ಗ್ರಾಮಾಂತರ ಪ್ರಮುಖ ಸ್ಥಳೀಯ

ಮೂಲಭೂತ ಅವಶ್ಯತೆ ಈಡೇರಿಕೆಗೆ ಒತ್ತಾಯಿಸಿ ಗುತ್ತಿಗಾರು ಗ್ರಾಮ ಪಂಚಾಯತ್‌ ಮುಂದೆ ಧರಣಿ

ಗುತ್ತಿಗಾರು (ಸುಳ್ಯ):  ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಮಿಲ- ಮೊಗ್ರ- ಬಳ್ಳಕ್ಕ ಪ್ರದೇಶದ ಮೂಲಭೂತ ಸೌಲಭ್ಯ ಒದಗಿಸಲು ಒತ್ತಾಯಿಸಿ ಗುತ್ತಿಗಾರು ಗ್ರಾಮ ಪಂಚಾಯತ್‌ ಮುಂದೆ ನಾಗರಿಕ ಹೋರಾಟ ಕ್ರಿಯಾ ಸಮಿತಿ ಮೂಲಕ ಬುಧವಾರ ಧರಣಿ ನಡೆಯಿತು.

ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶವನ್ನು ಕೇಂದ್ರವಾಗಿರಿಸಿ ಕಮಿಲ, ಮೊಗ್ರ, ಬಳ್ಳಕ್ಕ ಪ್ರದೇಶದ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವು ವರ್ಷಗಳಿಂದ ಸೌಲಭ್ಯ ಒದಗಿಸಲು ಒತ್ತಾಯಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಗರಿಕ ಹೋರಾಟ ಕ್ರಿಯಾ ಸಮಿತಿ ಮೂಲಕ ಪಕ್ಷಾತೀತವಾಗಿ ಧರಣಿ ನಡೆಸಲಾಯಿತು.

ಸಭೆಯಲ್ಲಿ ಪ್ರಮುಖವಾಗಿ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಹಾಗೂ ಆರೋಗ್ಯ ಉಪಕೇಂದ್ರ ಮತ್ತು ಮತದಾನದ ಕೇಂದ್ರ ಸ್ಥಳಕ್ಕೆ ಸಂಪರ್ಕ ಕಲ್ಪಿಸಲು ತೊಂದರೆಯಾಗುತ್ತಿದೆ. ಮೊಗ್ರ ಹೊಳೆಗೆ ಸೇತುವೆ ರಚನೆಯ ಬೇಡಿಕೆ ಹಲವಾರು ವರ್ಷಗಳಿಂದ ಇದ್ದರೂ ಇದುವರೆಗೆ ಈಡೇರಿಕೆಯಾಗಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಶಾಲೆಯ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ತೆರಳಲು ಸಂಕಷ್ಟ ಪಡುತ್ತಿದ್ದಾರೆ. ಗ್ರಾಮ ಪಂಚಾಯತ್‌ ವತಿಯಿಂದ ತಾತ್ಕಾಲಿಕ ಕಾಲು ಸಂಕ ನಿರ್ಮಾಣ ಮಾಡುತ್ತಿದ್ದರೂ ಭಯದಿಂದಲೇ ದಾಟಬೇಕಾದ ಸ್ಥಿತಿ ಇದೆ. ಇದೂ ಅಲ್ಲದೆ ಏರಣಗುಡ್ಡೆ-ಮೊಗ್ರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನೇಕ ಮನೆಗಳು ಇವೆ. ಹೊಳೆಯ ಎರಡೂ ಕಡೆ ಕಾಲನಿಗಳು ಇದೆ. ಒಟ್ಟು ಸುಮಾರು 150 ಮನೆಗಳಿಗೆ ಮಳೆಗಾಲಕ್ಕೆ ಈ ಸೇತುವೆ ಕಾರಣದಿಂದಲೇ ಸಂಪರ್ಕ ಕಷ್ಟವಾಗುತ್ತಿದೆ ಎಂಬ ಒತ್ತಾಯ ಕೇಳಿಬಂದಿದೆ.

ಅಲ್ಲದೆ ಗುತ್ತಿಗಾರು – ಕಮಿಲ – ಬಳ್ಪ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇಡೀ ರಸ್ತೆ ಡಾಮರೀಕರಣ ಕಂಡಿಲ್ಲ. ಈಗ ವಾಹನ ಓಡಾಡಲು ತೀರಾ ಸಂಕಷ್ಟವಾಗಿದೆ.ಅನೇಕ ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಗ್ರಾಮದ ಜನರು ಸಹಿಸಿಕೊಂಡಿದ್ದಾರೆ. ಈಗ ಗುತ್ತಿಗಾರು-ಕಮಿಲ ಹಾಗೂ ಕಮಿಲ-ಬಳ್ಪ ರಸ್ತೆ ತೀರಾ ಹೊಂಡಗುಂಡಿಗಳಿಂದ ಕೂಡಿದ್ದು ವಾಹನ ಓಡಾಟವೇ ಕಷ್ಟ ಎನಿಸಿದೆ ಹೀಗಾಗಿ ತಕ್ಷಣವೇ ಸಂಪೂರ್ಣ ರಸ್ತೆ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು.

ಬಳ್ಳಕ್ಕ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ದುರಸ್ತಿ, ನೀರಿನ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ, ಭರವಸೆಗಳು ಮಾತ್ರವೇ ಲಭ್ಯವಾಗಿದ್ದು ವ್ಯವಸ್ಥೆಯಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ಧರಣಿಗೂ ಮುನ್ನ ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಗ್ರಾಮದ ಒಳಿತಿಗಾಗಿ ಪಕ್ಷಾತೀತವಾಗಿ ನಡೆಯುವ ಹಕ್ಕೊತ್ತಾಯಕ್ಕಾಗಿ ಪ್ರಾರ್ಥನೆ ನಡೆಸಲಾಯಿತು.

ಗುತ್ತಿಗಾರು ಗ್ರಾಮ ಪಂಚಾಯತ್‌ ಮುಂದೆ ನಡೆದ ಧರಣಿಯಲ್ಲಿ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪ್ರಮುಖರಾದ ಮಹೇಶ್‌ ಪುಚ್ಚಪ್ಪಾಡಿ , ಸುಧಾಕರ ಮಲ್ಕಜೆ, ಗಂಗಾಧರ ಭಟ್‌ ಪುಚ್ಚಪ್ಪಾಡಿ, ಎಂ ಕೆ ಶಾರದಾ ಮುತ್ಲಾಜೆ, ಬಿಟ್ಟಿ ಬಿ ನೆಡುನೀಲಂ, ಕಾರ್ಯಪ್ಪ ಗೌಡ ಚಿಕ್ಮುಳಿ, ಲಕ್ಷ್ಮೀಶ ಗಬ್ಲಡ್ಕ, ಜೀವನ್‌ ಮಲ್ಕಜೆ, ಮೋನಪ್ಪ ಬಳ್ಳಕ್ಕ, ವಿಶ್ವನಾಥ ಕೇಂಬ್ರೋಳಿ, ರಘುವೀರ್‌ ಎಂ ಆರ್‌, ಅಚ್ಚುತ ಮಲ್ಕಜೆ, ವೆಂಕಟ್ರಮಣ ಕೇಂಬ್ರೋಳಿ, ವಸಂತ ಮಲ್ಕಜೆ ಮಾತನಾಡಿದರು.

ಧರಣಿ ಸ್ಥಳಕ್ಕೆ ಆಗಮಿಸಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್‌ ಹಾಗೂ ಜಿಲ್ಲಾ ಪಂಚಾಯತ್‌ ಇಂಜಿನಿಯರ್‌ ಮಣಿಕಂಠ ಅವರು ಮನವಿ ಸ್ವೀಕರಿಸಿದರು. ಬಳಿಕ ಗುತ್ತಿಗಾರು ಕಮಿಲ ಬಳ್ಪ ರಸ್ತೆಗೆ ಅಭಿವೃದ್ಧಿ ಹಾಗೂ ಮೊಗ್ರ ಸೇತುವೆಯ ಇದುವರೆಗಿನ ಸ್ಥಿತಿಗತಿ ವಿವರಿಸಿದರು. ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯ ಅಚ್ಚುತ ಮಲ್ಕಜೆ ಸ್ವಾಗತಿಸಿ ಮಂಜುನಾಥ ಮುತ್ಲಾಜೆ ಕಾರ್ಯಕ್ರಮ ನಿರ್ವಹಿಸಿದರು. ವಸಂತ ಮಲ್ಕಜೆ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ್ವಿತೀಯ ಪಿಯುಸಿ: ಮೇ 24ರಿಂದ ಜೂ 16ರವರೆಗೆ ಪರೀಕ್ಷೆ

Upayuktha

ಉಡುಪಿ ಶ್ರೀಕೃಷ್ಣ ಮಠದಲ್ಲಿ ತಪ್ತಮುದ್ರಾ ಧಾರಣೆ

Upayuktha

ಹಸಿವು ನೀಗಿಸುವುದು ಪುಣ್ಯದ ಕೆಲಸ: ಮೇಯರ್

Upayuktha