ಸಾಧಕರಿಗೆ ನಮನ

ಇಂದಿನ ಐಕಾನ್- ಟೈಮ್ಸ್ ಕಿಡ್ ಆಫ್ ದಿ ಇಯರ್ ಗೀತಾಂಜಲಿ ರಾವ್

ಅಮೆರಿಕಾದ ಅತ್ಯಂತ ಜನಪ್ರಿಯವಾದ ಪತ್ರಿಕೆ ಟೈಮ್ಸ್. ಅದರ ಮುಖಪುಟದಲ್ಲಿ ಸ್ಥಾನ ಪಡೆಯುವುದು ಯಾರಿಗಾದರೂ ಒಂದು ವಿಶೇಷ ಗೌರವ. ಅದರಲ್ಲಿಯೂ ಒಂದು ಜಾಗತಿಕ ಸ್ಪರ್ಧೆಯಲ್ಲಿ ಗೆದ್ದು TIMES KID OF THE YEAR ಪ್ರಶಸ್ತಿ ಪಡೆಯುವುದು, ಮತ್ತು ಅದರ ಮೂಲಕ ಟೈಮ್ಸ್ ಪತ್ರಿಕೆಯ ಮುಖಪುಟ ಅಲಂಕರಿಸುವುದು ನಿಜಕ್ಕೂ ಗ್ರೇಟ್! ಆ ಸ್ಪರ್ಧೆಯಲ್ಲಿ ಜಾಗತಿಕ ಐದು ಸಾವಿರ ಮಕ್ಕಳು ಭಾಗವಹಿಸಿದ್ದರು ಎನ್ನುವುದು ಅವಳ ಖದರು! ತನ್ನ ಸರಣಿ ಸಂಶೋಧನೆಗಳ ಮೂಲಕ ಈ ಗೌರವವನ್ನು ಪಡೆದ ಹುಡುಗಿ ಭಾರತೀಯ ಮೂಲದವಳು ಅನ್ನುವುದು ನಮಗೆಲ್ಲರಿಗೂ ರೋಮಾಂಚನ! ಆಕೆಯ ವಯಸ್ಸು ಕೇವಲ 15 ಅನ್ನುವುದು ಇನ್ನೂ ದೊಡ್ಡ ಸೆನ್ಸೇಷನ್! ಆಕೆಯ ಹೆಸರು ಗೀತಾಂಜಲಿ ರಾವ್.

ಆಕೆ ಅಮೆರಿಕಾದ ಕೊಲರೆದೋ ಎಂಬ ಪ್ರಾಂತ್ಯದಲ್ಲಿ ವಾಸವಾಗಿರುವ ರಾಮರಾವ್ ಮತ್ತು ಭಾರತೀ ರಾವ್ ದಂಪತಿಗಳ ಮಗಳು. ಹೆತ್ತವರು ಭಾರತೀಯ ಮೂಲದವರು. ಚಿಕ್ಕಂದಿನಿಂದ ವಿಜ್ಞಾನ ಅವಳ ಪ್ಯಾಶನ್. ಹತ್ತನೆ ವರ್ಷದ ಹುಟ್ಟುಹಬ್ಬಕ್ಕೆ ಅವಳು ಹೆತ್ತವರೊಂದಿಗೆ ಬೇಡಿಕೆ ಇಟ್ಟು ಪಡೆದದ್ದು ‘ಕಾರ್ಬನ್ ನ್ಯಾನೋ ಟ್ಯೂಬ್’ ಎಂಬ ಉಪಕರಣದ ಉಡುಗೊರೆಯನ್ನು! ಅದರಿಂದ ನೀರಿನಲ್ಲಿ ಸೀಸದ ಪ್ರಮಾಣವು ವ್ಯತ್ಯಾಸವಾಗಿ ಕುಡಿಯುವ ನೀರು ಮಲಿನವಾಗುವುದನ್ನು ಅವಳು ಪತ್ತೆ ಮಾಡಿದ್ದಳು! ಅದು ಅತ್ಯಂತ ನವೀನತೆಯ ಸಂಶೋಧನೆ ಆಗಿ ವಿಜ್ಞಾನಿಗಳ ಗಮನ ಸೆಳೆಯಿತು!

ತನ್ನ ಹದಿಮೂರರ ಪ್ರಾಯದಲ್ಲಿಯೇ ಗೀತಾಂಜಲಿ ‘ಎಪಿಯೋನ್’ ಎಂಬ ನೂತನ ಸಾಧನವನ್ನು ಕಂಡು ಹಿಡಿದಳು. ನಾವು ತೆಗೆದುಕೊಳ್ಳುವ ಪೇನ್ ಕಿಲ್ಲರ್ ಮಾತ್ರೆಗಳು ಚಟ ಆಗದಂತೆ ತಡೆಯಲು ಆ ಸಾಧನ ಉಪಯುಕ್ತ ಆಯಿತು!

ಗೀತಾಂಜಲಿ ತನ್ನ ಹದಿನಾಲ್ಕರ ಹರೆಯದಲ್ಲಿ ‘ಸೈಬರ್ ಬುಲ್ಲಿ’ ಎಂಬ ಹೆಸರಿನ ಒಂದು ಆಪ್ ಸಂಶೋಧನೆ ಮಾಡಿದಳು. ಅದು ಮೊಬೈಲಿನಲ್ಲಿ ಹುಡುಗಿಯನ್ನು ಚುಡಾಯಿಸುವ ಕಿಡಿಗೇಡಿ ಹುಡುಗರನ್ನು ಪತ್ತೆ ಮಾಡಲು ಉಪಯುಕ್ತ ಆಗಿದೆ! ಹೀಗೆ ಪ್ರತೀ ವರ್ಷಕ್ಕೆ ಒಂದು ಸಂಶೋಧನೆ ಮಾಡುತ್ತಲೆ ಬಂದಿರುವ ಗೀತಾಂಜಲಿ ಈಗ ತನ್ನ ಕ್ಯೂಟ್ ಕ್ಯೂಟ್ ಸಂಶೋಧನೆಗಳ ಮೂಲಕ ಜಗತ್ತಿನ ವಿಜ್ಞಾನಿಗಳ ಗಮನ ಸೆಳೆದಾಗಿದೆ! ಪರಿಸರ ವಿಜ್ಞಾನ, ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ…ಹೀಗೆ ಅವಳ ಸಂಶೋಧನಾ ಕ್ಷೇತ್ರಗಳು ವಿಸ್ತಾರಗೊಳ್ಳುತ್ತ ಹೋಗುತ್ತಿವೆ.

ಯೂ ಟ್ಯೂಬನಲ್ಲಿ ಅವಳ ಟೆಡ್ ಟಾಕ್ ಸರಣಿಯನ್ನು ನೋಡುತ್ತ ನಾನಂತೂ ಆಕೆಯ ಫ್ಯಾನ್ ಆಗಿದ್ದೇನೆ. ಟೈಮ್ಸ್ ಮ್ಯಾಗಜೀನ್ ಖ್ಯಾತ ಹಾಲಿವುಡ್ ನಟಿ ಆಂಜಲಿನಾ ಜೋಲಿ ಮೂಲಕ ಆಕೆಯ ಸಂದರ್ಶನ ಮಾಡಿಸಿದ್ದು, ಅದು ಕೂಡ ಯು ಟ್ಯೂಬನಲ್ಲಿ ಭಾರೀ ವೈರಲ್ ಆಗಿದೆ! ಕಣ್ಣು ಮಿಟುಕಿಸುತ್ತ ಆಕೆ ಚಟಪಟನೆ ಅರಳು ಹುರಿದಂತೆ ಮಾತನಾಡುವ ಪರಿಗೆ ನೀವು ಫಿದಾ ಆಗುವುದು ಖಂಡಿತ. ಆಕೆಯ ಲೋಕ ಜ್ಞಾನ, ವೈಜ್ಞಾನಿಕ ಚಿಂತನೆ, ಪರಿಣಾಮಕಾರಿ ವಿಷಯ ಮಂಡನೆ ನಿಜಕ್ಕೂ ಅದ್ಭುತವೇ ಆಗಿವೆ.

ಆಕೆ ತನ್ನ ಯಶಸ್ಸಿನ ಐದು ಮೆಟ್ಟಿಲುಗಳನ್ನು ಆಂಜಲಿನಾ ನಡೆಸಿದ ಸಂದರ್ಶನದಲ್ಲಿ ತೆರೆದಿಟ್ಟದ್ದು ಹೀಗೆ – Observe, Brain storm, Research, Build and Communicate.

ಇದೆಲ್ಲದರ ಜೊತೆಗೆ ಅಮೆರಿಕಾದ ಇನ್ನೊಂದು ಲೀಡ್ ಪತ್ರಿಕೆ FORBES ಅವಳನ್ನು FORBES 30 UNDER 30 ಪ್ರಶಸ್ತಿಯ ಮೂಲಕ ಗೌರವಿಸಿದೆ. “50 ವರ್ಷಗಳಿಂದ ನಿಂತ ನೀರಾಗಿದ್ದ ಸಾಮಾಜಿಕ, ಶೈಕ್ಷಣಿಕ ಕೊಳೆಯನ್ನು ತೊಳೆದು ಹಾಕಲು ಕೊರೋನ ಒಂದು ವರದಾನವೇ ಸರಿ!” ಎಂದಾಕೆ ತನ್ನ ಸಂದರ್ಶನದಲ್ಲಿ ಹೇಳಿದ್ದಾಳೆ! ಎಷ್ಟೊಂದು ಪ್ರಬುದ್ಧವಾದ ಮಾತು! ಯಾವುದೂ ಬರೆದು ಕೊಟ್ಟ ಸ್ಕ್ರಿಪ್ಟ್ ಅಲ್ಲ!

ಎಳೆಯ ಸಂಶೋಧಕರಿಗೆ ನಿನ್ನ ಸಂದೇಶವೇನು? ಎಂದು ಕೇಳಿದಾಗ ಅವಳು ಹೇಳಿದ ಉತ್ತರ ಅತ್ಯಂತ ಮಾರ್ಮಿಕ ಆಗಿತ್ತು. “ನಿಮ್ಮ ಸುತ್ತಲಿನ ಎಲ್ಲಾ ಸಮಸ್ಯೆಗಳನ್ನೂ ಒಂದೇ ಉಸಿರಲ್ಲಿ ಬಗೆಹರಿಸುತ್ತೇವೆ ಎನ್ನುವ ಹಟ ಬೇಡ. ನಿಮಗೆ ಯಾವುದು ಕುತೂಹಲ ಉಂಟು ಮಾಡುತ್ತದೊ ಅದೊಂದನ್ನೇ ಆರಿಸಿಕೊಂಡು ಹೊರಡಿ. ನನಗೆ ಆವಿಷ್ಕಾರ ಮಾಡಲು ಸಾಧ್ಯ ಆಗುವುದಾದರೆ ನಿಮಗೇಕೆ ಆಗುವುದಿಲ್ಲ?”ಎನ್ನುತ್ತಾಳೆ ನಮ್ಮ ಗೀತಾಂಜಲಿ! ಮುಂದೊಂದು ದಿನ ಅವಳು ನೊಬೆಲ್ ಪ್ರಶಸ್ತಿ ಪಡೆಯುತ್ತಾಳೆ ಅನ್ನುವುದು ನನ್ನ ಭವಿಷ್ಯ!
ನನ್ನ ಭವಿಷ್ಯ ನಿಜವಾಗಲಿ.

-ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ವೃಕ್ಷಮಾತೆ ‘ಪದ್ಮಶ್ರೀ’ ಸಾಲು ಮರದ ತಿಮ್ಮಕ್ಕ

Upayuktha

ಭಿಲ್ ಬುಡಕಟ್ಟು ಸಮುದಾಯದ ಮೊದಲ ವೈದ್ಯ, ಐಎಎಸ್‌ ಅಧಿಕಾರಿ ಡಾ. ರಾಜೇಂದ್ರ ಭಾರುಡ್

Upayuktha

ಫ್ಯಾಷನ್ ಜಗತ್ತಿನ ಐಕಾನ್ ರಿತು ಕುಮಾರ್

Upayuktha