ದೇಶ-ವಿದೇಶ

ರೂರಲ್ ಐಟಿ ಕ್ವಿಝ್ 2020ರ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಜಸ್ಥಾನದ ಹಿಮಾಂಶು

ರಾಷ್ಟ್ರೀಯ ಫೈನಲ್‌ ತಲುಪಿದ್ದ ಉಡುಪಿಯ ಸುಹಾಸ್ ಶೆಣೈ

ಬೆಂಗಳೂರು: ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವಾಲಯದ ಸಹಭಾಗಿತ್ವದಲ್ಲಿ ಐಟಿ ದಿಗ್ಗಜ ಟಿಸಿಎಸ್ ನಡೆಸುವ ರೂರಲ್ ಐಟಿ ಕ್ವಿಝ್‌ನ ರಾಷ್ಟ್ರೀಯ ಫೈನಲ್ಸ್‌ಲ್ಲಿ ರಾಜಸ್ಥಾನದ ಹಿಮಾಂಶು ಮಕರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ -2020ರಲ್ಲಿ ಶುಕ್ರವಾರ ಇದೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ರಾಷ್ಟ್ರೀಯ ಕ್ವಿಝ್ ಫೈನಲ್ ಸ್ಪರ್ಧೆ ನಡೆಯಿತು.

ರಾಜಸ್ಥಾನದ ಸೂರತ್‌ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿಯಾಗಿರುವ ಹಿಮಾಂಶು ಮೊದಲ ಸುತ್ತಿನಿಂದಲೇ ಪಟಪಟನೆ ಉತ್ತರಗಳನ್ನು ನೀಡುತ್ತಾ ಅಂತಿಮ ಸುತ್ತಿನ ತನಕ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 350 ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು ಜತೆಗೆ 1 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.

300 ಅಂಕಗಳನ್ನು ಗಳಿಸಿ ತುರುಸಿನ ಪೈಪೋಟಿ ನೀಡಿದ ಮಧ್ಯಪ್ರದೇಶದ ದೇವಾಸ್‌ನ ಎಕ್ಸಲೆನ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮನ್ ಕುಮಾರ್ ರನ್ನರ್ ಅಪ್ ಆದರು. ಇವರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು.

ಈ ಅಂತಿಮ ಸುತ್ತಿನಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಶೆಣೈ ಯು, ಗುಜರಾತ್‌ನ ಭಾವನಗರದ ಪರಸ್ ಗಥಾನಿ, ಛತ್ತೀಸ್‌ಗಢದ ರಾಯ್ಪುರದ ತೋಮನ್ ಸೇನ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸಾಕ್ಷಿ ಹಿಂದೂಜಾ ಫೈನಲ್‌ಗೇರಿದ್ದ ಇತರ ಸ್ಪರ್ಧಿಗಳಾಗಿದ್ದರು.

5 ಸುತ್ತಿನ ಸ್ಪರ್ಧೆ
ಬೈಟ್ ಅಬಂಡೆನ್ಸ್, ಟೆಕ್ ವಿಶನ್, ಟೆಕ್ ಕ್ಲೌಡ್, ಟೆಕ್ ಅಜೈಲ್ ಮತ್ತು ಟೆಕ್ ಎಕೋಸಿಸ್ಟಮ್ ಹೀಗೆ ಐದು ವಿಭಾಗಗಳಲ್ಲಿ ರಸಪ್ರಶ್ನೆಗಳನ್ನು ಕೇಳಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಗುರುತಿಸುವುದು, ಐಟಿ ಕಂಪನಿಗಳು, ಉತ್ಪನ್ನಗಳ ಲೋಗೋಗಳು, ಚಿತ್ರಗಳನ್ನು ಗುರುತಿಸಿ ಅವುಗಳ ಹಿನ್ನೆಲೆಯನ್ನು ವಿವರಿಸುವುದು, ಕಂಪನಿಗಳು, ಉತ್ಪನ್ನಗಳ ಅಸ್ತವ್ಯಸ್ತ ಹೆಸರುಗಳನ್ನು ಗುರುತಿಸುವುದು, ಕಂಪನಿಗಳ ಘೋಷವಾಕ್ಯಗಳನ್ನು ಗುರುತಿಸುವ ಸವಾಲನ್ನು ಒಡ್ಡಲಾಯಿತು. ರಾಷ್ಟ್ರೀಯ ಮಟ್ಟವಾಗಿದ್ದರಿಂದ ಪ್ರಶ್ನೆಗಳು ತುಸು ಕಠಿಣವಾಗಿಯೇ ಇದ್ದವು. ಪಿಕ್‌ಬ್ರೈನ್ ಎಂದೇ ಹೆಸರುವಾಸಿಯಾದ ಬಾಲಸುಬ್ರಮಣಿಂ ಕ್ವಿಝ್ ಮಾಸ್ಟರ್ ಆಗಿದ್ದರು.

ಯಶಸ್ವಿ 21ನೇ ಆವೃತ್ತಿ
ಮೆಟ್ರೋ, ರಾಜಧಾನಿ ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗಗಳ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಅರಿವು ಪರೀಕ್ಷಿಸುವ, ಐಟಿ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕಳೆದ 21 ವರ್ಷಗಳಿಂದ ಈ ಕ್ವಿಝ್ ನಡೆಯುತ್ತಿದ್ದು, ಈ ತನಕ 18 ದಶಲಕ್ಷ ಮಕ್ಕಳನ್ನು ಇದು ತಲುಪಿದೆ. 8 ರಿಂದ 12ನೇ ತರಗತಿಯ ತನಕದ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನಡೆಸಲಾಗುವ ಈ ಕ್ವಿಝ್ ಈಗಾಗಲೇ ಲಿಮ್ಕಾ ದಾಖಲೆ ಸೇರಿದೆ.

ಟಿಸಿಎಸ್‌ನ ಆಪರೇಶನ್ಸ್ ಮುಖ್ಯಸ್ಥ ಸುನಿಲ್ ದೇಶಪಾಂಡೆ ಅವರು ವರ್ಚುವಲ್ ಆಗಿ ಪ್ರಶಸ್ತಿ ವಿತರಣೆ ಮಾಡಿದರು. ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‌ನಾರಾಯಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸ್ವಾವಲಂಬಿ, ಸದೃಢ ಭಾರತವೇ ಗುರಿ; 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ ಪ್ರಧಾನಿ

Upayuktha

ದುರಂತ: ದೇವಸ್ಥಾನಕ್ಕೆ ಹೊರಟ 40ಜನರಿದ್ದ ದೋಣಿ ಮುಳುಗಡೆ;12ಮಂದಿ ನಾಪತ್ತೆ

Harshitha Harish

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಗಣನೀಯ ಇಳಿಕೆ; ಈ ವರೆಗೆ 765 ಬಂಧನ

Upayuktha