ಜೀವನ-ದರ್ಶನ

ಗೆಳೆತನಕ್ಕೊಂದು ಭಾಷ್ಯ: ರಾಮ-ಹನುಮ; ಕೃಷ್ಣ-ಸುದಾಮ


ಮಾನವನ ಸುಂದರವಾದ ಬದುಕಿಗೆ ಪೂರಕವಾದಂಥ ಹಲವು ವಿಚಾರಗಳಲ್ಲಿ ಗೆಳೆತನವೂ ಒಂದು. ಈ ಗೆಳೆತನ ಎನ್ನುವುದು ವರದಾನವೂ ಹೌದು, ಕೆಲವೊಮ್ಮೆ ಶಾಪವೂ ಹೌದು. ಮಾನವನೊಬ್ಬ ಸಂಘಜೀವಿ. ಆತನಿಗೆ ಒಬ್ಬಂಟಿತನ ಕೂಡಿಬಾರದು. ಪ್ರತಿಕ್ಷಣದಲ್ಲೂ ಇನ್ನೊಬ್ಬರ ಸಹವಾಸ ಬೇಕೇಬೇಕು. ಹಾಗಿರುವಾಗ ಜೀವನ ಸಂಗಾತಿಯಾಗಿ ಒಬ್ಬ ಒಳ್ಳೆಯ ಗೆಳೆಯನಿದ್ದರೆ ಆತನೆ ಅದೃಷ್ಟವಂತ. ಗೆಳೆಯನೆಂದರೆ ತನ್ನ ಮನೆಯವನೂ ಆಗಬಹುದು. ನೆರೆಕರೆಯವನೂ ಆಗಬಹುದು. ಅಥವಾ ಸಂಬಂಧವೇ ಇಲ್ಲದವನೂ ಆಗಬಹುದು. ಅಂತು ತನ್ನ ಸುಖದುಃಖದಲ್ಲಿ ಸಮಭಾಗಿಯಾಗಿ ತನ್ನ ಹಿತವನ್ನೇ ಬಯಸುವ ನಿಸ್ವಾರ್ಥ ಮನೋಭಾವದ ಗೆಳೆತನ ಸಿಗುವುದೂ ದುರ್ಲಭವಲ್ಲದಿದ್ದರೂ ಅಪರೂಪವೇ. ಹಾಗೆಯೇ ಗೆಳೆತನದ ಕೆಲವು ಆಯಾಮಗಳನ್ನು ನೋಡೋಣ…

ಅಂದು ರಾಮಾಯಣ ಕಾಲದಲ್ಲಿ ಗೆಳೆತನಕ್ಕೆ ಹಲವು ಉದಾಹರಣೆಗಳಿವೆ. ಅದರಲ್ಲಿ ಮುಖ್ಯವಾಗಿ ಶ್ರೀರಾಮ ಸುಗ್ರೀವ, ಶ್ರೀರಾಮ ಹನುಮಂತ, ಶ್ರೀರಾಮ ವಿಭೀಷಣ ಮುಂತಾದವು… ಇದರಲ್ಲಿ ಸ್ನೇಹ ಅಥವಾ ಗೆಳೆತನದ ವಿಚಾರಕ್ಕೆ ಬಂದಾಗ ಸಾರ್ವಕಾಲಿಕವಾಗಿ ಆದರ್ಶವಾದದ್ದು ಶ್ರೀರಾಮ ಮತ್ತು ಹನುಮಂತನ ಗೆಳೆತನ. ಶ್ರೀರಾಮ ಅರಸನಾದರೂ ಹನುಮಂತ ದಾಸನಾದರೂ ಗೆಳೆತನಕ್ಕೆ ಇವರಿಗೆ ಯಾವತ್ತೂ ಅಂತಸ್ತು ಅಡ್ಡ ಬಂದಿಲ್ಲ. ಶ್ರೀರಾಮ ಹನುಮಂತನನ್ನು ತನ್ನ ಸಮಾನರಂತೆ ಅಪ್ಪಿಕೊಂಡು ಒಪ್ಪಿಕೊಂಡವನು. ಶ್ರೀರಾಮನ ಔನ್ನತ್ಯವೇ ಹನುಮಂತನ ಗುರಿ, ಹನುಮಂತನ ಶ್ರೇಯಸ್ಸೇ ಶ್ರೀರಾಮನ ಧ್ಯೇಯ. ಇದಲ್ಲವೇ ಗೆಳೆತನ.

ಅದೇರೀತಿ ಸುಗ್ರೀವನಾಗಲಿ ವಿಭೀಷಣನಾಗಲಿ ಗೆಳೆತನಕ್ಕೆ ಭಾಷ್ಯ ಬರೆದವರೇ. ಇಲ್ಲಿ ಸ್ವಾರ್ಥದ ಲವಲೇಶವೂ ಇರದು. ಹಾಗೆಯೇ ಮಹಾಭಾರತದಲ್ಲಿ ಕೂಡ ಗೆಳೆತನಕ್ಕೆ ಬಹಳಷ್ಟು ಉದಾಹರಣೆಗಳಿವೆ. ಶ್ರೀಕೃಷ್ಣ ರಾಧೆಯ ಗೆಳೆತನಕ್ಕೆ ಸಾಟಿ ಇದೆಯೇ. ಸುದಾಮ ಶ್ರೀಕೃಷ್ಣನ ಗೆಳೆತನಕ್ಕೆ ಎಣೆಯುಂಟೇ. ಅರ್ಜುನ ಶ್ರೀಕೃಷ್ಣರು ಜೀವದ ಗೆಳೆಯರೇ ಆಗಿರಲಿಲ್ಲವೇ.

ಈ ಎಲ್ಲ ಗೆಳೆತನವೂ ಆತ್ಮೋನ್ನತಿಗಾದರೆ ಇನ್ನು ಕೆಲವು ಉದಾಹರಣೆ ಕೊಡುವುದಾದರೆ, ಕರ್ಣ ಮತ್ತು ದುರ್ಯೋಧನನ ಗೆಳೆತನ. ಇದು ತೀರಾ ಸ್ವಾರ್ಥದಿಂದಲೇ ಕೂಡಿದ್ದರಿಂದ ಗೆಳೆತನದ ಇನ್ನೊಂದು ಮುಖದ ಪರಿಚಯ ನಮಗಾಗುತ್ತದೆ. ದರ್ಯೋಧನನಿಗೆ ಪಾಂಡವರಲ್ಲಿ ಹಗೆ. ಎದುರಿಸಲು ಸಾಧ್ಯವೇ ಇರದ ದೌರ್ಬಲ್ಯ. ಆಗಲೇ ಕರ್ಣ ಅಸಾಧ್ಯ ಪರಾಕ್ರಮಿ ಎಂಬುದೂ ಸಾಬೀತಾಗಿತ್ತು. ಕರ್ಣ ಮಾತ್ರ ಪಾಂಡವರಿಗೆ ಸಾಟಿ ಎಂಬ ಉದ್ದೇಶದಿಂದ ಆತ ಸೂತಪುತ್ರ ಎಂಬುದನ್ನೂ ಲೆಕ್ಕಿಸದೆ (ಆ ವೇಳೆಗೆ ಕರ್ಣ ಕುಂತಿ ಪುತ್ರ ಎಂದು ದುರ್ಯೋಧನನಿಗೆ ತಿಳಿದಿರಲಿಲ್ಲ) ಆತನಿಗೆ ರಾಜ್ಯ ಕೊಟ್ಟು ಅರಸನನ್ನಾಗಿ ಮಾಡಿ ಪಾಂಡವರೆದುರು ಯುದ್ಧ ಮಾಡಲಷ್ಟೇ ದಾಳವನ್ನಾಗಿ ಕರ್ಣನನ್ನು ಗೆಳೆಯನನ್ನಾಗಿ ಮಾಡಿಕೊಂಡದ್ದು ದುರ್ಯೋಧನನ ದುಷ್ಟತನಕ್ಕೆ ಸಾಕ್ಷಿಯಲ್ಲವೇ. ಇಂತಹ ಗೆಳೆತನ ಇಬ್ಬರನ್ನೂ ವಿನಾಶದೆಡೆಗೇ ಕೊಂಡೊಯ್ಯುವುದಲ್ಲದೆ ಇನ್ಯಾವ ಪುರುಷಾರ್ಥವೂ ಇರದು. ಆದ್ದರಿಂದ ಇತಿಹಾಸಗಳು ಗೆಳೆತನದ ಬಗ್ಗೆ ಹಲವಾರು ಆಯಾಮಗಳನ್ನು ತೋರಿಸಿವೆ. ಪಾಠ ನಾವು ಕಲಿಯಬೇಕಷ್ಟೆ.

ಇವತ್ತೂ ಹಾಗೇ ಅಲ್ಲವೇ ಗೆಳೆಯರು ನಮಗೆ ಬಹಳಷ್ಟು ಸಿಗಬಹುದು. ಆದರೆ ಶ್ರೀರಾಮ ಶ್ರೀಕೃಷ್ಣನಂಥವರು ಸಿಗುವುದು ಸಾಧ್ಯವೇ?
ಹಾಗೆಂದು ಅದನ್ನು ನಾವು ಕಲಿಯುಗದಲ್ಲಿ ಬಯಸಲೂ ಬಾರದು. ಇವತ್ತು ಹೆಚ್ಚಿನ ಸಂದರ್ಭಗಳಲ್ಲಿ ದುರ್ಯೋಧನ ನೀತಿಯೇ ಪ್ರಸ್ತುತ. ಆದರೂ ಬೆರಳೆಣಿಕೆಯ ಕೆಲವರಷ್ಟೇ ಮಂದಿ ಇಂದಿಗೂ ಅಂಥ ಗೆಳೆಯರು ಖಂಡಿತ ಇದ್ದಾರೆ. ನಾವು ಸಾತ್ವಿಕ ಚಿಂತನೆ ಇರುವ ಸ್ವಲ್ಪ ಮಟ್ಟಿಗಾದರೂ ನಿಸ್ವಾರ್ಥ ಮನೋಭಾವ ಬೆಳೆಸಿಕೊಂಡಿದ್ದರೆ ನಮಗೆ ಲೋಕವೂ ಅದೇ ರೀತಿ ಸ್ಪಂದಿಸುತ್ತದೆ. ಗೆಳೆತನ ಎನ್ನುವುದು ನಾವು ಇಟ್ಟುಕೊಂಡಂತೆ ಇದೆ. ಅಂತೆಯೇ ಪ್ರೀತಿ ಬೇರೆ ಗೆಳೆತನ ಬೇರೆ. ಉದಾಹರಣೆಗೆ ಗಂಡ ಹೆಂಡತಿ ಪ್ರೀತಿಯಿಂದ ಇರಬಹುದು ಆದರೆ ಅವರು ಒಳ್ಳೆಯ ಗೆಳೆಯರಾಗಿಬೇಕಿಲ್ಲ. ಒಂದು ವೇಳೆ ಬಾಳಸಂಗಾತಿ ಗೆಳೆಯನೂ(ಳೂ) ಆಗಿದ್ದರೆ ಅದರಷ್ಟು ದೊಡ್ಡ ಅದೃಷ್ಟವಿರಬಹುದೆ.

ಇತ್ತ ರಾಜಕಾರಣದಲ್ಲೂ ಇನ್ನೊಬ್ಬರನು ಹಣಿಯಲೆಂದೇ ಕೆಲವರು ಗೆಳೆಯರಾಗುತ್ತಾರೆ ಪಾಕಿಸ್ತಾನ ಚೀನಾದಂತೆ. ಅಂತೆಯೇ ಪರಸ್ಪರ ದೇಶಾಭಿವೃದ್ಧಿಗೋಸ್ಕರ ಇತರ ದೇಶಗಳೊಡನೆ ಗೆಳೆತನ ಮಾಡುವ ಮುತ್ಸದ್ದಿಗಳೂ ಇರುತ್ತಾರೆ ವಾಜಪೇಯಿ, ಮೋದೀಜಿಯಂತೆ. ಅಂತು ಈ ಗೆಳೆತನ ಎನ್ನುವುದು ಅನಾದಿಯಿಂದಲೂ ಅನಿವಾರ್ಯವೇ. ಈ ಗೆಳೆತನ ಎನ್ನುವ ಪ್ರಕ್ರಿಯೆ ಬರಿದೆ ಮಾನವರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕೂಡ ಇದೆ. ಸಾಕುಪ್ರಾಣಿಯಿಂದ ಕಾಡುಪ್ರಾಣಿಗಳವರೆಗೂ ಪರಸ್ಪರ ಪ್ರೀತಿಸಿ ಗೆಳೆಯರಂತೆ ಇರುವ ಅನೇಕ ಉದಾಹರಣೆಗಳಿವೆ. ಗೆಳೆತನವನು ಗಳಿಸಬೇಕು. ಗಳಿಸಿದ್ದನ್ನು ಉಳಿಸಬೇಕು. ಉಳಿಸಿದ್ದನ್ನು ಬೆಳೆಸಬೇಕು. ಅಂಥ ಬೆಳೆಯು ಸಮೃದ್ಧವಾಗಿಸಿ ನಗುನಗುತ ಬಾಳಬೇಕು.
************
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬಾಳಿಗೆ ಬೆಳಕು: ತಾಳುವಿಕೆಗಿಂತನ್ಯ ತಪವು ಇಲ್ಲ

Upayuktha

ಬಾಳೋಣ ಕೊನೆಯವರೆಗೂ… ಪಯಣವಿರಲಿ ಅಂತಿಮ ನಿಲುಗಡೆಯವರೆಗೂ

Upayuktha

ಬದುಕಿಗೆ ಪಾಠ ಏನಿದೆ ಮಹಾಭಾರತದಲ್ಲಿ..???

Upayuktha