ದೇಶ-ವಿದೇಶ ಪ್ರಮುಖ

ಬಿಜೆಪಿಯಿಂದ ಕಲಿತ ಪಾಠ: ‘ರಾಷ್ಟ್ರೀಯತೆ’ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ

ಸಾಂದರ್ಭಿಕ ಚಿತ್ರ (ಕೃಪೆ: ಝೀ ನ್ಯೂಸ್)

ಹೊಸದಿಲ್ಲಿ:

ಸತತ ಸೋಲಿನಿಂದ ಕಂಗೆಟ್ಟು ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ತಡವಾಗಿಯಾದರೂ ತನ್ನ ತಪ್ಪುಗಳನ್ನು ಸರಿಪಡಿಸುವ ಯತ್ನವಾಗಿ ಕಾರ್ಯಕರ್ತರಿಗೆ ರಾಷ್ಟ್ರೀಯತೆಯ ಪಾಠ ಹೇಳಲು ಮುಂದಾಗಿದೆ.

ಬಲಿಷ್ಠ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎದುರಾಳಿ ಬಿಜೆಪಿ ಅನುಸರಿಸುತ್ತಿರುವ ರಾಷ್ಟ್ರೀಯತೆ, ಹಿಂದುತ್ವ, ಪಾಸಿಟಿವ್‌ ರಾಜಕಾರಣದ ಹೊಡೆತಕ್ಕೆ ಸಿಲುಕಿ ಮಕಾಡೆ ಮಲಗಿರುವ ಕಾಂಗ್ರೆಸ್‌, ತನ್ನ ಭವಿಷ್ಯಕ್ಕಾಗಿ ತನ್ನ ನೀತಿಗಳ ಮರುವಿಮರ್ಶೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.

ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ತರಬೇತಿ ನೀಡಲು ಪಕ್ಷ ಮುಂದಾಗಿದೆ. ತರಬೇತಿಯ ವಿಷಯಗಳಲ್ಲಿ ‘ರಾಷ್ಟ್ರೀಯತೆ’, ‘ಸಂವಹನ’ ಮತ್ತು ‘ಪ್ರಚಾರಾಂದೋಲನ’ ಮುಖ್ಯವಾಗಿವೆ. ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಕಾಂಗ್ರೆಸ್‌ಗೆ ಈಗ ತನ್ನ ‘ರಾಷ್ಟ್ರೀಯತಾವಾದಿ ಗುರುತನ್ನು’ ಸಾಬೀತುಪಡಿಸಬೇಕಾದ ಸನ್ನಿವೇಶ ಒದಗಿದೆ. ಜತೆ ಜತೆಗೇ ಬಿಜೆಪಿಯ ‘ನಕಲಿ ರಾಷ್ಟ್ರೀಯತಾವಾದವನ್ನು ಹೇಗೆ ಬಯಲಿಗೆಳೆಯುವುದು’ ಎಂಬ ವಿಚಾರವನ್ನೂ ಕಾಂಗ್ರೆಸ್ ಚರ್ಚಿಸಲಿದೆ’ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಚುನಾವಣೆ ಪ್ರಚಾರ ತಂತ್ರಗಳಲ್ಲಿ ಹೊಸತನವನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಕಾರ್ಯಕರ್ತರಿಗೆ ಕಲಿಸಲಾಗುವುದು. ‘ತರಬೇತಿ ಶಿಬಿರದಲ್ಲಿ ಚುನಾವಣೆ ಪ್ರಚಾರವನ್ನು ಹೇಗೆ ನಡೆಸಬೇಕು ಎಂಬುದೇ ಕಾರ್ಯಕರ್ತರಿಗೆ ಮುಖ್ಯ ಪಾಠವಾಗಲಿದೆ’ ಎಂದು ಎಐಸಿಸಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಸಮಕಾಲೀನ ಸಂವಹನ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಮತ್ತು ಬಲಿಷ್ಠವಾಗಿ ಬಳಸಿಕೊಂಡು ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಧ್ಯವಾಗುವಂತೆ ತರಬೇತಿಯ ವಿನ್ಯಾಸ ಇರಲಿದೆ.

ಕಾರ್ಯಕರ್ತರು ಮತ್ತು ಪದಾಧಿಕಾರಿಗಳಿಗೆ ನಿಯಮಿತವಾಗಿ ವರ್ಷವಿಡೀ ತರಬೇತಿಗಳು ನಡೆಯುವಂತೆ ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜ್ಯ ಘಟಕಗಳ ಮುಖ್ಯಸ್ಥರು, ಶಾಸಕಾಂಗ ಪಕ್ಷ ನಾಯಕರು, ಎಐಸಿಸಿಯ ರಾಜ್ಯ ಉಸ್ತುವಾರಿಗಳ ಇತ್ತೀಚಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.

‘ರಾಷ್ಟ್ರೀಯತೆ’ಯನ್ನು ಜನಮಾನಸದಲ್ಲಿ ಯಶಸ್ವಿಯಾಗಿ ಬಿತ್ತಿದ ಬಿಜೆಪಿಯಿಂದ ತನಗಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಈಗ ಪ್ರಮುಖವಾಗಿ ಗಮನ ಹರಿಸಲಿದೆ.

ದೇಶದ ರಾಜಕೀಯ ಚಿತ್ರಣವನ್ನು ಬಿಜೆಪಿಯೇ ನಿರ್ದೇಶಿಸುತ್ತಿದ್ದು, ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ತಳಮಟ್ಟದ ಕಾರ್ಯಕರ್ತರನ್ನು ಮತ್ತೆ ಸಂಘಟಿಸಿ ‘ರಾಷ್ಟ್ರೀಯತೆ’ಯ ವಿಚಾರವನ್ನು ತಾನೂ ಅನುಸರಿಸಲು ಮುಂದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

Related posts

ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆ: ರಾಜ್ಯದ 21 ದೇವಸ್ಥಾನಗಳಿಂದ ಒಟ್ಟು 37,637 ಜನರಿಗೆ ಊಟೋಪಚಾರ ವಿತರಣೆ

Upayuktha

ಆಮೆರಿಕದ ಅಧ್ಯಕ್ಷ ಟ್ರಂಪ್ ಸಹೋದರ ರಾಬರ್ಟ್‌ ಟ್ರಂಪ್‌ ನಿಧನ

Harshitha Harish

ಕಳಂಕಿತ ಹಣದಿಂದ ಸ್ಪೇನಿನ ಟೆನಿಸ್ ಕ್ಲಬ್‌, ಯುಕೆ ಕಾಟೇಜ್ ಖರೀದಿಸಿದ್ದ ಚಿದಂಬರಂ: ಇ.ಡಿ

Upayuktha