ಕ್ರಿಕೆಟ್ ಕ್ರೀಡೆ ಸಾಧಕರಿಗೆ ನಮನ

ಭಾರತದ ‘ಕ್ರಿಕೆಟ್‌ ದೇವರು’ ಸಚಿನ್‌ ತೆಂಡುಲ್ಕರ್‌; ಕ್ರಿಕೆಟ್‌ ದಂತಕಥೆಗಿಂದು ಹ್ಯಾಪಿ ಬರ್ತ್‌ಡೇ

‘ಸಚಿನ್’ ಆ ಹೆಸರು ಕೇಳಿದೊಡನೆಯೆ ಏನೋ ರೋಮಾಂಚನ. ವಿಶ್ವದೆಲ್ಲೆಡೆ ಆದರಿಸಲ್ಪಟ್ಟ ಮಹಾನ್ ಆಟಗಾರನ ಕ್ರೀಡಾ ಜೀವನವೇ ಒಂದು ದಂತಕಥೆ. ಟೆನಿಸ್ ಆಟದೆಡೆ ಆಸಕ್ತಿ ಹೊಂದಿ ನಂತರ ವೇಗದ ಬೌಲಿಂಗ್ ಅಭ್ಯಸಿಸಿ ನಂತರ ಪರಿಣಿತರ ಸಲಹೆಯಂತೆ ಬ್ಯಾಟಿಂಗ್ ಕಡೆಗೆ ಮನಮಾಡಿದ ಸಚಿನ್ ವಿಶ್ವ ಶ್ರೇಷ್ಠನಾಗಿ ಬೆಳೆದದ್ದುಇತಿಹಾಸ.

ಮುಂಬಯಿಯ ಮಧ್ಯಮ ವರ್ಗದಲ್ಲಿ 24 ಎಪ್ರಿಲ್ 1973 ರಂದು ಹುಟ್ಟಿದ ಸಚಿನ್ ಕೈಗೆ ಬ್ಯಾಟ್ ಸಿಕ್ಕಿದ್ದು 11 ರ ಹರೆಯದಲ್ಲಿ.ಕುಟುಂಬದ ಪ್ರಿಯ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ರ ಮೇಲಿನ ಪ್ರೀತಿಯಿಂದ ಅವರ ಹೆಸರನ್ನೇ ಸಚಿನ್ ಗೆ ಇಡಲಾಯಿತು. 4 ಮಕ್ಕಳ ಪೈಕಿ ಕಿರಿಯ ಸಚಿನ್ ರ ಕ್ರಿಕೆಟ್ ಜೀವನದುದ್ದಕ್ಕೂ ಬೆನ್ನೆಲುಬಾಗಿ ನಿಂತವರು ಅಣ್ಣ ಅಜಿತ್. ರಮಾಕಾಂತ್ ಅಚ್ರೇಕರ್ ರವರ ಬಳಿ ತರಭೇತಿ ಸೇರಿದ ಸಚಿನ್ ಕ್ರಿಕೆಟ್ ಜೀವನದ ಟರ್ನಿಂಗ್ ಪಾಯಿಂಟ್ ಅದಾಗಿತ್ತು. ಕಠಿಣ ಅಭ್ಯಾಸ ದ ಮೂಲಕ ಸಚಿನ್ ರನ್ನು ತರಬೇತಿಗೊಳಿಸಿದ ರಮಾಕಾಂತ್ ಅಚ್ರೇಕರ್ ಸರ್ವಶ್ರೇಷ್ಠ ಆಟಗಾರನೊಬ್ಬನನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು. 14ರ ಹರೆಯದಲ್ಲೆ ಅತ್ಯುತ್ತಮ ಕಿರಿಯ ಆಟಗಾರ ಪ್ರಶಸ್ತಿಗೆ ಪಾತ್ರರಾದ ಸಚಿನ್ ಅದೇ ನನಗೆ ಸ್ಫೂರ್ತಿ ನೀಡಿತೆಂದು ಟೆಸ್ಟ್ ನಲ್ಲಿ ಸುನಿಲ್ ಗವಾಸ್ಕರ್ ರ 34 ಶತಕಗಳ ದಾಖಲೆಯನ್ನು ಮುರಿದಾಗ ಸ್ಮರಿಸಿಕೊಂಡಿದ್ದರು.

ಶಾಲಾ ದಿನಗಳಲ್ಲಿ ಗೆಳೆಯ ವಿನೋದ್ ಕಾಂಬ್ಳಿ ಜೊತೆಗೂಡಿ ಆಡಿದ ಪಂದ್ಯದಲ್ಲಿ ಮಾಡಿದ 664 ರನ್ನುಗಳ ಜೊತೆಯಾಟ ಆಟಗಾರನೊಬ್ಬನ ಉಗಮದ ಸೂಚನೆ ನೀಡಿತ್ತು. ನಂತರದ್ದು ಎಲ್ಲರಿಗೂ ಗೊತ್ತಿದೆ. ಆಡಿದ ಪ್ರಥಮ ಪ್ರಥಮ ದರ್ಜೆ ಪಂದ್ಯದಲ್ಲೆ ಮುಂಬಯಿ ಪರವಾಗಿ ಶತಕ ಬಾರಿಸಿದ ಸಚಿನ್ 16ನೇ ವರ್ಷದಲ್ಲಿ ಕರಾಚಿಯಲ್ಲಿ ಭಾರತದ ಪರವಾಗಿ ಕಣಕ್ಕಿಳಿದು ಟೆಸ್ಟ್ ಪಾದಾರ್ಪಣೆಗೈದ ಕ್ರಿಕೆಟ್ ಇತಿಹಾಸದ 2ನೇ ಕಿರಿಯ ಆಟಗಾರನೆನಿಸಿದರು. ಘಾತಕ ವಕಾರ್ ಯೂನೂಸ್ ರ ಮಾರಕ ಬೌನ್ಸರ್ ಮುಖಕ್ಕಪ್ಪಳಿಸಿದರೂ ಎದೆಗುಂದದೆ ಆಡಿದ ಸಚಿನ್ ಕೆಚ್ಚು ಅಂದೇ ವಿಶ್ವಕ್ಕೆ ಪರಿಚಯವಾಗಿತ್ತು.

ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಯಾರ್ಕಶೈರ್ ಪರವಾಗಿ ಆಡಿದ ಪ್ರಥಮ ವಿದೇಶಿಯನೆನಿಸಿದ ಸಚಿನ್ ಭಾರತ ಅಂದು ಎದುರಿಸುತ್ತಿದ್ದ ಹಣಕಾಸು ಸಂಕಷ್ಟದ ಸಮಯದಲ್ಲಿ ಕ್ರೀಡಾ ಪ್ರೇಮಿಗಳಿಗೆ ಹೊಸ ಭರವಸೆಯಂತೆ ಕಂಡುಬಂದರು.

ಸಚಿನ್‌ರ ಕೆಚ್ಚು,ಬ್ಯಾಟಿಂಗ್ ಸ್ಟೈಲ್ ಎಲ್ಲವು ಅವರನ್ನು ಕ್ರಿಕೆಟ್ ದೇವರೆಂದು ಜನರಿಂದ ಕರೆಯಿಸಿತು. ಲಿಟ್ಲ್ ಮಾಸ್ಟರ್, ಮಾಸ್ಟರ್ ಬ್ಲಾಸ್ಟರ್ ಎಂದು ಜನರಿಂದ ಹೊಗಳಿಸಿಕೊಂಡ ಸಚಿನ್ ಆಮೇಲೆ ಹಿಂದಿರುಗಿ ನೋಡುವುದೇ ಇಲ್ಲ.ಭಾರತೀಯ ಕ್ರಿಕೆಟ್ ನ ಸುವರ್ಣ ಅಧ್ಯಾಯವೊಂದು ಅಲ್ಲಿಂದ ಆರಂಭವಾಗುತ್ತದೆ.

ಸಚಿನ್ ಅಂದರೆ ಭಾರತ, ಭಾರತ ಎಂದರೆ ಸಚಿನ್ ಎಂದು ಎಲ್ಲರ ಬಾಯಲ್ಲಿ ನಲಿದಾಡಿದ ಸಚಿನ್ ಭಾರತ ತಂಡದ ಅವಿಭಾಜ್ಯ ಅಂಗವಾಗುತ್ತಾರೆ. ತನ್ನ ಆಕ್ರಮಣಕಾರಿ ಆಟದ ಮೂಲಕ ದಾಖಲೆಗಳನ್ನು ಪುಡಿಗೈಯ್ಯುತ್ತಲೇ ಸಾಗಿದ ಸಚಿನ್ ನಿಜ ಅರ್ಥದಲ್ಲಿ ಕ್ರಿಕೆಟ್ ದೇವರೆನಿಸುತ್ತಾರೆ. ತನ್ನ ಆಟದ ಜೊತೆಗೆ ಸೌಮ್ಯ ಸ್ವಭಾವ, ತೀರ್ಪಿಗೆ ಮರುಮಾತಾಡದೆ ಒಪ್ಪುವ ಗುಣ,ಸಹ ಆಟಗಾರರೊಂದಿಗಿನ ಹೊಂದಾಣಿಕೆ ಸಚಿನ್ ರನ್ನು ಆಟದ ಹೊರತಾಗಿ ಕೋಟ್ಯಾಂತರ ಜನ ಮೆಚ್ಚುವಂತೆ ಮಾಡುತ್ತದೆ. 2001 ರಲ್ಲಿ ಒಂದುದಿನದ ಪಂದ್ಯಗಳಲ್ಲಿ 10,000 ರನ್ ಗಳ ಗಡಿದಾಟುವ ಸಚಿನ್ 2003ರ ವಿಶ್ವಕಪ್ ನ ಸರಣಿ ಶ್ರೇಷ್ಠ ರೆನಿಸುತ್ತಾರೆ. 2005ರಲ್ಲಿ ಸುನಿಲ್ ಗಾವಸ್ಕಾರ್ ರ 34 ಟೆಸ್ಟ್ ಶತಕಗಳ ದಾಖಲೆ ಮುರಿಯುತ್ತಾರೆ, ಒಂದು ದಿನದ ಪಂದ್ಯಗಳಲ್ಲಿ ದ್ವಿಶತಕ ದಾಖಲಿಸಿದ ಪ್ರಥಮರೆನಿಸಿದ ಸಚಿನ್ ಕ್ರಿಕೆಟ್ ಜೀವನದ ಸುವರ್ಣ ಗಳಿಗೆ 2011 ರಲ್ಲಿ ಕಾಣುತ್ತದೆ. 6 ವಿಶ್ವಕಪ್ ಗಳಲ್ಲಿ ಆಡಿದರೂ ಟ್ರೋಫಿ ಎತ್ತುವ ಭಾಗ್ಯದ ಹಂಬಲಿಕೆ ಈಡೇರದ ಬೇಸರ 2011ರ ವಿಶ್ವಕಪ್ ನಲ್ಲಿ ದೂರವಾಗುತ್ತದೆ. ಭಾರತ ವಿಶ್ವ ಕಪ್ ಗೆಲ್ಲುತ್ತದೆ, ಸಚಿನ್ ಜೀವನದ ಮಹತ್ವಾಕಾಂಕ್ಷೆ ಈಡೇರುತ್ತದೆ.

1998ರ ಆಸ್ಟ್ರೇಲಿಯಾ ವಿರುದ್ಧದ ಶಾರ್ಜಾ ಕಪ್ ಪೈನಲ್, 1999ರ ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ, ಪಾಕ್ ವಿರುದ್ಧದ ಚೆನ್ನೈ ಟೆಸ್ಟ್, ಹೀರೋ ಕಪ್, ಆಸ್ಟ್ರೇಲಿಯಾ ವಿರುದ್ಧದ ಕೊಚ್ಚಿನ್ ಪಂದ್ಯ ಗಳೆಲ್ಲ ಸಚಿನ್ ಶ್ರೇಷ್ಠ ಫಾರ್ಮ್ ನ ಝಲಕ್ ಅಷ್ಟೆ.ಸುಮಾರು 24 ವರ್ಷಗಳ ಕಾಲ ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣವನ್ನೇ ನೀಡಿದ ಸಚಿನ್ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 100 ಶತಕ, 30,000ಕ್ಕೂ ಹೆಚ್ಚಿನ ರನ್ ಬಾರಿಸಿದ ಆಟಗಾರ. 2012ರಲ್ಲಿ ಭಾರತ ಸರ್ಕಾರ ಇವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡುತ್ತದೆ. 2013 ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುವ ಸಚಿನ್ 1995ರಲ್ಲೇ ಅಂಜಲಿಯವರನ್ನು ವಿವಾಹವಾಗಿರುತ್ತಾರೆ.

ವಿಸ್ಡನ್ ಪತ್ರಿಕೆ ಇವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಡಾನ್ ಬ್ರಾಡ್ಮನ್ ನಂತರದ ಹಾಗೂ ಒಂದು ದಿನದ ಪಂದ್ಯಗಳಲ್ಲಿ ವಿವಿಯನ್ ರಿಚರ್ಡ್ಸ್ ನಂತರದ ಸರ್ವಶ್ರೇಷ್ಠ ಆಟಗಾರ ಎಂದು ಗುರುತಿಸುತ್ತದೆ. ಟೈಮ್ ಮ್ಯಾಗಜೀನ್ ಪ್ರಕಟಿಸಿದ 2010 ರ ಅತ್ಯಂತ ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯಲ್ಲಿ ಸಚಿನ್ ಒಬ್ಬರು.

ಅರ್ಜುನ ಅವಾರ್ಡ್, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾಗುವ ಇವರನ್ನು ಭಾರತ ಸರ್ಕಾರ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಯೊಂದಿಗೆ ಗೌರವಿಸುತ್ತದೆ.

ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯೊಂದಿಗೆ ಬೆಳೆದ ಸಚಿನ್ ದೇಶದ ಕ್ರಿಕೆಟ್ ಇತಿಹಾಸದ ದಂತಕಥೆಯಾಗಿದ್ದಾರೆ. ಮಧ್ಯಮ ವರ್ಗದ ಹುಡುಗನೊಬ್ಬ ಕಠಿಣ ಪರಿಶ್ರಮದಿಂದ ಸರ್ವಶ್ರೇಷ್ಠನಾದ ಕಥನವೇ ಒಂದು ರೋಚಕ ಅಧ್ಯಾಯ. ಕೋಟ್ಯಾಂತರ ಅಭಿಮಾನಿಗಳ ಜನ-ಮಾನಸದಲ್ಲಿ ನೆಲೆಸಿರುವ ಕ್ರಿಕೆಟ್ ದೇವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
-ತೇಜಸ್ವಿ ಪೈಲಾರು, ಸುಳ್ಯ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಅಖಿಲ ಭಾರತ ಅಂತರ್‌ ವಿವಿ ಖೇಲೋ ಇಂಡಿಯಾ ಕ್ರೀಡಾಕೂಟ: ಆಳ್ವಾಸ್ ವಿದ್ಯಾರ್ಥಿಗಳಿಗೆ ಹಲವು ಪದಕಗಳು

Upayuktha

ಇಂದಿನ ಐಕಾನ್- ಭಾರತೀಯ ರಾಜಕಾರಣದ ಅಜಾತಶತ್ರು, ಭಾರತ ರತ್ನ ವಾಜಪೇಯಿಜಿ

Upayuktha

ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ: ವಿವೇಕಾನಂದ ಪ.ಪೂ ಕಾಲೇಜಿನ ಚರಿತ್ ಪ್ರಕಾಶ್‌ಗೆ ಬಹುಮಾನ

Upayuktha