ಚಂದನವನ- ಸ್ಯಾಂಡಲ್‌ವುಡ್ ಸಾಧಕರಿಗೆ ನಮನ

ಇಂದಿನ ಐಕಾನ್ – ಸಾಹಸ ಸಿಂಹ, ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ

ಇಂದು ವಿಷ್ಣುವರ್ಧನ್ 70ನೇ ಜನ್ಮದಿನ

ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟ, ನಿರ್ಮಾಪಕ, ಗಾಯಕ, ಎಲ್ಲಾ ರೀತಿಯ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ ಡಾಕ್ಟರ್ ವಿಷ್ಣುವರ್ಧನ ಅವರಿಗೆ ಇಂದು 70ನೆಯ ಹುಟ್ಟುಹಬ್ಬ. 2009ರಲ್ಲಿ ಅವರು ಚಂದನವನದಲ್ಲಿ ಬಿಟ್ಟು ಹೋಗಿರುವ ಶೂನ್ಯವನ್ನು ಇದುವರೆಗೆ ಯಾರಿಗೂ ತುಂಬಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರ ಪ್ರತಿಭೆಗೆ ಒಂದು ನಿದರ್ಶನ!

1950ರಲ್ಲಿ ಮೈಸೂರಿನಲ್ಲಿ ಜನಿಸಿದ ಅವರಿಗೆ ಹೆತ್ತವರು ಇಟ್ಟ ಹೆಸರು ಸಂಪತ್ ಕುಮಾರ್. ಕೇವಲ 5 ವರ್ಷ ಪ್ರಾಯದಲ್ಲಿ ಶಿವಶರಣೆ ನಂಬಿಯಕ್ಕ ಮತ್ತು ಕೋಕಿಲ ವಾಣಿ ಎಂಬ ಎರಡು ಸಿನೆಮಾಗಳಲ್ಲಿ ಬಾಲನಟನಾಗಿ ಅವರು ಕ್ಯಾಮೆರಾ ಎದುರಿಸಿದ್ದರು. ಮುಂದೆ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತವಾದ ‘ವಂಶವೃಕ್ಷ’ ಎಂಬ ಸಿನೆಮಾದಲ್ಲಿ ಜನರು ಗುರುತಿಸುವ ಪಾತ್ರ ದೊರೆಯಿತು. ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪದೆದಿದ್ದ ಹುಡುಗ ಪುಟ್ಟಣ್ಣ ಕಣಗಾಲ್ ಅವರ ಕಣ್ಣಿಗೆ ಬಿದ್ದಿದ್ದ. ತರಾಸು ಅವರ ‘ನಾಗರ ಹಾವು’ ಕಾದಂಬರಿ ಆಧಾರಿತ ಸಿನೆಮಾದಲ್ಲಿ ರಾಮಾಚಾರಿಯ ಪಾತ್ರವು ಅವರಿಗೋಸ್ಕರ ಕಡೆದು ನಿಲ್ಲಿಸಿದ ಹಾಗೆ ಇತ್ತು! ಸಂಪತ್ ಕುಮಾರ್ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಾಯಿಸಿದ್ದು ಕೂಡ ಪುಟ್ಟಣ್ಣ. ಸಿನೆಮಾ ಸೂಪರ್ ಹಿಟ್ ಆಯಿತು. ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆಯಿತು. ಅಲ್ಲಿಂದ ವಿಷ್ಣು ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಮುಂದಿನ ಮೂವತ್ತಾರು ವರ್ಷಗಳ ಅವಧಿಯಲ್ಲಿ 220 ಸಿನೆಮಾಗಳು ಅವರ ಹೆಸರನ್ನು ಬೆಳಗಿದವು. ಡಾಕ್ಟರ್ ರಾಜಕುಮಾರ್ ನಂತರದ ಸ್ಥಾನ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಗೆ ಮೀಸಲಾಯಿತು. 4 ಹಿಂದೀ, 6 ತಮಿಳು, 4 ತೆಲುಗು, 3 ಮಲಯಾಳಂ ಚಿತ್ರಗಳಲ್ಲಿ ನಟಿಸಿದ ವಿಷ್ಣು ಕನ್ನಡದ ಮೊದಲ ಪ್ಯಾನ್ ಇಂಡಿಯಾ ನಟ ಎಂಬ ಹೆಗ್ಗಳಿಕೆಯನ್ನು ಪಡೆದರು. ಕಾದಂಬರಿ ಆಧಾರಿತ ಸಿನೆಮಾ, ಜಾನಪದ ಸಿನೆಮಾ, ಕೌಟುಂಬಿಕ ಕಥೆಗಳು, ಹೊಡಿ ಬಡಿ ಫೈಟಿಂಗ್ ಪಾತ್ರಗಳು, ದ್ವಾರಕೀಶ್ ನಿರ್ಮಿಸಿದ ಕಿಟ್ಟು ಪುಟ್ಟು ಸರಣಿಯ ಕಾಮೆಡಿ ಸಿನೆಮಾಗಳು ಎಲ್ಲಾದಕ್ಕೂ ಹೊಂದಿಕೊಳ್ಳುವ ನಟ ಕನ್ನಡದಲ್ಲಿ ಇದ್ದರೆ ಅದು ವಿಷ್ಣು ಮತ್ತು ವಿಷ್ಣು ಮಾತ್ರ! ಸಕ್ಸೆಸ್ ರೇಟು ಪರಿಗಣಿಸಿದರೂ ಅವರಿಗೆ ಅವರೇ ಸಾಟಿ!

1973ರಲ್ಲೀ ಡಾಕ್ಟರ್ ರಾಜಕುಮಾರ್ ಅಭಿನಯದ 150ನೆಯ ಸಿನೆಮಾ ‘ಗಂಧದ ಗುಡಿ’ಯಲ್ಲಿ ವಿಷ್ಣುಗೆ ಅವರ ತಮ್ಮನ ಪಾತ್ರ. ಅದು ಖಳ ಪಾತ್ರ. ಸಿನೆಮಾ ಶೂಟಿಂಗ್ ನಡೆಯುತ್ತಿದ್ದಾಗ ವಿಷ್ಣು ಸಿಟ್ಟಿನಲ್ಲಿ ರಾಜ್ ಕಡೆಗೆ ಗುಂಡು ಹಾರಿಸುವ ದೃಶ್ಯ. ಆದರೆ ಪಿಸ್ತೂಲ್ ಒಳಗೆ ಯಾರೋ ಜೀವಂತ ಗುಂಡು ತುಂಬಿಸಿ ಇಟ್ಟಿದ್ದರು. ಅದೃಷ್ಟವಶಾತ್ ಗುಂಡು ಗುರಿ ತಪ್ಪಿತ್ತು! ಅದರ ಹಿಂದೆ ಯಾರ ಷಡ್ಯಂತ್ರ ಇತ್ತು ಎಂದು ಕೊನೆಯವರೆಗೂ ಗೊತ್ತಾಗಲಿಲ್ಲ. ಆದರೆ ವಿಷ್ಣು ಮೇಲೆ, ಅವರ ಅಭಿಮಾನಿಗಳ ಮೇಲೆ ಕಲ್ಲು ತೂರಾಟ ನಡೆಯಿತು. ಪೋಸ್ಟರಗಳಿಗೆ ಬೆಂಕಿ ಹಚ್ಚಲಾಯಿತು. ರಾಜ್ ಮತ್ತು ವಿಷ್ಣು ಸಂಬಂಧ ಕೊನೆಯವರೆಗೂ ಹಾಲು ಜೇನಿನ ಹಾಗೆ ಇತ್ತು. ಆದರೆ ಮುಂದೆ ಎಂದೂ ಅವರಿಬ್ಬರು ಜೊತೆಯಾಗಿ ನಟಿಸುವ ಅವಕಾಶ ದೊರೆಯಲಿಲ್ಲ! ವಿಷ್ಣುಗೆ ಆ ನೋವು ಕೊನೆಯವರೆಗೂ ಕಾಡುತ್ತಿತ್ತು. ವಿಷ್ಣು ಯಾರ ಮನಸ್ಸನ್ನು ಕೂಡ ನೋಯಿಸದ ಸಜ್ಜನ ನಟ ಆಗಿದ್ದರು.

ರಾಜ ಗಾಂಭೀರ್ಯದ ಪಾತ್ರಗಳಿಗೆ, ದುರಂತ ಪಾತ್ರಗಳಿಗೆ, ಸರಸ ಸಲ್ಲಾಪದ ಪಾತ್ರಗಳು, ಐತಿಹಾಸಿಕ ಪಾತ್ರಗಳಿಗೆ ವಿಷ್ಣು ಒಂದು ಅದ್ಭುತವಾದ ಎರಕ! ಯಾವ ಪಾತ್ರವಾದರೂ ಅಭಿನಯ ಲೀಲಾಜಾಲ!

ಹೊಂಬಿಸಿಲು,ಭೂತಯ್ಯನ ಮಗ ಅಯ್ಯು, ಗುರು ಶಿಷ್ಯರು, ಜಿಮ್ಮಿ ಗಲ್ಲು, ಬಂಧನ, ನಾಗರ ಹೊಳೆ, ಇಂದಿನ ರಾಮಾಯಣ, ಖೈದಿ, ಕೃಷ್ಣ ರುಕ್ಮಿಣಿ, ಲಾಲಿ, ಯಜಮಾನ, ಮುತ್ತಿನ ಹಾರ, ಮಲಯ ಮಾರುತ, ಹಾಲುಂಡ ತವರು, ವೀರಪ್ಪ ನಾಯ್ಕ, ಆಪ್ತ ಮಿತ್ರ, ರಾಯರು ಬಂದರು ಮಾವನ ಮನೆಗೆ, ನೀ ಬರೆದ ಕಾದಂಬರಿ, ಸೂರ್ಯ ವಂಶ, ವಿಷ್ಣು ಸೇನಾ, ಕದಂಬ, ಸಿಂಹಾದ್ರಿಯ ಸಿಂಹ. ಈ ಬಂಧನ, ಆಪ್ತ ರಕ್ಷಕ….ಈ ಸಿನೆಮಾಗಳನ್ನು ನೋಡಿದವರಿಗೆ ವಿಷ್ಣು ಅಭಿನಯ ಸ್ಮರಣೀಯ. ಅಭಿನಯಕ್ಕೆ ಏಳು ಬಾರಿ ರಾಜ್ಯ ಪ್ರಶಸ್ತಿ ಪಡೆದ ವಿಷ್ಣು ಸದಾ ಕಾಲ ನೆನಪಲ್ಲಿ ಉಳಿಯುತ್ತಾರೆ. ಬಂಧನ ಸಿನೆಮಾದಲ್ಲಿ ಕೈಯ್ಯಲ್ಲಿ ಗುಲಾಬಿ ಹಿಡಿದು ‘ಮಿಸ್ ನಂದಿನಿ, ನಾನು ನಿಮ್ಮನ್ನು ತುಂಬಾ ಪ್ರೀತಿ ಮಾಡ್ತೀನಿ ರಿ” ಎಂದು ರಿಹರ್ಸಲ್ ಮಾಡುವ ಡಾಕ್ಟರ್ ಹರೀಶ್ ಪಾತ್ರ ಅದು ಅದ್ಭುತ! ಮುತ್ತಿನ ಹಾರ ಸಿನೆಮಾದಲ್ಲಿ ತನ್ನ ಮಗುವನ್ನು ಕಳೆದುಕೊಂಡು ಮರಳು ಗಾಡಿನಲ್ಲಿ ದುಃಖಿಸುವ ಸೈನಿಕನ ಪಾತ್ರ ಒಹ್! ಅದೊಂದು ಮಾಸ್ಟರ್ ಪೀಸ್!

ಪ್ರೀತಿಸಿ ಮದುವೆಯಾದ ಮಹಾನಟಿ ಭಾರತಿ ಮತ್ತು ವಿಷ್ಣು ದಾಪತ್ಯ ಎಲ್ಲರಿಗೂ ಮಾದರಿ! ವಿಷ್ಣು ಅಗಲಿದ ನಂತರ ಭಾರತ ಸರಕಾರವು ಅವರ ಚಿತ್ರ ಇರುವ ಸ್ಟಾಂಪ್ ಬಿಡುಗಡೆ ಮಾಡಿತು. ಬೆಂಗಳೂರಿನಲ್ಲಿ ಬನಶಂಕರಿಯಿಂದ ಕೆಂಗೇರಿಯವರೆಗೆ 14 ಕಿಲೋಮೀಟರ್ ಉದ್ದದ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ಹೆಸರನ್ನು ಇಡಲಾಗಿದೆ. ಇದೀಗ ಅವರು ತುಂಬಾ ಪ್ರೀತಿಸಿದ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣ ಆಗುತ್ತಿದೆ.

ಕನ್ನಡ ಸಿನಿಮಾರಂಗದ ಇತಿಹಾಸವನ್ನು ಯಾರೇ ಬರೆಯಲು ತೊಡಗಿದರೂ ವಿಷ್ಣು ಬಗ್ಗೆ ಬರೆಯದೆ ಇತಿಹಾಸ ಪೂರ್ತಿ ಆಗುವುದಿಲ್ಲ! ಅವರಿಗೆ ನಮ್ಮ ಶ್ರದ್ಧಾಂಜಲಿ.

-ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಐತಿಹಾಸಿಕ ಸೀರಿಯಲ್ ಗಳ ಮೂಲಕ ಭಾರತೀಯರ ಮನಗೆದ್ದ ರಮಾನಂದ ಸಾಗರ್

Upayuktha

ಕನ್ನಡ ಚಿತ್ರರಂಗದ “ಅಶ್ವತ್ಥ ವೃಕ್ಷ”: ನಿಮಗಿದೋ ಮತ್ತೊಮ್ಮೆ ಭಾವಪೂರ್ಣ ನಮನ

Upayuktha

ಸಂಗೀತ ಲೀನ ಅಮರ ಗಾಯಕ, ಜಸದ ದೊರೆ ಪಂಡಿತ್‌ ಜಸ್‌ರಾಜ್‌ಗೆ‌ ನುಡಿ ನಮನ

Upayuktha

Leave a Comment