ನಗರ ಪ್ರಮುಖ ಸ್ಥಳೀಯ

8 ಲಕ್ಷ ರೂ ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ರತ್ನಾಕರ: ಗೃಹರಕ್ಷಕ ದಳದಿಂದ ಸನ್ಮಾನ

ಮಂಗಳೂರು: ಗುರುವಾಯನಕೆರೆಯ ಎಟಿಎಂನಲ್ಲಿ ಸಿಕ್ಕಿದ 8 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಗೃಹರಕ್ಷಕ ದಳದ ಸಿಬ್ಬಂದಿ ರತ್ನಾಕರ್ ಅವರನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಸೋಮವಾರ ಸನ್ಮಾನಿಸಲಾಯಿತು.

ಜಿಲ್ಲಾ ಗೃಹರಕ್ಷಕ ದಳದ ಮೇರಿಹಿಲ್ ಕಛೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ, ಗೃಹರಕ್ಷಕರಾದ ರತ್ನಾಕರ (ಮೆಟಲ್ ಸಂಖ್ಯೆ 891) ಅವರನ್ನು ಸನ್ಮಾನಿಸಲಾಯಿತು. ಅವರು ಬೆಳ್ತಂಗಡಿ ಘಟಕದ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗುರುವಾಯನಕೆರೆ ಪಿಲಿಚಂಡಿಕಲ್ಲು ನಿವಾಸಿ ರಹಮತ್ ಅವರು ಜ.1ರಂದು ಮಧ್ಯಾಹ್ನ ಗುರುವಾಯನಕೆರೆಯ ಎಟಿಎಂನಲ್ಲಿ ಬ್ಯಾಗನ್ನು ಮರೆತಿದ್ದರು. ಅದೇ ಎಟಿಎಂಗೆ ತೆರಳಿದ ಬೆಳ್ತಂಗಡಿ ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರಾದ ರತ್ನಾಕರ ಅವರು ಚಿನ್ನಾಭರಣದ ಬ್ಯಾಗನ್ನು ಗಮನಿಸಿ ಅದನ್ನು ಸ್ಥಳಿಯ ನವಶಕ್ತಿ ಮಾಲೀಕರ ಮೂಲಕ ವಾರಿಸುದಾರರಿಗೆ ಹಿಂದಿರುಗಿಸಿದ್ದರು.

ರತ್ನಾಕರ ಅವರ ಪ್ರಾಮಾಣಿಕತೆಯನ್ನು ಆ ಕುಟುಂಬದ ವತಿಯಿಂದ ವಿಶೇಷ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಇಂತಹ ಗೃಹರಕ್ಷಕರಿಂದ ಇಲಾಖೆಯ ಗೌರವ ಹೆಚ್ಚುತ್ತದೆ; ಸಿಕ್ಕಿದ ಬೆಲೆಬಾಳುವ ಚಿನ್ನಾಭರಣಗಳನ್ನು ತನ್ನದ್ದಲ್ಲವೆಂದು ಅರಿತು ವಾರಿಸುದಾರರಿಗೆ ಒಪ್ಪಿಸಿದ ರತ್ನಾಕರ ಅವರ ಪ್ರಾಮಾಣಿಕತನ ಇತರ ಗೃಹರಕ್ಷಕರಿಗೆ ಮಾದರಿಯಾಗಿದೆ ಎಂದರು. ಅವರ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಸಮಾದೇಷ್ಟರು ಶ್ಲಾಘಿಸಿದರು. ಇಂತಹ ಗೃಹರಕ್ಷಕರು ಸಮಾಜದ ಆಸ್ತಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪರಿಸರವಾದಿ ಮಾಧವ ಉಳ್ಳಾಲ ಇವರು ಮಾತನಾಡಿ, ಬೆಳ್ತಂಗಡಿ ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರತ್ನಾಕರ ಅವರ ಸಾಧನೆಯನ್ನು ಶ್ಲಾಘಿಸಿದರು.

ಇನ್ನೋರ್ವ ಅತಿಥಿ ಜೆಸಿಐ ಮಂಗಳೂರು ಪ್ರಾಂತ್ಯದ ದೀಪಕ್ ಅವರು ಮಾತನಾಡಿ ತಾನೂ ಒಬ್ಬ ಹಳೆಯ ಗೃಹರಕ್ಷಕನಾಗಿದ್ದು, ಇವರ ಪ್ರಾಮಾಣಿಕತೆ, ಒಳ್ಳೆಯ ಮನಸ್ಸು, ಕರ್ತವ್ಯ ನಿಷ್ಠೆ ಗೃಹರಕ್ಷಕರಿಗೆಲ್ಲ ಮಾದರಿಯಾಗಿದೆ;  ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನಾಕರ್‌, ‘ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ. ನನ್ನ ಕರ್ತವ್ಯವನ್ನು ಗುರುತಿಸಿ ಸನ್ಮಾನಿಸಿದ ಸಮಾದೇಷ್ಠರಿಗೆ ಹಾಗೂ ಉಪ ಸಮಾದೇಷ್ಠರಿಗೆ ಧನ್ಯವಾದ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಜಿಲ್ಲಾ ಗೃಹರಕ್ಷಕ ದಳದ ಉಪ ಸಮಾದೇಷ್ಟರಾದ ರಮೇಶ್ ಸ್ವಾಗತ ಭಾಷಣ ಮಾಡಿ, ರತ್ನಾಕರ ಅವರು ಉತ್ತಮ ಕಾರ್ಯದಿಂದ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ. ಇದೇ ರೀತಿ ಎಲ್ಲಾ ಗೃಹರಕ್ಷಕರು ಉತ್ತಮ ಕರ್ತವ್ಯ ನಿರ್ವಹಿಸಬೇಕೆಂದು ನುಡಿದರು.

ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ ಇವರು ವಂದನಾರ್ಷಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಛೇರಿಯ ಅಧೀಕ್ಷಕರಾದ ಎಂ. ರತ್ನಾಕರ, ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ. ಎಸ್. ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಎಸ್ಸೆಸ್ಸೆಲ್ಸಿ ಪರೀಕ್ಷೆ: ಪರಿಸ್ಥಿತಿಯ ಸಂಪೂರ್ಣ ಅವಲೋಕನದ ಬಳಿಕವೇ ವೇಳಾಪಟ್ಟಿ ಪ್ರಕಟ

Upayuktha

ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

Upayuktha

ಎಸ್‍ಕ್ಯೂಲೆಂಟ್ ಗಾಲ 2020: ಆಳ್ವಾಸ್‌ನಲ್ಲಿ ಅಂತರ್ ಕಾಲೇಜು ಫುಡ್ ಫೆಸ್ಟ್

Upayuktha