ಸಾಧಕರಿಗೆ ನಮನ

ಇಂದಿನ ಐಕಾನ್‌: ಸಂತೂರ್‌ ಸಾಮ್ರಾಟ ಶಿವಕುಮಾರ್ ಶರ್ಮಾ

ಸಂತೂರ್ ಸಾಮ್ರಾಟರಾದ ಶಿವಕುಮಾರ್ ಶರ್ಮಾ ಅವರಿಗೆ ಇಂದು (ಜನವರಿ 13) 82 ವರ್ಷಗಳು ತುಂಬಿದವು. ನೂರು ತಂತಿಗಳ ಅಪೂರ್ವ ವಾದ್ಯ ಸಂತೂರಿಗೆ ಜಾಗತಿಕ ಮಟ್ಟದ ಮಾನ್ಯತೆಯನ್ನು ತಂದುಕೊಟ್ಟ ಮೇರು ಕಲಾವಿದ ಅವರು. ಅವರ ಶಾಸ್ತ್ರೀಯ ಸಂಗೀತದ ಪ್ರಸ್ತುತಿಗಳನ್ನು ಕೇಳುತ್ತಾ ಹೋದಂತೆ ನಾನಂತೂ ಮೂಕ ವಿಸ್ಮಿತನಾಗಿದ್ದೇನೆ. ಅವರು ತಬಲಾ ವಾದನವನ್ನು ಕೂಡ ಶಾಸ್ತ್ರೀಯವಾಗಿ ಕಲಿತಿದ್ದಾರೆ.

ಪಂಡಿತ್ ಶಿವಕುಮಾರ್ ಶರ್ಮಾ ಅವರು ಕಾಶ್ಮೀರದ ಒಂದು ಸಾಂಸ್ಕೃತಿಕವಾದ ಗ್ರಾಮದಿಂದ ಬಂದವರು. ಅವರ ತಂದೆ ಪಂಡಿತ್ ಉಮಾದತ್ತ ಶರ್ಮಾ ಅವರು ಕೀರ್ತಿ ಪಡೆದ ಸಂಗೀತ ವಿದ್ವಾಂಸರು. ಡೋಗ್ರಿ ಅವರ ಮಾತೃಭಾಷೆ. ಐದನೇ ವರ್ಷದಲ್ಲಿ ತಂದೆಯಿಂದ ಸಂಗೀತ ಪಾಠವು ಆರಂಭ ಆಗಿತ್ತು. ಅಪ್ಪನಿಗೆ ಮಗ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಇತ್ತು. 13ನೆಯ ಸಣ್ಣ ವಯಸ್ಸಿಗೆ ಮಗನ ಕೈಯ್ಯಲ್ಲಿ ಸಂತೂರು ಎಂಬ ಮಹಾ ವಾದ್ಯವನ್ನು ಇಟ್ಟು ಅಪ್ಪ ಆಶೀರ್ವಾದವನ್ನು ಮಾಡಿದರು. ಅದುವರೆಗೆ ಇಡೀ ಭಾರತದಲ್ಲಿ ಸಂತೂರು ವಾದ್ಯವನ್ನು ಗೆದ್ದ ಕಲಾವಿದರು ಯಾರೂ ಇರಲಿಲ್ಲ.

ರಕ್ತಗತವಾಗಿ ಬಂದ ಸಂಗೀತವು ಬಳುವಳಿ ಆಗಿತ್ತು. ಸತತ ಪ್ರಯತ್ನದಿಂದ ಸಂತೂರು ಅವರ ಕೈ ಹಿಡಿಯಿತು. ಮಾಧುರ್ಯದ ಅಲೆಯನ್ನು ಹುಟ್ಟು ಹಾಕಿತು. 17ನೆಯ ವಯಸ್ಸಿಗೆ ಮುಂಬೈಯಲ್ಲಿ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕಛೇರಿಯನ್ನು ನೀಡಿದಾಗ ಸೇರಿದ ಸಂಗೀತ ಪ್ರೇಮಿಗಳು ಶಾಭಾಶ್ ಅಂದರು. 1956ರ ಶಾಂತಾರಾಮ್ ನಿರ್ದೇಶನದ ಝನಕ್ ಝನಕ್ ಪಾಯಲ್ ಬಾಜೆ ಸಿನೆಮಾದಲ್ಲಿ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಒದಗಿಸುವ ಅವಕಾಶ ಅವರಿಗೆ ದೊರೆಯಿತು. ಅದು ಕೂಡ ಸೂಪರ್ ಹಿಟ್ ಆಯಿತು.

ಅದೇ ಹೊತ್ತಿಗೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕೊಳಲು ವಾದಕ ಹರಿ ಪ್ರಸಾದ್ ಚೌರಾಸಿಯಾ, ಗಿಟಾರ್ ವಾದಕ ಬ್ರಿಜ್ ಭೂಷಣ ಕಬ್ರಾ ಅವರ ಗೆಳೆತನ ದೊರಕಿತು. ಅವರು ಮೂವರೂ ಸೇರಿ Call Of The Valley ಎಂಬ ಹೆಸರಿನ ಒಂದು ಆಲ್ಬಂ ಹೊರತಂದರು. ಅದು ಸೂಪರ್ ಹಿಟ್ ಆಯಿತು ಮತ್ತು ಪ್ಲಾಟಿನಂ ಡಿಸ್ಕ್ ಪಡೆಯಿತು. ಪಂಡಿತ್ ಶಿವಕುಮಾರ್ ಶರ್ಮಾ ಅವರು ಗಾಯಕಿ, ಗತ್ಕಾರಿ ಮತ್ತು ಲಯಕಾರಿ ಎಲ್ಲದರಲ್ಲೂ ಗೆದ್ದರು.

ಮುಂದೆ ಶಿವಕುಮಾರ್ ಶರ್ಮಾ ಮತ್ತು ಹರಿಪ್ರಸಾದ್ ಚೌರಾಸಿಯಾ ಸೇರಿ ಹಲವು ಹಿಂದೀ ಸಿನೆಮಾಗಳಿಗೆ ‘ಶಿವ್ ಹರಿ’ ಎಂಬ ಹೆಸರಿನಲ್ಲಿ ಸಂಗೀತ ನಿರ್ದೇಶನ ಮಾಡಿದರು. ಸಿಲ್ಸಿಲಾ, ಫಾಸಲೆ, ಡರ್, ಚಾಂದಿನಿ, ಲಮಹೆ ಮೊದಲಾದ ಸಿನೆಮಾಗಳಿಗೆ ಶಿವ್ ಹರಿ ಅವರ ಸಂಗೀತ ನಿರ್ದೇಶನ ಇದ್ದು ಅವೆಲ್ಲವೂ ಭಾರೀ ಹಿಟ್ ಆಗಿವೆ. ಸಿಲ್ ಸಿಲಾ ಹಿಂದೀ ಸಿನೆಮಾದ ಹಾಡುಗಳಿಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತು. ಉಸ್ತಾದ್ ಬಿಸ್ಮಿಲ್ಲಾ ಖಾನ್, ಉಸ್ತಾದ ವಿಲಾಯತ್ ಖಾನ್, ಝಾಕೀರ್ ಹುಸೇನ್, ಅಲ್ಲಾ ರಖಾ, ಹರಿ ಪ್ರಸಾದ್ ಚೌರಾಸಿಯಾ ಅವರೊಂದಿಗೆ ಶಿವಕುಮಾರ್ ಶರ್ಮಾ ಅವರ ಜುಗಲಬಂದಿ ಕಾರ್ಯಕ್ರಮಗಳ ವಿಡಿಯೋಗಳನ್ನು ಯು ಟ್ಯೂಬ್ ವೇದಿಕೆಯಲ್ಲಿ ನೋಡಿದಾಗ ರೋಮಾಂಚನ ಆಗುತ್ತದೆ. ಸಂಗೀತದ ದೈವಿಕ ಸ್ಪರ್ಶಕ್ಕೆ ನಾವು ನಮಗೆ ಅರಿವಿಲ್ಲದಂತೆ ಒಳಗಾಗುತ್ತೇವೆ.

ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ದೊರೆತಿವೆ. ಅಮೆರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯವು ಅವರಿಗೆ ಗೌರವ ಸಿಟಿಜನ್ ಶಿಪ್ ನೀಡಿದೆ. ಭಾರತದ ಎಲ್ಲಾ ರಾಷ್ಟ್ರೀಯ ಸಂಗೀತ ಮಹೋತ್ಸವಗಳ ವೇದಿಕೆಯಲ್ಲಿ ಶರ್ಮಾ ಅವರ ಸಂಗೀತ ಕಛೇರಿಯು ಇರುತ್ತದೆ ಮತ್ತು ಅದು ಸ್ಟಾರ್ ಆಕರ್ಷಣೆ ಆಗಿರುತ್ತದೆ. ನೂರಾರು ದೇಶಗಳ ಶಾಸ್ತ್ರೀಯ ಸಂಗೀತ ವೇದಿಕೆಗಳಲ್ಲಿ ಶಿವಕುಮಾರ್ ಶರ್ಮಾ ಅವರ ಸಂತೂರ್ ವಾದನದ ಮಾಧುರ್ಯವನ್ನು ಕೇಳುವುದೇ ಚಂದ. ಅವರಿಗೆ ಅಮೆರಿಕ, ಫ್ರಾನ್ಸ್, ಇಟಲಿ, ಜರ್ಮನಿ, ಲಂಡನ್ ಮೊದಲಾದ ಕಡೆಗಳಲ್ಲಿ ಕೂಡ ಸಾವಿರಾರು ಅಭಿಮಾನಿಗಳು ಇದ್ದಾರೆ.

“ಸಂಗೀತವು ಕೇವಲ ಮನೋರಂಜನೆಗಾಗಿ ಅಲ್ಲ. ಅದು ಒಂದು ದಿವ್ಯವಾದ ಆರಾಧನೆ. ಒಂದು ದಿವ್ಯವಾದ ಅನುಭೂತಿ. ನನ್ನ ಸಂಗೀತ ಕಚೇರಿಯಲ್ಲಿ ಕುಳಿತು ಸಂಗೀತ ಆಲಿಸುವ ಶ್ರೋತೃಗಳು ಆಧ್ಯಾತ್ಮಿಕ ಸ್ಪರ್ಶಕ್ಕೆ ಒಳಗಾದರೆ ಮಾತ್ರವೆ ನನಗೆ ತೃಪ್ತಿ” ಎಂದಿದ್ದಾರೆ ಶರ್ಮಾ ಅವರು. ಸಂಗೀತಕ್ಕೆ ಭಾಷೆಯ ಹಂಗಿಲ್ಲ ಎಂದು ನನಗೆ ಅವರಿಂದ ಅರ್ಥವಾಗಿದೆ.

ಇಂದು (ಜನವರಿ 13) ಅವರ ಹುಟ್ಟಿದ ಹಬ್ಬ. ಭಾರತದ ಅತೀ ಶ್ರೇಷ್ಟ ಸಂಗೀತದ ರಾಯಭಾರಿ ನೂರ್ಕಾಲ ಬಾಳಲಿ.

-ರಾಜೇಂದ್ರ ಭಟ್‌ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸ್ಕ್ವಾಷ್‌ ಕ್ರೀಡಾ ಸಾಧಕ ಹರೀಂದರ್ ಪಾಲ್ ಸಂಧು

Upayuktha

ವೇಗದ ನಡಿಗೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಬೆಟ್ಟಂಪಾಡಿಯ ದೀಕ್ಷಿತ್

Upayuktha

ಸಾಧಕರಿಗೆ ನಮನ: ಕಲಾಂ ಸರ್ ಅವರಿಗೊಂದು ಪ್ರೇಮ ಪತ್ರ

Upayuktha