
ಹೊಸದಿಲ್ಲಿ:
ಪಾಕ್ ಹೈಕಮಿಷನ್ನ ಈ ಸಿಬ್ಬಂದಿಗಳು ಕದ್ದಿರುವ ವರ್ಗೀಕೃತ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪಾಕ್ ರಾಯಭಾರ ಕಚೇರಿಯ ಸಹಾಯಕ ಅಬಿದ್ ಹುಸೇನ್ (42), ಗುಮಾಸ್ತ ತಾಹಿರ್ ಖಾನ್ (44) ಮತ್ತು ಡ್ರೈವರ್ ಜಾವೇದ್ ಹುಸೇನ್ (36) ಬಂಧಿತರು. ಇವರು ಐಎಸ್ಐ ಜತೆಗೆ ನೇರ ಸಂಪರ್ಕದಲ್ಲಿದ್ದರು. ಇವರನ್ನು ವಿದೇಶಾಂಗ ಸಚಿವಾಲಯ ‘ಅನಪೇಕ್ಷಿತ ವ್ಯಕ್ತಿಗಳು’ ಎಂದು ಘೋಷಿಸಿದ್ದು, ಇಂದು ಬೆಳಗ್ಗೆ ದೇಶಬಿಟ್ಟು ತೆರಳುವಂತೆ ಆದೇಶಿಸಿದೆ.
ಕೆಲ ತಿಂಗಳುಗಳಿಂದಲೇ ಇವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಪ್ರಜೆಯೊಬ್ಬನಿಂದ ಭಾರತೀಯ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸ್ವೀಕರಿಸುತ್ತ, ದಾಖಲೆಗಳನ್ನು ಕೊಟ್ಟವನಿಗೆ ನಗದು ಹಣ ಮತ್ತು ಐಫೋನ್ ಹಸ್ತಾಂತರಿಸುತ್ತಿದ್ದಾಗ ಇವರನ್ನು ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಮೊದಲಿಗೆ ಈ ಮೂವರೂ ತಮ್ಮನ್ನು ತಾವು ಭಾರತೀಯರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ನಕಲಿ ಆಧಾರ್ ಕಾರ್ಡ್ಗಳನ್ನೂ ತೋರಿಸಿದ್ದಾರೆ. ಬಳಿಕ ತೀವ್ರ ವಿಚಾರನೆ ನಡೆಸಿದಾಗ ಪಾಕ್ ಹೈಕಮಿಷನ್ ಸಿಬ್ಬಂದಿಗಳಾಗಿದ್ದು ಐಎಸ್ಐ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇವರ ವಿರುದ್ಧ ಸರಕಾರಿ ಗೌಪ್ಯತಾ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಬಳಿಕ ಸರಕಾರ ಅಬಿದ್ ಮತ್ತು ಖಾನ್ ವಿರುದ್ಧ ಉಚ್ಚಾಟನೆ ಆದೇಶ ಹೊರಡಿಸಿತು. ಇವರಿಬ್ಬರೂ ಪಾಕ್ ಹೈಕಮಿಷನ್ನ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅಬಿದ್ 2018ರ ಡಿಸೆಂಬರ್ನಲ್ಲಿ ಹಾಗೂ ಖಾನ್ 2015ರ ಅಕ್ಟೋಬರ್ನಲ್ಲಿ ಈ ಹುದ್ದೆಗಳಿಗೆ ನೇಮಕಗೊಂಡಿದ್ದರು.
‘ಬೇಹುಗಾರಿಕೆ ಕೃತ್ಯಗಳಲ್ಲಿ ತೊಡಗಿದ್ದ ಇಬ್ಬರು ಪಾಕ್ ಹೈಕಮಿಷನ್ ಸಿಬ್ಬಂದಿಗಳನ್ನು ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಬಂಧಿಸಿವೆ. ಇವರು ಅನಪೇಕ್ಷಿತ ವ್ಯಕ್ತಿಗಳಾಗಿದ್ದು, 24 ಗಂಟೆಗಳೊಳಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಪಾಕಿಸ್ತಾನದ ರಾಯಭಾರ ಕಚೇರಿ ಮುಖ್ಯಸ್ಥರಿಗೆ ನೀಡಲಾದ ಅಧಿಕೃತ ರಾಜತಾಂತ್ರಿಕ ಪತ್ರದಲ್ಲಿ ಈ ಬೇಹುಗಾರಿಕೆ ಕೃತ್ಯದ ಬಗ್ಗೆ ತೀವ್ರ ಪ್ರತಿಭಟನೆ ಸಲ್ಲಿಸಲಾಗಿದ್ದು, ‘ಈ ಅಧಿಕಾರಿಗಳ ಚಟುವಟಿಕೆಗಳು ಭಾರತದ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿವೆ’ ಎಂದು ಸ್ಪಷ್ಟಪಡಿಸಿದೆ.
ಭಾರತ-ಪಾಕ್ ನಡುವೆ ರಾಜತಾಂತ್ರಿಕ ಸಂಬಂಧಗಳು ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
2016ರಲ್ಲಿ ಇಂತಹದೇ ಒಂದು ಬೇಹುಗಾರಿಕೆ ಪ್ರಕರಣದಲ್ಲಿ ಪಾಕ್ ರಾಜತಾಂತ್ರಿಕ ಸಿಬ್ಬಂದಿಯೊಬ್ಬನನ್ನು ಉಚ್ಚಾಟಿಸಲಾಗಿತ್ತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಈಗ ಲಭ್ಯ. ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ