ಪ್ರಮುಖ ಲೇಖನಗಳು ಹಬ್ಬಗಳು-ಉತ್ಸವಗಳು

ಕರುಣಾಳು ಬಾ ಬೆಳಕೆ…. ದೀಪಾವಳಿಗೊಂದು ಬೆಳಕಿನ ಚಿತ್ತಾರ

ಸಾಂದರ್ಭಿಕ ಚಿತ್ರ

ಹಬ್ಬ ಅಂದರೆ ಹೂವುಗಳಿಂದ ಅಲಂಕಾರ, ಉಡುಗೊರೆ ಹಂಚುವಿಕೆ, ಹೊಸ ಬಟ್ಟೆ ಧರಿಸುವುದು, ಭಿನ್ನ ರೀತಿಯ ರುಚಿ – ರುಚಿಯಾದ ಅಡುಗೆ ತಯಾರಿಸಿ ಸವಿಯುವುದು ಸರ್ವೇ ಸಾಮಾನ್ಯ. ಇವುಗಳ ಜತೆಗೆ ಎಣ್ಣೆ ಹಚ್ಚಿ ಬಿಸಿನೀರಿನ ಸ್ನಾನ, ಮನೆಯ ಸುತ್ತಲೂ ದೀಪಗಳನ್ನು ಹಚ್ಚುವುದು, ಪಟಾಕಿ ಸಿಡಿಸುವುದು, ಗೋಪೂಜೆ, ಧನಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ, ತುಳಸೀ ಪೂಜೆ ಮಾಡುವುದು ದೀಪಾವಳಿ ಹಬ್ಬದ ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದೆ. ಇದು ಹಲವು ಆಶಯಗಳನ್ನೊಳಗೊಂಡಿದ್ದು, ಜಾತಿ, ಮತ ಭೇದವಿಲ್ಲದೆ ಆಚರಿಸಲ್ಪಡುವ ಹಬ್ಬ.

ಅಶ್ವಯುಜ ಮಾಸದ ಕೊನೆ ಹಾಗೂ ಕಾರ್ತಿಕ ಮಾಸದ ಆದಿಯ ಅವಧಿಯಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ರೈತರು ಬೆಳೆದ ಧವಸ – ಧಾನ್ಯಗಳ ಕೊಯ್ಲು ಮಾಡಿ ಮನೆಗೆ ತರುವ ಸಂಭ್ರಮದ ಕಾಲ. ಜ್ಯೋತಿರ್ಮಯವಾದ ಈ ಹಬ್ಬವನ್ನು ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ವರೆಗೆ ಆಚರಿಸಲಾಗುತ್ತದೆ. ಭಾರತದ ಬೇರೆ – ಬೇರೆ ಭಾಗದ ಜನರು ವಿವಿಧ ರೀತಿಯ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ಆದರೆ ಇವುಗಳ ಉದ್ದೇಶ ಮಾತ್ರ ಅಂಧಕಾರವನ್ನು ನಿವಾರಿಸು, ಸುಜ್ಞಾನದೆಡೆಗೆ ಮುನ್ನಡೆಸು ಎಂದು ಬೇಡುವುದಾಗಿದೆ.

ದೀಪದಿಂದ ದೀಪವ ಹಚ್ಚಬೇಕು ಮಾನವ….
`ದೀಪದಿಂದ ದೀಪವ ಹಚ್ಚಬೇಕು ಮಾನವ…..’ ಎಂಬ ಕವಿ ವಾಣಿಯಂತೆ ಇಲ್ಲಿ ದೀಪಗಳನ್ನು ಬೆಳಗುವುದಕ್ಕೆ ಮಹತ್ವ. ಯಾವಾಗಲೂ ಸಂತೋಷದಿಂದ ಬಾಳಬೇಕು. ಈ ಸಂತೋಷವನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಪ್ರೀತಿ – ಸೌಹಾರ್ದದಿಂದಿರಬೇಕು ಎಂಬ ಭಾವನೆ ಪ್ರಚುರಪಡಿಸುವುದಕ್ಕಾಗಿಯೇ ದೀಪದಿಂದ ದೀಪಗಳನ್ನು ಹಚ್ಚಲಾಗುತ್ತದೆ.

ಮಾನವ ಕತ್ತಲಿನಿಂದ ಬೆಳಕಿನೆಡಗೆ ಸಾಗಬೇಕು ಎಂಬುದು ದೀಪಾವಳಿಯ ಉದ್ದೇಶ. ಅದಕ್ಕಾಗಿಯೇ ದೀಪಾವಳಿ ಸಂದರ್ಭ ಜ್ಯೋತಿ ಬೆಳಗಿ ಕತ್ತಲನು ಮರೆ ಮಾಡಿದಂತೆ, ನಮ್ಮ ಮನಸ್ಸಿನೊಳಗಿ ಕಲ್ಮಶ, ಅಂಧಕಾರಗಳನ್ನು ದೂರಮಾಡು ಎಂದು ಪ್ರಾರ್ಥಿಸುತ್ತೇವೆ. ಇದರಿಂದಲೇ ಕವಿ ಕೂಡ “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲ್ಲಿ ಕೈ ಹಿಡಿದು ನಡೆಸೆನ್ನನು” ಎಂದಿದ್ದರೆ.

ನಮ್ಮಲ್ಲಿರುವ ಅಜ್ಞಾನದ ಅಂಧಕಾರವನ್ನು ಸೀಳಿ, ಕ್ರೌರ್ಯ, ಅಹಂಕಾರ, ರಾಕ್ಷಸೀ ಪ್ರವೃತ್ತಿಗಳನ್ನು ಅಳಿಸಿ ಹಾಕುವುದೇ ದೀಪಾವಳಿಯಲ್ಲಿ ಹಚ್ಚುವ ದೀಪಗಳ ಸಂಕೇತ. ಈ ಹಬ್ಬದ ಪ್ರತಿ ದಿನವೂ ಒಂದೊಂದು ಸಂದೇಶ ನೀಡುವಂತಹದೇ ಆಗಿದೆ. ಅದರ ಮಹತ್ವವನ್ನು ಅರಿತು ಆಚರಿಸಿದಾಗಲೇ ದೀಪಾವಳಿ ಆರ್ಥ ಪೂರ್ಣವಾಗುತ್ತದೆ.

ದೀಪ ಬೆಳಗುವುದು ನಮ್ಮ ಸಂಸ್ಕೃತಿ
ಕಾಡು – ಮೇಡುಗಳಲ್ಲಿ ಅಲೆಯುತ್ತಾ ಗೆಡ್ಡೆ – ಗೆಣಸುಗಳನ್ನು ತಿಂದು ಜೀವಿಸುತ್ತಿದ್ದ ಮನುಷ್ಯ ಬೆಂಕಿಯನ್ನು ಕಂಡು ಹಿಡಿದ ಮೇಲೆ ನಾಗರಿಕನಾಗತೊಡಗಿದ. ಬೆಂಕಿ ಕಂಡು ಹಿಡಿದ ನೆನಪಿಗಾಗಿ ಆಚರಣೆಗೆ ಬಂದ ದೀಪಾವಳಿಗೆ ಮುಂದೆ ಹಲವಾರು ಐತಿಹ್ಯಗಳು ಸೇರಿಕೊಂಡವು. ದುಷ್ಟ ಶಕ್ತಿಯೆಂಬ ಕತ್ತಲೆಯನ್ನು ಜಯಿಸಿ ಬೆಳಕನ್ನು ಹರಿಸುವ ಸಂಕೇತವಾಗಿ ಇಂದು ದೀಪಾವಳಿ ಆಚರಿಸಲ್ಪಡುತ್ತಿದೆ. ದೀಪ ಬೆಳಗುವುದು ನಮ್ಮ ಸಂಸ್ಕೃತಿ. ದೀಪ ಬೆಳಗಿದ ಕೂಡಲೇ ನಮ್ಮ ಅರಿವಿಗೆ ಬಾರದಂತೆ ಮನಸ್ಸು ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯ ಎಂದು ನಮಿಸುತ್ತದೆ.

ವಾತ್ಸಲ್ಯದ ಹಬ್ಬ
ದೀಪಾವಳಿ ವಾತ್ಸಲ್ಯದ ಹಬ್ಬ. ಮಾನವೀಯ ಸಂಬಂಧಗಳನ್ನು ಉದಾತ್ತಗೊಳಿಸುವ ಚಿರನೂತನಗೊಳಿಸುವ ಪರ್ವ. ಸೋದರ – ಸಹೋದರಿಯರ ಪ್ರೇಮದ ಸಂಕೇತದ ಹಬ್ಬ. ಅಕ್ಕ – ತಂಗಿಯರು, ಅಣ್ಣ – ತಮ್ಮಂದಿರ ಮನೆಗೆ ಬಂದು ಸತ್ಕಾರ ಪಡೆದು ನಲಿದು ಹೋಗುವ ಪರ್ವ ದಿನ. ಹೀಗಾಗಿ ದೀಪಾವಳಿಯನ್ನು ಭಾವನ ಬಿದಿಗೆ, ಅಕ್ಕನ ತದಿಗೆ ಎನ್ನುತ್ತಾರೆ. ನವ ದಂಪತಿಗಳಿಗಂತೂ ವಿಶೇಷ ಆತಿಥ್ಯ. ಅಳಿಯನ ಹಬ್ಬವೆಂದೂ ಕರೆಯಲ್ಪಡುವ ದೀಪಾವಳಿಯಲ್ಲಿ ಅಳಿಯಂದಿರು ಮಾವನ ಮನೆಗೆ ಬಂದು ಎಣ್ಣೆ ಹಚ್ಚಿ ಸ್ನಾನ ಮಾಡಿ ಉಡುಗರೆ ಸಮ್ಮಾನಗಳನ್ನು ಪಡೆದು ಸಂಭ್ರಮಿಸುತ್ತಾರೆ.

ದೀಪಾವಳಿ ಹಬ್ಬ ಜನಪದರ ಹಬ್ಬವೂ ಹೌದು. ರೈತ ಸಮುದಾಯ ಇದನ್ನು `ಕೌಮುದ ಮಹೋತ್ಸವ’ ಎಂದು ಆಚರಿಸುತ್ತಾರೆ. `ಕೌ’ ಎಂದರೆ ಭೂಮಿ- `ಮುದ’ ಎಂದರೆ ಸಂತೋಷದ ಸಮಯ ಎಂದರ್ಥ. ಈ ಸಮಯದಲ್ಲಿ ಭೂ ತಾಯಿ ಹಸಿರಿನಿಂದ ಬೀಗುತ್ತಿರುತ್ತಾಳೆ. ದವಸ – ಧಾನ್ಯ ಅವಳ ಮಡಿಲಲ್ಲಿರುತ್ತದೆ. ಭೂ ತಾಯಿಯನ್ನು ಪೂಜಿಸುವುದರೊಂದಿಗೆ ಬಲೀಂದ್ರ ಪೂಜೆಯನ್ನು ಆಚರಿಸುತ್ತಾರೆ.

ಆಚರಣೆಯ ಹಿನ್ನೆಲೆ
ದೀಪಾವಳಿ ಆಚರಣೆಯ ಹಿಂದೆ ಹಲವಾರು ಕಥೆಗಳನ್ನು ಪುರಾಣಗಳಲ್ಲಿ, ಇತಿಹಾಸದಲ್ಲಿ ಕಾಣಬಹುದು. ದೀಪಾವಳಿಯ ಮೊದಲ ದಿನ ಶ್ರೀಕೃಷ್ಣನು ನರಕಾಸುರನನ್ನು ವಧಿಸಿದ ದಿನ. ಹಾಗಾಗಿ ನರಕಚತುರ್ದಶಿ ಎಂದು ಆಚರಿಸುತ್ತೇವೆ. ಆ ದಿನವನ್ನು ಮಕ್ಕಳ ಹಬ್ಬ ಎಂದೂ ಆಚರಿಸಲಾಗುತ್ತದೆ. ಅಂದು ಚಿಕ್ಕ ಮಕ್ಕಳಿಂದ ವೃದ್ಧರ ವರೆಗೆ ಎಲ್ಲರೂ ತೈಲಾಭ್ಯಂಜನ ಮಾಡುತ್ತಾರೆ.

ಶ್ರೀರಾಮನು ರಾವಣನನ್ನು ಕೊಂದು ಸೀತೆ, ಲಕ್ಷಣ ಹಾಗೂ ವಾನರ ಸೈನ್ಯದೊಡನೆ ಅಯೋಧ್ಯೆಗೆ ಮರಳಿದ ದಿನ. ಅಂದು ಅಯೋಧ್ಯಾ ವಾಸಿಗಳು ಊರು ತುಂಬಾ ಹಣತೆ ಹಚ್ಚಿ ರಾಮನನ್ನು ಸ್ವಾಗತಿಸಿದರಂತೆ. ತದನಂತರ ಆ ದಿನ ದೀಪಾವಳಿ ಎಂದೆನಿಸಿತು ಎಂಬ ಪ್ರತೀತಿಯಿದೆ.

ಮಹಾಬಲಿ ವಾಮನನ ಎದುರು ವರ ಕೇಳು ಎಂದು ಹೇಳಿ ಸೋತು ತನ್ನ ರಾಜ್ಯವನ್ನೆಲ್ಲಾ ಆತನಿಗೆ ಧಾರೆಯೆರೆದು ಅದು ಸಾಲದಾದಾಗ ತನ್ನನ್ನೇ ತಾನು ಸಮರ್ಪಿಸಿದ ನೆನಪಿಗಾಗಿ ದೀಪಾವಳಿಯಲ್ಲಿ ಬಲೀಂದ್ರ ಪೂಜೆ ನಡೆಸುತ್ತಾರೆ.

ವೈದ್ಯರು ಧನ್ವಂತರಿ ಜಯಂತಿ ಎಂದು ದೀಪಾವಳಿ ಆಚರಿಸುತ್ತಾರೆ. ಬಾಹುಬಲಿ ದಿಗ್ವಿಜಯಿಯಾಗಿ ಪಡೆದ ರಾಜ್ಯ, ಸಂಪತ್ತುಗಳೆಲ್ಲವನ್ನು ಭರತನಿಗೆ ಧಾರೆ ಎರೆದು ಮಹಾವೀರನಾದ ದಿನ ಎಂದು ಜೈನರು ಕೂಡ ದೀಪಾವಳಿಯನ್ನು ಆಚರಿಸುವರು. ಅಲ್ಲದೆ ಕಾರ್ತಿಕ ಮಾಸದ ಚತುರ್ದಶಿಯು ಜೈನರ ಕೊನೆಯ ತೀರ್ಥಂಕರರು ಮೋಕ್ಷ ಹೊಂದಿದ ದಿನವೆಂದು ಆಚರಿಸಲ್ಪಡುತ್ತದೆ. ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿಗೆ ಬಹಳ ಪ್ರಾಮುಖ್ಯವಿದೆ. ವಿಕ್ರಮಾದಿತ್ಯ ದೀಪಾವಳಿಯಂದು ಸಿಂಹಾಸನವನ್ನೇರಿದ. ಅಂದಿನಿಂದ ವಿಕ್ರಮ ಶಕೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ದೀಪಾವಳಿಯ ವೈಶಿಷ್ಟ್ಯ
ರಾತ್ರಿಯಾಗುತ್ತಿದ್ದಂತೆ ಹೊಲ, ತೋಟ, ಅಂಗಳ, ಪಟ್ಟಣ, ಬೀದಿ, ಹೀಗೆ ವಿವಿಧೆಡೆಗಳಲ್ಲಿ ಬೆಳಗುವ ಪುಟ್ಟಪುಟ್ಟ ದೀಪಗಳು, ಆ ದೀಪಗಳ ಬೆಳಕಿಗೆ ಮನೆಮಂದಿಯೆಲ್ಲಾ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವುದು. ಯಾವುದೇ ಕಷ್ಟ – ನೋವು, ದುಃಖ – ದುಮ್ಮಾನಗಳಿದ್ದರೂ ಕೆಲವು ಕ್ಷಣಗಳವರೆಗಾದರೂ ಮರೆತು ನಲಿದಾಡುವಂತೆ ಮಾಡುವುದು ದೀಪಾವಳಿಯ ವೈಶಿಷ್ಟ್ಯ.

ಬಲೀಂದ್ರ ಪೂಜೆ
ದೀಪಾವಳಿಯ ಬಲಿ ಪಾಡ್ಯದಂದು ತುಳುನಾಡಿನಲ್ಲಿ ಭೂಮಿ ಪುತ್ರನಾದ ಬಲೀಂದ್ರನನ್ನು ಭೂಮಿಗೆ ಬರಮಾಡಿಕೊಂಡು ಪೂಜೆಯ ಮೂಲಕ ಗೌರವಿಸುವುದೇ ಇದರ ವಿಶೇಷತೆ. ಮನೆಯ ತುಳಸೀಕಟ್ಟೆ ಬಳಿ ಬಲೀಂದ್ರ ಮರ ನೆಟ್ಟು ಅದನ್ನು ಹೂವಿನಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಬಲೀಂದ್ರ ಪೂಜೆಗೆ ಬಂಡೆಕಲ್ಲುಗಳಲ್ಲಿ ಬೆಳೆಯುವ ಪಾರೆ ಹೂ ಅತ್ಯಗತ್ಯ.
– ವಿನಾಯಕ

Related posts

ವಿಟ್ಲ: ಗೋ ಕಳ್ಳತನದ ಜಾಡು ಹಿಡಿದ ಪೊಲೀಸರಿಂದ ಬೃಹತ್ ಕಸಾಯಿಖಾನೆಗೆ ದಾಳಿ

Upayuktha

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಒಬ್ಬ ವ್ಯಕ್ತಿಯ ಬಂಧನ

Upayuktha

ದಿಲ್ಲಿಯಲ್ಲಿ ಪಿಝಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು: 72 ಕುಟುಂಬಗಳಿಗೆ ಸ್ವಯಂ ಕ್ವಾರಂಟೈನ್‌ಗೆ ಸೂಚನೆ

Upayuktha