ಜಿಲ್ಲಾ ಸುದ್ದಿಗಳು ಪ್ರಮುಖ ಹವಾಮಾನ- ಭೂವಿಜ್ಞಾನ

ಮಳೆ, ಮಳೆ, ಮಳೆ…. ತೊಯ್ದು ತೊಪ್ಪೆಯಾದ ಕರಾವಳಿ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಕೃತಕ ನೆರೆ ಉಂಟಾಗಿದ್ದು ಮನೆಗಳು, ವಾಹನಗಳು ಮುಳುಗಡೆಯಾಗಿವೆ.

ಉಡುಪಿ ಜಿಲ್ಲೆಯಲ್ಲಿ ಶನಿವಾರದಿಂದಲೇ ಬಿರುಸಿನ ಮಳೆಯಾಗುತ್ತಿದ್ದು, ಬನ್ನಂಜೆ, ಇಂದ್ರಾಳಿ ಪರಿಸರದಲ್ಲಿ ಕೃತಕ ನೆರೆ ಉಂಟಾಗಿ ಮಳೆ ನೀರು ಮನೆಗಳಿಗೆ ನುಗ್ಗಿದೆ.

ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಗಾಳಿ ತೀವ್ರವಾದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಮಳೆ ಬಿರುಸಾಗಿದೆ.

ಭಾರೀ ಗಾಳಿಯ ಹೊಡೆತಕ್ಕೆ ಮಲ್ಪೆಯಲ್ಲಿ ಮೂರು ದೋಣಿಗಳು ಮುಳುಗಡೆಯಾಗಿವೆ. ಅವುಗಳಲ್ಲಿದ್ದ ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದು, ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ.

ಉಡುಪಿ: ಕೃಷ್ಣಮಠದ ರಾಜಾಂಗಣಕ್ಕೆ ನುಗ್ಗಿದ ಕೃತಕ ನೆರೆ ನೀರು

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆ ಮುಂದುವರಿದಿದ್ದು, ಹಲವೆಡೆ ನೆರೆ ಹಾಗೂ ಕೃತಕ ನೆರೆ ಉಂಟಾಗಿದೆ. ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದ ಒಳಗೆ ನೆರೆ ನೀರು ಪ್ರವೇಶಿಸಿದೆ.

ಉಡುಪಿ ಶ್ರೀಕೃಷ್ಣ ಮಠದ ಸನಿಹದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವು ಧಾರಾಕಾರವಾಗಿ ಮಳೆಗೆ ಮುಳುಗಡೆಯಾಗಿದೆ. ಕಲ್ಸಂಕ ಇಂದ್ರಾಣಿ ನದಿಯ ಅಕ್ಕ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬೈಲಕೆರೆಯಲ್ಲಿ ವಾಹನಗಳು ಮುಳುಗಡೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮಂಗಳಪದವು ಸಮೀಪ ಗುಡ್ಡೆ ಕುಸಿದು ಒಂದು ಮನೆ ಸಂಪೂರ್ಣ ನೆಲಸಮವಾಗಿದೆ. ತರಕಾರಿ ವ್ಯಾಪಾರಿಯೊಬ್ಬರ ಮನೆ ಕುಸಿದು ಬಿದ್ದಿದ್ದು, ಮನೆಯೊಳಗೆ ಆರು ಮಂದಿ ಇದ್ದರು. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು ಮನೆಯವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆಯ ಮಾಲಿಕ ಅಬ್ದುಲ್ಲ, ಅವರ ಪತ್ನಿ ಜೋಹಾರ್, ಮಕ್ಕಳಾದ ಅರ್ಫಾಝ್, ಇರ್ಫಾನ್, ತಸ್ಲಿಮಾ, ಮಿಶ್ರಿಯಾ ಗಾಯಗೊಂಡಿದ್ದಾರೆ. ಇವರನ್ನು ವಿಟ್ಲ ಹಾಗೂ ತುಂಬೆಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

21.9.20ರ ಬೆಳಿಗ್ಗೆ 8 ಗಂಟೆ ವರೆಗಿನ ಮುನ್ಸೂಚನೆ: ಉ.ಕ., ಕರಾವಳಿ ಮತ್ತು ದಕ್ಷಿಣ ಭಾಗ, ಉಡುಪಿ, ಶಿವಮೊಗ್ಗ, ದಾವಣಗೆರೆ ಪಶ್ಚಿಮ ಭಾಗಗಳಲ್ಲಿ ರೆಡ್‌ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.

ದ.ಕ., ಮಡಿಕೇರಿ, ಕೇರಳದ ಉತ್ತರ ಭಾಗಗಳಲ್ಲಿಯೂ ಭಾರಿ ಮಳೆ ಮುನ್ಸೂಚನೆ ಇದೆ. ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ.

ಉಡುಪಿಗೆ ಎಸ್‌ಡಿಆರ್‌ಎಫ್‌ ತಂಡ, ರಕ್ಷಣಾ ಹೆಲಿಕಾಪ್ಟರ್ ರವಾನೆ:

ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಕೆಲವು ಗ್ರಾಮಗಳು ಜಲಾವೃತಗೊಂಡಿರುತ್ತವೆ. ಹಾಗೂ ರಸ್ತೆ ಸಂಪರ್ಕವು ಕಡಿತವಾಗಿರುವುದರ ಕುರಿತು ನನ್ನ ಗಮನಕ್ಕೆ ಜಿಲ್ಲಾಡಳಿತ ತಂದ ತಕ್ಷಣ ನಮ್ಮ ರಾಜ್ಯದ ಒಂದು ಎಸ್.ಡಿ.ಆರ್.ಎಫ್ ತಂಡದ ಸುಮಾರು 250 ಸದಸ್ಯರನ್ನು ತಡರಾತ್ರಿಯೇ ಸ್ಥಳಕ್ಕೆ ಕಳುಹಿಸಿದ್ದು ಈಗಾಗಲೇ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಹಾಗೂ NDRF ತಂಡವೂ ಕೂಡ ಕೆಲವೇ ಸಮಯದಲ್ಲಿ ಸ್ಥಳಕ್ಕೆ ತಲುಪಲಿದ್ದು‌, ಜಿಲ್ಲಾಡಳಿತಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಹಾಗೂ ಈ‌ ಬಗ್ಗೆ ಕಂದಾಯ ಸಚಿವರಾದ ಆರ್ ಅಶೋಕ ಅವರ ಜೊತೆ ಮಾತನಾಡಿ ರಕ್ಷಣಾ ಇಲಾಖೆಯ ಒಂದು ಹೆಲಿಕಾಪ್ಟರ್ ನ್ನು ನೀಡಲು ಕೇಳಿಕೊಂಡಿರುತ್ತೇನೆ.

-ಬಸವರಾಜ ಬೊಮ್ಮಾಯಿ
ಗೃಹ ಸಚಿವರು, ಉಡುಪಿ ಹಾಗೂ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಚಂಡಮಾರುತ: ದ.ಕ, ಉಡುಪಿ, ಕಾಸರಗೋಡು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆಯೂ (ಅ.26) ರಜೆ

Upayuktha

ದ.ಕ., ಉಡುಪಿ ಕೊರೊನಾ ಪಾಸಿಟಿವ್ ಇಲ್ಲ, ಕಾಸರಗೋಡಿನಲ್ಲಿ ಎರಡು ಕೇಸ್

Upayuktha

ಕೊರೊನಾಗೆ ಆಯುರ್ವೇದ ಚಿಕಿತ್ಸೆ: ಪ್ರಾಯೋಗಿಕ ನೆಲೆಯಲ್ಲಿ ಆರಂಭಿಸಲು ರಾಜ್ಯ ಸರಕಾರ ಅನುಮತಿ

Upayuktha

Leave a Comment