ್ನು ಚೆನ್ನಾಗಿ ನಡೆಸಿ ಹೋಗುವ ಅಧಿಕಾರಿಗಳು, ಈ ಕೃಷಿಕರ ಜೀವನದಲ್ಲಿ ಏನು ಮಾತ್ರ ಮಾಡಿಯಾರು? ಒಂದು ಬ್ಯಾಂಕ್ ಖಾತೆ ತೆರೆಯಲು ನಾಲ್ಕು ಬಾರಿ ಹೋಗಬೇಕಾಗಿ ಬರುವ ಈ ದೇಶದಲ್ಲಿ ಯಾರ ಬಳಿ ಈ ವ್ಯಥೆಯನ್ನು ಹೇಳಬಹುದು? ಅವರ ಬಳಿ ಅಧಿಕಾರ ಇದೆ, ನಾವು ಮೂಕ ಪ್ರೇಕ್ಷಕರು ಮಾತ್ರ.

ಆಗಸ್ಟ್ ಒಂದು “ಕೃಷಿಕರ ದಿನ” ಎಂದು ಯಾರನ್ನಾದರೂ ಹುಡುಕಿ “ಆ ವರ್ಷದ ಒಳ್ಳೆಯ ಕೃಷಿಕ” ಎಂದು ಪ್ರಶಸ್ತಿಯನ್ನು ಕೊಟ್ಟು ತಮ್ಮ ಜವಾಬ್ದಾರಿಯನ್ನು ಮರೆತು ಬಿಡುತ್ತಾರೆ.

ಬಾಳೆಯ ಹಣ್ಣು, ಕೊನೆಯ ಸ್ಥಾನಕ್ಕೆ ತಲಪುವಾಗ ಇವತ್ತು 60-75 ರೂಪಾಯಿ ತನಕ ಬೆಲೆ.ಬೆಳೆದ ವ್ಯಕ್ತಿಗೂ ಇಲ್ಲ, ಕೊನೆಯ ಖರೀದಿ ದಾರನಿಗೂ ಇಲ್ಲದ ಈ ಬಾಳೆಗೊನೆ ಯ ಕಥೆ, ವ್ಯಥೆ ಅಲ್ಲದೇ ಬೇರೆ ಏನೂ ಅಲ್ಲ ಅಲ್ಲವೇ?

-ವೇಣು ಕಳೆಯತ್ತೋಡಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (16-10-2020)

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (29-08-2020)

Upayuktha

ಎಂಬಿಎ ಪದವೀಧರನಿಂದ ದೇಸಿ ಹಸುಗಳ ಪಾಲನೆ: ‘ಆತ್ಮನಿರ್ಭರತೆ’ಗೊಂದು ಪ್ರೇರಣೆ

Upayuktha