ದೇಶ-ವಿದೇಶ ಪ್ರಮುಖ

ದೇಶದ ಮೊದಲ ಸಿಡಿಎಸ್ ಆಗಿ ಜ. ಬಿಪಿನ್ ರಾವತ್ ಅಧಿಕಾರ ಸ್ವೀಕಾರ, ಪ್ರಧಾನಿ ಮೋದಿ ಅಭಿನಂದನೆ

ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ (ಚಿತ್ರ: ಎಎನ್‌ಐ)

ಹೊಸದಿಲ್ಲಿ: ರಕ್ಷಣಾ ಸಿಬ್ಬಂದಿಗಳ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಜನರಲ್ ಬಿಪಿನ್ ರಾವತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದರು.

ದೇಶದ ಭದ್ರತೆ ವಿಚಾರದಲ್ಲಿ ಸಮಗ್ರ ಸುಧಾರಣೆಗಳನ್ನು ಮಾಡಲಾಗುತ್ತಿದ್ದು, ಈ ಸನ್ನಿವೇಶದಲ್ಲಿ ಸಿಡಿಎಸ್ ಹುದ್ದೆ ಅತ್ಯಂತ ಮಹತ್ವದ್ದಾಗಿದೆ. ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಆಧುನಿಕ ಸಮರತಂತ್ರಗಳ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

‘ಹೊಸ ವರ್ಷ ಮತ್ತು ಹೊಸ ದಶಕದ ಆರಂಭದಲ್ಲಿ ಭಾರತದ ರಕ್ಷಣಾ ಸಿಬ್ಬಂದಿಗಳ ಮೊದಲ ಮುಖ್ಯಸ್ಥರ ಹುದ್ದೆಗೆ ಜನರಲ್ ಬಿಪಿನ್ ರಾವತ್ ಅವರನ್ನು ನೇಮಿಸಲಾಗಿದೆ. ಇದು ನನಗೆ ಸಂತಸ ತಂದಿದ್ದು, ಅವರ ನೂತನ ಹುದ್ದೆಯಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ ಪ್ರಧಾನಿ ಮೋದಿ ಅವರು, ಕಾರ್ಗಿಲ್‌ ಯುದ್ಧದ ನಂತರದ ಚರ್ಚೆಗಳಲ್ಲಿ ಸಿಡಿಎಸ್ ಹುದ್ದೆ ರಚನೆ ಬಗ್ಗೆ ನಡೆದ ಚರ್ಚೆಗಳನ್ನು ಸ್ಮರಿಸಿಕೊಂಡಿದ್ದಾರೆ.

‘ಮೊದಲ ಸಿಡಿಎಸ್ ಅಧಿಕಾರ ಸ್ವೀಕರಿಸುತ್ತಿರುವ ಸನ್ನಿವೇಶದಲ್ಲಿ ನಾನು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಿ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಗೌರವ ನಮನ ಸಲ್ಲಿಸುತ್ತಿದ್ದೇನೆ. ಕಾರ್ಗಿಲ್‌ ಯುದ್ಧದಲ್ಲಿ ಶೌರ್ಯ ಪ್ರದರ್ಶಿಸಿ ನಮಗೆ ಗೆಲುವು ತಂದಿತ್ತ ಯೋಧರ ತ್ಯಾಗ ದೊಡ್ಡದು. ಮಿಲಿಟರಿ ಸುಧಾರಣೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇದೀಗ ದೇಶದಲ್ಲಿ ಆ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯೊಂದನ್ನು ಇಡಲಾಗಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ಸಿಡಿಎಸ್ ನೇಮಕದ ಬಗ್ಗೆ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಘೋಷಣೆ ಮಾಡಲಾಗಿತ್ತು. ‘ನಮ್ಮ ಸಶಸ್ತ್ರ ಪಡೆಗಳ ಆಧುನೀಕರಣದಲ್ಲಿ ಈ ಹುದ್ದೆ ಅತ್ಯಂತ ಪ್ರಮುಖವಾಗಿರುತ್ತದೆ. ಇದು 30 ಕೋಟಿ ಭಾರತೀಯರ ಆಶೋತ್ತರಗಳ ಪ್ರತಿಬಿಂಬವೂ ಹೌದು’ ಎಂದು ಮೋದಿ ತಿಳಿಸಿದ್ದಾರೆ.

ಮೂರೂ ಪಡಗಳ ಏಕೀಕರಣ, ಏಕೀಕೃತ ಯುದ್ಧ ಕಮಾಂಡ್‌ ರಚನೆ, ಥಿಯೇಟರ್ ಕಮಾಂಡ್ ವ್ಯವಸ್ಥೆಯ ಸೃಷ್ಟಿ ಮುಂತಾದ ಆಧುನಿಖರಣದ ಭಾಗವಾಗಿ ಅತ್ಯುನ್ನತವಾದ ಸಿಡಿಎಸ್ ಹುದ್ದೆ ಸೃಷ್ಟಿಸಲಾಗಿದೆ.

ನೂತನ ಸಿಡಿಎಸ್‌ ಹುದ್ದೆಯ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್‌ ಅಂತಿಮಗೊಳಿಸಲಿದ್ದಾರೆ.

ಗರಿಷ್ಠ ಬಳಕೆ ಹಾಗೂ ಸಮರ್ಥ ಬಳಕೆಗಾಗಿ ಸೇನಾ ಕಮಾಂಡ್‌ಗಳ ಪುನಾರಚನೆ, ಥಿಯೇಟರ್‌ ಕಮಾಂಡ್‌ ಸೃಷ್ಟಿ, ಕಾರ್ಯಾಚರಣೆಯಲ್ಲಿ ಮೂರೂ ಪಡೆಗಳ ಮಧ್ಯೆ ಹೆಚ್ಚಿನ ಸಮನ್ವಯತೆ ತರುವುದು ಈ ಹುದ್ದೆಯ ಪ್ರಾಥಮಿಕ ಕಾರ್ಯಸೂಚಿಯಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನವಭಾರತದಲ್ಲಿ ಭ್ರಷ್ಟಾಚಾರ, ಪಕ್ಷಪಾತ, ಭಯೋತ್ಪಾದನೆಗೆ ಜಾಗವಿಲ್ಲ: ಪ್ರಧಾನಿ ಮೋದಿ

Upayuktha

ಐಪಿಎಲ್ 2020: ಚೆನ್ನೈಗೆ ಮತ್ತೆ ಹೀನಾಯ ಸೋಲು, ಟೂರ್ನಿಯಿಂದ ಔಟ್ ಆಗುವ ಭೀತಿ

Upayuktha News Network

ಸೇನಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ ರಚನೆ ಘೋಷಿಸಿದ ಪ್ರಧಾನಿ ಮೋದಿ

Upayuktha