ಕೃಷಿ ಪರಿಸರ- ಜೀವ ವೈವಿಧ್ಯ ಮನೆ ಮದ್ದು

ಪುನರ್ಪುಳಿ (ಮುರುಗಲ) ಬೀಜದ ಎಣ್ಣೆಗೆ ಬಲು ಬೇಡಿಕೆ: ಆಹಾರ ಮತ್ತು ಔಷಧಕ್ಕೆ ಬಳಕೆ

ಹಣ್ಣಿನ ತಿರುಳನ್ನು ತೆಗೆದು ಸ್ವಚ್ಛಗೊಳಿಸಿದ ಪುನರ್ಪುಳಿ ಬೀಜಗಳು

ಪುನರ್ಪುಳಿ, ಮುರುಗಲ, ಬಿರಿಂಡಾ, ಕೋಕಂ- ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಗುಲಾಬಿ ವರ್ಣದ ಈ ಹಣ್ಣು ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಭಾಗದವರಿಗಂತೂ ಚಿರಪರಿಚಿತ. ಪುನರ್ಪುಳಿ ಹಣ್ಣಿನ ಜ್ಯೂಸ್‌, ಪುನರ್ಪುಳಿ ಹಣ್ಣಿನ ಸಿಪ್ಪೆಯ ಸಾರು, ಪುನರ್ಪುಳಿ ಬೀಜದ ಎಣ್ಣೆ-  ಹೀಗೆ ನಾನಾ ರೀತಿಯಲ್ಲಿ ಇದರ ಬಳಕೆಯಿದೆ. ಬಿರಿಂಡಾ ಜ್ಯೂಸ್‌ಗಂತೂ ನಗರಗಳಲ್ಲಿ ಬಹಳಷ್ಟು ಬೇಡಿಕೆಯಿದೆ.

ಮುರುಗಲ ಹಣ್ಣು ಅಥವಾ ಪುನರ್ಪುಳಿ ಅಥವಾ ಕೋಕಂ ಒಂದು ಜಾತಿಯ ಹಣ್ಣು. ಇದು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತದೆ. ಇದು ಹುಳಿ ಮತ್ತು ಸಿಹಿಯ ಮಿಶ್ರಣವಾದಂತಹ ರುಚಿಯನ್ನು ಹೊಂದಿರುತ್ತದೆ. ಇವುಗಳಲ್ಲಿ ಎರಡು ವಿಧದ ಬಣ್ಣದ ಹಣ್ಣುಗಳ ಮರಗಳಿವೆ – ಕೆಂಪು ಮತ್ತು ಬಿಳಿ. ಅವುಗಳಲ್ಲಿ ಬಿಳಿಯ ಅಂದರೆ ತೆಳು ಹಳದಿ ಬಣ್ಣದ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಾಗಿ ಫೆಬ್ರವರಿ-ಮಾರ್ಚ್ ನಲ್ಲಿ ಹೂ ಬಿಟ್ಟು, ಏಪ್ರಿಲ್-ಮೇ ತಿಂಗಳಿನಲ್ಲಿ ಕಾಯಿ, ಹಣ್ಣು ಆಗಲು ಪ್ರಾರಂಭವಾಗುತ್ತವೆ.

ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ಹೇರಳವಾಗಿ ಕಾಣಸಿಗುವ ಪುನರ್ಪುಳಿ (ಮುರುಗಲ) ಹಣ್ಣು

ಪಿತ್ತದಿಂದ ಉಂಟಾಗುವ ಅನಾರೋಗ್ಯಗಳಿಗೆ ಮುರುಗಲ ಹಣ್ಣು ಪರಿಣಾಮಕಾರಿಯಾಗಿದೆ. ಹಣ್ಣು ಸಿಗುವ ಸಮಯದಲ್ಲಿ ಅಲ್ಲದೇ, ಈ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಇಟ್ಟು ಬೇಕಾದಾಗ ಬಳಸಿಕೊಳ್ಳಬಹುದು. ಈ ಹಣ್ಣಿನ ರಸಕ್ಕೆ ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆ ಸೇರಿಸಿ ವಾರಕ್ಕೆ ಒಮ್ಮೆ ಕುಡಿಯುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿ ಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ.

ಪುನರ್ಪುಳಿ ಹಣ್ಣು ಹಾಗೂ ಬೀಜದಲ್ಲಿ ಔಷಧಿಯ ಗುಣಗಳಿದ್ದು, ಹಣ್ಣು ಮತ್ತು ಹಣ್ಣಿನ ರಸ ಪ್ರಮುಖವಾಗಿ ಪಿತ್ತ ನಿವಾರಕವಾಗಿದೆ. ಸಾಮಾನ್ಯವಾಗಿ ಹಣ್ಣಿನ ರಸವನ್ನು ಜ್ಯೂಸ್‌ ಮಾಡಿದ ಬಳಿಕ ಉಳಿಯುವ ಸಿಪ್ಪೆಯನ್ನು ಒಣಗಿಸಿ ಇಟ್ಟು ಬೇಕೆಂದಾಗ ಸಾರು ಮಾಡಲು ಬಳಲಾಗುತ್ತದೆ. ಆದರೆ ಹಣ್ಣಿನ ಬೀಜಗಳನ್ನು ಎಸೆಯುವವರೇ ಹೆಚ್ಚು. ಈ ಬೀಜಗಳಿಗೂ ಒಳ್ಳೆಯ ಬೇಡಿಕೆಯಿದೆ. ಅದರಿಂದ ಎಣ್ಣೆ ಮತ್ತು ಹಿಂಡಿಯನ್ನು ತಯಾರಿಸಬಹುದು.

ಪುನರ್ಪುಳಿ ಬೀಜದ ಎಣ್ಣೆ ಅಡುಗೆಗೂ ಬಳಕೆಯಾಗುತ್ತದೆ. ಗಾಯಗಳಾಗಿದ್ದಲ್ಲಿ ಅದರ ಮೇಲೆ ಸವರಿದರೆ ಉತ್ತಮ ಔಷಧಿಯಾಗಿಯೂ ಕೆಲಸ ಮಾಡುತ್ತದೆ. ಆದರೆ ಈ ಬೀಜಗಳಿಂದ ಎಣ್ಣೆ ತೆಗೆಯುವುದು ಅಷ್ಟು ಸುಲಭವಲ್ಲ. ಅಲ್ಲದೆ ತೆಗೆಯುವ ವಿಧಾನವೂ ಹೆಚ್ಚಿನವರಿಗೆ ತಿಳಿದಿಲ್ಲ. ಪುನರ್ಪುಳಿ ಬೀಜಗಳನ್ನು ಎಸೆಯದೆ, ಚೆನ್ನಾಗಿ ಒಣಗಿಸಿಟ್ಟು ಬೇಕೆಂದಾಗ ಅದರಿಂದ ಎಣ್ಣೆ ತೆಗೆಯಬಹುದು ಮತ್ತು ನಾನಾ ರೀತಿಯಲ್ಲಿ ಬಳಸಬಹುದಾಗಿದೆ.

ಪುನರ್ಪುಳಿ ಬೀಜದಿಂದ ಎಣ್ಣೆ ತೆಗೆಯುವ ವಿಧಾನವನ್ನು ಖ್ಯಾತ ಲೇಖಕಿ ಸವಿತಾ ಎಸ್‌ ಭಟ್ ಅಡ್ವಾಯಿ ಅವರು ಇಲ್ಲಿ ಉಪಯುಕ್ತ ನ್ಯೂಸ್ ಓದುಗರಿಗಾಗಿ ವಿವರಿಸಿದ್ದಾರೆ.

ಪುನರ್ಪುಳಿ ಬೀಜದಿಂದ ತಯಾರಿಸಲಾದ ಬೆಣ್ಣೆ. ಇದನ್ನು ಕರಗಿಸಿದರೆ ಎಣ್ಣೆ ಸಿಗುತ್ತದೆ.

ಪುನರ್ಪುಳಿ ಬೀಜದ ಎಣ್ಣೆ ಮಾಡುವ ವಿಧಾನ:

ಪುನರ್ಪುಳಿ ಹಣ್ಷಿನ ಸಿಪ್ಪೆ ಸುಲಿದು ಒಳಗಿನ ಬೀಜವನ್ನು ಒಣಗಿಸಿಕೊಳ್ಳಿ. ಇದನ್ನು ಬಾಣಲೆಗೆ ಹಾಕಿ ಸ್ವಲ್ಪವೇ ಬೆಚ್ಚಗೆ ಮಾಡಿ ಸಿಪ್ಪೆ ಸುಲಿಯಿರಿ. ಒಳಗಡೆ ಬಾದಾಮಿಯ ಹಾಗಿರುವ ಬಿಳಿ ಬೀಜಗಳಿವೆ. ಇವುಗಳನ್ನು ಬಿಸಿ ಬಿಸಿ ನೀರು ಹಾಕಿ ನುಣ್ಣಗೆ ರುಬ್ಬಿ. ಒಂದು ಪಾತ್ರೆಗೆ ಹಾಕಿ ಪಾತ್ರೆಯಲ್ಲಿ ಮುಕ್ಕಾಲು ಭಾಗ ನೀರು ಹಾಕಿ ಚೆನ್ನಾಗಿ ಕುದಿಸಿ. 10-15 ನಿಮಿಷಗಳ ಕಾಲ ಕುದಿದ ಮೇಲೆ ಒಲೆಯಿಂದಿಳಿಸಿ ಮುಚ್ಚಿಡಿ.

ಮರುದಿನ ಆ ನೀರಿನ ಮೇಲೆ ಬೆಣ್ಣೆಯಂತೆ ತೇಲಿಕೊಂಡಿರುವ ಅಂಶವನ್ನು ಒಂದು ಶುಭ್ರವಾದ ಬಾಣಲೆಗೆ ಹಾಕಿ ನೀರ ಪಸೆ ಆರುವ ತನಕ ಕುದಿಸಿ.ಆರಿದಾಗ ಇದು ಗಟ್ಟಿಯಾದ ಮುಲಾಮಿನಂತಾಗುತ್ತದೆ. ಇದನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಡಿ. ಇದು ತುಂಬಾ ಸಮಯದ ವರೆಗೆ ಹಾಳಾಗದು.

ಉಪಯೋಗಿಸುವಾಗ-
ಒಂದು ಶುಭ್ರವಾದ ಸೌಟನ್ನು ಬಿಸಿಯಾಗಲಿಟ್ಟು ಒಂದು ಚೂರಿಯಿಂದ ಕೆರೆದು ಹಾಕಿದಾಗ ಅದು ಕರಗಿ ಎಣ್ಣೆಯಂತಾಗುತ್ತದೆ. ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಕಲಸಿ.
ಉಪಯೋಗ- ಬೆಂಕಿ ತಾಗಿದಾಗ ಆಗಾಗ ಹಕ್ಕಿಯ ಗರಿಯನ್ನು ಬಳಸಿ ಹಚ್ಚುತ್ತಾ ಇದ್ದರೆ. ಕಲೆ ಕೂಡಾ ಉಳಿಯದೆ ಗುಣವಾಗುತ್ತದೆ.
ಕಾಲಿನ ಹಿಮ್ಮಡಿ ಒಡೆದಾಗ ಹಚ್ಚಿದರೆ ಗುಣವಾಗುತ್ತದೆ.
ಯಾವುದೇ ಗಾಯವಾದರೂ ಇದನ್ನು ಹಚ್ಚಿದರೆ ಕೀವಾಗದೇ ಗುಣವಾಗುತ್ತದೆ.
ದೋಸೆ ಕಾವಲಿಗೆ ಹಚ್ಚಲು ಬಳಸಬಹುದು.

– ಸವಿತಾ ಅಡ್ವಾಯಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (24-06-2020)

Upayuktha

ಜ.4-5 : ಪುತ್ತೂರಿನಲ್ಲಿ ‘ವಿಷಮುಕ್ತ ಅನ್ನದ ಬಟ್ಟಲಿಗಾಗಿ’ ಸಾವಯವ ಹಬ್ಬ

Upayuktha

ಇಂದಿನ ಐಕಾನ್- ಸಾವಯವ ಕೃಷಿಕ ರಾಮಚಂದ್ರ ಪಟೇಲ್

Upayuktha

Leave a Comment

error: Copying Content is Prohibited !!