ನಗರ ಸ್ಥಳೀಯ

ಮಾನವೀಯತೆ ಮೆರೆದ ವೈದ್ಯರ ತಂಡ: ಮಂಗಳಾ ಆಸ್ಪತ್ರೆಯಿಂದ ಉಚಿತ ಶಸ್ತ್ರಚಿಕಿತ್ಸೆ

ಮಂಗಳೂರು: ಮಾನವೀಯತೆಗಿಂತ ದೊಡ್ಡ ಸಂಬಂಧ ಇನ್ನೊಂದು ಇಲ್ಲ ಎಂಬುದನ್ನು ಮಂಗಳೂರಿನ ಮಂಗಳಾ ಕಿಡ್ನಿ ಫೌಂಡೇಶನ್ ಹಾಗೂ ವೈದ್ಯರ ತಂಡ ಮತ್ತೊಮ್ಮೆ ಸಾಬೀತು ಪಡಿಸಿದೆ. ಬೆನ್ನು ಮೂಳೆ ವಿರೋಪತೆಯಿಂದ ಜೀವಾಪಾಯದಿಂದ ಇದ್ದ ಹರಿಹರದ ವಾಸನ ಗ್ರಾಮದ ಮಾಧವೇಶ್ ಎಂಬ 9 ವರ್ಷದ ಬಾಲಕನಿಗೆ ತಾವೇ ಹಣ ಸಂಗ್ರಹಿಸಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಮಾಧವೇಶ್‍ನ ತಂದೆ ವಾದಿರಾಜ್ ಅವರು ವಾಸನ ಗ್ರಾಮ ಪಂಚಾಯತ್‍ನಲ್ಲಿ ದಿನಗೂಲಿ ನೌಕರ. ಬಾಲಕ ಮಾದವೇಶ್ ಆರು ತಿಂಗಳ ಮಗುವಿದ್ದ ವೇಳೆ ಆತ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಇನ್ನೊಂದು ಮದುವೆಯಾದರೆ ಮಗನಿಗೆ ಎಲ್ಲಿ ತಾಯಿಯ ಪ್ರೀತಿ ಕಡಿಮೆಯಾಗುತ್ತದೆ ಎಂದು ತಂದೆ ಎರಡನೇ ಮದುವೆಯಾಗದೆ ಪ್ರೀತಿಯಿಂದ ಮಾಧವೇಶ್‍ನನ್ನು ನೋಡಿಕೊಳ್ಳುತ್ತಾರೆ.

ತಂದೆಯ ಪ್ರೀತಿ, ಅಜ್ಜಿಯ ಅಕ್ಕರೆ ಹಾಗೂ ಸೋದರ ಅತ್ತೆಯ ಕಾಳಜಿಯ ನಡುವೆ ಬೆಳೆಯುತ್ತಾನೆ. ಬಾಲ್ಯದಲ್ಲಿಯೇ ಮಾಸ್ಟರ್ ಮಾಧವೇಶ್ ಅವರ ಬೆನ್ನಿನ ವಿರೂಪತೆಯನ್ನು ಪೋಷಕರು ಗಮನಿಸಿದರು. ಶಾಲೆಯ ಚೀಲವನ್ನು ಹೊತ್ತುಕೊಂಡು ಶಾಲೆಗೆ ಹೋಗಲು ಕಷ್ಟವಾಗುತ್ತಿತ್ತು. ಗೆಳೆಯರೊಂದಿಗೆ ಆಟವಾಡಲು ಸಾಧ್ಯವಾಗಲಿಲ್ಲ. ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ವೈದ್ಯಕೀಯ ಸಲಹೆಯನ್ನು ತಂದೆ ಪಡೆಯಲಿಲ್ಲ. ಇದು ದೇವರು ನೀಡಿರುವ ಶಾಪ ಎಂದು ಭಾವಿಸಿ ಸುಮ್ಮನೆ ಕುಳಿತಿದ್ದರು. ಇತ್ತೀಚಿನ ದಿನಗಳಲ್ಲಿ ಮಾಧವೇಶ್‍ಗೆ ಉಸಿರಾಟದ ಸಮಸ್ಯೆ ಆರಂಭವಾಯಿತು. ಎರಡೂ ಕಾಲುಗಳು ದುರ್ಬಲವಾಗಲಾರಂಭಿಸಿತು. ಹರಿಹರದಲ್ಲಿ ವೈದ್ಯರಿಗೆ ತೋರಿಸದಾಗ ನೀವು ಮಂಗಳೂರಿನ ವೆನ್ಲಾಕ್‍ಗೆ ಹೋಗುವಂತೆ ಸಲಹೆ ನೀಡುತ್ತಾರೆ.

ಮಾಧವೇಶ್ ಮತ್ತು ಆತನ ತಂದೆ ಮಂಗಳೂರಿಗೆ ಚಿಕಿತ್ಸೆಗಾಗಿ ಬಂದಿದ್ದರು. ಹೊಸ ಊರು, ಹೊಸ ಜನ, ಕೋವಿಡ್ ಬೇರೆ. ಏನು ಮಾಡಬೇಕು ಎಂದು ತೋಚದೆ ವಾಪಸ್‌ ಊರಿಗೆ ಹೋಗಲು ಸಿದ್ಧತೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಂಗಳಾ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್‍ನ ಡಾ. ಗಣಪತಿ ಅವರ ಕಣ್ಣಿಗೆ ಬೀಳುತ್ತಾರೆ. ಭಾಗಿದ ದೇಹವನ್ನು ನೋಡಿ ಕುತೂಹಲದಿಂದ ಪರಿಶೀಲಿಸಿದಾಗ ಕೈಫೋ ಸ್ಕೋಲಿಯಾಸಿಸ್ ಇರುವುದು ಖಚಿತವಾಗುತ್ತದೆ. ಕೈಫೋ ಸ್ಕೋಲಿಯಾಸಿಸ್ ಎಂಬುದು ಬೆನ್ನಮೂಳೆ ತಿರುವು ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ. ಅದೂ ಮೂರು ಹಂತದ ಶಸ್ತ್ರಚಿಕಿತ್ಸೆ. ಮೂರರಿಂದ ಐದು ವರ್ಷದ ಅವಧಿಯಲ್ಲಿ ಮಾಡಬೇಕಾಗುತ್ತದೆ. ಇಂತಹ ಶಸ್ತ್ರಚಿಕಿತ್ಸೆಯಲ್ಲಿ ಮಾಡಬೇಕಾದರೆ ಏನಿದ್ದರೂ 8ರಿಂದ 10 ಲಕ್ಷ ರೂ. ಬೇಕು.

ಬದುಕಿನ ಆಶಾ ಕಿರಣವಾದ ವೈದ್ಯರು:
ತಂದೆಯ ಕಣ್ಣೀರು, ಬಾಳಿ ಬದುಕಬೇಕಿದ್ದ ಮಗುವಿನ ಮುಗ್ದತೆ ಕಂಡು ಮನ ಕರಗುತ್ತದೆ. ಏನಾದರೂ ಮಾಡಬೇಕು ಎಂದು ಯೋಚನೆ ಬಂದಾಗ ನೆನಪಿಗೆ ಬೆನ್ನಮೂಳೆ ತಜ್ಞ ಡಾ.ಈಶ್ವರ ಕೀರ್ತಿ ಅವರ ನೆನಪಾಗುತ್ತದೆ. ಡಾ.ಈಶ್ವರ ಕೀರ್ತಿ ಅವರೊಂದಿಗೆ ಮಗುವಿನ ಸಮಸ್ಯೆಯ ಬಗ್ಗೆ ಡಾ. ಗಣಪತಿ ಚರ್ಚಿಸಿ, ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಪ್ರಸ್ತಾಪ ಇಡುತ್ತಾರೆ. ಉತ್ತಮ ಕೆಲಸ ಮಾಡುವ ವೇಳೆ ಯಾರಾದರೂ ಸಹಾಯಕ್ಕೆ ಬರುತ್ತಾರೆ ಎಂಬ ದೃಢ ವಿಶ್ವಾಸದೊಂದಿಗೆ ಶಸ್ತ್ರಚಿಕಿತ್ಸೆಗೆ ದಿನ ನಿಗಧಿಪಡಿಸುತ್ತಾರೆ. ಚಿಕಿತ್ಸೆ ನೀಡುವ ಎಲ್ಲ ವೈದ್ಯರು, ಸಹಾಯಕರು, ದಾದಿಯರು, ಆಸ್ಪತ್ರೆ ಖರ್ಚು ಉಚಿತವಾಗಿ ಮಾಡಿ ಉಳಿದ ಔಷಧಿ ಹಾಗೂ ಸಲಕರಣೆಗಾಗಿ ಹಲವು ಎನ್‍ಜಿಓಗಳನ್ನು ಖುದ್ದು ವೈದ್ಯರೇ ಸಂಪರ್ಕಿಸುತ್ತಾರೆ. ರೈಟ್ ಟು ಲಿವ್ ಎಂಬ ಸಂಘಟನೆಯು ಸಹಾಯ ಮಾಡುವ ಜವಾಬ್ದಾರಿ ತೆಗೆದುಕೊಂಡಿದೆ.

ಇದೊಂದು ದೀರ್ಘಾವಧಿಯ ಚಿಕಿತ್ಸಾ ವ್ಯವಸ್ಥೆ. ಪೂರ್ತಿ ಸರಿಯಾಗಬೇಕಾದರೆ ಮೂರು ಸರ್ಜರಿ ಮಾಡಬೇಕಾಗುತ್ತದೆ. ಮಂಗಳಾ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್‍ನಲ್ಲಿ ಬೆನ್ನಮೂಳೆಯ ವಿರೂಪ ತಿದ್ದುಪಡಿಯ ಮೊದಲ ಶಸ್ತ್ರಚಿಕಿತ್ಸೆಯನ್ನು ಇಂದು ಡಾ. ಈಶ್ವರ ಕೀರ್ತಿ ಅವರ ತಂಡವು ಯಶಸ್ವಿಯಾಗಿ ಮಾಡಿದೆ. ಮಾನವೀಯತೆಯ ದೃಷ್ಟಿಯಿಂದ ಉಚಿತವಾಗಿ ಚಿಕಿತ್ಸೆ ಮಾಡುತ್ತಿದ್ದೇವೆ.
-ಡಾ.ಗಣಪತಿ, ಆಡಳಿತ ನಿರ್ದೇಶಕರು, ಮಂಗಳಾ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್

ಕಳೆದ 9 ವರ್ಷದ ಹಿಂದೆ ಐಟಿ ಉದ್ಯಮಿ ರಘುರಾಮ ಕೋಟೆ ಅವರು ರೈಟ್ ಟು ಲೀವ್ ಎಂಬ ಎನ್‍ಜಿಓ ಆರಂಭಿಸಿದರು. ಅಶಕ್ತರಿಗೆ ಚಿಕಿತ್ಸೆ ನೀಡುವುದೇ ಇದರ ಮೂಲ ಉದ್ದೇಶ. ಮಂಗಳೂರಿನ ಮಂಗಳಾ ಆಸ್ಪತ್ರೆಯಿಂದ ಪ್ರಸ್ತಾಪ ಬಂದಿತ್ತು. ಪರಿಶೀಲಿಸಿದಾಗ ಸತ್ಯ ಖಚಿತಗೊಂಡ ಚಿಕಿತ್ಸೆಯ ವೆಚ್ಚ ಭರಿಸಲು ತೀರ್ಮಾನಿಸಿದ್ದೇವೆ. ಆರಂಭಿಕ ಹಂತದಲ್ಲಿ ಮೊದಲ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ನೀಡುತ್ತಿದ್ದೇವೆ. ಎರಡನೇ ಮತ್ತು ಮೂರನೇ ಹಂತದ ಚಿಕಿತ್ಸೆ ಬೇಕಾದಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು. ಈಗಾಗಲೇ ಸುಮಾರು 250 ಮಂದಿಗೆ ಸಹಾಯ ಮಾಡಲಾಗಿದೆ.
ಟಿ.ವಿ. ಶ್ರೀಧರ್, ಕಾರ್ಯನಿರ್ವಾಹಕ ನಿರ್ದೇಶಕ, ರೈಟ್ ಟು ಲಿವ್

ಸಹಾಯ ಮಾಡಿ:
ಇಡೀ ಕುಟುಂಬವು ನ್ಯೂರೋ ಫೈಬ್ರೊಮಾಟೋಸಿಸ್ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದೆ. ಅವರ ತಂದೆಗೆ ತೀವ್ರ ತರದ ಸೊಂಟ ನೋವು ಇದೆ. ಅವರ ಕೆಲಸವನ್ನೇ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಅವರು ದೀರ್ಘಕಾಲದಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಆದಾಯದಿಂದ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮುಂದಿನ ದಿನದ ಚಿಕಿತ್ಸೆಗಾಗಿ ಸಾರ್ವಜನಿಕರು ಸಹಾಯ ಮಾಡಬಹುದಾಗಿದೆ. ಆದುದರಿಂದ ಸಹಾಯ ಮಾಡುವವರು ವಾದಿರಾಜ ಅವರ ವಾಸನ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಉಳಿತಾಯ ಖಾತೆ ಸಂಖ್ಯೆ 10855100002043, ಐಎಫ್‍ಎಸ್‍ಸಿ ಕೋಡ್: PKGB0010855 ಹಣ ವರ್ಗಾಯಿಸಬಹುದಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಂಗಳೂರು: ನ.1ಕ್ಕೆ ಡಿವಿಜಿ ಬಳಗ ಪ್ರತಿಷ್ಠಾನದಿಂದ ಕನ್ನಡ ರಾಜ್ಯೋತ್ಸವ

Upayuktha

ವಿಟ್ಲ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ನಿಂದಿಸಿ ಹಣ ದೋಚಿದ ನಾಲ್ವರ ಮೇಲೆ ಕೇಸು ದಾಖಲು

Upayuktha

ವಿವಿ ಕಾಲೇಜಿನಲ್ಲಿ ಪ್ರವಾಸೋದ್ಯಮ ಪದವಿ ಕಲಿಕೆಗೆ ಅವಕಾಶ

Upayuktha