ರಾಜ್ಯ

ಟೊಮೆಟೊ ಚೆಲ್ಲುವುದು ತಪ್ಪಲಿದೆ, ಸೋಯಾ ತೈಲದಂಶ ಹೆಚ್ಚಲಿದೆ

ಜೈವಿಕ ತಂತ್ರಜ್ಞಾನ ತಜ್ಞ ಡಾ.ಚನ್ನಪ್ರಕಾಶ್ ಪ್ರತಿಪಾದನೆ

ಬೆಂಗಳೂರು: ತರಕಾರಿ, ಹಣ್ಣು, ಭತ್ತ, ಗೋಧಿಯಂತಹ ಬೆಳೆಗಳ ವಂಶವಾಹಿ ಪರಿವರ್ತನೆ ಇಂದು ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಮುಂದಿನ ದಿನಗಳಲ್ಲಿ ಅದು ರೈತರಿಗೆ ವರವಾಗಿ ಪರಿಣಮಿಸಲಿದೆ ಎಂದು ಆಹಾರ ಭದ್ರತೆ, ಜೈವಿಕ ತಂತ್ರಜ್ಞಾನದ ತಜ್ಞ ಹಾಗೂ ಸಂಶೋಧಕರಾದ ಡಾ.ಚನ್ನಪ್ರಕಾಶ್ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಟಿಎಸ್-2020 ಟೆಕ್ ಶೃಂಗಸಭೆಯಲ್ಲಿ ಶುಕ್ರವಾರ “ಔಷಧಗಳಾಗಿ ಆಹಾರ ಮತ್ತು ಪೌಷ್ಟಿಕಾಂಶ” ಕುರಿತ ಸಂವಾದದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಬೆಳೆಗಳ ವಂಶವಾಹಿಯಲ್ಲಿ ಪರಿವರ್ತನೆ ಮಾಡುವುದರಿಂದ ರೈತರಿಗೆ ಹಲವಾರು ಲಾಭಗಳಿವೆ. ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಇದಕ್ಕೆ ಅನುಮತಿ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ನಿಬಂಧನೆಗಳನ್ನು ಹೇರುವ ಸಂದರ್ಭದಲ್ಲಿ ಎಚ್ಚರಿಕೆಯ ನಿಲುವು ತಳೆಯಬೇಕು ಎಂದು ಸಲಹೆ ನೀಡಿದರು.

ಟೊಮೆಟೊದಲ್ಲಿ ಕ್ರಿಸ್ಪರ್ ವಂಶವಾಹಿಯಲ್ಲಿ ಪರಿವರ್ತನೆ ಮಾಡುವುದರಿಂದ ಅದು ಮಾಗುವ ಅಥವಾ ಹಣ್ಣಾಗಲು ತಗಲುವ ಅವಧಿ ಹೆಚ್ಚಾಗುತ್ತಾ ಹೋಗುತ್ತದೆ. ಅದರ ಕಾಪಿಡುವ ಅವಧಿ ಕೂಡ ಹೆಚ್ಚುತ್ತದೆ. ಇದರಿಂದಾಗಿ ಟೊಮೆಟೊ ಬೆಳೆಗಾರರು ತಮ್ಮ ಬೆಳೆಗಳನ್ನು ಹೆಚ್ಚು ಕಾಲ ಕಾಯ್ದಿಡಬಹುದು. ಅದನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು, ಬೆಲೆಯೇ ಸಿಗಲಿಲ್ಲ ಎಂದು ಬೀದಿ ಬದಿಯಲ್ಲಿ ಚೆಲ್ಲುವ ಪರಿಸ್ಥಿತಿ ತಪ್ಪುತ್ತದೆ. ನಾವು ಬೆಳೆದ ಪಸಲಿಗೆ ಉತ್ತಮ ಬೆಲೆ ದೊರೆಯಲು ಸಾಧ್ಯವಾಗುತ್ತದೆ ಎಂದು ಚನ್ನಪ್ರಕಾಶ್ ವಿವರಿಸಿದರು.

ಇದು ಟೊಮೆಟೊದಲ್ಲಿ ಮಾತ್ರವಲ್ಲ ಇತರ ತರಕಾರಿಗಳು, ಹಣ್ಣುಗಳು, ಗೋಧಿ, ಭತ್ತದಲ್ಲಿಯೂ ಸಾಧ್ಯವಿದೆ ಎಂಬುದನ್ನು ತಳಿ ವಿಜ್ಞಾನ ಸಾಬೀತು ಮಾಡಿ ತೋರಿಸಿದೆ. ಇದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಅತಿ ಮುಖ್ಯ. ಟೊಮೆಟೊದಲ್ಲಿನ ಲಿಕೊಪಿನ್ ಅಂಶವನ್ನು ಹೆಚ್ಚು ಮಾಡುವುದರಿಂದ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ ಗೆ ಕಡಿವಾಣ ಹಾಕಬಹುದು ಎಂದು ಅವರು ತಿಳಿಸಿದರು.

ಸೋಯಾಬೀನ್ ನ್ನು ಹೆಚ್ಚು ತೈಲದ ಅಂಶವಿರುವಂತೆ ವಂಶವಾಹಿ ಪರಿವರ್ತನೆ ಮಾಡಬಹುದು. ಜೊತೆ ಅದು ಬರಗಾಲದಂತಹ ಪರಿಸ್ಥಿತಿಯಲ್ಲಿಯೂ ಬೆಳೆಯಲು ಸಾಧ್ಯವಾಗುತ್ತದೆ. ನಾವು ಬೆಳೆಯುವ ಭತ್ತವನ್ನು ರೋಗ ಪ್ರತಿಬಂಧಕವಾಗಿ ಪರಿವರ್ತಿಸಲು ಹಾಗೂ ಮಧುಮೇಹ ಸ್ನೇಹಿ ಅಕ್ಕಿಯನ್ನು ಬಳಸುವಂತೆ ಮಾಡಲು ಸಾಧ್ಯವಾಗಿದೆ. ಅಕ್ಕಿಯ ಗಾತ್ರವನ್ನು ಹೆಚ್ಚು ಅಥವಾ ಕಡಿಮೆ ಮಾಡಲೂ ಇದರಿಂದ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುವಂಶವಾಹಿಗಳನ್ನು ಅಳವಡಿಸುವ ಹಾಗೂ ಪರಿವರ್ತಿಸುವ ಪ್ರಯೋಗಗಳು ನಡೆಯುತ್ತಲೇ ಇವೆ. ಇವನ್ನು ನಾವು ನಮ್ಮ ಆರೋಗ್ಯ, ಪೌಷ್ಟಿಕಾಂಶದ ದೃಷ್ಟಿಯಿಂದ ನೋಡಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ ಎಂದು ಡಾ.ಚನ್ನಪ್ರಕಾಶ್ ಮನವರಿಕೆ ಮಾಡಿದರು.

ಬೆಳೆಗಳಲ್ಲಿನ ವಂಶವಾಹಿಯಲ್ಲಿ ಮಾಡುವ ಮಾರ್ಪಾಡುಗಳು ಹೊಸದೇನೂ ಅಲ್ಲ. ಮನುಷ್ಯ ಗುಹೆಗಳನ್ನು ದಾಟಿ ಒಂದು ನಾಗರಿಕ ಸಮಾಜದಲ್ಲಿ ಜೀವನ ನಡೆಸುವ ದಿನದಿಂದಲೂ ನಡೆಯುತ್ತಲೇ ಬಂದಿದೆ. ನೂರಾರು ವರ್ಷಗಳ ಇತಿಹಾಸ ಇದಕ್ಕಿದೆ. ಈ ತನಕ ಅನೇಕ ತಂತ್ರಜ್ಞಾನ, ವಿಜ್ಞಾನ ಬೆಳೆದು ಬಂದಿದೆ. ಭಾರತದಲ್ಲಿ ಯಶಸ್ವಿಯಾಗಿರುವ ಬಿ.ಟಿ,ಹತ್ತಿ ಇದಕ್ಕೊಂದು ಸಾಕ್ಷಿ. ಉಳಿದೆಲ್ಲ ಸಾಂಪ್ರದಾಯಿಕ ಪದ್ಧತಿಗಳಿಗಿಂತ ಇದು ಸುಲಭ ಎಂದರು.

ಮತ್ತೊಬ್ಬ ಪೌಷ್ಟಿಕ ಆಹಾರ ತಜ್ಞ ಡಾ.ಶಶಿಕರಣ್ ಮಾತನಾಡಿ, ನಾವು ತಿನ್ನುವ ಆಹಾರವೇ ನಮಗೆ ಔಷಧವಾಗಬೇಕು. ಪೌಷ್ಟಿಕ ಆಹಾರ ಎನ್ನುವುದು ಕೆಲವೇ ಕೆಲವರಿಗಷ್ಟೇ ದಕ್ಕುವಂತೆ ಮಾಡುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟಕುವಂತಿರಬೇಕು. ಅದು ಈ ಸಮಾಜದ ಕರ್ತವ್ಯ ಕೂಡ ಹೌದು. ಇಂತಹ ಪರಿಕಲ್ಪನೆಯಲ್ಲಿ ನಮ್ಮ ನೀತಿಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಶಕ್ತಿವರ್ಧಕ ಆಹಾರಗಳನ್ನು ನೀಡುವ ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಪೌಷ್ಟಿಕಾಂಶದಿಂದ ಕೂಡಿದ ಆಹಾರವನ್ನು ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡುವುದು ಈಗಿನ ದಿನಮಾನಗಳಲ್ಲಿ ಮುಖ್ಯ. ಆದರೆ ಇದರ ಅಗತ್ಯ ಕೆಲವರಿಗೆ ಹೆಚ್ಚಾಗಿದ್ದರೆ ಕೆಲವರಿಗೆ ಕಡಿಮೆ ಇರುತ್ತದೆ. ಆ ಬಗ್ಗೆ ನಾವು ಯೋಚನೆ ಮಾಡಬೇಕು ಎಂದು ತಿಳಿಸಿದರು.

ಜೈವಿಕ ತಂತ್ರಜ್ಞಾನ ತಜ್ಞ ಡಾ. ವಿಲಾಸ್ ರಾವ್ ಸಂವಾದದಲ್ಲಿ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹನುಮಗಿರಿ ಕ್ಷೇತ್ರ ಕ್ಕೆ ಉಪ ಮುಖ್ಯಮಂತ್ರಿ ಸಿ ಎನ್ ಅಶ್ವತ್ಥ ನಾರಾಯಣ ಭೇಟಿ

Harshitha Harish

ಕೋವಿಡ್‌ 19 ಅಪ್ಡೇಟ್ಸ್‌: ರಾಜ್ಯದಲ್ಲಿಂದು 149 ಹೊಸ ಕೊರೊನಾ ಕೇಸ್

Upayuktha

ಹಿರಿಯ ಪತ್ರಕರ್ತ, ಸಾಹಿತಿ ಪಾಟೀಲ್ ಪುಟ್ಟಪ್ಪ ನಿಧನ

Upayuktha