ಪ್ರಚಲಿತ ವಿದ್ಯಮಾನಗಳು ಲೇಖನಗಳು

ಪ್ರತಿಭೆ ಎಂಬುದು ಪಾಪವೇ..? ಇಲ್ಲಿ ನೆಟ್ಟು ಬೆಳೆಸಿದ ವೃಕ್ಷ ಇನ್ನೆಲ್ಲೋ ಫಲ ಕೊಡುವುದು ತಪ್ಪಬೇಕು

ಚಿತ್ರ ಕೃಪೆ: ರಿಲೋಡ್ ಗ್ರೀಸ್)

ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಹಲವು ಪ್ರತಿಭೆಗಳ ಸಂಗಮವಾಗಬೇಕು. ಪ್ರತಿಭೆ ಬೆಳಕಿಗೆ ಬರುವ ಅವಕಾಶಗಳಿರಬೇಕು. ಅಂತೆಯೇ ಪ್ರತಿಭೆಗಳು ಸೋರಿ ಹೋಗದಂತೆ ತಡೆಹಿಡಿದುಕೊಳ್ಳುವಂಥ ದೇಶಾಭಿಮಾನ ಬೇಕು. ಅಲ್ಲಿ ಆ ದೇಶ ಅಭಿವೃದ್ಧಿಯಾದಂತೆಯೇ. ಹಾಗಿದ್ದಾಗ ಈ ಪ್ರತಿಭೆಗಳೆನ್ನುವುದು ದೇಶಕ್ಕೆ ವರದಾನವೇ ಆಗುತ್ತವೆ. ಯಾವುದೇ ದೇಶಗಳು ಮುಂದುವರಿದಿದೆ ಎಂದರೆ ಅದು ಪ್ರತಿಭೆಗಳಿಂದ ಮಾತ್ರ ಎನ್ನುವುದು ಕೂಡ ಅಕ್ಷರಶಃ ಸತ್ಯ.

ಆದರೆ ನಮ್ಮ ಭಾರತ ಮಾತ್ರ ಇದಕ್ಕೆ ಅಪವಾದ. ವಿಪರ್ಯಾಸವೆಂದರೆ ಇಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಪಂಚದಲ್ಲೇ ಶ್ರೇಷ್ಠವಾದ ಪ್ರತಿಭೆಗಳಿವೆ. ಆದರೆ ಅದರ ಪ್ರಯೋಜನ ಮಾತ್ರ ಇತರ ದೇಶಗಳಿಗೆ. ಇದು ಯಾಕೆ ಹೀಗಾಗುತ್ತದೆ? ಕಾರಣ ಸ್ಪಷ್ಟ. ಧನದ ಮೋಹ, ವಿದೇಶದ ವ್ಯಾಮೋಹ. ಭಾರತಾಂಬೆಯ ಮೇಲೆ ಅಭಿಮಾನ ಶೂನ್ಯತೆ. ತನ್ನ ಪ್ರತಿಭೆಗೆ ಈ ನೆಲ ಸರಿಯಾದುದಲ್ಲ ಎಂಬ ಭ್ರಮೆ. ಹೀಗೇ ಹಲವು ಕಾರಣಗಳಿದ್ದರೂ ಪರಿಣಾಮ ಒಂದೇ.

ಯಾವ ವಿದ್ಯೆ ಕಲಿಯಬೇಕಾದರೂ ಇಂದು ಹಿಂದಿನಂತೆ ಕಷ್ಟವಿಲ್ಲ. ಹೆತ್ತವರು ಗರಿಷ್ಠ ಪ್ರಮಾಣದ ಪ್ರಯತ್ನ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಅದರಂತೆಯೇ ಮಕ್ಕಳೂ ತಯಾರಾಗುತ್ತಾರೆ. ಈಗಿನ ಪರೀಕ್ಷಾ ಫಲಿತಾಂಶಗಳನ್ನು ನೋಡಿದಾಗ ಅರಿವಿಗೆ ಬರುತ್ತದೆ. ಒಂದೊಮ್ಮೆ 50/60 ಅಂಕಗಳನ್ನು ಪಡೆಯುವುದೇ ದೊಡ್ಡ ಸಾಧನೆ ಎಂದಾಗಿತ್ತು. ಆದರೆ ಈಗ ಹಾಗಲ್ಲ 100 ಅಂಕವೆನ್ನುವುದು ಸಾಮಾನ್ಯವಾಗಿದೆ. ಪ್ರತೀಯೊಂದು ಶಾಲೆಗಳಲ್ಲೂ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದವರೇ ಬಹಳಷ್ಟಿರುತ್ತಾರೆ. ಏನೇನೋ ಕಷ್ಟಪಟ್ಟು ಹಿರಿಯರು ಕಲಿಸಿದ ವಿದ್ಯೆಗೆ ಚೆನ್ನಾಗಿಯೇ ಸ್ಪಂದಿಸಿ ಬೆಳೆದ ಮಕ್ಕಳು ಮುಂದೆ ತಮ್ಮ ತಮ್ಮ ಪ್ರತಿಭೆಗಳನ್ನು ತಮ್ಮ ಊರಿಗಾಗಿ, ತಮ್ಮ ದೇಶಕ್ಕಾಗಿ ಎಷ್ಟು ವಿನಿಯೋಗಿಸುತ್ತಾರೆ ಎಂಬುದು ಒಳ್ಳೆಯ ಉತ್ತರ ಸಿಗುವ ಪ್ರಶ್ನೆಯಲ್ಲ. ಹೆತ್ತವರಿಗೆ ತಮ್ಮ ಮಕ್ಕಳು ಬುದ್ಧಿವಂತರಾಗಬೇಕೆನ್ನುವುದು ಸಹಜ.ಆದರೆ ಅದೇ ಮಕ್ಕಳು ವಿದ್ಯೆ ಕಲಿತು ವಿದೇಶಕ್ಕೆ ತೆರಳಿದರೆ ಹೆತ್ತವರ ಪಾಡು ಏನಾಗಬೇಡ? ಇರುವ ಒಂದೋ ಎರಡೋ ಮಕ್ಕಳನ್ನು ಮನೆಯಿಂದ ಹೊರಗೆ ವಿದ್ಯೆಯೆಂಬ ಬುತ್ತಿ ಕೊಟ್ಟು ಅಟ್ಟಿದಾಗ ತಾವು ಅನಾಥರಾಗುತ್ತೇವೆಂಬ ಪ್ರಜ್ಞೆ ಬಹುಷ: ಬಹಳಷ್ಟು ಹೆತ್ತವರಿಗೆ ಖಂಡಿತ ಇಲ್ಲ. ವಿದೇಶ ಮಾತ್ರ ಮಕ್ಕಳ ವಿದ್ಯೆಗೆ ಯೋಗ್ಯವೆಂಬ ಮಿಥ್ಯೆಯನ್ನು ಪ್ರಥಮವಾಗಿ ಹೆತ್ತವರೇ ದೂರ ಮಾಡಬೇಕು. ಎಂತಹ ವಿದ್ಯೆ ಕಲಿತರೂ ಭಾರತದಲ್ಲಿಯೇ ಅದಕ್ಕೆ ಬೇಡಿಕೆ ಇರುತ್ತದೆ. ಜತೆಗೆ ಹೆತ್ತವರೂ ಇದ್ದರೆ ಅಭಿವೃದ್ಧಿ ಎನ್ನುವುದು ಖಂಡಿತ ನಮ್ಮಿಂದಲೇ ಪ್ರಾರಂಭವಾಗುತ್ತದೆ.

ಉದಾಹರಣೆಗೆ ನಮ್ಮೂರಲ್ಲಿ ಒಳ್ಳೆಯ ಸಂಗೀತ ಕಲಿಸುವ ವಿದ್ವಾಂಸರೊಬ್ಬರಿದ್ದರು.ಬಹಳ ಚೆನ್ನಾಗಿ ಪಾಠ ಮಾಡಿ ಹಲವಾರು ಶಿಷ್ಯಂದಿರನ್ನು ತಯಾರು ಮಾಡಿದ್ದರು. ಸಾಕಷ್ಟು ಆದಾಯವೂ ಇತ್ತು. ತಮ್ಮ ಅದ್ಭುತ ಪ್ರತಿಭೆಯಿಂದ ತಮ್ಮಂಥ ಅನೇಕ ಸಾಧಕರನ್ನು ಸಮಾಜಕ್ಕೆ ಕೊಡುವ ಸಾಮರ್ಥ್ಯವೂ ಅವರಲ್ಲಿತ್ತು. ವಿದೇಶದ ವ್ಯಾಮೋಹವಿಲ್ಲದಿದದ್ದಲ್ಲಿ ದೇಶವೇ ಗುರುತಿಸುವ ಹಲವು ವಿದ್ವಾಂಸರನ್ನು ಅವರು ತಯಾರು ಮಾಡುತ್ತಿದ್ದುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಈಗ ಏನಾಗಿದೆ ಎಂದರೆ ನಮ್ಮ ಒಂದು ಅದ್ಭುತ ಪ್ರತಿಭೆ ನಮಗೆ ಉಪಯೋಗವಿಲ್ಲದೆ ಅಮೇರಿಕದಂತಹ ದೇಶಕ್ಕೆ ಉಪಯೋಗವಾಗುತ್ತದೆ. ಕಾರಣ ಹಲವಿರಬಹುದು.

ನಾವು ಕಷ್ಟಪಟ್ಟು ಸರ್ವ ಸುಖಗಳನ್ನು ತ್ಯಾಗ ಮಾಡಿ ಸಂಪದ್ಭರಿತ ನಿತ್ಯ ಫಲ ಕೊಡುವ ಕಲ್ಪವೃಕ್ಷವನ್ನು ತಯಾರು ಮಾಡಿ ಫಲ ಕೀಳಲು ಮಾತ್ರ ವಿದೇಶಕ್ಕೆ ಗುತ್ತಿಗೆ ನೀಡಿದಂತಾಗಲಿಲ್ಲವೇ? ಹಾಗಾದರೆ ‘ಮಕ್ಕಳು ಹೆಚ್ಚಿನ ವಿದ್ಯೆ ಕಲಿತರೆ ಹೆತ್ತವರು ಅನಾಥರಾಗುತ್ತಾರೆ’. (ಜತೆಗೆ ಮಾತೃಭೂಮಿಯೂ) ಎಂಬ ಹೊಸ ಗಾದೆ ಸೃಷ್ಟಿ ಮಾಡಬೇಕಾದೀತು. ಅದೇ ರೀತಿ ವೈದ್ಯರು, ವಿಜ್ಞಾನಿಗಳು, ಕೃಷಿಕರು ಇನ್ನಿತರ ಮೇಧಾವಿಗಳು, ಪ್ರತಿಭಾನ್ವಿತರು ನಮ್ಮ ದೇಶ ಮರೆತರೆ ಭಾರತದ ಗತಿಯೇನು? ಇಂತಹ ಪ್ರತಿಭಾ ಪಲಾಯನ ದೇಶಭಕ್ತಿಯಂತು ಖಂಡಿತ ಅಲ್ಲ. ದೇಶ ದ್ರೋಹವೆನ್ನಲು ಮನಸ್ಸು ಒಪ್ಪುತ್ತಿಲ್ಲ. ಒಂದು ಹಂತದವರೇಗೆ ಹಣ ಮುಖ್ಯವಾಗುತ್ತದೆ ಜೀವನಕ್ಕೆ. ಆದರೆ ಆ ಹಂತ ದಾಟಿದರೆ ಹಣ ಗೌಣವೇ. ಆದರೆ ಆ ಹಂತ ಯಾವುದೆನ್ನುವುದೇ ಯಕ್ಷ ಪ್ರಶ್ನೆ. ಹೆತ್ತವರನ್ನು, ಮಾತೃಭೂಮಿಯನ್ನು ಅನಾಥವಾಗಿಸುವ ವಿದ್ಯೆ ಅದು ವಿದ್ಯೆಯೇ ಅಲ್ಲ. ವಿದ್ಯಾವಂತರಾಗೋಣ. ಜತೆಗೆ ದೇಶಾಭಿಮಾನ ಬೆಳೆಸೋಣ. ನೆಮ್ಮದಿಯ ಸಂತೃಪ್ತ ಜೀವನವೇ ಸಿರಿತನ. ಉಳಿದೆಲ್ಲವೂ ಬಡತನ.
***********
-ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಅಂದು-ಇಂದು: ಚೋಮನ ನೆನಪು…

Upayuktha

ರಾಜಮನೆತನದ ಸುಪರ್ದಿಗೆ ಮರಳಿದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ: ಕಂಪ್ಲೀಟ್ ಡೀಟೇಲ್ಸ್

Upayuktha

ಚಟದಿಂದ ಚಟ್ಟ ಹತ್ತಿಸುವ ಇ-ಸಿಗರೇಟ್ ನಿಷೇಧ ಸ್ವಾಗತಾರ್ಹ

Upayuktha