ಪ್ರಮುಖ ವಾಣಿಜ್ಯ

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಕಡಿತ ಸದ್ಯಕ್ಕಿಲ್ಲ ಎಂದ ವಿತ್ತಸಚಿವೆ; ಡ್ಯಾಮೇಜ್ ಕಂಟ್ರೋಲ್ ಮಾಡಿದ ನಿರ್ಮಲಾ ಸೀತಾರಾಮನ್

 

ಹೊಸದಿಲ್ಲಿ: ರಾಷ್ಟ್ರೀಯ ಉಳಿತಾಯ ಪತ್ರ ಮತ್ತು ಪಿಪಿಎಫ್‌ ಸೇರಿದಂತೆ ಎಲ್ಲ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು 2020-21ರ ಕೊನೆಯ ತ್ರೈಮಾಸಿಕದಲ್ಲಿ ಇದ್ದಂತೆಯೇ ಮುಂದಿನ ತ್ರೈಮಾಸಿಕಕ್ಕೂ ಮುಂದುವರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ನಿನ್ನೆಯಷ್ಟೇ ಸರಕಾರ ಈ ಬಗ್ಗೆ ಕೈಗೊಂಡಿದ್ದ ತೀರ್ಮಾನವನ್ನು ಸಚಿವೆ ನಿರಾಕರಿಸಿದ್ದು, ಸದ್ಯಕ್ಕೆ ಅಂತಹ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಹುಶಃ ಈಗ ನಡೆಯುತ್ತಿರುವ ವಿಧಾನಸಭೆಗಳ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಸಚಿವೆ ಈ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರಬಹುದು ಎಂದು ಹೇಳಲಾಗುತ್ತಿದೆ.

*********

ಸರಕಾರದ ನಿನ್ನೆಯ ತೀರ್ಮಾನ ಹೀಗಿತ್ತು. ಇದನ್ನು ಬೆಳಗ್ಗೆಯೇ ಎಲ್ಲ ಮಾಧ್ಯಮಗಳೂ ವರದಿ ಮಾಡಿದ್ದವು. ಇದು ಜಾರಿಗೆ ಬಂದಿದ್ದರೆ ಆಗುತ್ತಿದ್ದ ಪರಿಣಾಮಗಳ ವಿವರ ಇಲ್ಲಿದೆ.

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಸೇರಿದಂತೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು 2021-22ರ ಸಾಲಿನ ಮೊದಲ ತ್ರೈಮಾಸಿಕಕ್ಕೆ ಶೇ 1.1ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ದೊಡ್ಡ ಪ್ರಮಾಣದ ಮಧ್ಯಮವರ್ಗದ ಠೇವಣಿದಾರರಿಗೆ ನಷ್ಟವಾಗಲಿದೆ.

ಪಿಪಿಎಫ್‌ ಮೇಲಿನ ಬಡ್ಡಿದರವನ್ನು 7.1ರಿಂದ 6.4ಕ್ಕೆ ಇಳಿಸಲಾಗಿದ್ದರೆ, ಎನ್‌ಎಸ್‌ಸಿ ಮೇಲಿನ ಬಡ್ಡಿದರವನ್ನು ಶೇ 6.8ರಿಂದ ಶೇ 5.9ಕ್ಕೆ ಇಳಿಸಲಾಗಿದೆ.

ನೂತನ ಬಡ್ಡಿದರವು 1974ರಿಂದೀಚೆಗಿನ ವರ್ಷಗಳಲ್ಲೇ ಅತಿ ಕಡಿಮೆಯಾಗಿದೆ. 1974ರ ಆಗಸ್ಟ್‌ನಿಂದ 1975ರ ಮಾರ್ಚ್‌ ವರೆಗೆ ಪಿಪಿಎಫ್ ಬಡ್ಡಿದರ ಶೇ 7ರಷ್ಟಿತ್ತು. ಅದಕ್ಕೂ ಮುಂಚೆ ಈ ಬಡ್ಡಿದರ ಶೇ 5.8ರಷ್ಟಿತ್ತು.

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದ ಆರಂಭದಲ್ಲಿ, ಬ್ಯಾಂಕುಗಳಲ್ಲಿನ ಸ್ಥಿರ ಠೇವಣಿ ದರಗಳನ್ನು ಆಧರಿಸಿ ಪ್ರಕಟಿಸಲಾಗುತ್ತದೆ. ತೀವ್ರ ವಿತ್ತೀಯ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಸರಕಾರಕ್ಕೆ ಈ ದರ ಕಡಿತ ಅನಿವಾರ್ಯವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ..

ಹಿರಿಯ ನಾಗರಿಕರ ಐದು ವರ್ಷಗಳ ಉಳಿತಾಯ ಯೋಜನೆಗೆ ನೀಡಲಾಗುವ ಬಡ್ಡಿದರವನ್ನೂ ಶೇ 0.9ರಷ್ಟು ಕಡಿತಗೊಳಿಸಿ ಶೇ 6.5ಕ್ಕೆ ಇಳಿಸಲಾಗಿದೆ. ಈ ಬಡ್ಡಿಯ ಮೊತ್ತವನ್ನು ತ್ರೈಮಾಸಿಕವಾಗಿ ಹಿರಿಯರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.

ಅದೇ ರೀತಿ ಎರಡು ವರ್ಷಗಳ ಸ್ಥಿರ ಠೇವಣಿಯ ಬಡ್ಡಿದರವನ್ನು ಶೇ 0.5ರಷ್ಟು ಕಡಿತಗೊಳಿಸಿ ಶೇ 5ಕ್ಕೆ ಇಳಿಸಲಾಗಿದೆ. ಮೂವರು ವರ್ಷಗಳ ಸಾವಧಿ ಠೇವಣಿಯ ಬಡ್ಡಿದರವನ್ನು ಶೇ 0.4ರಷ್ಟು ಕಡಿತ ಮಾಡಲಾಗಿದ್ದು, ಐದು ವರ್ಷಗಳ ಸಾವಧಿ (ಟರ್ಮ್‌ ಡೆಪಾಸಿಟ್) ಠೇವಣಿ ದರವನ್ನು ಶೇ 0.9ರಷ್ಟು ಕಡಿತಮಾಡಿ ಶೇ 5.8ಕ್ಕೆ ಇಳಿಸಲಾಗಿದೆ.

ಹೆಣ್ಣುಮಕ್ಕಳ ಉಳಿತಾಯ ಯೋಜನೆಯಾಗಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವೂ ಶೇ 0.7ರಷ್ಟು ಕಡಿತಗೊಂಡಿದ್ದು, ಶೇ 6.9ಕ್ಕೆ ಇಳಿಕೆಯಾಗಿದೆ.

ಕಿಸಾನ್ ವಿಕಾಸ ಪತ್ರ (ಕೆವಿಪಿ) ಮೇಲಿನ ಬಡ್ಡಿದರ ಶೇ 0.7ರಷ್ಟು ಕಡಿತವಾಗಿದ್ದು ಶೇ 6.9ರಿಂದ ಶೇ 6.2ಕ್ಕೆ ಇಳಿಸಲಾಗಿದೆ.

2016ರಲ್ಲಿ ತ್ರೈಮಾಸಿಕ ಬಡ್ಡಿದರವನ್ನು ಪ್ರಕಟಿಸುತ್ತ ಹಣಕಾಸು ಸಚಿವಾಲಯವು, ಸಣ್ಣ ಉಳಿತಾಯಗಳ ಬಡ್ಡಿದರವು ಸರಕಾರಿ ಬಾಂಡ್‌ಗಳು ನೀಡುವ ಪ್ರತಿಫಲದ ಜತೆ ಜೋಡಣೆಯಾಗಿರುತ್ತವೆ ಎಂದು ಹೇಳಿತ್ತು.

ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಸತತ ನಾಲ್ಕನೇ ಬಾರಿಗೆ ಬಡ್ಡಿದರಗಳನ್ನು ಶೇ 4ರ ಮಟ್ಟದಲ್ಲೇ ಸ್ಥಿರಗೊಳಿಸುವ ತೀರ್ಮಾನವನ್ನು ಕಳೆದ ತಿಂಗಳು ಕೈಗೊಂಡಿತ್ತು.

ಕಳೆದ ಒಂದು ವರ್ಷದಲ್ಲಿ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಸರಕಾರ ಕಡಿತಗೊಳಸಿರುವುದು ಇದು ಎರಡನೇ ಬಾರಿಯಾಗಿದೆ. 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಈ ಬಡ್ಡಿದರಗಳನ್ನು ಶೇ 0.7ರಿಂದ 1.4ರ ವರೆಗಿನ ಪ್ರಮಾಣದಲ್ಲಿ ಕಡಿತಗೊಳಿಸಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಇಂದಿನಿಂದ ಬದಲಾಗಲಿದೆ ಹಲವು ಹಣಕಾಸಿನ ನಿಯಮಗಳು: ಯಾವುದೆಲ್ಲ ಗೊತ್ತಾ…?

Sushmitha Jain

ದ.ಕ. ಜಿಲ್ಲೆಯಲ್ಲಿ 48000 ಕ್ವಿಂಟಾಲ್ ಪಡಿತರ ಅಕ್ಕಿ ವಿತರಣೆ

Upayuktha

ಕೋವಿಡ್ 19 ನಿರ್ವಹಣೆ: ಬಿಎಸ್‌ವೈ ಸರಕಾರದ ‘4ಟಿ’ ಸೂತ್ರಕ್ಕೆ ಜೆ.ಪಿ ನಡ್ಡಾ ಮೆಚ್ಚುಗೆ

Upayuktha