ದೇಶ-ವಿದೇಶ ಪ್ರಮುಖ

ಇಸ್ರೇಲ್‌ ನಿರ್ಮಿತ 210 ಟ್ಯಾಂಕ್ ನಾಶಕ ಕ್ಷಿಪಣಿಗಳು ಭಾರತೀಯ ಸೇನೆಯ ಬತ್ತಳಿಕೆಗೆ

ಪ್ರಾತಿನಿಧಿಕ ಚಿತ್ರ

ಹೊಸದಿಲ್ಲಿ: ಪಾಕಿಸ್ತಾನದ ಜತೆಗಿನ ಪಶ್ಚಿಮದ ಗಡಿಯಲ್ಲಿ ನುಗ್ಗಿಬರುವ ಶತ್ರುಗಳ ಟ್ಯಾಂಕ್‌ಗಳನ್ನು ಧ್ವಂಸಗೊಳಿಸಲು ಇಸ್ರೇಲ್‌ನ ಸ್ಪೈಕ್‌ ಆಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್ಸ್‌ (ಎಟಿಜಿಎಂ) ಗಳನ್ನು ಭಾರತ ಖರೀದಿಸುತ್ತಿದೆ.

ಸ್ವದೇಶಿ ನಿರ್ಮಿತ ‘ಟ್ಯಾಂಕ್ ನಾಶಕ’ಗಳನ್ನು ಡಿಆರ್‌ಡಿಓ ಅಭಿವೃದ್ಧಿಪಡಿಸುತ್ತಿದ್ದು, ಬಳಕೆಗೆ ಸಿದ್ಧವಾಗುವವರೆಗೆ ಸೀಮಿತ ಸಂಖ್ಯೆಯಲ್ಲಿ ಇಸ್ರೇಲಿನ ಸ್ಪೈಕ್ ಟ್ಯಾಂಕ್ ನಾಶಕಗಳನ್ನು ಭಾರತೀಯ ಸೇನೆ ಖರೀದಿಸಲಿದೆ.

ಮೊದಲ ಕಂತಿನಲ್ಲಿ 210 ಸ್ಪೈಕ್ ಕ್ಷಿಪಣಿಗಳು ಮತ್ತು ಒಂದು ಡಜನ್‌ನಷ್ಟು ಲಾಂಚರ್‌ಗಳನ್ನು ಖರೀದಿಸಲಾಗುತ್ತಿದ್ದು, 10 ದಿನಗಳ ಹಿಂದೆ ಭಾರತ ತಲುಪಿವೆ. ‘ಸೇನೆಯ ಉಪ ಮುಖ್ಯಸ್ಥರ ತುರ್ತು ಖರೀದಿ ಅಧಿಕಾರವನ್ನು ಬಳಸಿ’ ಇವುಗಳನ್ನು ಖರೀದಿಸಲಾಗಿದೆ. ಭಾರತ-ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‌ನ ಜೈಷೆ ಮೊಹಮ್ಮದ್ ಉಗ್ರ ಶಿಬಿರಗಳನ್ನು ವೈಮಾನಿಕ ದಾಳಿ ಮೂಲಕ ನಾಶಪಡಿಸಿದ ಬಳಿಕ ಸುಮಾರು 280 ಕೋಟಿ ರೂ ವೆಚ್ಚದಲ್ಲಿ 4 ಕಿ.ಮೀ ದೂರದ ಗುರಿಯನ್ನು ಚಿಂದಿ ಉಡಾಯಿಸಬಲ್ಲ ಫೈರ್ ಅಂಡ್ ಫರ್‌ಗೆಟ್ ಮಾದರಿಯ ಸ್ಪೈಕ್‌ ಎಟಿಜಿಎಂ ಕ್ಷಿಪಣಿಗಳನ್ನು ಖರೀದಿಸಲು ಸೇನೆ ಮುಂದಾಗಿತ್ತು.

ಡಿಆರ್‌ಡಿಓ ನಿರ್ಮಿಸುತ್ತಿರುವ, ಯೋಧರೇ ಹೊತ್ತೊಯ್ಯಬಹುದಾದ ಕ್ಷಿಪಣಿ (ಎಟಿಜಿಎಂ) ಗಳು ಸೇರ್ಪಡೆಗೆ ಸಿದ್ಧವಾಗುವವರೆಗೆ ಇಸ್ರೇಲಿನ ಸ್ಪೈಕ್ ಎಟಿಜಿಎಂಗಳ ಖರೀದಿಗೆ ಮುಂದಿನ ವರ್ಷ ಆದೇಶ ಸಲ್ಲಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

ಡಿಆರ್‌ಡಿಓ ನಿರ್ಮಿಸುತ್ತಿರುವ ಎಂಪಿ- ಎಟಿಜಿಎಂ (ಮ್ಯಾನ್ ಪೋರ್ಟೆಬಲ್‌ ಆಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್ಸ್) 2020ರ ವೇಳೆಗೆ ಬಳಕೆದಾರರ ಪ್ರಾಯೋಗಿಕ ಬಳಕೆಗೆ ಸಿದ್ಧವಾಗಲಿವೆ ಎಂದು ಮೂಲಗಳು ಹೇಳಿವೆ. ಕಳೆದ ತಿಂಗಳು ಆಂಧ್ರಪ್ರದೇಶದ ಕರ್ನೂಲ್‌ ರೇಂಜ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು.

‘ಮೂರನೇ ತಲೆಮಾರಿನ ಎಂಪಿ-ಎಟಿಜಿಎಂಗಳು ಅತ್ಯಾಧುನಿಕ ಮಾದರಿಯವಾಗಿದ್ದು, ಸುಧಾರಿತ ವೈಮಾನಿಕ ತಂತ್ರಜ್ಞಾನ ಹೊಂದಿವೆ. ಪ್ರಾಯೋಗಿಕ ಪರೀಕ್ಷೆ ವೇಳೆ 2.5 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಭೇದಿಸಿವೆ’ ಎಂದು ಡಿಆರ್‌ಡಿಓ ಅಧಿಕಾರಿ ತಿಳಿಸಿದರು.

13 ಲಕ್ಷ ಯೋಧರ ಬಲದ ಸೇನೆಗೆ ಶೇ 50ರಷ್ಟು ಇಂತಹ ಕ್ಷಿಪಣಿಗಳ ಕೊರತೆಯಿರುವುದು ಆತಂಕದ ವಿಷಯವಾಗಿದೆ. ಸೇನೆಯ ಬಳಿ ಈಗ ಇರುವ ಎರಡನೇ ತಲೆಮಾರಿನ ಮಿಲನ್ 2ಟಿ (2 ಕಿ.ಮೀ ವ್ಯಾಪ್ತಿ) ಮತ್ತು ಕೊಂಕರ್ಸ್‌ (4 ಕಿ.ಮೀ ವ್ಯಾಪ್ತಿಯ) ಎಇಟಿಜಿಎಂಗಳು ರಾತ್ರಿ ವೇಳೆಯ ಯುದ್ಧ ಸಾಮರ್ಥ್ಯ ಹೊಂದಿಲ್ಲ.

Related posts

ಬಿ.ಇಡಿ ಕೋರ್ಸ್: ದಾಖಲಾತಿ ಅಂತಿಮ ದಿನಾಂಕ ವಿಸ್ತರಣೆ

Sushmitha Jain

ಏನಿದು ಜನರಿಕ್ ಔಷಧ? ಜನೌಷಧ? ನೀವು ತಿಳಿಯಲೇಬೇಕಾದ ಪೂರ್ಣ ಮಾಹಿತಿ…

Upayuktha

ಎಸ್ಎಸ್ಎಲ್‌ಸಿ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

Upayuktha