ದೇಶ-ವಿದೇಶ ಪ್ರಮುಖ

ಎಲ್ಒಸಿಯಿಂದ ಎಲ್‌ಎಸಿ ತನಕ ಯೋಧರಿಂದ ತಕ್ಕ ಪ್ರತ್ಯುತ್ತರ: ಪಾಕ್, ಚೀನಾಕ್ಕೆ ಸಂದೇಶ

ನವದೆಹಲಿ: ನಮ್ಮ ಯೋಧರು ಏನು ಮಾಡಬಹುದು, ನಮ್ಮ ದೇಶ ಏನು ಮಾಡಬಹುದು ಎಂಬುದನ್ನು ಲಡಾಖ್‌ನಲ್ಲಿ ವಿಶ್ವವೇ ನೋಡಿದೆ. ಎಲ್ಒಸಿಯಿಂದ ಎಲ್ಎಸಿಯ ತನಕ ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವವರಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಪಾಕಿಸ್ತಾನ ಮತ್ತು ಚೀನಾಕ್ಕೆ ಮಾತಿನ ಚಾಟಿ ಬೀಸಿದ್ದಾರೆ.
ಶನಿವಾರ ದೆಹಲಿಯ ಕೆಂಪುಕೋಟೆಯಲ್ಲಿ ಮಾಡಿದ 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಚೀನಾ ಅಥವಾ ಪಾಕಿಸ್ತಾನದ ಹೆಸರು ಎತ್ತದೆಯೇ ಅವುಗಳ ದುಸ್ಸಾಹಸವನ್ನು ಪ್ರಧಾನಿ ಟೀಕಿಸಿದರು.
ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದ ಅವರು, ಭಯೋತ್ಪಾದನೆಯೇ ಇರಲಿ, ವಿಸ್ತರಣಾವಾದವೇ ಇರಲಿ, ಅವೆರಡರ ವಿರುದ್ಧವೂ ಭಾರತ ಹೋರಾಡುತ್ತದೆ. ಗಡಿ ನಿಯಂತ್ರಣ ರೇಖೆಯೇ ಇರಬಹುದು, ವಾಸ್ತವಿಕ ಗಡಿ ರೇಖೆಯೇ ಇರಬಹುದು, ಭಾರತ ಸವಾಲು ಎದುರಿಸಿದಾಗಲೆಲ್ಲಾ ನಮ್ಮ ಯೋಧರು ಅವರು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಆ ಎಲ್ಲಾ ವೀರ ಯೋಧರಿಗೆ ಕೆಂಪು ಕೋಟೆಯಿಂದ ನಾನು ಗೌರವ ವಂದನೆ ಸಲ್ಲಿಸುತ್ತೇನೆ ಎಂದರು.

ಇಂದು ಇಡೀ ವಿಶ್ವ ಭಾರತದೊಂದಿಗೆ ನಿಂತಿದೆ. ವಿಶ್ವಸಂಸ್ಥೆಯಲ್ಲಿ ಭದ್ರತಾ ಸಮಿತಿಯಲ್ಲಿನ ಸ್ಥಾನ (ಕಾಯಂ ಅಲ್ಲದ)ಕ್ಕಾಗಿ 192 ದೇಶಗಳ ಪೈಕಿ 184 ದೇಶಗಳ ಬೆಂಬಲವನ್ನು ಭಾರತ ಪಡೆದಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಬೊಟ್ಟು ಮಾಡಿದರು.
ಕೇವಲ ಭಾರತದೊಂದಿಗೆ ಗಡಿ ಹಂಚಿಕೊಂಡವರು ಮಾತ್ರ ನೆರೆಯವರಲ್ಲ, ಭಾವನೆಗಳು ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವವರೂ ಕೂಡಾ ನೆರೆಯವರಾಗಿದ್ದಾರೆ. ಭಾರತ ಇಂದು ಅದ್ಭುತ ನೆರೆಯ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಸ್ಪರ ಸಾಕಷ್ಟು ಗೌರವವನ್ನು ಹೊಂದಿದ್ದೇವೆ ಎಂದು ಹೇಳಿದರು.

ವೋಕಲ್ ಲೋಕಲ್ ಮಂತ್ರ ಅಳವಡಿಸಿಕೊಳ್ಳೋಣ
ಆತ್ಮ ನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತವು 130 ದೇಶವಾಸಿಗಳ ಮಂತ್ರವಾಗಬೇಕು ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ. ನಾವು 75ನೇ ಸ್ವಾತಂತ್ರ್ಯೋತ್ಸವದತ್ತ ಸಾಗುತ್ತಿದ್ದೇವೆ. ಈ ಹಂತದಲ್ಲಿ ವೋಕಲ್ ಫಾರ್ ಲೋಕಲ್ (ಸ್ಥಳೀಯತೆಗೆ ಧ್ವನಿ) ಆಗುವ ಅಂದರೆ, ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ವಾಗ್ದಾನವನ್ನು ಪ್ರತಿಯೊಬ್ಬ ಭಾರತೀಯರೂ ಮಾಡಬೇಕು. ಇನ್ನೆಷ್ಟು ದಿನ ನಾವು ಕಚ್ಚಾ ವಸ್ತುಗಳನ್ನು ರಫ್ತು ಮಾಡಿ ಅಂತಿಮ ಸರಕನ್ನು ಆಮದು ಮಾಡುತ್ತಾ ಕೂರುವುದು? ಈ ಚಕ್ರವನ್ನು ಕೊನೆಗೊಳಿಸುವ ಸಮಯ ಬಂದಿದೆ. ತಾನು ಬಳಸುವ ಪ್ರತಿಯೊಂದನ್ನು ಭಾರತವೇ ಉತ್ಪಾದಿಸಬೇಕಿದೆ. ಅಷ್ಟೇ ಅಲ್ಲ, ನಾವು ಬೆಳೆದಿದ್ದನ್ನು, ಉತ್ಪಾದಿಸಿದ್ದನ್ನು ವಿಶ್ವಕ್ಕೆ ರಫ್ತು ಮಾಡಬೇಕು. ನಮ್ಮ ವ್ಯಾಪಕ ನೈಸರ್ಗಿಕ ಸಂಪನ್ಮೂಲಗಳ ಬಳಕೆಗಾಗಿ ಮೇಕ್ ಇನ್ ಇಂಡಿಯಾ ಎನ್ನೋಣ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಮಾಡೋಣ ಎಂದು ಮೋದಿ ಹೇಳಿದರು.
ಭಾರತೀಯರ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಶಕ್ತಿಯ ಬಗ್ಗೆ ನನಗೆ ವಿಶ್ವಾಸವಿದೆ. ಒಂದು ನಿರ್ಧಾರ ಮಾಡಿಕೊಂಡು ಗುರಿಯತ್ತ ಸಾಗಿದರೆ ಉಳಿದದ್ದೆಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸೈಬರ್ ಭದ್ರತೆ
ಭಾರತವು ಶೀಘ್ರದಲ್ಲೇ ಸೈಬರ್ ಕ್ಷೇತ್ರದ ಭದ್ರತಾ ಕಾರ್ಯವ್ಯವಸ್ಥೆಯನ್ನ ಸ್ಥಾಪಿಸಲಿದೆ. ಸೈಬರ್ ಅಪಾಯಗಳು ಹೆಚ್ಚುತ್ತಿರುವ ಈ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ತ್ವರಿತ ಹೆಜ್ಜೆ ಇಡಲಾಗುತ್ತಿದೆ ಎಂದು ಪ್ರಧಾನಿ ಪ್ರಕಟಿಸಿದರು.

3 ದಶಕಗಳ ಬಳಿಕ ದೇಶಕ್ಕೆ ಒಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೀಡಲು ನಮಗೆ ಸಾಧ್ಯವಾಗಿದೆ. ಈ ಹೊಸ ನೀತಿಯು ನಮ್ಮ ವಿದ್ಯಾರ್ಥಿಗಳಿಗೆ ತಮ್ಮ ಮೂಲಬೇರಿನೊಂದಿಗೆ ಸಂಪರ್ಕವಿಟ್ಟುಕೊಂಡು ಜಾಗತಿಕ ನಾಗರಿಕರಾಗಿ ಬೆಳೆಯಲು ಅವಕಾಶ ನೀಡಲಿದೆ ಎಂದು ಹೇಳಿದರು.

ತಮ್ಮ ಸತತ 7ನೇ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೋದಿಯವರು ತೆಗೆದುಕೊಂಡ ಸಮಯ ಬರೋಬ್ಬರಿ 1 ಗಂಟೆ 26 ನಿಮಿಷಗಳು. ಪ್ರತಿ ವರ್ಷದಂತೆ ಅನೇಕ ಹೊಸ ಸಂಕಲ್ಪಗಳು, ಹೊಸ ಯೋಜನೆಯನ್ನು ಪ್ರಕಟಿಸಿದ ಪ್ರಧಾನಿಯವರು ತಮ್ಮ ಸರ್ಕಾರದ ಕಾರ್ಯಸಾಧನೆಯ ಮೆಲುಕು ಕೂಡಾ ಹಾಕಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವಿಕೆ, ರಾಮ ಮಂದಿರ ನಿರ್ಮಾಣ ಕಾರ್ಯದ ಆರಂಭದಂತಹ ವಿಷಯಗಳನ್ನೂ ಅವರು ಪ್ರಸ್ತಾಪಿಸಿದರು.

ಹಿಂದಿನ ಭಾಷಣಗಳ ಹೈಲೈಟ್
2014ರಲ್ಲಿ ತಮ್ಮ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸ್ವಚ್ಛ ಭಾರತ ಸಂಕಲ್ಪ ತೊಟ್ಟಿದ್ದರು. 2015ರಲ್ಲಿ ಎಲ್ಲಾ ಹಳ್ಳಿಗಳ ವಿದ್ಯುದೀಕರಣ ಗುರಿಯನ್ನು ಹಾಕಿಕೊಂಡಿದ್ದರು. 2016ರಲ್ಲಿ ಉದ್ಯಮ ನೀತಿ ಸರಳೀಕರಣದ ಪ್ರಸ್ತಾಪ ಮಾಡಿದ್ದರು. 2017ರಲ್ಲಿ ನವ ಭಾರತದ ಕನಸು ತೆರೆದಿಟ್ಟಿದ್ದರು. 2018ರಲ್ಲಿ ಮೋದಿಯವರ ಭಾಷಣ ಪ್ರಮುಖ ಅಂಶ ಬಡತನ ನಿರ್ಮೂಲನೆಯಾಗಿತ್ತು. ತಮ್ಮ ಎರಡನೇ ಅವಧಿಯ ಮೊದಲ ಸ್ವಾತಂತ್ರ್ಯೋತ್ಸವವಾದ 2019ರಲ್ಲಿ ಜನಸಂಖ್ಯೆ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಿದ್ದರು. ಈ ವರ್ಷ ಆತ್ಮ ನಿರ್ಭರ ಭಾರತವೇ ಭಾಷಣದ ಮೂಲ ವಸ್ತುವಾಗಿತ್ತು.

ಈ ಬಾರಿ ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿಯ ಸಂಭ್ರಮಾಚರಣೆಯ ಕಾರ್ಯಕ್ರಮದ ವೇಳೆಯಲ್ಲೂ ಭಾರೀ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರತಿಯೊಬ್ಬ ಆಹ್ವಾನಿತ ಅತಿಥಿಗಳು ಮಾಸ್ಕ್ ಧರಿಸಿದ್ದರು. ಪರಸ್ಪರ ಆರು ಅಡಿಗಳಷ್ಟು ಅಂತರದಲ್ಲಿ ಕುಳಿತಿದ್ದರು. ಮಿಲಿಟರಿ ಡ್ರಿಲ್‌ಗಳ ವೇಳೆಯೂ ಅಂತರ ಕಾಪಾಡಿಕೊಳ್ಳಲಾಗಿತ್ತು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಿ ವಕ್ಫ್‌ಬೋರ್ಡ್ ಆದೇಶ

Upayuktha

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4ರ ವರೆಗೆ: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಪ್ರಕಟಣೆ

Upayuktha

ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ

Upayuktha

Leave a Comment

error: Copying Content is Prohibited !!