ಆರೋಗ್ಯ ಲೇಖನಗಳು

ವೈದ್ಯ ಲೋಕದ ವಿಸ್ಮಯ – ಎಕ್ಮೊ

ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ವೈದ್ಯ ಲೋಕದಲ್ಲಿ ಹುಟ್ಟಿಕೊಳ್ಳುತ್ತಿದೆ. ಇತ್ತೀಚಿಗೆ ಇದಕ್ಕೆ ಸೇರ್ಪಡೆಗೊಂಡ ಇನ್ನೊಂದು ವಿಶಿಷ್ಟ ಯಂತ್ರವೇ ಎಕ್ಮೊ (ECMO) ಎಂಬ ಜೀವರಕ್ಷಕ ಯಂತ್ರ. ಒಬ್ಬ ವ್ಯಕ್ತಿ ಮಾರಣಾಂತಿಕವಾದ ಹೃದಯ ಮತ್ತು ಶ್ವಾಸಕೋಶಗಳ ಖಾಯಿಲೆಯಿಂದ ಬಳಲುತ್ತಿರುವಾಗ ಆತನ ಅಂಗಗಳಿಗೆ ಸೂಕ್ತವಾದ ಆಮ್ಲ ಜನಕದ ಪೂರೈಕೆ ಮಾಡಲು ಹುಟ್ಟಿಕೊಂಡ ಹೊಸ ಜೀವ ರಕ್ಷಕ ಯಂತ್ರವೇ ಈ ಎಕ್ಮೊ ಆಗಿರುತ್ತದೆ. ಆಂಗ್ಲ ಭಾಷೆಯಲ್ಲಿ ಇದನ್ನು ಎಕ್ಟ್ರಾಕಾರ್ಪೋರಿಯಲ್ ಮೆಂಬ್ರೆನಸ್ ಒಕ್ಸಿಜನೇಶನ್ ಎಂದು ಕರೆಯಲಾಗುತ್ತದೆ.

ಎಕ್ಟ್ರಾಕಾರ್ಪೊರಿಯಲ್ ಎಂದರೆ ದೇಹದ ಹೊರಗಿರುವ ಮತ್ತು ಮೆಂಬ್ರೆನ್ ಎಂದರೆ ಶ್ವಾಸಕೋಶದೊಳಗಿನ ತೆಳುವಾದ ಪೊರೆಗೆ ಸಮಾನದ ಪೊರೆಯಾಗಿರುತ್ತದೆ. ಈ ತೆಳುವಾದ ಪೊರೆಗಳ ಮುಖಾಂತರ ದೇಹದೆಲ್ಲೆಡೆ ನಿರಂತರವಾಗಿ ಆಮ್ಲಜನಕ ಮತ್ತು ಇತರ ಪೋಷಕಾಂಶಗಳು ರಕ್ತದ ಮುಖಾಂತರ ಸರಬರಾಜಾಗುತ್ತದೆ. ಈ ರೀತಿಯ ಯಂತ್ರದ ಸಹಾಯದಿಂದ ಬಹಳ ದಿನಗಳು ಮತ್ತು ವಾರಗಳವರೆಗೆ ರೋಗಿಯನ್ನು ಜೀವಂತವಾಗಿಡಲಾಗುತ್ತದೆ. ಮತ್ತು ರೋಗಿಯನ್ನು ಕಾಡುತ್ತಿರುವ ರೋಗವನ್ನು ಚಿಕಿತ್ಸೆ ಮಾಡಲು ವೈದ್ಯರಿಗೆ ಸೂಕ್ತ ಸಮಯ ಮತ್ತು ಕಾಲಾವಧಿ ದೊರಕುತ್ತದೆ. ಎಲ್ಲಾ ರೀತಿಯ ಜೀವ ರಕ್ಷಕ ಔಷಧಿಗಳು ನಿಷ್ಪ್ರಯೋಜಕವಾದಾಗ ಅಂದರೆ ಕೃತಕ ಉಸಿರಾಟದ ಯಂತ್ರದ (ವೆಂಟಿಲೇಟರ್) ಮೂಲಕ ಉಸಿರಾಡುವ ವ್ಯಕ್ತಿಗಳಿಗೆ, ಈ ಎಕ್ಮೊ ಯಂತ್ರ ವರದಾನವಾಗಿದೆ ಎಂದರೂ ತಪ್ಪಾಗಲಾರದು.

ತೆರೆದ ಹೃದಯದ ಆಪರೇಷನ್ ಸಂದರ್ಭದಲ್ಲಿ ಈ ರೀತಿಯ ಹೃದಯ ಮತ್ತು ಶ್ವಾಸಕೋಶಗಳನ್ನು ಬೈಪಾಸ್ ಮಾಡುವ ಯಂತ್ರವನ್ನು ಬಳಸಿ ಆಪರೇಷನ್ ಮಾಡಲಾಗುತ್ತದೆ. ಈ ತಂತ್ರಜ್ಞಾನವನ್ನು ಎಕ್ಮೊ ಯಂತ್ರದಲ್ಲಿ ಬಳಸಲಾಗಿದೆ. ಕೆಲವೊಮ್ಮೆ ಇದನ್ನು ಎಕ್ಮೊ ಲಂಗ್ ಅಥವಾ ಶ್ವಾಸಕೋಶ ಎಂದು ಕರೆಯುತ್ತಾರೆ. ಇದು ಬಹು ದೊಡ್ಡ ನಳಿಕೆಗಳ ಯಂತ್ರವಾಗಿದ್ದು ಶುದ್ಧೀಕರಿಸಿದ ಪ್ಲಾಸ್ಟಿಕ್ ನಳಿಕೆಗಳ ಮುಖಾಂತರ ರೋಗಿಯ ರಕ್ತ ಈ ಯಂತ್ರಕ್ಕೆ ಸೇರಿಕೊಂಡು ರಕ್ತದಲ್ಲಿನ ಮಲಿನವಾದ ಕಾರ್ಬನ್ ಡಯಕೈಡ್‍ನ್ನು ತೆಗೆದು, ಆಮ್ಲಜನಕವನ್ನು ಸೇರಿಸುತ್ತದೆ. ಒಂದು ಆರೋಗ್ಯವಂತ ಶ್ವಾಸಕೋಶ ಮಾಡುವ ಕೆಲಸವನ್ನು ಈ ಎಕ್ಮೊ ಯಂತ್ರ ದೇಹದ ಹೊರಗಡೆ ಮಾಡುತ್ತದೆ. ಇದೊಂದು ವೈದ್ಯ ಲೋಕದ ವಿಸ್ಮಯಕಾರಿ ಅವಿಷ್ಕಾರವಾಗಿದ್ದು ರೋಗಿಯ ಜೀವವನ್ನು ಉಳಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.

ಎಕ್ಮೊ ಯಂತ್ರದಲ್ಲಿ 2 ವಿಧಗಳಿವೆ.
1. ವಿನೊವೀನಸ್ ಎಕ್ಮೊ (V-V) ECMO: ಈ ಯಂತ್ರವನ್ನು ಹೃದಯದ ಕಾರ್ಯದಕ್ಷತೆ ಚೆನ್ನಾಗಿರುವಾಗ ಮತ್ತು ಕೇವಲ ಶ್ವಾಸಕೋಶಗಳಿಗೆ ಮಾತ್ರ ವಿಶ್ರಾಂತಿಯ ಅವಶ್ಯಕತೆ ಇರುವಾಗ ಬಳಸಲಾಗುತ್ತದೆ. ಮತ್ತು ಶ್ವಾಸಕೋಶಗಳಿಗೆ ವಿಶ್ರಾಂತಿ ನೀಡಿ ರೋಗದಿಂದ ಗುಣ ಮುಖವಾಗಲು ಅವಕಾಶ ನೀಡಲಾಗುತ್ತದೆ.
2. ವಿನೋ ಆರ್ಟಿರಿಯಲ್ ಎಕ್ಮೊ (V-A) ECMO: ಈ ಯಂತ್ರವನ್ನು ಹೃದಯ ಮತ್ತು ಶ್ವಾಸಕೋಶ ಎರಡಕ್ಕೂ ವಿಶ್ರಾಂತಿ ಮತ್ತು ಗಾಯ ಒಣಗಲು ಕಾಲಾವಧಿ ಬೇಕೆಂದಾಗ ಬಳಸುತ್ತಾರೆ.
ಅಮೇರಿಕಾದ ರೋಬಾರ್ಟ್ ಬಾರ್ಟ್‍ಲೆಟ್ ಎಂಬ ಸರ್ಜರಿ ಪ್ರೊಫೆಸರ್, ಯುನಿಯಸಿಟಿ ಓಫ್ ಮಿಚಿಗನ್ ಮೆಡಿಕಲ್ ಸ್ಕೂಲ್ ಇವರು ಈ ಎಕ್ಮೊ ಯಂತ್ರವನ್ನು ಕಂಡು ಹಿಡಿದರು.

ಎಲ್ಲಿ ಬಳಸಲಾಗುತ್ತದೆ:
1 ARDS ಎಂಬ ಶ್ವಾಸಕೋಶದ ವೈಫಲ್ಯವಾದ ಸಂದಂರ್ಭದಲ್ಲಿ.
2. ಹೃದಯಾಘಾತವಾಗಿ ಹೃದಯ ವೈಫಲ್ಯವಾದಾಗ.
3. ವಿಷಕಾರಕ ಆಹಾರ ಸೇವನೆಯಾದಾಗ.
4. ಸೋಂಕಿನಿಂದ ಉಂಟಾದ ಸೆಫ್ಟಿಕ್ ಶಾಕ್ ಸಂದರ್ಭದಲ್ಲಿ.
5. ಅಪಘಾತಗಳಲ್ಲಿ ಶ್ವಾಸಕೋಶಕ್ಕೆ ಗಾಯವಾದಾಗ.
6. ಥೈರೋಟೋಕ್ಸಿಕೋಸಿಸ್ ಎಂಬ ಥೈರಾಡ್ ಸಂಬಂಧಿತ ರೋಗಗಳಲ್ಲಿ.
7. ಪಲ್ಮೊನರಿ ಎಂಬೋಲಿಸಂ, ಹೃದಯಾಘಾತವಾಗಿ ಹೃದಯದ ಸ್ನಾಯುಗಳಿಗೆ ತೊಂದರೆಯಾದಾಗ.
8. ನೀರಲ್ಲಿ ಮುಳುಗಿ ಶ್ವಾಸಕೋಶಕ್ಕೆ ಹಾನಿಯಾಗಿ, ದೇಹದ ಉಷ್ಣತೆ ಕಡಿಮೆಯಾದಾಗ ಮತ್ತು ಔಷಧಿಯ ಡೋಸ್ ಜಾಸ್ತಿಯಾಗಿ ಅಂಗಗಳಿಗೆ ಹಾನಿಯಾದಾಗಲೂ ಈ ಎಕ್ಮೊ ಬಳಸಲು ಸಾಧ್ಯವಿದೆ.

ತೊಂದರೆಗಳು
1. ವಿಪರೀತ ರಕ್ತಸ್ರಾವವಾಗುವ ಸಾಧ್ಯತೆ ಇದೆ. ಬಾಹ್ಯ ರಕ್ತಸ್ರಾವದ ಜೊತೆಗೆ ಆಂತರಿಕ ರಕ್ತಸ್ರಾವವಾಗುವ ಸಾಧ್ಯತೆಯೂ ಇದೆ.
2. ಲಕ್ವ / ಸ್ಟೋಕ್ ಸಾಧ್ಯತೆ ಹೆಚ್ಚಾಗಿರುತ್ತದೆ.
3. ಸೋಂಕು ತಗಲುವುದು ಮತ್ತು ರಕ್ತದ ಪೂರೈಕೆ ವ್ಯತ್ಯಯವಾಗಿ ಗಾಯ ಒಣಗದೇ ಇರುವುದು ಅಥವಾ ಗ್ಯಾಂಗ್ರೀಗ್ ಆಗುವ ಸಾಧ್ಯತೆ ಇರುತ್ತದೆ.
4. ಹಿಮೋಲೈಸಿಸ್ ಮತ್ತು ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ.

ಎಲ್ಲಿ ಬಳಸಬಾರದು?
1. ತೀವ್ರವಾದ ನರ ಸಂಬಂಧಿ ರೋಗಗಳು.
2. ತಲೆಯೊಳಗೆ ಆಂತರಿಕ ರಕ್ತಸ್ರಾವ.
3. ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋದಾಗ.
4. ದೇಹದ ಹೆಚ್ಚಿನ ಎಲ್ಲಾ ಅಂಗಾಂಗಗಳ ವೈಫಲ್ಯವಿದ್ದಾಗ.
5. ಕೊನೆ ಹಂತದ ಕ್ಯಾನ್ಸರ್ ಇದ್ದಾಗ.
ಈ ಮೇಲೆ ತಿಳಿಸಿದ ಸಂದರ್ಭಗಳಲ್ಲಿ ಎಕ್ಮೊ ಯಂತ್ರದ ಬಳಕೆಯನ್ನು ಹೆಚ್ಚಾಗಿ ಮಾಡದಿರುವುದೇ ಒಳಿತು ಎಂದು ವೈದ್ಯರು ಸೂಚಿಸುತ್ತಾರೆ.

ಕೊನೆ ಮಾತು:
ಜೀವಕ್ಕೆ ಅಪಾಯವಾಗುವಂತಹ ಮಾರಣಾಂತಿಕ ಸಂದರ್ಭಗಳಲ್ಲಿ ಹೃದಯ ಮತ್ತು ಶ್ವಾಸಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇರುವ ಸನ್ನಿವೇಶಗಳಲ್ಲಿ ವೈದ್ಯರು ರೋಗಿಯ ಸಂಬಂಧಿಕರ ಸಮ್ಮತಿ ಪಡೆದು ಈ ಎಕ್ಮೊ ಯಂತ್ರದ ಮೊರೆ ಹೋಗುತ್ತಾರೆ ಮತ್ತು ರೋಗಿಗಳು ಈ ಯಂತ್ರದ ಸಹಾಯದಿಂದ ತಮ್ಮ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯ ಕ್ಷಮತೆಯನ್ನು ವೃದ್ಧಿಸಲು ಸಮಯವಾಕಾಶ ಪಡೆಯುತ್ತಾರೆ. ಈ ಯಂತ್ರದ ಬಳಕೆಯಿಂದ ಬದುಕಿ ಉಳಿಯುವ ಸಂಭವÀ 20ರಿಂದ 60ಕ್ಕೆ ಹೆಚ್ಚಿದೆ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಎಷ್ಟು ದಿನ ರೋಗಿಯನ್ನು ಈ ಯಂತ್ರದ ಮುಖಾಂತರ ಜೀವ ರಕ್ಷಣೆ ಮಾಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.
ಸಾಮಾನ್ಯವಾಗಿ ಕನಿಷ್ಠ 5 ದಿನಗಳ ಕಾಲ ಹೃದಯ ಮತ್ತು ಶ್ವಾಸಕೋಶಕ್ಕೆ ವಿಶ್ರಾಂತಿ ನೀಡಿ ರೋಗಿಗಳು ಚೇತರಿಸಲು ಅವಕಾಶ ಮಾಡಿ ಕೊಡಲಾಗುತ್ತದೆ. ಈ ಎಕ್ಮೊ ಯಂತ್ರದ ಬಳಕೆ ಜೊತೆಗೆ ಉಳಿದ ಎಲ್ಲಾ ಇತರ ಚಿಕಿತ್ಸೆಗಳನ್ನು ಮುಂದುವರಿಸುತ್ತಾರೆ. ಹೆಚ್ಚೆಂದರೆ 25 ರಿಂದ 30 ದಿನಗಳವರೆಗೆ ಈ ರೀತಿ ಎಕ್ಮೊ ಯಂತ್ರ ಬಳಸಬಹುದು. ದಿನಗಳು ಜಾಸ್ತಿಯಾದಂತೆ ತೊಂದರೆಗಳ ಸಾಧ್ಯತೆ ಹೆಚ್ಚಾಗಿರುತ್ತದೆ. ಎಕ್ಮೊ ಬಳಕೆಯಿಂದ ಮೆದುಳು ಮತ್ತು ನರ ಸಂಬಂಧಿ ರೋಗಗಳು ಸಂಭವಿಸುತ್ತದೆ ಎಂದೂ ತಿಳಿದು ಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮಾರಣಾಂತಿಕ ಶ್ವಾಸಕೋಶದ ಸೋಂಕು ಇರುವಾಗ ಮತ್ತು ಭೀಕರ ಹೃದಯಾಘಾತವಾಗಿ ಶಾಕ್‍ಗೆ ಒಳಗಾದಾಗ ಈ ಎಕ್ಮೊ ಬಳಕೆಯನ್ನು ವೈದ್ಯರು ಅನುಮೋದಿಸುತ್ತಾರೆ. ದೇಹದ ರಕ್ತನಾಳಗಳಿಗೆ ನಳಿಕೆಗಳ ಮುಖಾಂತರ ಈ ಎಕ್ಮೊ ಯಂತ್ರವನ್ನು ಜೋಡಿಸಲಾಗುತ್ತದೆ. ದೇಹದಲ್ಲಿನ ಮಲಿನ ರಕ್ತದಲ್ಲಿನ ಕಾರ್ಬನ್ ಡೈ ಆಕ್ಸೆಡ್ ತೆಗೆದು, ಆಮ್ಲಜನಕ ಸೇರಿಸಿ, ರಕ್ತವನ್ನು ಬೆಚ್ಚಗಾಗಿಸಿ ಪುನಃ ದೇಹದ ರಕ್ತ ನಾಳಗಳಿಗೆ ಶುದ್ಧ ರಕ್ತವನ್ನು ಸೇರಿಸುತ್ತದೆ. ಒಟ್ಟಿನಲ್ಲಿ ಹೃದಯ ಮತ್ತು ಶ್ವಾಸಕೋಶ ಮಾಡುವ ಕೆಲಸವನ್ನು ಈ ಯಂತ್ರ ಸುರಕ್ಷಿತವಾಗಿ ಮಾಡಿ ಹೃದಯ ಮತ್ತು ಶ್ವಾಸಕೋಶಗಳಿಗೆ ವಿಶ್ರಾಂತಿ ನೀಡುತ್ತದೆ.

-ಡಾ|| ಮುರಲಿ ಮೋಹನ್ ಚೂಂತಾರು
ದಂತ ವೈದ್ಯರು
ಸುರಕ್ಷ ದಂತ ಚಿಕಿತ್ಸಾಲಯ, ಹೊಸಂಗಡಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಗೋವಿನೊಂದಿಗೆ ಬದುಕು- ಬೆಳಗುವುದು ಬಾಳು

Upayuktha

ಆರೋಗ್ಯ ಬೇಕೆಂದರೆ ಧಾವಂತಕ್ಕೆ ಬ್ರೇಕ್ ಹಾಕಿ, ಹೃದಯಕ್ಕೆ ಸ್ಪೇಸ್ ಕೊಡಿ

Upayuktha

ವಿಶ್ವ ಮೂಲವ್ಯಾಧಿ ಜಾಗೃತಿ ದಿನ- ನವೆಂಬರ್ 20

Upayuktha

Leave a Comment