ಕ್ರೀಡೆ ಸಾಧಕರಿಗೆ ನಮನ

ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್.

‘ಮಾನವ ಸೋದರತೆಯ ರಾಷ್ಟ್ರಗಳ ಸಾರ್ವಭೌಮತೆಯನ್ನು ಮೀರಿದೆ’ – ಇದು ನಾನು ನಂಬಿದ ಜೇಸಿಐ ಸಂಸ್ಥೆಯ ಪ್ರಾರ್ಥನೆಯ ಒಂದು ಸಾಲು. ಇದು ನನಗೆ ಆತನ ಬದುಕಿಂದ ಹೆಚ್ಚು ಆಪ್ತವಾಗಿದೆ.

‘ಶತಮಾನದ ಕ್ರೀಡಾಪಟು’ ಎಂದು ಬಿಬಿಸಿ ಆತನಿಗೆ ಗೌರವ ನೀಡಿತು. ಆತ 1980ರಲ್ಲಿ ಮೃತನಾದಾಗ ಆಗಿನ ಅಮೇರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹೇಳಿದ ಶ್ರದ್ಧಾಂಜಲಿಯ ಮಾತು ತುಂಬಾ ಮಾರ್ಮಿಕವಾಗಿದೆ. “ನಾನು ಆತನ ಹಾಗೆ ಸರ್ವಾಧಿಕಾರ, ಬಡತನ ಮತ್ತು ವರ್ಣ ತಾರತಮ್ಯದ ವಿರುದ್ಧ ಹೋರಾಡಿದ ಇನ್ನೊಬ್ಬ ಕ್ರೀಡಾಪಟುವನ್ನು ನೋಡಿಯೇ ಇಲ್ಲ!” ಈ ಗೌರವವನ್ನು ಪಡೆದ ಅಮೇರಿಕದ ಕ್ರೀಡಾಪಟು ನಮ್ಮ ಇಂದಿನ ಐಕಾನ್ ಜೆಸ್ಸಿ ಒವೆನ್ಸ್.

ಆತ ಜನಿಸಿದ್ದು 1913 ಸೆಪ್ಟೆಂಬರ್ 12ರಂದು ತುಳಿತಕ್ಕೆ ಒಳಗಾದ ಒಂದು ನೀಗ್ರೋ ಕುಟುಂಬದಲ್ಲಿ. ಸಾಲದ್ದಕ್ಕೆ ಕಡು ಬಡತನ. ಅವನ ತಂದೆಗೆ ಹತ್ತು ಮಕ್ಕಳು. ಜೆಸ್ಸಿ ಕೊನೆಯ ಮಗು. ಅವನ ಅಮ್ಮನಿಗೂ ಹೆತ್ತು ಹೆತ್ತು ಸಾಕಾಗಿತ್ತು! ಶಾಲೆಗೆ ಹೋಗುವಾಗ ಆತ ಸಂಜೆ ಹೊತ್ತು ಕೂಲಿ ಕೆಲಸ, ಶೂ ರಿಪೇರಿ ಕೆಲಸ ಇತ್ಯಾದಿಯನ್ನು ಮಾಡಬೇಕಾಯಿತು. ಪ್ರೌಢಶಾಲೆಯ ಹಂತಕ್ಕೆ ಬಂದಾಗ ಅವನ ಕ್ರೀಡಾ ಪ್ರತಿಭೆಯನ್ನು ಚಾರ್ಲ್ಸ್ ರಿಲೇ ಎಂಬ ಕೋಚ್ ಗುರುತಿಸಿ ತರಬೇತಿ ಕೊಡಲು ಆರಂಭಿಸುತ್ತಾರೆ.

ಹೈಸ್ಕೂಲ್ ಹಂತದಲ್ಲಿ ಜೆಸ್ಸಿ ರುತ್ ಸೊಲೊಮನ್ ಎಂಬ ಹುಡುಗಿಯನ್ನು ಪ್ರೀತಿ ಮಾಡಲು ತೊಡಗುತ್ತಾನೆ. ಅವನ ವಯಸ್ಸು ಆಗ 15. ಅವಳ ವಯಸ್ಸು 13! ಇಬ್ಬರೂ ಡೇಟಿಂಗ್ ನಡೆಸಿ ಅವಳು ಒಂದು ಮಗುವಿನ ತಾಯಿ ಕೂಡ ಆಗುತ್ತಾಳೆ. ಮುಂದೆ 1935ರ ಹೊತ್ತಿಗೆ ಮದುವೆ ಆಗುತ್ತಾರೆ ಮತ್ತು ಕೊನೆಯವರೆಗೆ ಜೊತೆಯಾಗಿ ಬದುಕುತ್ತಾರೆ. ಇದೆಲ್ಲದರ ನಡುವೆ ಜೆಸ್ಸಿ ತನ್ನ ಕ್ರೀಡೆಯ ತರಬೇತಿಯಲ್ಲಿ ಮುಳುಗಿ ಬಿಡುತ್ತಿದ್ದ. ಬೆಳಿಗ್ಗೆ ಎರಡು ಗಂಟೆ, ಸಂಜೆ ನಾಲ್ಕು ಗಂಟೆ ತರಬೇತಿ ಎಂದಿಗೂ ತಪ್ಪಿಸುತ್ತಾ ಇರಲಿಲ್ಲ. ಹೈಸ್ಕೂಲ್ ವಿದ್ಯಾಬ್ಯಾಸವನ್ನು ಮುಗಿಸುವಾಗ ಜೆಸ್ಸಿ ಒಂದು ವಿಶ್ವದಾಖಲೆ ಮತ್ತು ಒಂದು ಅಮೇರಿಕನ್ ದಾಖಲೆ ಮಾಡಿ ಆಗಿತ್ತು!

5 ಅಡಿ ಹನ್ನೊಂದು ಇಂಚು ಎತ್ತರ, 75 ಕೆಜಿ ದೇಹ ತೂಕ, ಕಬ್ಬಿಣದ ಮಾಂಸ ಖಂಡಗಳು, ಎಂದಿಗೂ ಸೋಲು ಒಪ್ಪದ ಮೈಂಡ್ ಸೆಟ್ ಅವನನ್ನು ಮುಂದೆ ಮಹೋನ್ನತ ಕ್ರೀಡಾಪಟು ಆಗಿ ರೂಪಿಸಿತು. ಎಲ್ಲವೂ ಸ್ವಪ್ರಯತ್ನ ಮತ್ತು ಸಮರ್ಪಣಾ ಭಾವದ ಫಲ. ಆತನಿಗೆ ಮುಂದೆ ಒಲಿಂಪಿಕ್ಸ್ ಪದಕ ಗೆಲ್ಲುವ ವರೆಗೂ ಒಂದೇ ಒಂದು ಸ್ಪಾನ್ಸರ್ ಸಿಕ್ಕಿರಲಿಲ್ಲ! ಹಸಿದ ಹೊಟ್ಟೆಯಲ್ಲಿ, ಬರೀ ಕಾಲಲ್ಲಿ ಓಡುವುದು ಅವನಿಗೆ ಅಭ್ಯಾಸ ಆಗಿತ್ತು.

ಜೆಸ್ಸಿ ಇಡೀ ಜಗತ್ತಿನ ಗಮನ ಸೆಳೆಯುವ ಘಟನೆ 1935 ಮೇ ತಿಂಗಳಲ್ಲಿ ನಡೆಯಿತು. ಮಿಚಿಗನ್ ನಗರದಲ್ಲಿ ನಡೆದ ಜಾಗತಿಕ ಮಟ್ಟದ ‘ ಬಿಗ್ ಟೆನ್’ ಕೂಟದಲ್ಲಿ ಜೆಸ್ಸಿ ಕೇವಲ 45 ನಿಮಿಷಗಳ ಅವಧಿಯಲ್ಲಿ ನಾಲ್ಕು ವಿಶ್ವ ದಾಖಲೆ ಮಾಡಿ ಮುಗಿಸಿದ್ದ! ಇದು ವಿಶ್ವದಲ್ಲಿಯೇ ಮೊದಲು! 100 ಗಜ ಓಟ, 220 ಗಜ ಓಟ, ಲಾಂಗ್ ಜಂಪ್ ಮತ್ತು 200 ಮೀಟರ್ ಹರ್ಡಲ್ ಅಂದು ಅವನು ವಿಶ್ವ ದಾಖಲೆ ಮಾಡಿದ ಇವೆಂಟಗಳು! ಈ ಸಾಧನೆಯಿಂದಾಗಿ ಇಡೀ ಕ್ರೀಡಾ ಜಗತ್ತು ಜೆಸ್ಸಿಯನ್ನು ಬೆರಗು ಕಣ್ಣಿಂದ ನೋಡಲು ಆರಂಭ ಮಾಡಿತು.

ಆತನನ್ನು ಇಂದು ನಾವೆಲ್ಲ ನೆನಪು ಮಾಡುವುದು ಆತನ 1936ರ ಬರ್ಲಿನ್ ಒಲಿಂಪಿಕ್ಸ್ ಸಾಧನೆಗಾಗಿ. ಆ ಕ್ಷಣಗಳನ್ನು ಆತನ ಶಬ್ದಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ.

ಜರ್ಮನಿಯ ಬರ್ಲಿನ್ ನಗರದಲ್ಲಿ 1936ರ ಆಗಸ್ಟ್ ತಿಂಗಳಲ್ಲಿ ಒಲಿಂಪಿಕ್ಸ್ ಆಯೋಜನೆ ಆಗಿತ್ತು. ಆಗ ಸರ್ವಾಧಿಕಾರಿ ಆಗಿದ್ದ ಹಿಟ್ಲರ್ ಜರ್ಮನಿಯ ಅಧಿಕಾರವನ್ನು ಹಿಡಿದಿದ್ದ. ತನ್ನ ಶತ್ರು ದೇಶವಾದ ಅಮೇರಿಕಾಕ್ಕೆ ಯಾವ ಪದಕವೂ ದೊರೆಯಬಾರದು, ಎಲ್ಲಾ ಪದಕ ಜರ್ಮನಿಗೆ ದೊರೆಯಬೇಕು, ಆ ರೀತಿಯ ವ್ಯವಸ್ಥೆ ಮಾಡಿ ಎಂದು ಆತ ತನ್ನ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದ!

ನಾವು ಅಮೆರಿಕಾದ ಕ್ರೀಡಾಪಟುಗಳು ಹಡಗನ್ನು ಏರಿ ಜರ್ಮನಿಗೆ ಬರುವಾಗ ನಮ್ಮನ್ನು ಸ್ವಾಗತ ಮಾಡಲು ಯಾರೂ ಇರಲಿಲ್ಲ. ವಾಸ್ತವ್ಯ, ಸೌಲಭ್ಯ, ಆಹಾರ ಎಲ್ಲವೂ ಸಮಸ್ಯೆಯೇ ಆಗಿತ್ತು. ನನಗೆ ಮತ್ತು ನಮ್ಮ ಆಟಗಾರರಿಗೆ ಪೂರಕವಾದ ವೇಳಾಪಟ್ಟಿ ಕೂಡ ಇರಲಿಲ್ಲ.

1936ರ ಆಗಸ್ಟ್ ಮೂರರ ಸಂಜೆ ನಾನು 100 ಮೀಟರ್ ಓಟವನ್ನು 10.3 ಸೇಕೆಂಡಲ್ಲಿ ಓಡಿ ಮೊದಲ ಚಿನ್ನದ ಪದಕ ಪಡೆದೆ. ಮರುದಿನವೆ ನಾನು ಲಾಂಗ್ ಜಂಪ್ ಹಾರಬೇಕಾಗಿತ್ತು. ತುಂಬಾ ನರ್ವಸ್ ಆಗಿ ಎರಡು ಬಾರಿ ಫೌಲ್ ಆದೆ. ಮೂರನೇ ಬಾರಿ ಹಾರುವಾಗ ಧೈರ್ಯದ ಕೊರತೆ ಇತ್ತು. ಆಗ ಅದೇ ಹಿಟ್ಲರನ ಜರ್ಮನಿಯ ಒಬ್ಬ ಬಿಳಿಯ ಕ್ರೀಡಾಪಟು (ಲುಜ್ ಲಾಂಗ್ ಎಂದು ಅವನ ಹೆಸರು) ನನ್ನ ಬಳಿ ಬಂದು ನನ್ನ ತಪ್ಪನ್ನು ನನಗೆ ತಿಳಿಸಿದ ಮತ್ತು ಧೈರ್ಯ ತುಂಬಿಸಿದ. ನಾನು ಮೂರನೇ ಬಾರಿ ಹಾರಿ ವಿಶ್ವ ದಾಖಲೆಯ ( 8.06 ಮೀ) ಜಂಪ್ ಮುಗಿಸಿದ್ದೆ! ನಾನು ವಿಜಯದ ವೇದಿಕೆ ಏರಿ ಆನಂದ ಬಾಷ್ಪ ಸುರಿಸುತ್ತ ನಿಂತಾಗ ಆತ ನನ್ನ ಬಳಿ ಬಂದು ನನ್ನನ್ನು ಅಪ್ಪಿಕೊಂಡ. ಒಬ್ಬ ಕರಿಯ ಮತ್ತು ಬಿಳಿಯ ಅಥ್ಲೀಟ್ಸ್ ಅಂದು ಆಲಂಗಿಸಿ ಹಿಟ್ಲರನ ಸರ್ವಾಧಿಕಾರವನ್ನು ಮೆಟ್ಟಿ ನಿಂತಿದ್ದೆವು! ಗ್ಯಾಲರಿಯಲ್ಲಿ ನಿಂತು ನಮ್ಮಿಬ್ಬರನ್ನೂ ನೋಡುತ್ತಿದ್ದ ಹಿಟ್ಲರ್ ಮುಖ ತಿರುಗಿಸಿ ಹೊರಟೇ ಬಿಟ್ಟಿದ್ದ!

ಮರುದಿನ ನಾನು 200 ಮೀಟರ್ ಓಟದಲ್ಲಿ ಮತ್ತೆ ಚಿನ್ನದ ಪದಕ ಪಡೆದಿದ್ದೆ. ಆಗಸ್ಟ್ ಒಂಬತ್ತರಂದು ನಾನು ಅಮೆರಿಕಾದ 4×100 ರಿಲೆ ತಂಡದ ಭಾಗವಾಗಿ ನನ್ನ ನಾಲ್ಕನೇ ಚಿನ್ನದ ಪದಕ ಪಡೆದಿದ್ದೆ! ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಅಥ್ಲೆಟಿಕ್ಸ್ ಇವೆಂಟಲ್ಲಿ ಒಂದೇ ಒಲಿಂಪಿಕ್ಸ್ ಕೂಟದಲ್ಲಿ 4 ಚಿನ್ನದ ಪದಕ ಪಡೆದ ವಿಶ್ವದ ಮೊದಲನೇ ವ್ಯಕ್ತಿ ನಾನು ಅಂದರೆ ಇನ್ನೂ ನಂಬಿಕೆ ಬರುತ್ತಿಲ್ಲ! ನನಗೆ ಇನ್ನೂ ಕನಸಿನ ಹಾಗೆ ಭಾಸವಾಗುತ್ತಿದೆ. ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದರೂ ಹಿಟ್ಲರ್ ನನಗೆ ಒಂದು ಶೇಕ್ ಹ್ಯಾಂಡ್ ಕೂಡ ಮಾಡಿಲ್ಲ, ಅಭಿನಂದನೆಯ ಒಂದು ಸಂದೇಶ
ಕಳಿಸಿಲ್ಲ ಅನ್ನುವುದು ನನಗೆ ನೋವಿನ ಸಂಗತಿ!

ಹೀಗೆಂದು ಜೆಸ್ಸಿ ಮಾತು ಮುಗಿಸುತ್ತಾರೆ.
ಮುಂದೆ 1984ರ ಒಲಿಂಪಿಕ್ಸ್ ಕೂಟದಲ್ಲಿ ಕಾರ್ಲ್ ಲೂಯಿಸ್ ನಾಲ್ಕು ಚಿನ್ನದ ಪದಕಗಳ ಬೇಟೆ ಆಡುವವರೆಗೆ ಯಾರಿಗೂ ಜೆಸ್ಸಿಯ ಸಾಧನೆ ಪುನರಾವರ್ತನೆ ಮಾಡಲು ಸಾಧ್ಯ ಆಗಿರಲಿಲ್ಲ ಅನ್ನುವುದು ಆತನ ಹೆಮ್ಮೆ!
1980ರಲ್ಲಿ ಆತ ಅಳಿದು ಹೋದರೂ ಕ್ರೀಡಾ ಜಗತ್ತು ಕಂಡಂಥ ಶ್ರೇಷ್ಟ ಸಾಧಕನಾಗಿ ಜೆಸ್ಸಿ ಓವೆನ್ಸ್ ಹೆಸರು ಶಾಶ್ವತ ಆಗಿರುತ್ತದೆ.

-ರಾಜೇಂದ್ರ ಭಟ್ ಕೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ತಮಿಳುನಾಡಿನ ಸಾಮಾಜಿಕ ಕ್ರಾಂತಿಯ ಕಿಡಿ ಪೆರಿಯಾರ್ ರಾಮಸ್ವಾಮಿ

Upayuktha

ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಕಟ್ಟಿ ಕಡಲಲ್ಲಿ ಈಜಿದ ನಾಗರಾಜ ಖಾರ್ವಿಯ ಸಾಹಸ

Upayuktha

ಇಂದಿನ ಐಕಾನ್: ನಡುಹಗಲಿನಲಿ ‘ಸೂರ್ಯ’ ಅಸ್ತಂಗತ- ರವಿ ಬೆಳಗೆರೆ

Upayuktha