ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಒಂದು ವರ್ಷ ಪೂರ್ಣಗೊಳಿಸಿದ ದೇಲಂಪಾಡಿ ಯೋಗ ಪ್ರತಿಷ್ಠಾನದ ಉಚಿತ ಆನ್‌ಲೈನ್‌ ಯೋಗ ತರಗತಿ

ಮಂಗಳೂರು: ಖ್ಯಾತ ಯೋಗ ಗುರು, ಅಂತರರಾಷ್ಟ್ರೀಯ ಯೋಗ ತೀರ್ಪುಗಾರರಾದ ಗೋಪಾಲಕೃಷ್ಣ ದೇಲಂಪಾಡಿ ಅವರು ನಡೆಸಿಕೊಂಡು ಬರುತ್ತಿರುವ ಉಚಿತ ಆನ್‌ಲೈನ್‌ ಯೋಗ ತರಗತಿ ಒಂದು ವರ್ಷ ಪೂರೈಸಿದೆ.

ಕೊರೊನಾ ಸಾಂಕ್ರಾಮಿಕ ಆರಂಭವಾದ ನಂತರ ಕಳೆದ ವರ್ಷ ಶಿಕ್ಷಣ, ವರ್ಕ್ ಫ್ರಮ್ ಹೋಮ್ ಸೇರಿದಂತೆ ಆನ್‌ಲೈನ್‌ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ, ಉತ್ತೇಜನ ನೀಡಲಾಗುತ್ತಿದೆ. ಕೊರೊನಾ ಹರಡುವುದನ್ನು ತಡೆಯುವ ಸರಕಾರದ ಮಾರ್ಗಸುಚಿಗಳಲ್ಲಿ ಆನ್‌ಲೈನ್‌ ಚಟುವಟಿಕೆಗಳ ಉತ್ತೇಜನವೂ ಸೇರಿದೆ. ಈ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ ದೇಲಂಪಾಡಿಯವರು ಕಳೆದ ಮಾರ್ಚ್ 17ರಿಂದ ಯೋಗಾಭ್ಯಾಸವನ್ನು ಆನ್‌ಲೈನ್‌ ಮೂಲಕ ಕಲಿಸಿಕೊಡಲಾರಂಭಿಸಿದರು. ಇದೀಗ ಒಂದು ವರ್ಷ ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಸುಮಾರು 3000ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

ದೈಹಿಕ, ಮಾನಸಿಕ ಸದೃಢತೆಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಯೋಗಾಭ್ಯಾಸ ಮಾಡಲು ಆನ್‌ಲೈನ್ ಯೋಗ ತರಗತಿ ಅವಕಾಶ ಮಾಡಿಕೊಟ್ಟಿದೆ. ಯೋಗಾಭ್ಯಾಸವನ್ನು ಗುರುಮುಖೇನವೇ ಕಲಿಯಬೇಕಿದ್ದು, ಕನಿಷ್ಠ ಎರಡು ವಾರಗಳ ಕಾಲವಾದರೂ ಗುರುಗಳ ಜತೆ ಸಂಭಾಷಿಸುತ್ತ, ಅವರ ಸಲಹೆಗಳನ್ನು ಪಡೆಯುತ್ತಲೇ ಅಭ್ಯಾಸ ಮಾಡಬೇಕು. ಇದಕ್ಕೆ ಈ ಆನ್‌ಲೈನ್‌ ತರಗತಿಯಿಂದ ನೆರವಾಗಿದೆ ಎಂದು ದೇಲಂಪಾಡಿಯವರು ಹೇಳಿದ್ದಾರೆ.

ಆರಂಭದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡೇ ಬ್ಯಾಚ್‌ಗಳನ್ನು ಉಚಿತ ಆನ್‌ಲೈನ್‌ ಯೋಗ ತರಗತಿಯಲ್ಲಿ ನಡೆಸಲಾಗುತ್ತಿತ್ತು. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿರಿಂದ ಮೂರು ಬ್ಯಾಚ್‌ಗಳಲ್ಲಿ ತರಗತಿ ಆರಂಭಿಸಲಾಯಿತು.

ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಆನ್‍ಲೈನ್ ತರಗತಿಯ ಹಿರಿಯ ಶಿಬಿರಾರ್ಥಿ ಶ್ರೀಯುತ ಕೃಷ್ಣ (83 ವರ್ಷ) ರವರು ಮುಖ್ಯ ಅತಿಥಿಯಾಗಿ ತನ್ನ ಅನುಭವ ಅನಿಸಿಕೆಯನ್ನು ಹಂಚಿಕೊಂಡರು. ಕೊರೋನಾದಿಂದ ಉಂಟಾದ ಆತಂಕ ನಿವಾರಣೆಯಾಗಿದೆ. ಇದೀಗ ಯೋಗವು ನಿತ್ಯ ಜೀವನದ ಭಾಗವಾಗಿದೆ. ಮೈಮನಸ್ಸುಗಳು ಹಗುರವಾಗಿ ರೋಗನಿರೋಧಕ ಶಕ್ತಿ ಹೆಚ್ಚಿದೆ ಎಂದು ತಿಳಿಸಿದರು.

ಎಸ್.ಡಿ.ಎಂ. ಕಾಲೇಜ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಸಹಕಾರದೊಂದಿಗೆ ಆನ್‍ಲೈನ್ ಯೋಗ ಪ್ರದರ್ಶನ, ಯೋಗ ಕ್ವಿಜ್ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅರುಣಾ ಪಿ. ಕಾಮತ್ ರ ನೇತೃತ್ವದಲ್ಲಿ ಈ ಆನ್‍ಲೈನ್ ಯೋಗ ಕಾರ್ಯಕ್ರಮ ನಡೆಸಲಾಯಿತು. ಸೈಂಟ್ ಅಲೋಶೀಯಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಯೋಗ ತರಬೇತಿ ನೀಡಲಾಯಿತು. ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಯೋಗ ಮುದ್ರೆಗಳ ಮಾಹಿತಿ ನೀಡಲಾಯಿತು. ಬೆಂಗಳೂರಿನ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದವರಿಗೆ ಮುದ್ರಾ ಹಾಗೂ ಯೋಗ ಚಕ್ರಗಳ ಬಗ್ಗೆ ಆನ್‍ಲೈನ್‍ನಲ್ಲಿ ತರಬೇತಿ ನೀಡಲಾಯಿತು.

ಈಗಾಗಲೇ ಯೋಗ ಅಭ್ಯಾಸ ಮಾಡುವವರು, ಯೋಗ ಗುರುಗಳ ಧ್ವನಿಯ ಸೂಚನೆಯಂತೆ ಅಭ್ಯಾಸಮಾಡಬಹುದು. ಗುರುಗಳು ಶಿಬಿರಾರ್ಥಿಗಳನ್ನು ಆನ್‍ಲೈನ್‍ನಲ್ಲಿ ನೋಡಿಕೊಂಡು ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಆನ್‍ಲೈನ್ ಯೋಗದಲ್ಲಿ ಭಾಗವಹಿಸಿ, ಕಲಿಯಿರಿ, ಅಭ್ಯಾಸ ಮಾಡಿ ಎಂದು ಅವರು ಸಲಹೆ ನೀಡಿದರು.

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ವರೆಗೂ ‘ಮನೆಯಲ್ಲಿ ಯೋಗ, ಕುಟುಂಬದೊಂದಿಗೆ ಯೋಗ’ ಎಂಬ ಘೋಷವಾಕ್ಯದಂತೆ ಯೋಗಾಭ್ಯಾಸ ಮಾಡುವ ಮೂಲಕ ಜನರು ಗುಂಪು ಸೇರುವುದನ್ನು ತಡೆಯಬಹುದು. ಆ ಮೂಲಕ ಕೊರೊನಾ ಪ್ರಸರಣ ಸಾಧ್ಯತೆಯನ್ನೂ ನಿವಾರಿಸಬಹುದಾಗಿದೆ.

ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿಯವರ ಲೇಖನಮಾಲೆ ‘ಸುಯೋಗ- ಯೋಗಾಭ್ಯಾಸ ಮಾಲಿಕೆ’ಯನ್ನು ಉಪಯುಕ್ತ ನ್ಯೂಸ್ ಮತ್ತು ಉಪಯುಕ್ತ ಪಾಡ್‌ಕಾಸ್ಟ್‌ಗಳು ಪ್ರಕಟಿಸುತ್ತಿವೆ. ಉಪಯುಕ್ತ ಪಾಡ್‌ಕಾಸ್ಟ್‌ನಲ್ಲಿ ಯೋಗಾಭ್ಯಾಸದ ಧ್ವನಿ ಮಾಲಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ. ಇದು ಬಹಳಷ್ಟು ಜನಪ್ರಿಯವಾಗಿದ್ದು ಒಟ್ಟಾರೆ 40,000ಕ್ಕೂ ಅಧಿಕ ಮಂದಿ ಇದನ್ನು ಈ ವರೆಗೆ ಆಲಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಯೋಗದಿಂದ ನಿರೋಗ, ಜೀವನ ಸರಾಗ: ಇಂದು ಅಂತರಾಷ್ಟ್ರೀಯ ಯೋಗ ದಿನ

Upayuktha

ಸುವಿಚಾರ: ಯೋಗ ಸಾಧನೆಗೆ ಮಾಡುವ ಕೆಲಸದಲಿ ಪ್ರೀತಿಯಿರಬೇಕು

Upayuktha

ಸುಯೋಗ- ಯೋಗಾಸನ ಮಾಲಿಕೆ 11- ಪಾರ್ಶ್ವೋತ್ಥಾನಾಸನ (Parshwothanasana)

Upayuktha