ಆರೋಗ್ಯ ಪ್ರಮುಖ ಲೇಖನಗಳು

ವಸಡಿನಲ್ಲಿ ರಕ್ತಸ್ರಾವ ಆಗುವುದೇಕೆ? ಚಿಕಿತ್ಸೆ ಏನು?

ವಸಡು ನಮ್ಮ ಹಲ್ಲಿನ ಸುತ್ತ ಇರುವ ದಂತಾಧಾರ ಎಲುಬುಗಳ ಮೇಲ್ಪದರವನ್ನು ಮುಚ್ಚಿರುತ್ತದೆ. ಗಟ್ಟಿಯಾದ ಹಲ್ಲುಗಳ ದೃಢತೆಗೆ ಗುಲಾಬಿ ಬಣ್ಣದ ವಸಡಿನ ಸಹಕಾರ ಅತೀ ಅಗತ್ಯ. ಆರೋಗ್ಯವಂತ ವಸಡು ನಸುಗುಲಾಬಿ ಬಣ್ಣ ಹೊಂದಿದ್ದು, ಮುಟ್ಟಿದಾಗ ಅಥವಾ ಹಲ್ಲುಜ್ಜುವಾಗ ರಕ್ತಸ್ರಾವವಾಗುವುದಿಲ್ಲ. ವಸಡಿನ ಬಣ್ಣ ಕೆಂಪಗಾಗಿ, ವಸಡಿನಲ್ಲಿ ಹಲ್ಲುಜ್ಜುವಾಗ ರಕ್ತ ಒಸರಲು ಆರಂಭವಾದಲ್ಲಿ, ಅದು ವಸಡಿನ ಅನಾರೋಗ್ಯದ ಮುಖ್ಯ ಲಕ್ಷಣವಾಗಿರುತ್ತದೆ. ವಸಡಿನಲ್ಲಿ ರಕ್ತಸ್ರಾವವಾಗಲು ಹಲವಾರು ಕಾರಣಗಳು ಇವೆ. ವಸಡಿನಲ್ಲಿ ರಕ್ತಸ್ರಾವ ಒಂದು ಬಹಳ ಮುಜುಗರ ತರುವ ಮತ್ತು ಕಿರಿ ಕಿರಿ ಉಂಟು ಮಾಡುವ ಖಾಯಿಲೆಯಾಗಿರುತ್ತದೆ. ಕೆಲವೊಮ್ಮೆ ಎಂಜಲು ಉಗಿಯುವಾಗಲೂ ಕೆಂಪು ಮಿಶ್ರಿತ ಎಂಜಲು ಬರುವ ಸಾಧ್ಯತೆಯೂ ಇದೆ.

ವಸಡಿನ ರಕ್ತಸ್ರಾವಕ್ಕೆ ಕಾರಣಗಳು ಏನು?:
1. ವಸಡಿನ ಉರಿಯೂತ, ಪೆರಿಯೋಡೊಂಟೈಟಿಸ್ ಎಂಬ ಹಲ್ಲಿನ ಸುತ್ತಲಿನ ಅಂಗಾಂಗಗಳ ಖಾಯಿಲೆ ವಸಡಿನ ರಕ್ತಸ್ರಾವಕ್ಕೆ ಅತಿ ಮುಖ್ಯ ಕಾರಣವಾಗಿರುತ್ತದೆ.
2. ಪಯೋರಿಯಾ ಎಂಬ ವಸಡು ಸಂಬಂಧಿ ರೋಗ. ಈ ಖಾಯಿಲೆಯಲ್ಲಿ ವಸಡಿನಲ್ಲಿ ರಕ್ತಸ್ರಾವದ ಜೊತೆಗೆ ಹಲ್ಲುಗಳು ತನ್ನಿಂತಾನೇ ಅಲುಗಾಡುವ ಸಾಧ್ಯತೆಯೂ ಇದೆ.
3. ವಿಟಮಿನ್ ಸಿ ಮತ್ತು ಕೆ ಇದರ ಕೊರತೆಯಿಂದಾಗಿ ವಸಡಿನಲ್ಲಿ ರಕ್ತಸ್ರಾವವಾಗಬಹುದು.
4. ಲುಕೇಮಿಯಾ ಎಂಬ ರಕ್ತ ಕ್ಯಾನ್ಸರ್‍ನಿಂದಲೂ ವಸಡಿನಲ್ಲಿ ರಕ್ತ ಒಸರುವ ಸಾಧ್ಯತೆ ಇದೆ.
5. ರಕ್ತದಲ್ಲಿ ರಕ್ತ ತಟ್ಟೆಗಳು ಅಥವಾ ಫ್ಲೇಟ್‍ಲೆಟ್‍ಗಳ ಸಂಖ್ಯೆ 50 ಸಾವಿರಕ್ಕಿಂತಲೂ ಕಡಿಮೆಯಾದಲ್ಲಿ ವಸಡಿನಲ್ಲಿ ರಕ್ತ ಒಸರಲು ಆರಂಭವಾಗುತ್ತದೆ.
6. ಕುಸುಮ ರೋಗ, ರಕ್ತ ಹೆಪ್ಪುಗಟ್ಟದಿರುವ ರಕ್ತ ಸಂಬಂಧಿ ರೋಗಗಳು, ಆಸ್ಪರೀನ್ ಔಷಧಿಗಳ ಅತಿಯಾದ ಸೇವನೆ, ಹೆಪಾರಿನ್ ಮತ್ತು ವಾರ್‍ಫಾರಿನ್ ಎಂಬ ರಕ್ತ ಹೆಪ್ಪುಗಟ್ಟದಂತೆ ತೆಗೆದುಕೊಳ್ಳುವ ಔಷಧಿಗಳ ಅಡ್ಡ ಪರಿಣಾಮದಿಂದಾಗಿಯೂ ವಸಡಿನಲ್ಲಿ ರಕ್ತ ಸ್ರಾವವಾಗಬಹುದು.
7. ಅತೀ ಬಿರುಸಾದ ದಂತ ಕುಂಚದಿಂದ ಅತೀ ಜೋರಾಗಿ ಹಲ್ಲುಜ್ಜಿದಾಗ ವಸಡಿಗೆ ಗಾಯವಾಗಿ ರಕ್ತಸ್ರಾವವಾಗುವ ಸಾಧ್ಯತೆ ಇದೆ.
8. ಗರ್ಭಿಣಿ ಹೆಂಗಸರಲ್ಲಿ ರಸದೂತಗಳ ವೈಫರೀತ್ಯದಿಂದಾಗಿ ವಸಡುಗಳು ಊದಿಕೊಂಡು ರಕ್ತ ಒಸರುವುದು ಸರ್ವೆ ಸಾಮಾನ್ಯ.
9. ಲಿವರಿನ ತೊಂದರೆಗಳಿಂದ ವಸಡಿನಲ್ಲಿ ರಕ್ತಸ್ರಾವವಾಗಬಹುದು. ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಬೇಕಾದ ಎಲ್ಲಾ ಅಂಶಗಳು ಲಿವರಿನಲ್ಲಿ ಉತ್ಪಾದಿಸಲಾಗುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಲೀವರ್ ಹಾಳಾಗಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ತೊಂದರೆಯಾಗಿ ವಸಡಿನಲ್ಲಿ ರಕ್ತಸ್ರಾವವಾಗಬಹುದು.

ಚಿಕಿತ್ಸೆ ಹೇಗೆ?:
1. ಬಾಯಿಯ ಆರೋಗ್ಯವನ್ನು, ಹಲ್ಲುಗಳ ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುವುದು ಅತೀ ಅಗತ್ಯ. ವರ್ಷಕ್ಕೆ ಎರಡು ಬಾರಿ ದಂತ ವೈದ್ಯರ ಭೇಟಿ ಅತೀ ಅವಶ್ಯಕ. ವರ್ಷದಲ್ಲಿ ಒಮ್ಮೆ ದಂತ ವೈದ್ಯರ ಬಳಿ ಹಲ್ಲು ಶುಚಿಗೊಳಿಸತಕ್ಕದ್ದು. ಹಲ್ಲು ಸುತ್ತ, ದಂತಕಿಟ್ಟದಲ್ಲಿ ಒಸಡುಗಳ ಬಳಿ ಬೆಳೆದ ದಂತ ಕಿಟ್ಟಗಳನ್ನು ಮತ್ತು ದಂತ ಪಾಚಿಗಳನ್ನು ಶುಚಿಗೊಳಿಸಿದಲ್ಲಿ ವಸಡಿನ ಆರೋಗ್ಯ ಹಾಳಾಗುವುದಿಲ್ಲ, ಇಲ್ಲವಾದಲ್ಲಿ ದಂತಗಾರೆಯ ಸುತ್ತ ಬ್ಯಾಕ್ಟೀರಿಯಾಗಳು ಬೆಳೆದು, ವಸಡಿನ ಆರೋಗ್ಯವನ್ನು ಕುಂದಿಸಿ ರಕ್ತಸ್ರಾವವಾಗಲು ಕಾರಣವಾಗುತ್ತದೆ. ವಸಡಿನಲ್ಲಿ ರಕ್ತಸ್ರಾವವಾಗಲು ಅತೀ ಮುಖ್ಯ ಕಾರಣ, ಬಾಯಿ ಸ್ವಚ್ಛವಿಲ್ಲದಿರುವುದು ದಂತ ವೈದ್ಯರು ಬಾಯಿ ಶುಚಿಗೊಳಿಸಿದ ಬಳಿಕವೂ ರಕ್ತಸ್ರಾವ ಮುಂದುವರಿದಲ್ಲಿ ಹೆಚ್ಚಿನ ರಕ್ತ ಪರೀಕ್ಷೆ ಮತ್ತು ಇತರ ವೈದ್ಯರ ಸಲಹೆ ಅತೀ ಅಗತ್ಯ.
2. ಹಲ್ಲುಜ್ಜುವ ವಿಧಾನ ಮತ್ತು ಸೂಕ್ತವಾದ ದಂತ ಕುಂಚಗಳ ಬಳಕೆ ಅತೀ ಅವಶ್ಯಕ. ಅತೀ ಗಡುಸಾದ ದಂತ ಕುಂಚದಿಂದ ಜೋರಾಗಿ ಅಡ್ಡಾದಿಡ್ಡಿಯಾಗಿ ಹಲ್ಲುಜ್ಜಿದಲ್ಲಿ ವಸಡಿಗೆ ಹಾನಿಯಾಗಿ ರಕ್ತಸ್ರಾವವಾಗಬಹುದು. ಮೆದುವಾದ ದಂತ ಕುಂಚದಿಂದ ನಿಧಾನವಾಗಿ ಮೇಲೆ ಕೆಳಗೆ ಸರಿಯಾದ ಕ್ರಮದಿಂದ 2ರಿಂದ 3 ನಿಮಿಷ ಹಲ್ಲುಜ್ಜಬೇಕು. ಹಲ್ಲುಜ್ಜುವ ವಿಧಾನವನ್ನು ದಂತ ವೈದ್ಯರ ಬಳಿ ಕೇಳಿ ತಿಳಿಯತಕ್ಕದ್ದು.
3. ಯಾವ ಕಾರಣದಿಂದ ವಸಡಿನಲ್ಲಿ ರಕ್ತಸ್ರಾವವಾಗುತ್ತಿದೆ ಎಂಬುದರ ಮೇಲೆ ಚಿಕಿತ್ಸೆಯ ವಿಧಾನ ನಿರ್ಧಾರವಾಗುತ್ತದೆ. ವಿಟಮಿನ್ ಸಿ ಮತ್ತು ಕೆ ತೊಂದರೆ ಅಥವಾ ಕೊರತೆ ಇದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ. ವಿಟಮಿನ್ ಹೆಚ್ಚು ಇರುವ ಆಹಾರ ಸೇವನೆ ಅತೀ ಅಗತ್ಯ. ದಾಳಿಂಬೆ, ಪೇರಳೆ, ಕಿತ್ತಳೆ, ಟೊಮೆಟೊ, ಪಪ್ಪಾಯ, ಹಸಿರು ತರಕಾರಿ, ಅನಾನಸುಗಳಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ವಿಟಮಿನ್ ಕೆ ಹೆಚ್ಚು ಇರುವ ಹಸಿರು ತರಕಾರಿ, ಕ್ಯಾಬೇಜ್, ಈರುಳ್ಳಿ, ಬ್ರೊಕೋಲಿ ಸ್ಟ್ರಾಬೆರಿ ಹಣ್ಣು ಮುಂತಾದವುಗಳನ್ನು ಜಾಸ್ತಿ ಸೇವಿಸತಕ್ಕದ್ದು.
4. ರಕ್ತದ ಕ್ಯಾನ್ಸರ್ ಅಥವಾ ರಕ್ತ ತಟ್ಟೆಗಳ ಕೊರತೆಯಿಂದ ರಕ್ತಸ್ರಾವವಾಗಿದ್ದಲ್ಲಿ ವೈದ್ಯರು ರಕ್ತ ಪರೀಕ್ಷೆಯ ಮುಖಾಂತರ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.
5. ಗರ್ಭಿಣಿಯರಲ್ಲಿ ಉಂಟಾಗುವ ರಕ್ತಸ್ರಾವ ರಸದೂತಗಳ ವೈಫರೀತ್ಯದಿಂದಾಗಿ ಉಂಟಾಗುವುದು. ಮಗುವಿನ ಜನನದ ಬಳಿಕ ರಸದೂತಗಳು ಸಹಜ ಸ್ಥಿತಿಗೆ ಬಂದಾಗ ರಕ್ತಸ್ರಾವ ನಿಲ್ಲುತ್ತದೆ. ಆದರೆ ಗರ್ಭಿಣಿಯರಲ್ಲಿ ಬಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ.
6. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಲಿವರ್ ನಾಶವಾಗಿದ್ದಲ್ಲಿ ರಕ್ತಪೂರಣವೂ ಬೇಕಾಗಬಹುದು.
ಒಟ್ಟಿನಲ್ಲಿ ವಸಡಿನಲ್ಲಿ ರಕ್ತಸ್ರಾವ ಹತ್ತು ಹಲವು ಕಾರಣಗಳಿಂದ ಉಂಟಾಗುವುದರಿಂದ ದಂತ ವೈದ್ಯರ ಸಲಹೆ ಅತೀ ಅಗತ್ಯ. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ದಂತ ವೈದ್ಯರೇ ನಿಮ್ಮನ್ನು ಬೇರೆ ವೈದ್ಯರ ಬಳಿ ಕಳುಹಿಸಿ ಚಿಕಿತ್ಸೆಯನ್ನು ಪೂರ್ಣಗೊಳಿಸುತ್ತಾರೆ.

ತಡೆಗಟ್ಟುವುದು ಹೇಗೆ?:
1. ದಿನಕ್ಕೆರಡು ಬಾರಿ ಸರಿಯಾದ ಕ್ರಮದಿಂದ, ಮೆದುವಾದ ದಂತ ಕುಂಚದಿಂದ ಹಲ್ಲುಜ್ಜಬೇಕು, 2 ರಿಂದ 3 ನಿಮಿಷ ಹಲ್ಲುಜ್ಜಿದರೆ ಸಾಕು. 5-10 ನಿಮಿಷ ಹಲ್ಲುಜ್ಜಿದಲ್ಲಿ ಹಲ್ಲು ಮತ್ತು ದಂತ ಕುಂಚ ಹಾಳಾಗಬಹುದು.
2. ದಂತದಾರ ಅಥವಾ ದಂತ ಬಳ್ಳಿಯನ್ನು ದಿನನಿತ್ಯ ಉಪಯೋಗಿಸಿ ಹಲ್ಲುಗಳ ನಡುವೆ ಆಹಾರ ಕಣಗಳು ಸಿಕ್ಕಿ ಹಾಕದಂತೆ ನೋಡಿಕೊಳ್ಳಿ.
3. ಪ್ರತಿದಿನ ರಾತ್ರಿ ಮಲಗುವ ಮುನ್ನ ಸೋಂಕು ನಿವಾರಣ, ಬಾಯಿ ಮುಕ್ಕಳಿಸುವ ಔಷಧಿ ಅಥವಾ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಬಾಯಿಯನ್ನು ಮುಕ್ಕಳಿಸತಕ್ಕದ್ದು.
4. ಸಮತೋಲಿತ ಆಹಾರ ತಿನ್ನಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಇರುವ ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸಿ ಮುಸುಂಬಿ, ಕಿತ್ತಳೆ, ಪೇರಳೆ, ಸೇಬು ಹಣ್ಣು ವಸಡಿನ ಆರೋಗ್ಯ ಉತ್ತಮ.
5. ದಿನಕ್ಕೆ ಸಾಧ್ಯವಾದಷ್ಟು ಹೆಚ್ಚು ನೀರು ಸೇವಿಸಿರಿ, ಊಟದ ನಂತರ ನೀರು ಸೇವನೆ ಉತ್ತಮ. ನೀರು ದೇಹದ ಸರ್ವ ರೋಗಕ್ಕೂ ಉತ್ತಮ ಮದ್ದು. ವಸಡಿನ ಆರೋಗ್ಯಕ್ಕೆ ಅತೀ ಉತ್ತಮ.
6. ತಂಬಾಕು ಉತ್ಪನ್ನಗಳಾದ ಸಿಗರೇಟ್ ಗುಟ್ಕಾಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ, ಆಲ್ಕೋಹಾಲ್ ಸೇವನೆ ಕೂಡಾ ದೇಹದ ಆರೋಗ್ಯಕ್ಕೆ ಮಾರಕ.
7. ಅತಿಯಾದ ಬಿಸಿ ಮತ್ತು ತಣ್ಣಗಿನ ಆಹಾರವನ್ನು ಹೆಚ್ಚು ಸೇವಿಸಬೇಡಿ, ಇದು ಹಲ್ಲಿನ ಮತ್ತು ವಸಡಿನ ಆರೋಗ್ಯಕ್ಕೆ ಮಾರಕ.
8. ನಿಯಮಿತವಾಗಿ ದಂತ ವೈದ್ಯರ ಭೇಟಿ ಅತೀ ಅವಶ್ಯಕ. ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ ಮತ್ತು ವರ್ಷದಲ್ಲೊಮ್ಮೆ ದಂತ ವೈದ್ಯರಿಂದ ಹಲ್ಲು ಶುಚಿಗೊಳಿಸಕೊಳ್ಳುವುದು ವಸಡಿನ ಆರೋಗ್ಯಕ್ಕೆ ಅತೀ ಅಗತ್ಯ.

ಕೊನೆ ಮಾತು:
ವಸಡು ಎನ್ನುವುದು ಹಲ್ಲಿಗೆ ರಕ್ಷಣೆ ನೀಡುವ ರಕ್ಷಾ ಕವಚವಾಗಿದ್ದು ಹಲ್ಲಿನ ಸುತ್ತು ಇರುವ ದಂತದಾರ ಎಲುಬನ್ನು ಹಾಸಿಗೆಯಂತೆ ಮುಚ್ಚಿರುತ್ತದೆ. ಆರೋಗ್ಯವಂತ ವಸಡು, ನಸುಗುಲಾಬಿ ಬಣ್ಣದಿಂದ ಕಂಗೊಳಿಸುತ್ತದೆ. ಶುಭ್ರ ಬಿಳಿ ಬಣ್ಣದ ಹಲ್ಲಿಗೆ, ನಸು ಗುಲಾಬಿ ಬಣ್ಣದ ವಸಡು ಬೆರೆತಾಗ ನಗು ಎನ್ನುವುದು ನಯನ ಮನೋಹರವಾಗಿ ನೋಡುಗರ ಕಣ್‍ಮನಗಳನ್ನು ತಂಪಾಗಿಸುತ್ತದೆ. ಹಲ್ಲಿನ ಕತ್ತಿನ ಸುತ್ತ ಬಿಗಿದಪ್ಪಿ ಹಿಡಿದಿಟ್ಟುಕೊಂಡು, ವಸಡು ಹಲ್ಲಿಗೆ ಶಕ್ತಿಯನ್ನು ತುಂಬುತ್ತದೆ. ವಸಡಿನ ಒಳಗಿರುವ ಮೆಲನಿನ್ ಎಂಬ ವರ್ಣದ್ರವ್ಯದಿಂದಾಗಿ ವಸಡಿಗೆ ನಸುಗುಲಾಬಿ ಬಣ್ಣ ಬಂದಿರುತ್ತದೆ. ವಸಡಿನ ಬಣ್ಣ ಕೆಂಪಗಾದಲ್ಲಿ ವಸಡಿನ ಆರೋಗ್ಯ ಹದಗೆಟ್ಟಿದೆ ಎಂದರ್ಥ. ಆರೋಗ್ಯವಂಥ ವಸಡು ಮೃದುವಾಗಿರದೆ, ಗಟ್ಟಿಯಾಗಿರುತ್ತದೆ ಮತ್ತು ಹಲ್ಲುಜ್ಜುವಾಗ ರಕ್ತ ಬರುವುದಿಲ್ಲ. ವಸಡು ಮೃದುವಾಗಿ, ಬಣ್ಣ ಕೆಂಪಾಗಿ, ರಕ್ತ ಒಸರಲು ಆರಂಭವಾದಲ್ಲಿ ವಸಡಿನ ಆರೋಗ್ಯ ಹದಗೆಟ್ಟಿದೆ ಎಂದರ್ಥ. ತಕ್ಷಣವೇ ದಂತ ವೈದ್ಯರ ಭೇಟಿ ಮತ್ತು ಚಿಕಿತ್ಸೆ ಅತೀ ಅವಶ್ಯಕ. ಅದರಲ್ಲಿಯೇ ರೋಗಿಯ ಹಿತ ಅಡಗಿದೆ.

– ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323

Related posts

ಮೂಡುಬಿದಿರೆ: ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ- ‘ವಚನ ವಿವೇಕ’

Upayuktha

ಬೆಳ್ತಂಗಡಿ ಪ.ಪಂ ಯಲ್ಲಿ ಹತ್ತಾರು ಸಮಸ್ಯೆಗಳು: ಪರಿಹಾದ ನೀಡದ ಅಧಿಕಾರಿಗಳ ನಡೆ ವಿರುದ್ಧ ಪ.ಪಂ ಸದಸ್ಯರ ಆಕ್ರೋಶ

Sushmitha Jain

ಕೊರೊನಾ ವಿರುದ್ಧ ಸಮರ: ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ

Upayuktha