ಆರೋಗ್ಯ ಕ್ಯಾಂಪಸ್ ಸುದ್ದಿ ಜಿಲ್ಲಾ ಸುದ್ದಿಗಳು

ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ವತಿಯಿಂದ ಬೃಹತ್ ಉಚಿತ ಶಿಬಿರಕ್ಕೆ ಚಾಲನೆ

ಉತ್ತಮ ಆಹಾರಕ್ರಮ, ಜೀವನಶೈಲಿಯಿಂದ ರೋಗ ದೂರ: ಪುರಾಣಿಕ್

ಮಂಗಳೂರು: ರೋಗ ಬಂದ ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗುವ ಬದಲು ಉತ್ತಮ ಆಹಾರ ಕ್ರಮ ಮತ್ತು ಜೀವನ ಶೈಲಿ ರೂಢಿಸಿಕೊಳ್ಳುವ ಮೂಲಕ ರೋಗ ಬಾರದಂತೆ ತಡೆಯುವುದು ಉತ್ತಮ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಭಿಪ್ರಾಯಪಟ್ಟರು.

ಭಾರತ ಸರ್ಕಾರದ ಆಯುಷ್ ಸಚಿವಾಲಯ ಅಧೀನದಲ್ಲಿರುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಒಡಿಯೂರು ಷಷ್ಟ್ಯಬ್ಧ ಸಂಭ್ರಮ ಮಂಗಳೂರು ನಗರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶಾರದಾ ಆಯುರ್ಧಾಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೋಗ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಉತ್ತಮ. ನಮ್ಮ ಹಿರಿಯರು ಯೋಗ, ಪ್ರಾಣಾಯಾಮ ಅಥವಾ ಪ್ರಾರ್ಥನೆಯಂಥ ಕ್ರಮಗಳ ಮೂಲಕ ಆರೋಗ್ಯವಂತ ಜೀವನ ಸಾಗಿಸುವ ವಿಧಾನವನ್ನು ಕಂಡುಕೊಂಡಿದ್ದರು. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಪೂರ್ಣ ಭಾರತೀಯ ವೈದ್ಯಪದ್ಧತಿಯಾಗಿದ್ದು, ಕನಿಷ್ಠ ಔಷಧಿಯಲ್ಲೇ ರೋಗವನ್ನು ಗುಣಪಡಿಸಬಹುದಾದ ಚಿಕಿತ್ಸಾ ವಿಧಾನ. ಇದರ ಅಂಶಗಳನ್ನು ಅಳವಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು.

ಒಡಿಯೂರು ಷಷ್ಟ್ಯಬ್ಧ ಸಂಭ್ರಮ ಸಮಿತಿಯ ಆರೋಗ್ಯ ಸಂಚಾಲಕ ಲಯನ್ ಪಿಡಿಜಿ ಕೆಸಿ ಪ್ರಭು ಮಾತನಾಡಿ, ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಅಂಗವಾಗಿ ವರ್ಷವಿಡೀ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಮಾತ್ರ ವೈದ್ಯರ ಬಳಿಗೆ ಹೋಗುವ ಪರಿಪಾಠ ನಮ್ಮಲ್ಲಿದೆ. ಆದರೆ ಇಂಥ ಶಿಬಿರಗಳ ಮೂಲಕ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೀವನಶೈಲಿಯಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ದೊರಕಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾತ್ಮಾಗಾಂಧೀಜಿಯವರ 102ನೇ ಜಯಂತಿ ಅಂಗವಾಗಿ ದೇಶದ 70ಕ್ಕೂ ಹೆಚ್ಚು ಕಡೆಗಳಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಆಹಾರವೇ ಔಷಧಿ ಎನ್ನುವ ಪರಿಕಲ್ಪನೆ ಬಗ್ಗೆ ಅರಿವು ಮೂಡಿಸುವುದು ಶಿಬಿರದ ಉದ್ದೇಶ ಎಂದು ಹೇಳಿದರು.

ಪ್ರಕೃತಿ ಚಿಕಿತ್ಸೆ ಮಹತ್ವದ ಬಗ್ಗೆ ಹಿರಿಯ ಪ್ರಕೃತಿ ಚಿಕಿತ್ಸಾ ತಜ್ಞ ಡಾ.ಕೆ.ಗೋವಿಂದ ಭಟ್, ಪ್ರತಿರೋಧ ಶಕ್ತಿ ಮತ್ತು ಪೌಷ್ಟಿಕತೆ ಮಹತ್ವದ ಬಗ್ಗೆ ಡಾ.ವಿಜಯಲಕ್ಷ್ಮಿ ರಾಜೇಶ್ ಉಪನ್ಯಾಸ ನೀಡಿದರು.

ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್, ಆಡಳಿತಾಧಿಕಾರಿ ವಿವೇಕ್ ತಂತ್ರಿ, ಡಾ.ರವಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೆ ಉಚಿತವಾಗಿ ಇಮ್ಯುನಿಟಿ ಕಿಟ್ ವಿತರಿಸಲಾಯಿತು. ಡಾ.ಪದ್ಮಶ್ರೀ ಸ್ವಾಗತಿಸಿ. ಡಾ.ಸುಷ್ಮಿತಾ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಕೊರೊನಾ ಪಾಸಿಟಿವ್

Harshitha Harish

ಪ್ರತಿಯೊಂದು ಕಾರ್ಯ ಸಾಧನೆಗೂ ಗುರಿ ಪ್ರಮುಖ ಅಂಶವಾಗಿರುತ್ತದೆ: ಪ್ರೊ| ವಂದನಾ ಶಂಕರ್

Upayuktha

ತಲೆ ನೋವುಗಳ ರಾಜ ಮೈಗ್ರೇನ್: ಕಾರಣವೇನು? ಶಮನ ಹೇಗೆ?

Upayuktha