ನಗರ ಸ್ಥಳೀಯ

ವಿನಾ ಕಾರಣ ವೈದ್ಯಕೀಯ ಸಮೂಹದ ಟೀಕೆ ಸರಿಯಲ್ಲ: ಡಾ. ಗಣಪತಿ

ಮಂಗಳೂರು: ಕೋವಿಡ್ ವೈರಸ್ ಪೀಡಿತ ಸದಾಶಿವ ಪ್ರಕರಣದಲ್ಲಿ ವೈದ್ಯರು, ಆಸ್ಪತ್ರೆಯ ದಾದಿಯರು, ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ವಿನಾಃ ಕಾರಣ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳಾ ಆಸ್ಪತ್ರೆಯ ಡಾ. ಗಣಪತಿ ಪಿ. ತಿಳಿಸಿದ್ದಾರೆ.

ವೈದ್ಯರಾದ ನಮಗೆ ಹಣಕ್ಕಿಂತ ರೋಗಿಯ ಆರೈಕೆ ಮುಖ್ಯವಾಗಿದೆ. ಆದರೆ ಸದಾಶಿವ ಅವರ ಕುಟುಂಬಕ್ಕೆ ತಂದೆಯ ಮೃತ ದೇಹಕ್ಕಿಂತ ಹಣ ಮುಖ್ಯವಾಗಿತ್ತು. ಚಿಕಿತ್ಸೆಗೆ ವ್ಯಯವಾದ ನ್ಯಾಯಯುತ ದರವನ್ನು ನೀಡುವ ಬದಲು ಮೃತ ದೇಹವನ್ನೇ ಆಸ್ಪತ್ರೆಯಲ್ಲಿ ಬಿಟ್ಟು ಹೋಗಲು ಉದ್ದೇಶಿಸಿದ್ದರು. ಇದು ನಿಜವಾದ ದುರಂತ ಎಂದು ಡಾ. ಗಣಪತಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಅವರು ಬಿಡುಗಡೆ ಮಾಡಿದ ಹೇಳಿಕೆಯ ವಿವರ ಹೀಗಿದೆ:

ರೋಗಿಯ ಕಡೆಯವರು ವೈದ್ಯ ಸಮುದಾಯದೊಂದಿಗೆ ತೀರಾ ಬಾಲಿಶವಾಗಿ ವರ್ತಿಸಿದರು ಹಾಗೂ ರೋಗಿ ಕಡೆಯವರ ವಾದಗಳು ಸಮಸ್ತ ನಾಗರಿಕರು ತಲೆತಗ್ಗಿಸುವಂತ್ತಿತ್ತು. ಮುಂಗಡವಾಗಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವೆಂಟಿಲೇಟರನ್ನು ತೆಗೆಯಲಾಯಿತು ಎಂದು ಆಪಾದಿಸಲಾಯಿತು. ಸರಿಯಾದ ಸ್ಪಷ್ಟನೆ ಕೊಟ್ಟ ನಂತರ, ವೆಂಟಿಲೇಟರನ್ನು ತೆಗೆದಿಲ್ಲ ಎಂಬುದನ್ನು ಮನವರಿಕೆ ಮಾಡಿಸಲಾಯಿತು. ಕೋವಿಡ್ ಪೀಡಿತನ ಕಿಡ್ನಿಯನ್ನು ಯಾರಿಗೂ ಜೋಡಿಸಲು ಸಾಧ್ಯವಿಲ್ಲ ಎಂಬ ಕನಿಷ್ಠ ಮಾಹಿತಿ ಇಲ್ಲದೆ ರೋಗಿಯ ಕಿಡ್ನಿಯನ್ನು ಕದಿಯಲಾಗಿದೆ ಎಂದು ಕೂಡಾ ಅಪಾದಿಸಲಾಯಿತು.

ಕಿಡ್ನಿ ಕದಿಯುವಂತಹ ಹೀನ ಕೆಲಸ ಮಾಡುವ ವೈದ್ಯರು ಅಥವಾ ಆಸ್ಪತ್ರೆ ಮಂಗಳೂರಿನಲ್ಲಿ ಕಾರ‍್ಯಾಚರಿಸುತ್ತಿದೆ ಎಂಬ ಆಪಾದನೆಯ ಮೂಲಕ ಎಲ್ಲ ಮಂಗಳೂರಿನ ಸಭ್ಯ ನಾಗರಿಕರನ್ನು ಮತ್ತು ವೈದ್ಯ ಸಮುದಾಯವನ್ನು ಅವಮಾನಿಸಲಾಯಿತು. ಎಷ್ಟು ಕ್ರೂರವಾಗಿ ರೋಗಿಯ ಕಡೆಯವರು ವರ್ತಿಸಿದರೆಂದರೆ ಕೊನೆಗೆ ಪ್ಯಾಕ್ ಮಾಡಿದ ಮೃತ ದೇಹವನ್ನು ಬಂಧುಗಳ ಸಮಕ್ಷಮದಲ್ಲಿ ಮತ್ತೆ ತೆರೆದು ದೇಹದಲ್ಲಿ ಎಲ್ಲೂ ಗಾಯಗಳು ಇಲ್ಲ ಎಂಬುದನ್ನು ಖಚಿತಪಡಿಸಬೇಕಾಯಿತು. ಕೋವಿಡ್ ರೋಗಿಯ ಮೃತ ದೇಹವನ್ನು ಪೂರ್ತಿ ತೆರೆಯುವುದು ಕೂಡಾ ಅಪಾಯಕಾರಿ ಅಲ್ಲದೆ, ಇದು ಕೂಡಾ ಕಾನೂನಿನ ವಿರುದ್ಧವಾದ ನಡವಳಿಕೆಯಾಗಿರುತ್ತದೆ.

ಇಷ್ಟೆಲ್ಲಾ ನಡೆದ ಬಳಿಕ ಆಸ್ಪತ್ರೆಯ ಬಿಲ್ ಪಾವತಿಸಬೇಕಾಗುತ್ತದೆ ಎಂದು ಅರಿವಿಗೆ ಬರುತ್ತಿದ್ದಂತೆ ಬಿಲ್ ಜಾಸ್ತಿಯಾಯಿತು ಎಂಬ ಹೊಸ ತಗಾದೆ ತೆಗೆದರು. ನಾವು ಬಿಲ್ ಪಾವತಿಸುವುದಿಲ್ಲ ಮತ್ತು ನಮಗೆ ಮೃತ ದೇಹವೂ ಬೇಡ ಎಂಬ ನಿಲುವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮಾತ್ರವಲ್ಲದೆ ಸಾರ್ವಜನಿಕರನ್ನು ಸೇರಿಸಿ ಅನಗತ್ಯವಾಗಿ ಪ್ರತಿಭಟಿಸಿದರು. ಕೊನೆಗೆ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿ ಕೇವಲ 60 ಸಾವಿರ ರೂ. ಪಾವತಿಸಿದರು. ಆದರೆ ಸಾಮಾಜಿಕ ಜಾಲ ತಾಣದಲ್ಲಿ ಬಹಳ ಕೆಟ್ಟದಾಗಿ ಸುಳ್ಳು ಪ್ರಚಾರ ಮಾಡಿದ್ದಾರೆ. 4 ಲಕ್ಷ ರೂ. ಬಿಲ್ ಮಾಡಲಾಗಿದೆ. ಕಿಡ್ನಿ ಕದಿಯಲಾಗಿದೆ. ಹಣ ಪಾವತಿಸಲಿಲ್ಲ ಎಂಬ ಕಾರಣ ನೀಡಿ ವೆಂಟಿಲೇಟರ್ ತೆಗೆಯಲಾಗಿದೆ. ವೈದ್ಯರು ಅಧಿಕ ಬಿಲ್ ಹಾಕಿದ್ದಾರೆ ಎಂಬಿತ್ಯಾದಿ ಸುಳ್ಳು ಆರೋಪಗಳನ್ನು ಮಾಡಿರುತ್ತಾರೆ.

ಮಾನವೀಯತೆ ಮತ್ತು ವೃತ್ತಿಪರತೆಯ ಗೌರವದಿಂದಾಗಿ ರೋಗಿಯು ಒಂದು ರೂ.ಯನ್ನು ಆಸ್ಪತ್ರೆಗೆ ಪಾವತಿಸದಿದ್ದರೂ, ಆಸ್ಪತ್ರೆಯ ಹಣದಿಂದಲೇ ಕೋವಿಡ್ ರೋಗಿಗೆ ಶಿಷ್ಟಾಚಾರದಂತೆ ಮಾನವೀಯ ನೆಲೆಯಲ್ಲಿ ಕೂಡಾ ಕೊನೆಯ ಕ್ಷಣದ ವರೆಗೂ ಚಿಕಿತ್ಸೆಯನ್ನು ನೀಡಲಾಯಿತು ಎಂದು ರೋಗಿಯ ಕಡೆಯವರಿಗೆ ಗೊತ್ತಿದೆ.

ಕೆಎಂಸಿಯಲ್ಲಿ ಐಸಿಯು ಭರ್ತಿಯಾದ ಹಿನ್ನೆಲೆಯಲ್ಲಿ ರೋಗಿಯನ್ನು ಸೆ.1ರಂದು ಮಂಗಳಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿ ಆಸ್ಪತ್ರೆ ದಾಖಲಾಗುವ ವೇಳೆಗೆ ತೀವ್ರ ಅಸ್ವಸ್ಥರಾಗಿದ್ದರು. ಹಿರಿಯ ವೈದ್ಯರ ತಂಡವೇ ಚಿಕಿತ್ಸೆಯನ್ನು ಪ್ರಾರಂಭಿಸಿತ್ತು. ದೇಹದಲ್ಲಿ ಆಮ್ಲಜನಕ ಕೊರತೆಯಾದ ಹಿನ್ನೆಲೆಯಲ್ಲಿ ಆಕ್ಸಿಜನ್ ನೀಡಲು ಪ್ರಾರಂಭಿಸಲಾಯಿತು.

ರೋಗಿಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ರೋಗಿಯ ಸ್ಥಿತಿಗತಿಯನ್ನು ಪ್ರತಿದಿನ ಕುಟುಂಬಿಕರಿಗೆ ವಿವರಿಸಿ, ಗಂಭೀರತೆಯನ್ನು ತಿಳಿಸಲಾಗುತ್ತಿತ್ತು. ರೋಗದ ತೀವ್ರತೆಯ ಬಗ್ಗೆ ಪತ್ನಿ ಹಾಗೂ ಮಕ್ಕಳಿಗೆ ವಿವರಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಯನ್ನು ಅಥವಾ ಅನುಕೂಲಗಳನ್ನು ಬಯಸುವುದಾದರೆ ಬೇರೆ ಆಸ್ಪತ್ರೆಗೆ ವರ್ಗಾಯಿಸಬಹುದೆಂದು ಕೂಡಾ ತಿಳಿ ಹೇಳಲಾಗಿತ್ತು.

ದಿನಾಂಕ ಸೆ. 11ರಂದು ರೋಗಿಯ ಸ್ಥಿತಿಯು ಗಂಭೀರವಾಗಿ ಚಿಕಿತ್ಸೆಗೆ ಸ್ಪಂದಿಸುವುದು ಕಡಿಮೆಯಾಯಿತು. ಕೋವಿಡ್‌ಗೆ ಕೊಡುವ ರೆಮ್ಡಿಸಿವಿರ್ ಔಷಧಿಯನ್ನು ನೀಡಲಾಗಿತ್ತು. ಆದರೂ ಅಸಿಡೋಸಿಸ್ ಮತ್ತು ರಕ್ತದ ಕಡಿಮೆ ಒತ್ತಡದಿಂದ ರೋಗಿಯ ಸಮಸ್ಯೆ ಬಿಗಡಾಯಿಸಿತು. ಕಿಡ್ನಿಯ ಕೆಲಸ ಮಾಡುವುದು ಕಡಿಮೆಯಾಯಿತು. ನೆಫ್ರಾಲಜಿಸ್ಟ್ ಸತತ ಪ್ರಯತ್ನ ಪಟ್ಟರೂ ಸುಧಾರಣೆ ಕಂಡುಬರಲಿಲ್ಲ. ನೆಫ್ರಾಲಜಿಸ್ಟ್, ಫಿಸಿಶಿಯನ್, ಪಲ್ಮನೋಲೊಜಿಸ್ಟ್, ಇಂಟೆನ್ಸಿವಿಸ್ಟ್, ಹೃದ್ರೋಗ ತಜ್ಞ, ಇನ್‌ಫೆಕ್ಷನ್ ರೋಗ ವಿಶೇಷ ತಜ್ಞರು ರೋಗವನ್ನು ನಿಯಂತ್ರಣಕ್ಕೆ ತರಲು ಸತತ ಪ್ರಯತ್ನ ಪಟ್ಟರು. ದುರಾದೃಷ್ಟವಶಾತ್ ರೋಗಿಯು ದಿನಾಂಕ ಸೆ. 13ರಂದು ಬೆಳಗ್ಗೆ 9 ಗಂಟೆಗೆ ನಿಧನರಾದರು.

ತೀವ್ರ ಸ್ವರೂಪದ ಮತ್ತು ಇತರ ಬೇರೆ ತರದ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ವಯಸ್ಕರಿಗೆ ಕೋವಿಡ್ ಮಾರಣಾಂತಿಕವಾಗಿದೆ. ಆದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ವೈದ್ಯರ ಪ್ರಯತ್ನ ವಿಫಲವಾದಾಗ ವಿನಾಃ ಕಾರಣ ವೈದ್ಯ ಸಮುದಾಯವನ್ನು ಮತ್ತು ಆಸ್ಪತ್ರೆಗಳನ್ನು ಟೀಕಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ತಮ್ಮಲ್ಲೇ ಕೇಳಿಕೊಳ್ಳಬೇಕಿದೆ.

ಇಂತಹ ಘಟನೆಗಳು ಮನೆ ಕುಟುಂಬದವರನ್ನು ಮರೆತು ಚಿಕಿತ್ಸೆ ನೀಡುತ್ತಿರುವ ಕೋವಿಡ್ ವಾರಿಯರ‍್ಸ್ ಮನೋಬಲವನ್ನು ಕುಗ್ಗಿಸುವುದಲ್ಲದೆ ಆಸ್ಪತ್ರೆಯ ಸಾಮಾಜಿಕ ಬದ್ಧತೆ ಪೂರಕವಾಗುವ ಬದಲು ಬೇರೆ ಬೇರೆ ಸಮಸ್ಯೆಗಳು ಸೃಷ್ಟಿಯಾಗುವ ಅಪಾಯ ಇದೆ. ಮಂಗಳಾ ಆಸ್ಪತ್ರೆಯ ಡಾ. ಗಣಪತಿ ಅವರು ಇಂಟೆನ್ಸಿವಿಸ್ಟ್ ತಜ್ಞರಾಗಿದ್ದಾರೆ. ಕನಿಷ್ಠ ಈ ಮಾಹಿತಿಯೂ ಇಲ್ಲದೆ ಸಾಮಾಜಿಕ ಜಾಲ ತಾಣದಲ್ಲಿ ಬರೆಯಲಾಗುತ್ತಿದೆ.

ಪ್ರತಿ ಬಾರಿ ರೋಗಿಯನ್ನು ಪರಿಶೀಲನೆ ನಡೆಸುವ ವೇಳೆ ಎಲ್ಲ ಸಿಬ್ಬಂದಿಗಳು ಪರ್ಸನಲ್ ಪ್ರೊಟೆಕ್ಷನ್ ಕಿಟ್ ಅನ್ನು ಬದಲಿಸಬೇಕು. ಅಂದರೆ ರೋಗಿ ಸಂದರ್ಶಿಸುವ ವೈದ್ಯರು, ದಾದಿಯರು, ಸಹಾಯಕಿಯರು ಎಲ್ಲರೂ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲೇಬೇಕು. ಇದರ ಖರ್ಚು ವೆಚ್ಚಗಳನ್ನು ಗಮನಿಸಿದರೆ ಔಷಧಿಗಿಂತ ಸಲಕರಣೆಗಳ ವೆಚ್ಚ ಅಧಿಕವಾಗುತ್ತದೆ. ಇದರಿಂದಾಗಿ ಆಸ್ಪತ್ರೆಯ ವೆಚ್ಚದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿದೆ.

ವೈದ್ಯರಿಗೆ, ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ, ಇತರ ಕೋವಿಡ್ ರೋಗಿಗಳು, ಅವರ ಸಂಬಂಧಿಕರು, ನಿತ್ಯ ಚಿಕಿತ್ಸೆಗೆ ಬರುವ ಇತರ ರೋಗಿಗಳು, ಆಸ್ಪತ್ರೆಗೆ ಭೇಟಿ ನೀಡುವ ಸಾರ್ವಜನಿಕರು ಇವರೆಲ್ಲರ ಆರೋಗ್ಯದ ರಕ್ಷಣೆಯ ಜವಾಬ್ದಾರಿಯೂ ಆಸ್ಪತ್ರೆಗೆ ಇದೆ. ಈ ಕಾರಣದಿಂದಾಗಿ ಆಸ್ಪತ್ರೆಯ ನಿರ್ವಹಣಾ ವೆಚ್ಚವೂ ಹೆಚ್ಚುತ್ತದೆ. ಖಾಸಗಿ ಆಸ್ಪತ್ರೆ ಅಥವಾ ಸಿಬ್ಬಂದಿಗಳಿಗೆ ಸರಕಾರದಿಂದ ಯಾವುದೇ ರೀತಿಯ ಸಹಾಯ ಅನುದಾನ ಸಿಗುವುದಿಲ್ಲ ಎಂಬ ಮಾಹಿತಿ ಇಲ್ಲದೆ ಎಂಬುದು ಕೂಡಾ ಹೆಚ್ಚಿನವರಿಗೆ ಅರಿವು ಮೂಡಿಸುವ ಬದಲು ಅಪಾದನೆಗಳನ್ನು ವಿನಾ ಕಾರಣ ಸೃಷ್ಟಿಸಿ ವೈದ್ಯ ಸಮುದಾಯದ ಧೃತಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಅವರು ವಾದಿಸುವ ಸುಳ್ಳು ಆರೋಪಗಳಾದ ಅಂಗಾಂಗ ಕದಿಯಲಾಗಿದೆ. ಬಿಲ್ ಅಧಿಕವಾಗಿ ಮಾಡಿದ್ದಾರೆ, ಐಸಿಯುನಿಂದ ವಿನಾಃ ಕಾರಣ ತೆಗೆದರು, ಅಗತ್ಯವಿಲ್ಲದ ರೋಗಿಯನ್ನು ವಿನಾಃ ಕಾರಣ ಐಸಿಯುನಲ್ಲಿ ದುಡ್ಡಿಗಾಗಿ ಹಾಕಿದ್ದಾರೆ, ವೈದ್ಯರ ನಿರ್ಲಕ್ಷ್ಯವೇ ಕಾರಣ, ಮುಂತಾದ ವಾದಗಳನ್ನು ಮಾಡಿ ಬಿಲ್ ಕಟ್ಟುವುದಿಲ್ಲ ಮೃತ ದೇಹ ನಮಗೆ ಬೇಡ ಎಂದು ಬ್ಲ್ಯಾಕ್ ಮೈಲ್ ಮಾಡುವ ಮೂಲಕ ಸಮಾಜಕ್ಕೆ ಅತ್ಯಂತ ಆತ್ಮೀಯರಾದ ವೈದ್ಯ ಸಮುದಾಯದ ಮೇಲೆ ಗೂಬೆ ಕೂರಿಸಿ ಚಿಕಿತ್ಸೆಗೆ ಹಿಂಜರಿಯಲು ಕಾರಣರಾಗುತ್ತಾರೆ.

ಇಂತಹ ವಿಷಯಗಳನ್ನು ಸಾಮಾಜಿಕ ಜಾಲಗಳಲ್ಲಿ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಿ ವೈದ್ಯಕೀಯ ಸಮುದಾಯವನ್ನೇ ಸಂದೇಹದ ದೃಷ್ಟಿಯಿಂದ ನೋಡುವಂತೆ ಮಾಡುವ ಅಪ್ರಬುದ್ಧ ಪ್ರಚಾರ ಪ್ರಿಯ ವ್ಯಕ್ತಿಗಳು ನಿಜಕ್ಕೂ ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ ಎಂಬುದು ಸರ್ವ ವಿದಿತವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ಹೇಳಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಉದ್ಯಾವರ ಸೇತುವೆ ಮೇಲೆ ತಡೆಗೋಡೆಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಹಲವರಿಗೆ ಗಾಯ

Upayuktha

ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಿಂದ ‘ಸಾಧಕರ ದಿನ’

Upayuktha

ಸಾಹಿತ್ಯ ಲಹರಿ ವಾಟ್ಸಾಪ್ ಬಳಗದ ವಾರ್ಷಿಕೋತ್ಸವದ ಸಂಭ್ರಮ

Upayuktha

Leave a Comment