ಆರೋಗ್ಯ ಪ್ರಶ್ನೆ- ಉತ್ತರಗಳು (FAQs) ಲೇಖನಗಳು

ಕ್ಯಾನ್ಸರ್ ಮತ್ತು ಹತ್ತು ಪ್ರಶ್ನೆಗಳು

ಸಾಂದರ್ಭಿಕ ಚಿತ್ರ

ಕ್ಯಾನ್ಸರ್ ಬಗ್ಗೆ ಜನರಲ್ಲಿ ಭಯದ ಜೊತೆಗೆ ಹತ್ತು ಹಲವು ಸಂದೇಹಗಳು ಮತ್ತು ಕುತೂಹಲ ಇದ್ದೆ ಇದೆ. ಎಲ್ಲಾ ಕ್ಯಾನ್ಸರನ್ನು ಗುಣಪಡಿಸುವ ಔಷಧಿ ಇಲ್ಲದ ಕಾರಣ ಜನರು ತಲೆಗೊಂದರಂತೆ ಮಾತನಾಡುತ್ತಾರೆ. ಕ್ಯಾನ್ಸರ್‌ಲ್ಲಿ ನೂರು ವಿಧದ ಕ್ಯಾನ್ಸರ್‌ಗಳು ಇದೆ. ಕೆಲವೊಂದು ಕ್ಯಾನ್ಸರ್‌ಗಳಿಗೆ ಬರೀ ಸರ್ಜರಿಯ ಅವಶ್ಯಕತೆ ಇದ್ದಲ್ಲಿ, ಕೆಲವೊಂದು ಕ್ಯಾನ್ಸರ್‌ಗಳಿಗೆ ಬರೀ ಕಿಮೋಥೆರಪಿಯಿಂದಲೇ ಗುಣಮುಖವಾಗುವ ಸಾಧ್ಯತೆಯೂ ಇದೆ. ಉದಾಹರಣೆಗೆ ಲಿಂಪೋಮಾ ಎಂಬ ಕ್ಯಾನ್ಸರಿಗೆ ಸರ್ಜರಿಯ ಅವಶ್ಯಕತೆ ಇಲ್ಲ. ಬರೀ ಕಿಮೋಥೆರಪಿ ನೀಡಿ ರೋಗವನ್ನು ಗುಣಪಡಿಸಲಾಗುತ್ತದೆ. ಅದೇ ರೀತಿ ಬರ್ಕಿಟ್ಸ್ ಲಿಂಪೋಮಾ ಎಂಬ ರೋಗಕ್ಕೂ ಬರೀ ಕಿಮೋಥೆರಪಿ ಮಾತ್ರ ನೀಡಲಾಗುತ್ತದೆ. ಕ್ಯಾನ್ಸರ್ ಬರಲು ನಿರ್ದಿಷ್ಟವಾದ ಒಂದು ಕಾರಣ ಇಲ್ಲ. ಹತ್ತು ಹಲವು ಕಾರಣಗಳು ಸೇರಿ ಕ್ಯಾನ್ಸರ್ ಬರುವುದರಿಂದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಲು ವೈದ್ಯರಿಗೂ ಬಹಳ ಕಷ್ಟವಾಗುತ್ತದೆ.

1. ನನ್ನಅಜ್ಜ ಕಳೆದ 40 ವರ್ಷಗಳಿಂದ ಎಲೆ ಅಡಿಕೆ ಹೊಗೆಸೊಪ್ಪು ತಿನ್ನುತ್ತಿದ್ದಾರೆ. ಆದರೂ ಅವರಿಗೆ ಕ್ಯಾನ್ಸರ್ ಬಂದಿಲ್ಲ ಯಾಕೆ?
ಇದೊಂದು ಉತ್ತರ ನೀಡಲು ಬಹಳ ಕಷ್ಟಕರವಾದ ಪ್ರಶ್ನೆ. ಸಾಮಾನ್ಯವಾಗಿ ಎಲೆ ಅಡಿಕೆ ತಂಬಾಕು ಸೇವಿಸುವವರಲ್ಲಿ 90 ಶೇಕಡಾ ಮಂದಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ ತಂಬಾಕು ಸೇವಿಸಿದ ಎಲ್ಲರಿಗೂ ಬಾಯಿ ಕ್ಯಾನ್ಸರ್ ಬರಲೇಬೇಕೆಂದಿಲ್ಲ.

2. ನನ್ನ ತಂದೆಗೆ ಬೀಡಿ, ಸಿಗರೇಟು, ನಶ್ಯ, ತಂಬಾಕು ಅಥವಾ ಮದ್ಯಪಾನ ಮುಂತಾದ ಯಾವುದೇ ಚಟಗಳಿಲ್ಲ. ಬರೀ ಶಾಕಾಹಾರಿ ಮತ್ತು ನಿರಂತರ ಯೋಗ, ಧ್ಯಾನ, ಪ್ರಾಣಾಯಾಮ ಮಾಡುತ್ತಾರೆ. ಆದರೂಅವರಿಗೆ ಬಾಯಿ ಕ್ಯಾನ್ಸರ್ ಬಂದಿದೆ ಯಾಕೆ?
ಈ ಪ್ರಶ್ನೆಗೂ ವೈದ್ಯರ ಬಳಿ ಉತ್ತರ ಸಿಗಲಿಕ್ಕಿಲ್ಲ. ಕ್ಯಾನ್ಸರ್ ಬಂದಿರುವಎಲ್ಲಾ ರೋಗಿಗಳಿಗೂ ಚಟಗಳು ಇರಲೇಬೇಕೆಂದಿಲ್ಲ. ಕೆಲವೊಮ್ಮೆ ವಿರಳ ಸಂದರ್ಭಗಳಲ್ಲಿ ಯಾವುದೇದುರಾಭ್ಯಾಸವಿಲ್ಲದಿದ್ದರೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯಾತೆಇದೆ.ಆದರೆ ಕೆಲವೊಂದು ವಂಶಪಾರಂಪರ್ಯವಾಗಿ ಬರಬಹುದು. ಆದರೆ ಬಾಯಿ ಕ್ಯಾನ್ಸರ್‌ ಖಂಡಿತವಾಗಿಯೂ ವಂಶಪಾರಂಪರ್ಯವಾಗಿ ಬರುವುದಿಲ್ಲ.

3. ವಿಕಿರಣದ ಕಾರಣದಿಂದ ಕ್ಯಾನ್ಸರ್ ಬರುತ್ತದೆ ಎಂದು ನೀವೇ ವೈದ್ಯರು ತಿಳಿಸುತ್ತೀರಿ, ಮತ್ತೆ ಪುನಃ ವಿಕಿರಣ ಚಿಕಿತ್ಸೆಯನ್ನೇ ಕ್ಯಾನ್ಸರಿಗೆ ನೀಡುತ್ತೀರಿ ಯಾಕೆ?
ಸಣ್ಣ ಪ್ರಮಾಣದ ವಿಕಿರಣಕ್ಕೆ ದೇಹವನ್ನು ಪದೇ ಪದೇ ಒಡ್ಡುವುದರಿಂದ ದೇಹದಲ್ಲಿ ನಜೀವಕೋಶಗಳ ಒಳಗಿನ ವರ್ಣತಂತುವಿನ ರಚನೆಯಲ್ಲಿ ವ್ಯತ್ಯಾಸವಾಗಿ ಜೀವಕೋಶಗಳ ರೂಪಾಂತರ ಹೊಂದಿ, ತನ್ನ ವಿಭಜನೆಯ ಮೇಲಿನ ನಿಯಂತ್ರಣ ತಪ್ಪಿ ಹೋಗಿ ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತನೆ ಹೊಂದುತ್ತದೆ. ಆದರೆ ವಿಕಿರಣ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಹೊಂದಿರುವ ಜೀವಕೋಶಗಳ ಮೇಲೆ ನಿರಂತರವಾಗಿ ವಿಕಿರಣ ನೀಡಿ, ಜೀವಕೋಶಗಳನ್ನು ನಾಶಪಡಿಸಲಾಗುತ್ತದೆ. ಇಲ್ಲಿ ಹೆಚ್ಚಿನ ವಿಕಿರಣವನ್ನು ತುಂಬ ಕಡಿಮೆ ಸಮಯದಲ್ಲಿ ಅವಧಿಗೆ ಜೀವಕೋಶಗಳಿಗೆ ತಾಗುವಂತೆ ಮಾಡಿ ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲಾಗುತ್ತದೆ.

4. ನಾನು ಬರಿ ಎಲೆ ಅಡಿಕೆ ಮಾತ್ರತಿನ್ನುತ್ತೇನೆ. ಆದರೆತಂಬಾಕು (ಹೊಗೆಸೊಪ್ಪು) ಬಳಸುವುದಿಲ್ಲ ಹಾಗಾಗಿ ನನಗೆ ಕ್ಯಾನ್ಸರ್ ಬರಲಿಕ್ಕಿಲ್ಲ.
ಇದೊಂದು ಯಕ್ಷ ಪ್ರಶ್ನೆಎಂದರೂ ತಪ್ಪಲ್ಲ. ಯಾಕೆಂದರೆ ಎಲೆ, ಅಡಿಕೆ ಕೂಡಾ ಹೊಗೆ ಸೊಪ್ಪಿನಷ್ಟೆ ಅಪಾಯಕಾರಿ, ನಿರಂತರವಾಗಿ ಬಾಯಿಯೊಳಗಿನ ನುಣುಪಾದ ವಸಡು, ನಾಲಿಗೆ ಮತ್ತು ಬಾಯಿ ಮೇಲ್ಪದರಕ್ಕೆ ಅತ್ಯಾಚಾರ ಆದಾಗ, ಜೀವಕೋಶಗಳು ಮಾರ್ಪಾಡು ಹೊಂದಿ ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ನಾನು ಬರೀ ಹೊಗೆಸೊಪ್ಪು ಇಲ್ಲದ ಎಲೆ ಅಡಿಕೆ ತಿನ್ನುತ್ತೇನೆ. ನನಗೆ ಕ್ಯಾನ್ಸರ್ ಬರುವುದಿಲ್ಲ ಎನ್ನುವುದು ಮೂರ್ಖತನದ ಪರಮಾವಧಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವನ್ನು ಹಿತಮಿತವಾಗಿ ಉಪಯೋಗಿಸಬೇಕು ಎಂಬ ಸತ್ಯವನ್ನುಎಲ್ಲಾ ಮನುಷ್ಯರು ಮನಗಾಣಲೇಬೇಕು.

5. ಆಹಾರ ಪದ್ದತಿಗೂ ಬಾಯಿ ಕ್ಯಾನ್ಸರ್‌ಗೂ ನೇರವಾದ ಸಂಬಂಧವಿದೆಯೇ?
ನಮ್ಮಆಹಾರ ಪದ್ದತಿಗೂ, ನಮ್ಮಜೀವನ ಶೈಲಿಗೂ ಮತ್ತು ಬಾಯಿ ಕ್ಯಾನ್ಸರ್‌ಗೂ ನೇರವಾದ ಸಂಬಂಧವಿದೆ. ನಾವು ತಿನ್ನುವ ಆಹಾರದಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಡಿ ಇದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಹಸಿ ತರಕಾರಿ, ಸೊಪ್ಪು, ಕಾಯಿಪಲ್ಲೆಗಳು, ಕ್ಯಾರೆಟ್, ಮೂಲಂಗಿ ಮುಂತಾದ ತರಕಾರಿಗಳಲ್ಲಿ ಕ್ಯಾನ್ಸರ್ ನಿರೊಧಕ ಶಕ್ತಿ ಇರುವ ‘ಆಂಟಿಓಕ್ಸಿಡೆಂಟ್’ ಎಂಬ ರಾಸಾಯನಿಕಇರುತ್ತದೆ. ಈ ಕಾರಣದಿಂದಲೇ ಹಸಿ ತರಕಾರಿ ಹಣ್ಣು ಸೊಪ್ಪು ಕಾಯಿ ಪಲ್ಯೆಗಳನ್ನು ಹೆಚ್ಚು ಸೇವಿಸಬೇಕು. ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಮತ್ತು ಬಣ್ಣ ಮಿಶ್ರಿತ ಸಿದ್ದ ಆಹಾರಗಳು ಬಹುಶಃ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರಿ, ಜೀವಕೋಶಗಳು ರೂಪಾಂತರ ಹೊಂದುವಂತೆ ಪ್ರಚೋದಿಸುತ್ತದೆ.

6. ಬಾಯಿಯ ಸ್ವಚ್ಚತೆಗೂ, ಬಾಯಿಯ ಕ್ಯಾನ್ಸರ್‌ಗೂ ಸಂಬಂಧ ಇದೆಯೇ?
ಖಂಡಿತವಾಗಿಯೂ ಇದೆ, ಬಾಯಿಯನ್ನುಯಾವಾಗಲೂ ಸ್ವಚ್ಚವಾಗಿ ಇಡತಕ್ಕದ್ದು, ಬಾಯಿ ಸ್ವಚ್ಚವಾಗಿರದಿದ್ದಲ್ಲಿ ಬಾಯಿಯಲ್ಲಿ ವೈರಾಣುಗಳು ವಿಜೃಂಬಿಸಿ, ಕ್ಯಾನ್ಸರ್ ಬೆಳೆಯಲು ಪೂರಕವಾದ ವಾತಾವರಣ ಕಲ್ಪಿಸಿ ಕೊಡಬಹುದು. ಹ್ಯೂಮನ್ ಪಾಪಿಲೋಮ ಎಂಬ ವೈರಾಣು ಕ್ಯಾನ್ಸರ್ ಕಾರಕ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

7. ಬಾಯಿ ಕ್ಯಾನ್ಸರ್ ಜಾಸ್ತಿ ಪುರುಷರಲ್ಲಿ ಬರುತ್ತದೆ ಮಹಿಳೆಯರಿಗೆ ಕಡಿಮೆ ಬರುತ್ತದೆ ಯಾಕೆ?
ನಮ್ಮ ಭಾರತ ದೇಶದಲ್ಲಿ ಪುರುಷರು ಜಾಸ್ತಿ ತಂಬಾಕು ಮತ್ತು ಧೂಮಪಾನ ಮಾಡುವ ಕಾರಣದಿಂದ ಪುರುಷರಿಗೆ ಹೆಚ್ಚು ಬಾಯಿ ಕ್ಯಾನ್ಸರ್ ಬರುತ್ತದೆ. ಆದರೆ ಪ್ರಾಶ್ಯಾತ್ಯ ದೇಶಗಳಲ್ಲಿ ಹೆಂಗಸರೂ ಗಂಡಸರಷ್ಟೆ ಧೂಮಪಾನ, ತಂಬಾಕು ಬಳಕೆ ಮಾಡುವುದರಿಂದ ಇಬ್ಬರಿಗೂ ಬಾಯಿ ಕ್ಯಾನ್ಸರ್ ಬರುವ ಸಮಾನ ಸಾಧ್ಯತೆ ಇದೆ.

8. ಗೊಮೂತ್ರ ಕುಡಿಯುವುದರಿಂದ ಬಾಯಿ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗುತ್ತದೆ ಸರ್ಜರಿ ಅಗತ್ಯವಿಲ್ಲ.
ಗೋಮೂತ್ರ ಕ್ಯಾನ್ಸರ್‌ ಗುಣಪಡಿಸುತ್ತದೆ ಎಂಬುದರ ಬಗ್ಗೆ ಯಾವುದೇ ಪುರಾವೆ ಇಲ್ಲ ಮತ್ತು ದೀರ್ಘಕಾಲಿಕ ಸಂಶೋಧನೆ ನಡೆದಿಲ್ಲ. ಸರ್ಜರಿ ಬಾಯಿ ಕ್ಯಾನ್ಸರಿಗೆ ಸರಿಯಾದ ಚಿಕಿತ್ಸೆ ಎಂದು ಅಂಕಿ ಅಂಶಗಳಿಂದ ಮತ್ತು ಚರಿತ್ರೆಯಿಂದ ಸಾಬೀತಾಗಿದೆ.

9. ಸೆಲ್‍ಫೋನ್ ಜಾಸ್ತಿ ಬಳುಸುವುದರಿಂದ ಕ್ಯಾನ್ಸರ್ ಬರಲು ಸಾಧ್ಯತೆಇದೆಯಾ?
ಈ ವಿಚಾರದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದೆ. ದಿನವೊಂದರಲ್ಲಿ 6ರಿಂದ 10 ಗಂಟೆಗಳ ಕಾಲ ಮೊಬೈಲ್ ಬಳಸಿದಲ್ಲಿ, ಬಹಳಷ್ಟು ವಿಕಿರಣ ದೇಹಕ್ಕೆ ಮತ್ತು ಮೆದುಳಿಗೆ ಸೇರಿ ಜೀವಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ದೊರೆಯಬಹುದು.

10. ನಿರಂತವಾಗಿ ‘ಆಯಿಲ್ ಪುಲ್ಲಿಂಗ್’ ಮಾಡುವುದರಿಂದ ಬಾಯಿ ಕ್ಯಾನ್ಸರ್ ಬರುವುದಿಲ್ಲ ಇದು ನಿಜವೇ?
ಆಯಿಲ್ ಪುಲ್ಲಿಂಗ್ ಮತ್ತು ಬಾಯಿ ಕ್ಯಾನ್ಸರ್ ಬರದಿರುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಒಂದು ವಿಚಾರದ ಬಗ್ಗೆ ಸ್ಪಷ್ಟತೆ ಮತ್ತು ಸತ್ಯ ವಿಚಾರ ತಿಳಿಯಬೇಕಾದಲ್ಲಿ, ನಿರಂತರ ಸಂಶೋಧನೆ ನಡೆದು, ಪರಿಪೂರ್ಣ ಮಾಹಿತಿ ದೊರಕಿದ ಬಳಿಕವೇ ಸತ್ಯ ಹೊರ ಬರುತ್ತದೆ. ಆಯಿಲ್ ಪುಲ್ಲಿಂಗ್ ಮಾಡಿದರೆ ಬಾಯಿ ಕ್ಯಾನ್ಸರ್ ಬರುವುದಿಲ್ಲ ಎಂಬ ವಿಚಾರಕ್ಕೆ ಯಾವುದೇ ಪುರಾವೆ ಇರುವುದಿಲ್ಲ.

-ಡಾ. ಮುರಲೀ ಮೋಹನ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ

Related posts

Morning ಖಾರಾ ಬಾತ್: ಸ್ನೇಹದ ಬಂಧ- ಮೈತ್ರಿ ಧರ್ಮ

Upayuktha

ಇಂದು ಗೆಳೆಯರ ದಿನ: ಫ್ರೆಂಡ್‌ಶಿಪ್ಪಿನ ಕಥೆಯ ಕೇಳು ಫ್ರೆಂಡೇ ಫ್ರೆಂಡಿಷ್ಟಾನೆ…

Upayuktha

ವಿಶ್ವ ಮಾದಕ ದ್ರವ್ಯ ವಿರೋಧಿ ದಿನ (ಜೂ.26): ಮಾದಕ ದ್ರವ್ಯಗಳ ದಾಸ್ಯದಿಂದ ಮುಕ್ತಿ ಹೇಗೆ?

Upayuktha