ಸಾಧಕರಿಗೆ ನಮನ

ಇಂದಿನ ಐಕಾನ್- ‘ಥಟ್ ಅಂತ ಹೇಳಿ’ ಕೀರ್ತಿ ಪಡೆದ ಡಾಕ್ಟರ್ ನಾ. ಸೋಮೇಶ್ವರ

ಡಾಕ್ಟರ್ ನಾ. ಸೋಮೇಶ್ವರ ಕರ್ನಾಟಕದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಚಂದನ ವಾಹಿನಿಯಲ್ಲಿ ವರ್ಷಾನುಗಟ್ಟಲೆ ನಿರಂತರವಾಗಿ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಜನಪ್ರಿಯ ರಸಪ್ರಶ್ನೆಗಳ ಕಾರ್ಯಕ್ರಮವನ್ನು ಮರೆಯಲು ಸಾಧ್ಯವೇ ಇಲ್ಲ! ಆ ಕಾರ್ಯಕ್ರಮದ ಮೋಡಿಗೆ ಒಳಗಾಗದವರು ಯಾರೂ ಇಲ್ಲ. ಅದರ ರೂವಾರಿ ಡಾಕ್ಟರ್ ನಾರಪ್ಪ ಸೋಮೇಶ್ವರ.

ಡಾಕ್ಟರ್ ಸೋಮೇಶ್ವರ ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ, 14 ಮೇ 1955ರಲ್ಲಿ. ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು ಎದುರಿಸಿದ್ದರು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ಎರಡು. ಪತ್ರಿಕೆಗೆ ಲೇಖನಗಳನ್ನು ಮತ್ತು ಚಿತ್ರಗಳನ್ನು ಬರೆಯುವುದು ಮತ್ತು ತನಗಿಂತ ಕೆಳಗಿನ ತರಗತಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡುವುದು. ಅವರು ಎಂಬಿಬಿಎಸ್‌ ಪದವಿ ಸಂಪಾದನೆ ಮಾಡಿದ್ದು ಪ್ರತಿಷ್ಠಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ. ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಾ ಬಿಡುವಿನ ಅವಧಿಯಲ್ಲಿ ಅವರು ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯಲು ಆರಂಭ ಮಾಡಿದರು. ‘ಜೀವ ನಾಡಿ’ ಎಂಬ ವೈದ್ಯಕೀಯ ವಿಜ್ಞಾನದ ಮಾಸ ಪತ್ರಿಕೆಯನ್ನು ಪ್ರಧಾನ ಸಂಪಾದಕರಾಗಿ ಮುನ್ನಡೆಸಿದರು.

ವೈದ್ಯಕೀಯ ವಿಜ್ಞಾನವನ್ನು ಜನಸಾಮಾನ್ಯರ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅವಿರತವಾದ ಪ್ರಯತ್ನ ಅವರದ್ದು! ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನದ 41 ಪುಸ್ತಕಗಳನ್ನು ಅವರು ಈಗಾಗಲೇ ಬರೆದಿದ್ದಾರೆ. ಇನ್ನೂ ಐದು ಪುಸ್ತಕಗಳು ಪ್ರಕಾಶನದ ಹಂತದಲ್ಲಿವೆ. ಅವರ ಸಾವಿರಾರು ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೈದ್ಯಕೀಯ ವಿಷಯಗಳ ಬಗ್ಗೆ 1200 ಟಿವಿ ಕಾರ್ಯಕ್ರಮಗಳನ್ನು ಅವರು ನೀಡಿದ್ದಾರೆ. ಅಸಂಖ್ಯವಾದ ರೇಡಿಯೋ ಕಾರ್ಯಕ್ರಮ ನೀಡಿದ್ದಾರೆ.

ಅವರಿಗೆ ಅತ್ಯುತ್ತಮ ವೈದ್ಯರಿಗೆ ನೀಡುವ ಡಾಕ್ಟರ್ ಬಿ.ಸಿ. ರಾಯ್ ಪ್ರಶಸ್ತಿ ದೊರೆತಿದೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರೆತಿದೆ. ಕರ್ನಾಟಕದ ಅತ್ಯುತ್ತಮ ವಿಜ್ಞಾನ ಲೇಖಕ ಪ್ರಶಸ್ತಿ ಅವರು ಪಡೆದಿದ್ದಾರೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಅವರು ಪಡೆದಿದ್ದಾರೆ. ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು, ಜ್ಞಾನೇಂದ್ರಿಯಗಳು ಮತ್ತು ನಮ್ಮ ಒಡಲಿನ ವಿಸರ್ಜನಾ ಅಂಗಗಳು ಅವರ ಅತ್ಯಂತ ಜನಪ್ರಿಯ ಪುಸ್ತಕಗಳು! ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನವನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಖಂಡಿತವಾಗಿಯೂ ಡಾಕ್ಟರ್ ನಾ. ಸೋಮೇಶ್ವರ ಅವರಿಗೆ ದೊರೆಯಬೇಕು.

ಇನ್ನು ಅವರ ಟ್ರೆಂಡ್ ಸೆಟ್ಟರ್ ಟಿವಿ ಕಾರ್ಯಕ್ರಮವಾದ ‘ಥಟ್ ಆಂತ ಹೇಳಿ ‘ ಬಗ್ಗೆ ನಾನು ಬರೆಯಲೇ ಬೇಕು. ಚಂದನ ವಾಹಿನಿಯಲ್ಲಿ ರಾತ್ರಿ 9-30ಕ್ಕೆ ಪ್ರಸಾರವಾಗುವ ಈ ಕ್ವಿಜ್ ಕಾರ್ಯಕ್ರಮವು 2002 ಜನವರಿ 4ರಂದು ಆರಂಭ ಆಯಿತು. ಸೋಮವಾರದಿಂದ ಶುಕ್ರವಾರದವರೆಗೆ ನಿರಂತರ ಪ್ರಸಾರವಾಗುವ ಕಾರ್ಯಕ್ರಮ ಇದು. ಪ್ರತೀ ದಿನ ಮೂರು ಜನ ಸ್ಪರ್ಧಿಗಳು ಭಾಗವಹಿಸುತ್ತಾರೆ. ಶಿಕ್ಷಣ, ಸಂಸ್ಕೃತಿ, ವಿಜ್ಞಾನ, ಒಗಟು, ಪದಬಂಧ, ತಂತ್ರಜ್ಞಾನ, ನಾಡು ನುಡಿ, ಕನ್ನಡ ಸಾಹಿತ್ಯ ಮೊದಲಾದ ಹತ್ತು ಕ್ಷೇತ್ರಗಳ ಪ್ರಶ್ನೆಗಳು ಇರುತ್ತವೆ. ಆಡಿಯೋ ಮತ್ತು ವಿಡಿಯೋ ಸುತ್ತುಗಳು ಇರುತ್ತವೆ. ಸರಿ ಉತ್ತರ ಕೊಟ್ಟವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಉತ್ತಮ ಪುಸ್ತಕವನ್ನು ಬಹುಮಾನವಾಗಿ ನೀಡುವುದು ಈ ಕ್ವಿಜ್ ಕಾರ್ಯಕ್ರಮದ ವೈಶಿಷ್ಟ್ಯ! ಕ್ವಿಜ್ ಮಾಸ್ತರ್ ಆಗಿ ಡಾಕ್ಟರ್ ನಾ ಸೋಮೇಶ್ವರ ಅವರ ನಿರೂಪಣೆಯೇ ಈ ಕಾರ್ಯಕ್ರಮದ ಜೀವಾಳ. 2012ರಲ್ಲೀ 1756 ಎಪಿಸೋಡ್ ಪೂರ್ತಿ ಮಾಡುವ ಮೂಲಕ ಈ ಕ್ವಿಜ್ ಶೋ ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಸ್ಥಾನ ಪಡೆಯಿತು! ಭಾರತದಲ್ಲಿ ಅದುವರೆಗೆ ಯಾವ ಟಿವಿ ಕ್ವಿಜ್ ಕಾರ್ಯಕ್ರಮವು ಇಷ್ಟೊಂದು ದೀರ್ಘ ಅವಧಿಗೆ ನಡೆದಿಲ್ಲ ಎನ್ನುವುದು ಸೋಮೇಶ್ವರ ಅವರ ಹಿರಿಮೆ.

‘ಥಟ್ ಆಂತ ಹೇಳಿ’ ಕ್ವಿಜ್ ಕಾರ್ಯಕ್ರಮವು ಇದೀಗ 3150 ಕಂತುಗಳನ್ನು ಪೂರೈಸಿದೆ! ಭಾಗವಹಿಸಿದ ಸ್ಪರ್ಧಿಗಳ ಸಂಖ್ಯೆಯು 8127! ಕೇಳಿದ ಪ್ರಶ್ನೆಗಳ ಸಂಖ್ಯೆಯೇ 37084! ಬಹುಮಾನವಾಗಿ ನೀಡಿದ ಪುಸ್ತಕಗಳ ಸಂಖ್ಯೆಯೇ 49,000! ಎಲ್ಲಾ ವಿಧವಾಗಿ ಕೂಡ ಅದೊಂದು ಮುರಿಯಲಾಗದ ದಾಖಲೆಯೇ ಆಗಿದೆ!

ಡಾಕ್ಟರ್ ನಾ ಸೋಮೇಶ್ವರ ಅವರು ಕನ್ನಡದ ನಾಡು ನುಡಿಯ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಕೊಡುಗೆಯನ್ನು ನೀಡಿದ್ದಾರೆ. ಅವರಿಗೆ ನಮ್ಮ ಪ್ರಣಾಮಗಳು.
– ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಂಧತ್ವ ಮೆಟ್ಟಿನಿಂತ ಯುವ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲ

Upayuktha

ಐತಿಹಾಸಿಕ ಸೀರಿಯಲ್ ಗಳ ಮೂಲಕ ಭಾರತೀಯರ ಮನಗೆದ್ದ ರಮಾನಂದ ಸಾಗರ್

Upayuktha

ಸಾಧಕರಿಗೆ ನಮನ: ವೈದ್ಯಕೀಯ ಸೇವೆಗಾಗಿಯೇ ಜೀವನ ಮುಡಿಪಾಗಿಟ್ಟ ಡಾ.ಬಿ.ಸಿ.ರಾಯ್

Upayuktha

Leave a Comment