ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಗೋಸ್ವರ್ಗದಲ್ಲಿ ಗೋದಿನ, ಆಲೆಮನೆ ಹಬ್ಬಕ್ಕೆ ಸಂಭ್ರಮದ ಚಾಲನೆ

ಸಿದ್ಧಾಪುರ (ಉ.ಕ): ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀಸಂಸ್ಥಾನ ಗೋಕರ್ಣ,  ಶ್ರೀರಾಮಚಂದ್ರಾಪುರಮಠ,  ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಾವಿರ ಗೋವುಗಳ ಆಶ್ರಯತಾಣವಾದ ಗೋಸ್ವರ್ಗದಲ್ಲಿ (ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಶ್ರೀರಾಮದೇವ ಭಾನ್ಕುಳಿಮಠದಲ್ಲಿ) ಪ್ರತಿ ವರ್ಷ ಸಂಕ್ರಾಂತಿಯನ್ನು ಗೋದಿನವಾಗಿ ಆಚರಿಸಲಾಗುತ್ತಿದೆ.

ಅದರಂತೆ ಈ ವರ್ಷ 14.01.2021 ರಿಂದ 17.01.2021 ರವರೆಗೆ ಗೋದಿನ ಮತ್ತು ಆಲೆಮನೆ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಗೋದಿನ ಸಮಿತಿ ಅಧ್ಯಕ್ಷ ಎಂ ಜಿ ರಾಮಚಂದ್ರ ಮರಡುಮನೆ ತಿಳಿಸಿದರು.

ಗೋಸ್ವರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ.14ರಂದು ಸಂಕ್ರಾಂತಿಯ ದಿನದಂದು ಗೋವುಗಳನ್ನು ಸಿಂಗರಿಸಿ, ಪೂಜಿಸಿ, ವಿಶೇಷ ಭಕ್ಷ್ಯಗಳಿಂದ ಸಂತರ್ಪಣೆ, ಜ. 15ರಂದು ಮಲೆನಾಡುಗಿಡ್ಡ ಗೋತಳಿಗಳನ್ನು ಉಳಿಸುವ ಕುರಿತಾದ ವಿಶೇಷ ಗೋಷ್ಠಿಗಳು, ಜ. 16ರಂದು ವಿದ್ಯಾರ್ಥಿಗಳ ಸಮಾವೇಶ, ಜ. 17ರಂದು ಮಾತೃತ್ವಂ ಸಮಾವೇಶ, ಮಾತೆಯರ ಮಾತೆಗೆ ಮಾತೆಯರಿಂದ ಸೇವಾಕಾರ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಕೃಷಿ ಬದುಕು ದೂರವಾಗಿ ಯಾಂತ್ರೀಕೃತ ಬದುಕಿನಲ್ಲಿ ಸಾಗುತ್ತಿರುವ ಜನರಿಗೆ ಮತ್ತೆ ಹಿಂದಿನ ಸಂಪ್ರದಾಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗೋಸ್ವರ್ಗದಲ್ಲಿ ಸಂಕ್ರಾಂತಿ ಸಮಯ ಗೋದಿನ ಮತ್ತು ಆಲೆಮನೆ ಹಬ್ಬವನ್ನು ನಾಲ್ಕು ದಿನಗಳ ಕಾಲ ವಿಶೇಷವಾಗಿ ಆಚರಿಸಲಾಗುತ್ತದೆ. ಜನಮಾನಸದಿಂದ ದೂರವಾಗುತ್ತಿರುವ ಸಾಂಪ್ರದಾಯಿಕ ‘ಆಲೆಮನೆ’ ನಿರ್ಮಿಸಿ, ಕಬ್ಬಿನ ಹಾಲು ತೆಗೆದು ಬೆಲ್ಲವನ್ನು ಕೂಡಾ ಮಾಡಲಾಗುತ್ತಿದೆ. ಜನಸಾಮಾನ್ಯರು ಇದರಲ್ಲಿ ಭಾಗವಹಿಸಿ ಗೋಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಗೋದಿನ ಸಮಿತಿ ಗೌರವಾಧ್ಯಕ್ಷ ಆರ್ ಎಸ್ ಹೆಗಡೆ ಹರ್ಗಿ ಹೇಳಿದರು.

ಸಂಕ್ರಾಂತಿ ಪರ್ವಕಾಲ:
ರೈತರು ವರ್ಷಪೂರ್ತಿ ಹಾಕುವ ಶ್ರಮದ ಫಲವಾಗಿ ಹೊಲಗದ್ದೆಗಳಲ್ಲಿ ಬೆಳೆದ ಬೆಳೆ, ಫಸಲಾಗಿ ದವಸ ಧಾನ್ಯಗಳು ಮನೆ ಸೇರಿ ಸಡಗರದಿಂದ ಕೂಡಿದ ಸುಗ್ಗಿಕಾಲ ಸಂಕ್ರಾಂತಿ. ಹೊಲಗಳಲ್ಲಿ ರೈತರ ಜತೆಗೆ ದುಡಿಯುವ ಎತ್ತುಗಳಿಗೂ ವಿಶ್ರಾಂತಿ ಲಭಿಸುವ ಸಮಯ ಇದೇ ಸಂಕ್ರಾಂತಿ.

ಸುಗ್ಗಿ ಸಂಕ್ರಾಂತಿಯಲ್ಲಿ ಗೋವುಗಳಿಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಹಸು,ಕರು, ಎತ್ತುಗಳಿಗೆ ಸ್ನಾನ ಮಾಡಿಸಿ ಅಲಂಕಾರ ಮಾಡಿ ಪೂಜೆ ಮಾಡುವ ಜತೆಗೆ ಧಾನ್ಯರಾಶಿಗೆ ಪೂಜೆ, ಕೃಷಿ ಸಲಕರಣೆಗಳ ಪೂಜೆಯೂ ಸಂಕ್ರಾಂತಿಯಂದು ವಿಶೇಷವಾಗಿರುತ್ತದೆ. ಸೂರ್ಯನು ಇದೇ ದಿನ ತನ್ನ ಪಥವನ್ನು ಬದಲಿಸುವ ಕಾರಣದಿಂದ ಪ್ರಕೃತಿಯಲ್ಲೂ ಬದಲಾವಣೆಯನ್ನು ಕಾಣಬಹುದಾಗಿದೆ.

ಗೋವಿಗೆ ವಿಶ್ರಾಂತಿ ನೀಡುವ ಪರ್ವದಂದು ಪ್ರತೀವರ್ಷ ಶ್ರೀಮಠದಲ್ಲಿ ಹರ್ಷದ ಸಮಯ, ಅದೇ ಸಂಕ್ರಾಂತಿ ಗೋದಿನ. ಈ ವರ್ಷದ ಹರ್ಷದಲ್ಲಿ ನಮ್ಮೊಡನೆ ಸಾರ್ವಜನಿಕರು ಭಾಗಿಯಾಗಲೆಂದು ಶ್ರೀಮಠದ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಗೋದಿನ ಸಮಿತಿ ಗೌರವಾಧ್ಯಕ್ಷ ಆರ್ ಎಸ್ ಹೆಗಡೆ ಹರ್ಗಿ, ಅಧ್ಯಕ್ಷ ಎಂ ಜಿ ರಾಮಚಂದ್ರ ಮರಡುಮನೆ, ಗೋಸ್ವರ್ಗ ಸಂಗ್ರಹ ಪ್ರಮುಖ ಗಣಪತಿ ಹೆಗಡೆ ಮೂಗಿಮನೆ, ಗೋದಿನ ಸಮಿತಿ ಉಪಾಧ್ಯಕ್ಷ ಎಂ ಎಂ ಹೆಗಡೆ ಮಗೇಗಾರು, ಕೋಶಾಧ್ಯಕ್ಷೆ ವೀಣಾ ಭಟ್, ಪ್ರಧಾನಕಾರ್ಯದರ್ಶಿ ಮಧು ಜಿ ಕೆ, ಸಂಚಾಲಕ ಡಾ. ರವಿ, ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ ಉಪಸ್ಥಿತರಿದ್ದರು.

ಪ್ರತಿದಿನದ ಕಾರ್ಯಕ್ರಮ ವಿವರ

14.01.2021
ಮಧ್ಯಾಹ್ನ 12.00 ಗೋದಿನ ಉದ್ಘಾಟನೆ
ಅಪರಾಹ್ಣ 2.30 ವಿಚಾರಗೋಷ್ಠಿ. ವಿಷಯ: ಧರ್ಮ ಮತ್ತು ಗೋವು

15.01.2021
ಮಧ್ಯಾಹ್ನ 12.00 ಗೋಸೇವೆಗಳ ಆರಂಭ, ಗೋಪೂಜೆ – ಗೋ ಸಂತರ್ಪಣೆ
ಅಪರಾಹ್ಣ 2.30 ವಿಚಾರ ಸಂಕಿರಣ – ಗ್ರಾಮೀಣ ಅಭಿವೃದ್ಧಿಯಲ್ಲಿ ಮಲೆನಾಡು ಗೋತಳಿ

16.01.2021
ಬೆಳಗ್ಗೆ 9.00 ವಿದ್ಯಾರ್ಥಿಗಳಿಗೆ ಅಂತರಜಿಲ್ಲಾ ಮಟ್ಟದ ಸ್ಪರ್ಧೆಗಳ ಆರಂಭ
ಬೆಳಗ್ಗೆ 10.30 ವಿಚಾರಗೋಷ್ಠಿ. ವಿಷಯ: ಕೃಷಿ ಮತ್ತು ಗೋವು
ಮಧ್ಯಾಹ್ನ 12.00 ಗೋಸೇವೆಗಳ ಆರಂಭ, ಗೋಪೂಜೆ – ಗೋ ಸಂತರ್ಪಣೆ
ಮಧ್ಯಾಹ್ನ 03.30 ಹರಿಕಥೆ
ಸಂಜೆ 4.00 ಶ್ರೀಸಂಸ್ಥಾನದವರೊಂದಿಗೆ ವಿಧ್ಯಾರ್ಥಿಗಳ ಸಂವಾದ – ಗುರುವಿನೊಂದಿಗೆ ಛಾತ್ರರು
ಸಂಜೆ 5.00 ಸಾಲಂಕೃತ ಗೋದಾನ

17.01.2021
ಬೆಳಗ್ಗೆ 5.00 ಸ್ವರ್ಗ ಸಂಗೀತ
ಬೆಳಗ್ಗೆ 7.00 ದಾಸ ಸಂಕೀರ್ತನೆ ಪ್ರಾರಂಭ
ಬೆಳಗ್ಗೆ 10.30 ವಿಚಾರಗೋಷ್ಠಿ. ವಿಷಯ: ಆಹಾರ, ಆರೋಗ್ಯ ಮತ್ತು ದೇಶೀ ಗೋವು
ಮಧ್ಯಾಹ್ನ 12.00 ಗೋಸೇವೆಗಳ ಆರಂಭ, ಗೋಪೂಜೆ – ಗೋ ಸಂತರ್ಪಣೆ
ಮಧ್ಯಾಹ್ನ 02.30 ಸಾಲಂಕೃತ ಗೋದಾನ
ಮಧ್ಯಾಹ್ನ 03.00 ಮಾತೃತ್ವಮ್ ಸಮಾವೇಶ
ದಿವ್ಯ ಉಪಸ್ಥಿತಿ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರಮಠ

ಪ್ರತಿದಿನ
ಮಧ್ಯಾಹ್ನ 12.00 ಗೋಸೇವೆಗಳು, ಗೋಪೂಜೆ – ಗೋ ಸಂತರ್ಪಣೆ
ಸಂಜೆ 4.00 ಆಲೆಮನೆ ಆರಂಭ
ಸಂಜೆ 6.00 ಸಾಂಸ್ಕೃತಿಕ ಕಾರ್ಯಕ್ರಮ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಾಗರ ಪಂಚಮಿ‌ ದಿನ ಸುಬ್ರಹ್ಮಣ್ಯದಲ್ಲಿ ನಾಗರ ಹಾವು ಪ್ರತ್ಯಕ್ಷ

Harshitha Harish

ಜನಸಾಮಾನ್ಯ ಭಕ್ತರ ದೈವ – ಶಬರಿಮಲೆ ಅಯ್ಯಪ್ಪ

Upayuktha

ವಿಶೇಷ ಆರೋಗ್ಯ ತಪಾಸಣಾ ಶಿಬಿರ

Upayuktha