ಕಿರುತೆರೆ- ಟಿವಿ ಸಾಧಕರಿಗೆ ನಮನ

ಇಂದಿನ ಐಕಾನ್: ಕಿರುತೆರೆಯ ಸಾರ್ವಭೌಮ ಟಿ.ಎನ್ ಸೀತಾರಾಮ್

ಕರ್ನಾಟಕದಲ್ಲಿ ಸಿನೆಮಾ ನೋಡೋದಕ್ಕಿಂತ ಧಾರಾವಾಹಿ ನೋಡುವವರ ಸಂಖ್ಯೆ ಹೆಚ್ಚು. ಕಿರುತೆರೆಯ ಹಲವು ಜನಪ್ರಿಯ ಕನ್ನಡ ಧಾರಾವಾಹಿಗಳ ಮೂಲಕ ದೊಡ್ಡ ಸಂಖ್ಯೆಯ ಪ್ರೇಕ್ಷಕ ವರ್ಗವನ್ನು ಸೃಷ್ಟಿ ಮಾಡಿದ ಕೀರ್ತಿ ಟಿ.ಎನ್ ಸೀತಾರಾಂ ಅವರಿಗೆ ಸಲ್ಲಬೇಕು.

ದೊಡ್ಡಬಳ್ಳಾಪುರ ಜಿಲ್ಲೆಯ ತಳಗಾವರ ಎಂಬ ಪುಟ್ಟ ಗ್ರಾಮದಿಂದ ಬೆಂಗಳೂರಿಗೆ ಬಂದು ನೇಶನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ, ಕಾನೂನು ಪದವಿ ಪಡೆದವರು ಅವರು. ಆಗ ಲಂಕೇಶ್, ಅನಂತ ಮೂರ್ತಿ ಅಂತಹ ಶ್ರೇಷ್ಟ ಲೇಖಕರ ಪ್ರಭಾವಕ್ಕೆ ಒಳಗಾದರು. ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯಲು ಕಲಿತರು. ಲಂಕೇಶ್ ಅವರ ಪಲ್ಲವಿ ಸಿನೆಮಾದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದರು. ಪುಟ್ಟಣ್ಣ ಅವರ ಪಂಚಮ ವೇದ ಸಿನೆಮಾದ ಅವರು ಬರೆದ ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಬಂದಿತು. 2001ರಲ್ಲಿ ಸ್ವತಂತ್ರವಾಗಿ ಅವರು ನಿರ್ದೇಶಿಸಿದ ಮತದಾನ ಸಿನೆಮಾಕ್ಕೆ ರಾಷ್ಟ್ರಪ್ರಶಸ್ತಿ ಒಲಿಯಿತು.

ಅಲ್ಲಿಂದ ಆರಂಭವಾಯಿತು ನೋಡಿ ಮೆಗಾ ಧಾರಾವಾಹಿಗಳ ಮಹಾ ಮೆರವಣಿಗೆ.

ದೂರದರ್ಶನದಲ್ಲಿ ಅದ್ಭುತವಾಗಿ ಮೂಡಿಬಂದ ‘ಮುಖಾಮುಖಿ’ ಅವರ ಮೊದಲನೇ ಮೆಗಾ ಧಾರಾವಾಹಿ. ನಂತರ ಕಾಲೇಜ್ ತರಂಗ, ಮಾಯಾಮೃಗ, ಜ್ವಾಲಾಮುಖಿ ಕೂಡ ಬೆನ್ನು ಬೆನ್ನಿಗೆ ಸೂಪರ್ ಹಿಟ್ ಆದವು. ‘ಮಾಯಾ ಮೃಗ’ ಧಾರಾವಾಹಿ ಎರಡು ವರ್ಷಗಳ ಕಾಲ ನಿರಂತರ ನಡೆದು ದಾಖಲೆ ಬರೆಯಿತು. ನಂತರ ಈ ಟಿವಿ ವಾಹಿನಿಯ ಮೂಲಕ ಮನ್ವಂತರ, ದಶಾವತಾರ, ಮಿಂಚು, ಮಂಥನ, ಮಳೆ ಬಿಲ್ಲು, ಮುಕ್ತ, ಮುಕ್ತ ಮುಕ್ತ ಮತ್ತು ಮಹಾ ಪರ್ವ ಇವೆಲ್ಲವೂ ಟ್ರೆಂಡ್ ಸೆಟ್ಟರ್ ಆದ ಮೆಗಾ ಧಾರಾವಾಹಿಗಳು. ಮಧ್ಯಮ ವರ್ಗದ ಕುಟುಂಬಗಳ ಸ್ತ್ರೀ ಸಂವೇದನೆಯ ಅವರ ಧಾರಾವಾಹಿಗಳು ಭಾರೀ ಜನಪ್ರಿಯ ಆದವು. ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆದ ಅವರ ‘ಮಗಳು ಜಾನಕಿ’ ಧಾರಾವಾಹಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.

ಅವರ ಧಾರಾವಾಹಿಗಳು ಇಷ್ಟೊಂದು ಗೆಲ್ಲಲು ಕಾರಣ ಏನೆಂದು ಹುಡುಕುತ್ತಾ ಹೊರಟಾಗ ನೂರಾರು ಕಾರಣಗಳು ದೊರೆಯುತ್ತವೆ. ಮಧ್ಯಮ ವರ್ಗದ ಸಂವೇದನೆ, ಮನ ತಟ್ಟುವ ಅಭಿನಯ, ಥಟ್ಟನೆ ಆಕರ್ಷಣೆ ಮಾಡುವ ಶೀರ್ಷಿಕೆ ಗೀತೆ, ಸರಳವಾದ ಸಂಭಾಷಣೆ, ಮಾನವೀಯ ಮೌಲ್ಯಗಳು, ಜೀವನ ಸಂದೇಶಗಳು…ಹೀಗೆ! ಅವರು ಸೃಷ್ಟಿಸುವ ಸ್ತ್ರೀ ಪಾತ್ರಗಳಂತೂ ಸೂಪರ್ಬ್.

ಮಾಯಾ ಮೃಗದ ವಿದ್ಯಾ (ಎಂ.ಡಿ.ಪಲ್ಲವಿ), ಮುಕ್ತ ಧಾರಾವಾಹಿಯ ಕೇಂದ್ರ ಪಾತ್ರ ಮಾಧವಿ ಪಟೇಲ್ (ಮಾಳವಿಕಾ), ಮನ್ವಂತರದ ಮಂದಾಕಿನಿ (ಮೇಘ ನಾಡಿಗೇರ), ಮಗಳು ಜಾನಕಿ ಧಾರಾವಾಹಿಯ ಜಾನಕಿ (ಗಾನವಿ ಲಕ್ಷ್ಮಣ್).. ಎಲ್ಲವೂ ಕ್ಲಾಸಿಕಲ್ ಪಾತ್ರಗಳು. ಯಾವುದೇ ಒಬ್ಬ ಹೊಸ ಕಲಾವಿದ ಅಥವಾ ಕಲಾವಿದೆ ಸೀತಾರಾಂ ಧಾರಾವಾಹಿಯಲ್ಲಿ ಯಾವುದೇ ಸಣ್ಣ ಪಾತ್ರದಲ್ಲಿ ನಟಿಸಲು ಕೂಡ ತುದಿಗಾಲಿನಲ್ಲಿ ನಿಂತಿರುತ್ತಾರೆ. ಏಕೆಂದರೆ ನಿರ್ದೇಶಕನಾಗಿ ಟಿಎನ್ಎಸ್ ಅವರ ಸ್ಕ್ರಿಪ್ಟ್ ಮತ್ತು ಪಾತ್ರ ಪೋಷಣೆ ಅದ್ಭುತ ಆಗಿರುತ್ತದೆ. ಪ್ರತೀ ಧಾರಾವಾಹಿಯ ಟೈಟಲ್ ಹಾಡು ಕೂಡ ಅತ್ಯದ್ಭುತ ಆಗಿರುತ್ತದೆ.

ಎಲ್ಲ ಧಾರಾವಾಹಿಯಲ್ಲಿ ಕೂಡ ಸಿ.ಎಸ್.ಪಿ ಪಾತ್ರದಲ್ಲಿ ವಕೀಲನ ಕರಿ ಕೋಟ್ ಧರಿಸಿ ಬರುವ ಸೀತಾರಾಮ್ ವಾದ ಮಾಡುವುದನ್ನು ನೋಡುವುದೇ ಚೆಂದ. ಅವರು ಸೃಷ್ಟಿಸುವ ಕೋರ್ಟ್ ದೃಶ್ಯಗಳು ಕಣ್ಣಿಗೆ ಹಬ್ಬ. ಆ ಪಾತ್ರದಿಂದ ಪ್ರಭಾವಿತರಾಗಿ ವಕೀಲಿ ವೃತ್ತಿಗೆ ಬಂದವರು ಬಹಳ ಮಂದಿ. ಒಟ್ಟಿನಲ್ಲಿ ಟಿ. ಎನ್. ಸೀತಾರಾಮ್ ಸರ್ ಕಿರುತೆರೆಯ ಸಾರ್ವಭೌಮ ಅನ್ನೋದಂತೂ ಖರೆ.
-ರಾಜೇಂದ್ರ ಭಟ್ ಕೆ.
ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಇಂದಿನ ಐಕಾನ್- ಸ್ವರ ನಿಲ್ಲಿಸಿದ ಸಂಗೀತ ಮಾರ್ತಾಂಡ ಪಂಡಿತ್ ಜಸರಾಜ್

Upayuktha

ಸೌಂದರ್ಯ ಚಿಕಿತ್ಸೆಯ ಮುಂಚೂಣಿ ಸಾಧಕಿ ವಂದನಾ ಲುತ್ರಾ

Upayuktha

ಫ್ಯಾಷನ್‌ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ ನಿಧಿ ಯಾದವ್

Upayuktha