ಸಾಧಕರಿಗೆ ನಮನ

ಸಾಧನೆಗೆ ಪ್ರೇರಣೆ: ಭಾರತೀಯ ವಾಯುಪಡೆ ಪೈಲಟ್ ಆಂಚಲ್ ಗಂಗ್ವಾಲ್

ಜೂನ್ 7, 2013, ಭಾರತದ ಉತ್ತರಾಖಂಡ ರಾಜ್ಯದ ಪಾಲಿಗೆ ಎಂದೂ ಮರೆಯದ ದುರ್ದಿನ. ಪ್ರಕೃತಿ ಮಾತೆಯ ಕೋಪಕ್ಕೆ ತುತ್ತಾದ ರಾಜ್ಯ ಅಂದು ಅತಿ ಹೆಚ್ಚಿನ ಮಳೆ ಸ್ವೀಕರಿಸಿತು. ಚೋರಾಬರಿ ಕೆರೆ ದಂಡೆ ಒಡೆಯಿತು. ಮಂದಾಕಿನಿ ನದಿ ಉಕ್ಕಿ ಹರಿಯಿತು. ಪ್ರವಾಹದ ರಭಸಕ್ಕೆ ಎಲ್ಲವೂ ಕೊಚ್ಚಿ ಹೋಯಿತು. ಭೂಕುಸಿತದ ಕೆಸರು ಮಣ್ಣು, ನೀರು ತನ್ನೆದುರು ಸಿಕ್ಕಿದ ಮನೆ, ಕಟ್ಟಡ, ದೇಗುಲಗಳೆಲ್ಲವನ್ನು ನಾಶ ಮಾಡಿತು. 5,000ಕ್ಕೂ ಹೆಚ್ಚಿನ ಜನ ಪ್ರಾಣ ಕಳಕೊಂಡರು, ಸಾವಿರಾರು ಕೋಟಿ ಹಾನಿಯಾಯಿತು.

ಎಂದಿನಂತೆ ಅಂದೂ ಕೂಡ ಕ್ಷಣದಲ್ಲೆ ಹಾಜರಾದವರು ನಮ್ಮವೀರ ಸೈನಿಕರು. ಭೂಕುಸಿತಕ್ಕೆ ಈಡಾದ ಅಪಾಯದ ಜಾಗದಲ್ಲೂ ಕೂಡ ಜೀವಾಪಾಯ ಲೆಕ್ಕಿಸದೆ ಕಾರ್ಯಾಚರಣೆಗಿಳಿದ ಸುಮಾರು 10,000 ಯೋಧರು, 45 ಕ್ಕೂ ಹೆಲಿಕಾಪ್ಟರ್ ಗಳು 33,000ಕ್ಕೂ ಹೆಚ್ಚಿನ ಜನರನ್ನು ಸ್ಥಳಾಂತರ ಮಾಡಿದರು. ಸೇನೆಯ ಕಾರ್ಯಾಚರಣೆ ಇಡೀ ವಿಶ್ವದ ಪ್ರಶಂಸೆಗೆ ಒಳಗಾಯಿತು. ಮಾಧ್ಯಮಗಳಲ್ಲಿ ವೀರ ಸೈನಿಕರ ಸಾಹಸ ವರದಿಯಾಯಿತು.

ಈ ಕಾರ್ಯಾಚರಣೆಯನ್ನು ವೀಕ್ಷಿಸಿದ ಲಕ್ಷಾಂತರ ಮಂದಿಯಲ್ಲಿ ಒಬ್ಬಳು ಆಗ 12ನೇ ತರಗತಿ ವಿದ್ಯಾರ್ಥಿನಿ ಅಂಚಲ್ ಗಂಗ್ವಾಲ್. ಮಧ್ಯಪ್ರದೇಶದ ಉತ್ತರದ ನೀಮುಖ್ ಜಿಲ್ಲೆಯ ಅಂಚಲ್ ಜೀವನದ ಬಹುದೊಡ್ಡ ತಿರುವಿಗೆ ಉತ್ತರಾಖಂಡ ಭೂಕುಸಿತ ಕಾರಣವಾಯಿತು. ಸೈನಿಕರ ಕಾರ್ಯಾಚರಣೆ ನೋಡಿದ ಅಂಚಲ್ ಮನದಲ್ಲಿ ತಾನೂ ಕೂಡ ಒಬ್ಬ ಸೇನಾಧಿಕಾರಿಯಾಗಬೇಕೆಂದು ಹಂಬಲಿಸಿದಳು. ಜೀವಾಪಾಯ ಲೆಕ್ಕಿಸದೆ ಕಾರ್ಯ ನಿರ್ವಹಿಸಿದ ಸೈನಿಕರ ಜೀವನ ಅಂಚಲ್ ಗುರಿ ಸಾಧನೆಗೆ ಸ್ಫೂರ್ತಿಯಾಯಿತು. ಪರಿಣಾಮ 5 ವರ್ಷಗಳ ನಂತರ ಆಂಚಲ್ ಗಂಗ್ವಾಲ್ ಇಂಡಿಯನ್ ಏರ್ ಫೋರ್ಸ್ ನಲ್ಲಿ ಫ್ಲೈಯಿಂಗ್ ಆಫೀಸರ್. 5 ವರ್ಷಗಳ ಕಾಲ ತನ್ನ ಗುರಿ ಸಾಧನೆಗೆ ತಪಸ್ಸಿನಂತೆ ಶ್ರಮ ವಹಿಸಿದ ಆಂಚಲ್ ಕಣ್ಣಲ್ಲೀಗ ಆನಂದಭಾಷ್ಪ. ಗುರಿ ತಲುಪಿದ ಸಾರ್ಥಕ ಭಾವ.

ಮಧ್ಯಪ್ರದೇಶದ ಉತ್ತರದ ನೀಮುಖ್ ಜಿಲ್ಲೆಯ ಅಂಚಲ್ ಗಂಗ್ವಾಲ್ ತಂದೆ ಟೀ ಸ್ಟಾಲ್ ಮಾಲಿಕ ಸುರೇಶ್ ಗಂಗ್ವಾಲ್. ನೀಮುಖ್ ಬಸ್ ಸ್ಟ್ಯಾಂಡ್ ಬಳಿ ಚಹಾ ಮಾರುವುದು ಇವರ ಉದ್ಯೋಗ. ಮನೆಯ ಪರಿಸ್ಥಿತಿ ಅಂಚಲ್ ಕನಸುಗಳನ್ನು ಬೆಂಬಲಿಸುವ ಸ್ಥಿತಿಯಲ್ಲಿರದಿದ್ದರೂ, ಅಂಚಲ್ ತನ್ನ ಕನಸುಗಳನ್ನು ಬಿಡುವ ಸ್ಥಿತಿಯಲ್ಲಿ ಇಲ್ಲದಿದ್ದದು ಗುರಿ ಸಾಧನೆಗೆ ಪೂರಕವಾಯಿತು.

ನೀಮುಚ್ ನ ಮೆಟ್ರೋ ಹೈಸ್ಕೂಲ್ ನಲ್ಲಿ ಕಲಿತ ಆಂಚಲ್ ಕ್ಲಾಸ್ ನಲ್ಲಿ ಟಾಪರ್,  ಸ್ಕೂಲ್ ಕ್ಯಾಪ್ಟನ್ ಕೂಡ. 5 ಅಡಿ 7 ಇಂಚು ಎತ್ತರದ ಬಾಲೆ ಶಾಲಾ ಬಾಸ್ಕೆಟ್ಬಾಲ್ ತಂಡದ ಖಾಯಂ ಸದಸ್ಯೆ. 12 ನೇ ಕ್ಲಾಸಿನಲ್ಲಿರುವಾಗ ನಡೆದ ಉತ್ತರಾಖಂಡ ಭೂಕುಸಿತ ಕಾರ್ಯಾಚರಣೆಯ ಸ್ಫೂರ್ತಿ ಪಡೆದ ಅಂಚಲ್ ಉಜ್ಜೈನಿ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸಯನ್ಸ್ ನಲ್ಲಿ ಇಂಜಿನಿಯರಿಂಗ್ ಪೂರೈಸುತ್ತಾಳೆ. ಆಗಲೇ ತನ್ನ ಗುರಿಯನ್ನು ಮುಟ್ಟಬಲ್ಲೆನೆಂಬ ಆತ್ಮವಿಶ್ವಾಸ ಅವಳಲ್ಲಿತ್ತು.

ಪದವಿ ಮುಗಿದೊಡನೆ ಕೆಲಸಕ್ಕಾಗಿ ಅಲೆದಾಡುವ ಆಂಚಲ್ ಸ್ಫರ್ಧಾತ್ಮಕ ಪರೀಕ್ಷೆ ಬರೆದು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗುತ್ತಾಳೆ. ಟ್ರೈನಿಂಗ್ ಗೆ ಸೇರುತ್ತಾಳೆ.  ಆದರೆ ಕೆಲಸದ ಒತ್ತಡ ಅವಳ ಕನಸನ್ನು ಈಡೇರಿಸಲು ಬಿಡುವುದಿಲ್ಲ ಎಂದರಿಯುತ್ತಾಳೆ. ಇದೇ ಸಮಯದಲ್ಲಿ ಲೇಬರ್ ಇನ್ಸ್ಪೆಕ್ಟರ್ ಹುದ್ದೆಗಾಗಿ ಪರೀಕ್ಷೆ ಬರೆಯುವ ಅಂಚಲ್ ಅದರಲ್ಲೂ ಉತ್ತೀರ್ಣಳಾಗುತ್ತಾಳೆ. ಈ ಹುದ್ದೆಯಲ್ಲಿನ ಕಡಿಮೆ ಒತ್ತಡ ಆಂಚಲ್ ಳ ವಾಯುಪಡೆ ಸೇರುವ ಕನಸಿನ ಸಾಕಾರಕ್ಕೆ ಬೆಂಬಲಿಸಿತು. ಹಣಕಾಸಿನ ತೊಂದರೆ ಅಂಚಲ್ ಳ ಗುರಿಗೆ ತಡೆಯೊಡ್ಡಲು ತಂದೆ ಸುರೇಶ್ ಬಿಡಲಿಲ್ಲ. ಸಾಲ ಮಾಡಿದ ಸುರೇಶ್ ಮಗಳನ್ನು ಇಂದೋರ್ ಗೆ ಕೋಚಿಂಗ್ ಗೂ ಕಳುಹಿಸುತ್ತಾರೆ.

AFCAT-Air Force Common Admission Test ಬರೆಯುವ ಅಂಚಲ್ ಗೆ ಸುಲಭದಲ್ಲಿ ಗೆಲುವು ದೊರೆಯುವುದಿಲ್ಲ. ಸುಲಭದಲ್ಲಿ ಬಿಟ್ಟು ಕೊಡದ ಮನಃಸ್ಥಿತಿಯ ಆಂಚಲ್  5 ಬಾರಿ ಪರೀಕ್ಷೆ ಬರೆದು 6 ನೇ ಪ್ರಯತ್ನದಲ್ಲಿ ಪಾಸಾಗಿ ಸಂದರ್ಶನ ಎದುರಿಸುತ್ತಾಳೆ. ಪರೀಕ್ಷೆ ಬರೆದ 6 ಲಕ್ಷ ಜನರಲ್ಲಿ ಏರ್ ಫೋರ್ಸ್ ಪ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾದ 22 ಜನರಲ್ಲಿ ಆಂಚಲ್ ಒಬ್ಬಳು. 22 ರಲ್ಲಿ 5 ಜನ ಮಾತ್ರ ಹುಡುಗಿಯರು. ಜೂನ್ 7,2018ರಂದು ಭಾರತೀಯ ವಾಯುಸೇನೆಗೆ ಪ್ರವೇಶ ಪಡೆಯುವ ಅಂಚಲ್ ಗಂಗ್ವಾಲ್ ತನ್ನ ಕನಸನ್ನು ಪೂರೈಸುತ್ತಾಳೆ. ಜೆಟ್ ಫೈಟರ್ ಹಾರಿಸುವ ಕ್ಷಣಕ್ಕೆ ಕಾಯುತ್ತಾಳೆ. ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ಸಚಿವಾಲಯ ಅಂಚಲ್ ಸಾಧನೆಯನ್ನು ಪ್ರಶಂಸಿಸುತ್ತದೆ. ಮೊದಲು ನೀಮುಚ್‌ ನ ನಾಮದೇವ್ ಟೀ ಸ್ಟಾಲ್ ಎಂದರೆ ಗೊತ್ತಿರದ ಜನ ಈಗ ಬಂದು ಅಭಿನಂದಿಸುತ್ತಾರೆ ಎನ್ನುವ ಸುರೇಶ್ ಗಂಗ್ವಾಲ್ ಕಣ್ಣುಗಳಲ್ಲೀಗ ಹೆಮ್ಮೆಯ ಭಾವ ಎದ್ದು ಕಾಣುತ್ತದೆ.

ಏರ್ ಚೀಫ್‌ ಮಾರ್ಷಲ್ ಆರ್. ಕೆ. ಬದಾರಿಯಾ ರವರು ಏರ್ ಪೋರ್ಸ್ ಅಕಾಡೆಮಿ ದುಂಡಿಗಲ್‌ನಲ್ಲಿ 20 ಜೂನ್ 2020ರಂದು ನಡೆದ ಗ್ರಾಜುಯೇಷನ್ ಡೇ ಯಂದು ಆಂಚಲ್ ಗಂಗ್ವಾಲ್ ರಿಗೆ “ಪ್ರೆಸಿಡೆಂಟ್ಸ್ ಪ್ಲೇಕ್ಯು” ಹಸ್ತಾಂತರಿಸಿದರು.

ಸ್ಫೂರ್ತಿಯೆಂಬುದು ವ್ಯಕ್ತಿಯನ್ನು ಸಮೂಹದಿಂದ ಹೊರಬಂದು ಸಾಧಿಸುವುದಕ್ಕೆ ಮತ್ತು ತನ್ನದೇ ಆದ ವ್ಯಕ್ತಿತ್ವ ವನ್ನು ಹೊಂದುವುದಕ್ಕೆ ನೆರವಾಗುತ್ತದೆ ಎಂಬುದಕ್ಕೆ ಆಂಚಲ್ ಗಂಗ್ವಾಲ್ ಯಶೋಗಾಥೆಯೇ ಸಾಕ್ಷಿ. ಬಡ ಕೌಟುಂಬಿಕ ಹಿನ್ನೆಲೆ ತಾವು ಜೀವನದಲ್ಲಿ ಮುಂದೆ ಬರದಿರಲು ಕಾರಣವೆನ್ನುವ ಜನರಿಗೆ 24 ವರ್ಷದ ಮಧ್ಯಪ್ರದೇಶದ ಆಂಚಲ್ ಮಾದರಿಯಾಗಿದ್ದಾಳೆ. ಆರ್ಥಿಕ ಬವಣೆ, ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ತಮ್ಮ ಕನಸಿಗೆ ನೀರೆರೆಯುವ ಯುವತಿಯರು ಆಂಚಲ್ ಗಂಗ್ವಾಲ್ ರನ್ನು ಮಾದರಿಯಾಗಿ ಸ್ವೀಕರಿಸಬಾರದೇಕೆ….???

– ತೇಜಸ್ವಿ. ಕೆ, ಪೈಲಾರು (ಸುಳ್ಯ)

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸಾಧಕರಿಗೆ ನಮನ: ‘ವಯೊಲಿನ್‌ಗೆ ಸಂಗೀತ ಕಲಿಸಿದ’ ಲಾಲ್ಗುಡಿ ಜಯರಾಮನ್

Upayuktha

ಸತಾರದ ಬರಡು ನೆಲವನ್ನು ಹಸಿರು ವನವಾಗಿಸಿದ ಸಂಧ್ಯಾ ಚೌಗುಲೆ

Upayuktha

‘ಓಯೋ ಸಮೂಹದ ಸಂಸ್ಥಾಪಕ ರಿತೇಶ್ ಅಗರ್ವಾಲ್

Upayuktha

Leave a Comment

error: Copying Content is Prohibited !!