ಸಾಧಕರಿಗೆ ನಮನ

ಇಂದಿನ ಐಕಾನ್: ನಡುಹಗಲಿನಲಿ ‘ಸೂರ್ಯ’ ಅಸ್ತಂಗತ- ರವಿ ಬೆಳಗೆರೆ

“ನನ್ನ ಬದುಕನ್ನು ಯಾರೂ ಕಾಪಿ ಮಾಡುವುದು ಬೇಡ. ಆದರೆ ನನ್ನ ನವಿರು ಬರವಣಿಗೆಯನ್ನು ಓದಲು ಹಿಂಜರಿಕೆ ಬೇಡ. ರವಿ ಎಂದಿಗೂ ಅಕ್ಷರ ಹಾದರ ಮಾಡುವುದಿಲ್ಲ” ಎಂದು ಹೇಳಿದ ರವಿ ಬೆಳಗೆರೆ ನಡುಹಗಲಿನಲ್ಲಿಯೇ ತನ್ನ ಅಕ್ಷರಯಾತ್ರೆಯನ್ನು ಮುಗಿಸಿದ್ದಾರೆ. ಖಾಸ್ ಬಾತ್ ಮುಗಿದಿದೆ! ಬಾಟಮ್ ಐಟಮ್ ಬಾಕಿ ಉಳಿದಿಲ್ಲ! ರವಿ ಬೆಳಗೆರೆ ಬಾರದ ಲೋಕಕ್ಕೆ ಕಾರಣವನ್ನು ಹೇಳದೆ ತೆರಳಿದ್ದಾರೆ.

ನಾನಿಂದು ಅವರ ಪುಸ್ತಕಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನಾನು ಓದಿದ್ದು ಅವರ ಬರೋಬ್ಬರಿ 70 ಪುಸ್ತಕಗಳನ್ನು. ಪ್ರತೀ ಪುಸ್ತಕವನ್ನು ಎರಡೆರಡು ಸಲ ಓದಿದ್ದೇನೆ. ನನ್ನ ಹದಿಹರೆಯ ಮತ್ತು ಯೌವ್ವನದ ಹೊತ್ತಲ್ಲಿ ನನ್ನ ಮೇಲೆ ಅತೀ ಹೆಚ್ಚು ಪ್ರಭಾವ ಬೀರಿದ್ದು ಅವರ ಪುಸ್ತಕಗಳು.1995ರಲ್ಲಿ ಅವರು ಆರಂಭಿಸಿದ “ಹಾಯ್ ಬೆಂಗಳೂರು” ಪತ್ರಿಕೆಯು ಕನ್ನಡದ ಅತ್ಯಂತ ಜನಪ್ರಿಯ ವಾರಪತ್ರಿಕೆ ಆದದ್ದು ಅವರ ಲೇಖನಗಳ ಶಕ್ತಿಯಿಂದ! ವಿಠ್ಠಲ ಮೂರ್ತಿ, ಜೋಗಿ ಮೊದಲಾದ ಲೇಖಕರನ್ನು ಸ್ಟಾರ್ ಮಾಡಿದ್ದು ಅದೇ ಪತ್ರಿಕೆ. ಅದನ್ನು ಜನರು ಕೃಷ್ಣ ಸುಂದರಿ ಎಂದು ಬಹಳ ಪ್ರೀತಿಯಿಂದ ಕರೆದರು. ಜನರು ಆ ಪತ್ರಿಕೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರ ಲವ್ ಲವಿಕೆ, ಬಾಟಮ್ ಐಟಮ್, ಖಾಸ್ ಬಾತ್, ಪಾಪಿಗಳ ಲೋಕದಲ್ಲಿ ಮೊದಲಾದ ಕಾಲಂಗಳು ಓದುಗರಿಗೆ ಹುಚ್ಚು ಹಿಡಿಸಿದ್ದು ಸುಳ್ಳಲ್ಲ.

ನಂತರ ಕೇವಲ ಯುವ ಓದುಗರನ್ನು ಗಮನದಲ್ಲಿರಿಸಿ “ಓ ಮನಸೇ” ಎಂಬ ಹೆಸರಿನ ಪಾಕ್ಷಿಕವನ್ನು ಆರಂಬಿಸಿದರು. ಅದು ಕೂಡ ಕನ್ನಡಿಗರ ಕಣ್ಮಣಿ ಆಯಿತು. ಪತ್ರಿಕೆಗಳ ಅಕಾಡೆಮಿಕ್ ಭಾಷೆಯಿಂದ ಹೊರಬಂದು ಹೆಚ್ಚು ಆಲಂಕಾರಿಕ ಮತ್ತು ಹೃದಯಕ್ಕೆ ಲಗ್ಗೆ ಇಡುವ ಭಾಷೆಯನ್ನು ಬಳಕೆ ಮಾಡಿದ್ದು ರವಿ ಅವರ ಹೆಗ್ಗಳಿಕೆ. ಶಬ್ದಗಳ ಬಳಕೆಯಲ್ಲಿ ಅವರು ಅದ್ಭುತವೇ ಹೌದು! ಆದ್ದರಿಂದ ಅವರು ಶಬ್ದ ಗಾರುಡಿಗ.

ಬಿರುಬಿಸಿಲಿನ ಜಿಲ್ಲೆಯಾದ ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಬಡತನದ ಕಾರಣಕ್ಕೆ ತುಮಕೂರು ಸಿದ್ದಗಂಗಾ ಶಾಲೆಯಲ್ಲಿ ಓದಿದವರು. SSLC ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್ ಆದವರು ರವಿ! ನಂತರ ಹೊಟ್ಟೆಪಾಡಿಗಾಗಿ ಹೊಟೇಲು ಮಾಣಿ, ರೂಮ್ ಬಾಯ್, ಹಾಲು ಮಾರುವ ಹುಡುಗ, ಸಿನೆಮಾ ಮಂದಿರದ ಗೇಟ್ ಕೀಪರ್, ಸ್ವಾಗತಕಾರ, ಮೆಡಿಕಲ್ ರೆಪ್ ಹೀಗೆ 13 ವೃತ್ತಿಗಳನ್ನು ಮಾಡಿದರು. ಮುಂದೆ ಇತಿಹಾಸದಲ್ಲಿ ಎಂ.ಎ. ಮಾಡಿ ಕಾಲೇಜು ಉಪನ್ಯಾಸಕ ವೃತ್ತಿಯನ್ನು ಮಾಡಿದ್ದರು. ನಂತರ ಬರವಣಿಗೆಯೇ ಅವರ ವೃತ್ತಿಯಾಯಿತು. ಅದು ಕನ್ನಡದ ಭಾಗ್ಯ ಎಂದು ಹೇಳಬಹುದು.

ತನ್ನದೇ ಬರವಣಿಗೆಯ ವೈಭವದ ಬಗ್ಗೆ ರವಿ ಸರ್ ಹೀಗೆ ಹೇಳಿದ್ದಾರೆ. “ಒಮ್ಮೆ ಬರೆಯಲು ಕೂತರೆ 20-30 ಪುಟ ಒಂದು ಚಿತ್ತಿಲ್ಲದೇ, ಒಂದೇ ಒಂದು ಕಾಟ್ ಕೂಡ ಹಾಕದೆ ಬರೆಯುತ್ತೇನೆ. ರಾತ್ರಿ ಇಡೀ ಕೂತು ಬರೆಯುವೆ. ಯಾವ ರೆಫರೆನ್ಸ್ ಇಲ್ಲದೆ, ಗೂಗಲ್ ಇಣುಕಿ ನೋಡದೆ ನಾನು ಬರೆಯುತ್ತೇನೆ!” ಎಂದು ಹೇಳಿದ್ದಾರೆ. ಐತಿಹಾಸಿಕ, ಭೂಗತ ಜಗತ್ತಿನ ನೂರಾರು ಕಥೆಗಳು, ಆತ್ಮಕಥೆಗಳು ಕಾದಂಬರಿಗಳನ್ನು ಅವರು ಅಷ್ಟು ನಿಖರವಾಗಿ ಮತ್ತು ವಾಸ್ತವವಾಗಿ ಹೇಗೆ ಬರೆದರು? ಅದು ನಿಜಕ್ಕೂ ಅಚ್ಚರಿಯೆ ಸರಿ!

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯುದ್ಧಭೂಮಿಗೆ ಹೋಗಿ ವರದಿ ಮಾಡಿದ್ದು, ಪಾಕಿಸ್ತಾನದ ಭಯ ಹುಟ್ಟಿಸುವ ಅಡಗುತಾಣಗಳಲ್ಲಿ ಓಡಾಡಿ “ನೀನಾ ಪಾಕಿಸ್ತಾನ” ಬರೆದದ್ದು, ಚಂಬಲ್ ಕಣಿವೆ ಇಡೀ ಓಡಾಡಿ ಫೂಲನ್ ದೇವಿಯ ಕಥೆಯನ್ನು ಬರೆದದ್ದು, ಭೂಗತ ಲೋಕದ ಉದ್ದಗಲದಲ್ಲಿ ಓಡಾಡಿ ಭೀಮಾ ತೀರದಲ್ಲಿ, ಪಾಪಿಗಳ ಲೋಕದಲ್ಲಿ, ದಂಗೆಯ ದಿನಗಳಲ್ಲಿ ಬರೆದು ಮುಗಿಸಿದ್ದು, ಚೀನಾ ಯುದ್ಧದಲ್ಲಿ ಬದುಕು ಕಳೆದುಕೊಂಡ ಸೈನಿಕನ ಕಥೆ ಹಿಡಿದು ‘ಹಿಮಾಲಯನ್ ಬ್ಲಂಡರ್’ ಕಣ್ಣೀರು ಸುರಿಸುತ್ತ ಬರೆದದ್ದು, ರಕ್ತ ಸಿಕ್ತ ಇತಿಹಾಸದ ದಾವೂದ್ ಬದುಕಿನ ‘D ಕಂಪೆನಿ’

ಬರೆದದ್ದು, ಸಂದೀಪ್ ಉನ್ನಿ ಕೃಷ್ಣನ್ ಅವರ ರಾಷ್ಟ್ರ ಪ್ರೇಮವನ್ನು ಸುಂದರವಾಗಿ ಬರೆದದ್ದು, ನವಿರು ಪ್ರೇಮ ಕಥೆಯ ‘ನೀ ಹೀಂಗ ನೋಡಬ್ಯಾಡ ನನ್ನ’ ‘ಹೇಳಿ ಹೋಗು ಕಾರಣ’ ಬರೆದದ್ದು, ರಾಜಕುಮಾರ್ ಲೀಲಾವತಿ ಅವರ ಪ್ರಣಯ ಆಧಾರಿತವಾದ
‘ರಾಜ್ ಲೀಲಾ ವಿನೋದ’ ವನ್ನು ಮುಜುಗರವಿಲ್ಲದೆ ಜಗತ್ತಿಗೆ ತೆರೆದು ಇಟ್ಟದ್ದು, ಗಾಂಧಿ ಹತ್ಯೆಯ ಸತ್ಯಗಳನ್ನು ಅನಾವರಣ ಮಾಡಿದ್ದು, ತನ್ನದೇ ಬದುಕಿನ ಕಥೆ ಖಾಸ್ ಬಾತನ್ನು ಹಲವು ಸಂಪುಟಗಳಲ್ಲಿ ಬರೆದದ್ದು… ಹೀಗೆ ಎಲ್ಲ ಪುಸ್ತಕಗಳಲ್ಲಿ ಮಿಂಚಿದ್ದು ರವಿ ಬೆಳಗೆರೆ ಅವರ ಮೊನಚು ಬರವಣಿಗೆ, ಧೈರ್ಯ, ದಿಟ್ಟತನ ಮತ್ತು ಸತ್ಯಶೋಧನೆಯ ಹಂಬಲ! ಅದು ರವಿ ಅವರ ಹೆಗ್ಗಳಿಕೆ!

ನನ್ನ ಮೊದಲ ಪುಸ್ತಕವಾದ ‘ಯಶಸ್ಸು ಆಕಸ್ಮಿಕವಲ್ಲ’ ವನ್ನು ಬಿಡುಗಡೆ ಮಾಡಿದ್ದು ರವಿ ಸರ್. ನಂತರ ಕಾರಂತ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಕೋಟಕ್ಕೆ ಬಂದಾಗಲೂ ಅವರ ಜೊತೆ ಮಾತಾಡಿದ್ದೆ. ನಂತರ ಅವರ ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮದ ನಿರೂಪಣೆಗೆ ಮಾರು ಹೋಗಿದ್ದೆ. ಅವರು ನನ್ನ ಬರವಣಿಗೆ ಮತ್ತು ನಿರೂಪಣೆಯ ಕ್ಷೇತ್ರದ ಐಕಾನ್ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವೆ.

ಅವರ ಖಾಸಗಿ ಬದುಕಿನ ಬಗ್ಗೆ ಅವರು ಎಲ್ಲಿ ಕೂಡ ಮುಚ್ಚಿಡುವ ಪ್ರಯತ್ನವನ್ನು ಮಾಡಲಿಲ್ಲ! ಅದರ ಬಗ್ಗೆ ಒಂದಿಷ್ಟೂ ಹೇಸಿಗೆ ಇಲ್ಲದೆ ಅವರು ಹೇಳಿದ ಮಾತು “ನನಗೆ ಜೀವನದಲ್ಲಿ ಎರಡೆರಡು ಆಗಿ ಹೋಯ್ತು! ಎರಡು ಹೆಂಡತಿ! ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, ಸಿಗರೇಟ್ ಮತ್ತು ಹೆಂಡ ಎರಡು ವ್ಯಸನಗಳು!….”

ಅವರೇ ಹೇಳಿದ ಹಾಗೆ “ನನಗೆ ನನ್ನ ಬದುಕಿನ ಬಗ್ಗೆ ಯಾವುದೇ ರಿಗ್ರೆಟ್ಸ್ ಇಲ್ಲ. ನಾನು ಜೀವನದ ಪ್ರತೀ ಕ್ಷಣವನ್ನು ಕೂಡ ಎಂಜಾಯ್ ಮಾಡಿದ್ದೇನೆ. THATS ALL!” ಹೋಗಿ ಬನ್ನಿ ರವಿ. ನಾವು ಕಾಯುತ್ತೇವೆ.

– ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಾಧಕರಿಗೆ ನಮನ: ನವೋದ್ಯಮದ ಹೊಸ ತಾರೆ ಚಿನು ಕಲಾ

Upayuktha

ಎವರೆಸ್ಟ್‌ ಏರಿದ ಅತಿ ಕಿರಿಯ ಭಾರತೀಯ ಮಹಿಳೆ ಶಿವಾಂಗಿ ಪಾಠಕ್

Upayuktha

ಅಂತಾರಾಷ್ಟ್ರೀಯ ಶೂಟರ್ ವರ್ಲ್ಡ್ ನಂ.1 ಹೀನಾ ಸಿಧು

Upayuktha