ಯೋಗ- ವ್ಯಾಯಾಮ ಲೇಖನಗಳು

ವಿಶ್ವ ಯೋಗ ದಿನಾಚರಣೆ 2020: ಯೋಗ ಎಂಬುದು ಮನೋ ಪ್ರಧಾನ

ಸರಳೀಕರಣ ಎಂಬುದು ಅಗತ್ಯವಾದದ್ದು. ಆದರೆ ಸರಳೀಕರಣದ ಭರದಲ್ಲಿ ಮೂಲರೂಪವನ್ನು ವಿರೂಪಗೊಳಿಸುವ ಸಂಗತಿಗಳು ಅಪೇಕ್ಷಿತವಲ್ಲ. ಯೋಗದ ಬಗ್ಗೆ ಕೇಳಿದರೆ ಅದೊಂದು ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳಬಲ್ಲ ಸಾಧನೆ ಎಂದು ಅಪಾರ್ಥ ಮಾಡಿಕೊಂಡವರ ಸಂಖ್ಯೆ ಬಹಳಷ್ಟಿದೆ. ಅಪಾರ್ಥ ಮಾಡಿಕೊಂಡಿದ್ದೇವೆ ಎಂಬುದರ ಅರಿವು ಇಲ್ಲದೆ ಹಾಗೆಯೇ ಲೋಕ ಭಾವಿಸಿಕೊಂಡು ಹೋಗುತ್ತಿದೆ. ಯೋಗವೆಂಬುದು ಸಂಪೂರ್ಣ ಆಂತರಂಗಿಕವಾಗಿ ನಡೆಯುವ ಮನಸ್ಸಿಗೆ ಸಂಬಂಧಪಟ್ಟ ಪ್ರಕ್ರಿಯೆಯೇ ಹೊರತು, ದೈಹಿಕವಾದ ಅಂಗ ವಿನ್ಯಾಸಗಳಿಗೆ ಮಾತ್ರ ಸೀಮಿತವಾದದ್ದಲ್ಲ ಎಂಬುದನ್ನು ಯೋಗದ ಮೂಲ ಭೂಮಿಯಾದ ಭಾರತ ದೇಶದಲ್ಲಿ ಮತ್ತೊಮ್ಮೆ ಪಾಠಮಾಡುವ ಪ್ರಕ್ರಿಯೆಗಳು ಜರುಗಬೇಕಾಗಿದೆ.

‘ತಂ ವಿದ್ಯಾತ್ ದುಃಖ ಸಂಯೋಗ ವಿಯೋಗಂ ಯೋಗ ಸಂಜ್ಜ್ನಿತಂ’ ಎಂದು ಉಪನಿಷತ್ತುಗಳ ಸಾರಭೂತ ವೆಂದು ಭಾವಿಸಿರುವ ಭಗವದ್ಗೀತೆಯಲ್ಲಿ ಗೀತಾಚಾರ್ಯ ತಾನೇ ಹೇಳಿದ್ದಾನೆ. ಹಾಗಾದರೆ ಜಗತ್ತಿನ ಅಂಟುವಿಕೆಯಿಂದ ಜೀವನಿಗೆ ಉಂಟಾದ ದುಃಖದಿಂದ ಬಿಡುಗಡೆ ಹೊಂದುವುದೇ ಯೋಗ. ಇನ್ನೊಂದು ಪದಗಳಲ್ಲಿ ಹೇಳುವುದಿದ್ದರೆ ಶಾಶ್ವತವಾದ ಆನಂದವನ್ನು ಹೊಂದುವುದೇ ಯೋಗ. ಆ ದಾರಿ ಯೋಗ. ಹಾಗಾದರೆ ಇದು, ಯೋಗ ಎಂಬುದು ಯಾರು ದುಃಖಕ್ಕೆ ಒಳಗಾಗಿದ್ದಾರೆ ಅವರೆಲ್ಲರಿಗೂ ಅನ್ವಯಿಸುವಂಥದ್ದು. ಹಾಗಾದರೆ ನಮಗೆ ನಿಜವಾಗಿಯೂ ದುಃಖ ಬಂದಿದೆಯೇ ಎಂಬ ಪ್ರಶ್ನೆ ಸಹಜ. ದುಃಖ ಬಂದರೆ ಆ ದುಃಖದಿಂದ ನಿವೃತ್ತಿ ಹೊಂದುವುದಕ್ಕೆ ನಾವು ಪ್ರಯತ್ನಿಸುವುದಿಲ್ಲವೇ? ಯಾವುದನ್ನಾದರೂ ಕಹಿ ಎಂದು ತಿಳಿದಾಗ ಅದನ್ನು ನುಂಗುವುದರ ಬದಲು ಉಗುಳುವುದಿಲ್ಲವೇ? ಅಂದರೆ ದುಃಖ ಬಂದದ್ದು, ಪ್ರಪಂಚ ದುಃಖಕ್ಕೆ ಕಾರಣ ಎಂಬ ಜಿಗುಪ್ಸೆಯಿಂದ ಅಲ್ಲ, ತನಗೆ ಬೇಕಾದ ಹಾಗೆ ಘಟನೆಗಳು ಘಟಿಸಲಿಲ್ಲವಲ್ಲ ಎಂಬ ಹತಾಶೆ ಮತ್ತು ರೋಷದಿಂದ. ಆದರೆ ಅದು ವಿಷಾದ ವೆಂದು ಕರೆಯಲ್ಪಡುವ, ಯೋಗಕ್ಕೆ ಅಗತ್ಯವಾದ ಪ್ರಾಥಮಿಕ ಭೂಮಿಕೆ ಅಲ್ಲ. ವಿಷಾದವಿಲ್ಲದೆ ಯೋಗವಿಲ್ಲ. ವಿಷಾದವನ್ನು ಬರಿಸಿ ಕೊಳ್ಳುವುದಕ್ಕೂ ಆಗುವುದಿಲ್ಲ. ಹಾಗಾದರೆ ನಿಜವಾದ ವಿಷಾದವನ್ನು ಒದಗಿಸಿಕೊಡುವಂತೆ ಪ್ರಕೃತಿಯನ್ನು ಬೇಡುವುದೇ ಪ್ರಾರ್ಥನೆ.

ಬಹುಶಃ ನಾಮಸ್ಮರಣೆ, ಚಿಂತನೆ, ಶರಣಾಗತಿಗಳು ಮನಸ್ಸನ್ನು ಪರಿಶುದ್ಧ ಗೊಳಿಸಿ ಆತ್ಯಂತಿಕವಾದ ಆನಂದದ ಕಡೆಗೆ, ಸತ್ಯದ ಕಡೆಗೆ ಮುಖಮಾಡುವಂತೆ ಮಾಡುವ ಆಂತರಿಕ ಪರಿಕರಗಳು. ಭೂಮಿಯಿಂದ ದೂರಕ್ಕೆ ಏನನ್ನೇ ಎಸೆದರೂ ಮರಳಿ ಭೂಮಿಯ ಕಡೆಗೆ ಸೆಳೆಯಲ್ಪಡುವ ಗುರುತ್ವಾಕರ್ಷಣೆ. ಅದೇ ರೀತಿ, ಬೀಜವೊಂದು ಮೊಳಕೆಯೊಡೆದು ಮಣ್ಣನ್ನು ಸೀಳಿಕೊಂಡು ಮೇಲ್ಮುಖ ಮಾಡಿ ಬೆಳಕಿನ ಕಡೆಗೆ ಬೆಳೆಯುವುದು ಮತ್ತೊಂದು ಆಕರ್ಷಣೆ. ಅದು ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಸೂರ್ಯನೆಡೆಗೆ ಮುಖ ಮಾಡುತ್ತದೆ. ಅದೇ ರೀತಿಯಲ್ಲಿ ಜಿಗುಪ್ಸೆ ಹೊಂದಿದ ಮನಸ್ಸು ಜಗತ್ತಿನ ಇಂದ್ರಿಯ ಪ್ರಪಂಚಕ್ಕೆ ಸಂಬಂಧಿಸಿದ ಎಲ್ಲಾ ಆಕರ್ಷಣೆಗಳನ್ನು ಮೀರಿ, ಸ್ವಯಂಪ್ರಕಾಶದ ಕಡೆಗೆ ನೆಗೆಯುತ್ತದೆ. ಇದು ತಾನೇ ತಾನಾಗುವ ಪ್ರಕ್ರಿಯೆ. ಅಂದರೆ ಸಹಜ ಪ್ರಕ್ರಿಯೆ.

ಆದುದರಿಂದ ಈ ಪ್ರಕ್ರಿಯೆಯಲ್ಲಿ, ನದಿಯು ಸಮುದ್ರವನ್ನು ಸೇರುವ ಹಾದಿಯಲ್ಲಿ, ಆ ನೀರು ಅಡ್ಡ ಕಾಲುವೆಗಳ ಮೂಲಕ ಹರಿದು ಕೃಷಿ ಭೂಮಿಗಳನ್ನು ಸಮೃದ್ಧಗೊಳಿಸುವ ಪ್ರೀತಿಯಲ್ಲಿ, ಯೋಗಮಾರ್ಗದಲ್ಲಿ ಸಾಗುವ ಮನಸ್ಸು ತನ್ನ ದೇಹದ ಮೇಲೆ, ತನ್ನ ಸುತ್ತಲಿನ ಪ್ರಕೃತಿಯ ಮೇಲೆ, ತನ್ನ ಸುತ್ತ ಇರುವ ಮನಸ್ಸುಗಳ ಮೇಲೆ, ತನ್ನ ಪ್ರಭಾವವನ್ನು ಅಪೂರ್ವವಾಗಿ ಬೀರುತ್ತಲೇ ಇರುತ್ತದೆ.

ದೇಹಾರೋಗ್ಯ ಮತ್ತು ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಮನಸ್ಸಿನ ಪಾತ್ರ ಇರುವುದಾದರೆ, ಮನಸ್ಸಿನ ಮೇಲೆ ಪ್ರಭಾವ ಬೀರಬಲ್ಲ, ಮನಸ್ಸನ್ನು ಆಮೂಲಾಗ್ರ ಪರಿವರ್ತಿಸಬಲ್ಲ ಯೋಗದ ಪಾತ್ರವು ಆರೋಗ್ಯದ ಮೇಲೆ ಇದ್ದೇ ಇದೆ. ಆದರೆ ದೇಹದ ಭಾಗಗಳ ನಮನ ಶೀಲತೆಗಿಂತ ಮನಸ್ಸಿನ ನಮನ ಶೀಲತೆ ಎಷ್ಟಿದೆ ಎಂಬುದು ಪ್ರಾಮುಖ್ಯ.

ಇಂದು ಮನಸ್ಸು ,ನರಮಂಡಲ ಮತ್ತು ರೋಗ ನಿರೋಧಕಶಕ್ತಿ- ಇವುಗಳ ನಡುವಿನ ಒಳ ಸಂಬಂಧಗಳನ್ನು ಅಧ್ಯಯನ ಮಾಡುವ ಸಲುವಾಗಿ ಕಳೆದ ನಲವತ್ತು ವರ್ಷಗಳಿಂದ ಸೈಕೋ ನ್ಯೂರೋ ಇಮ್ಯುನಾಲಜಿ ಎಂಬ ಹೊಸ ಶಾಖೆ ಮೈತಳೆದಿದೆ. ನ್ಯೂರೋಟ್ರಾನ್ಸ್ಮಿಟರ್, ಹಾರ್ಮೋನುಗಳು, ನ್ಯೂರೋಪೆಪ್ಟೈಡ್ ಇವುಗಳ ವರ್ತುಲ ರೋಗ ನಿರೋಧಕ ಶಕ್ತಿಗೆ ಕಾರಣವಾದ ಕೋಶಗಳ ಕ್ರಿಯಾಶೀಲತೆಯ ಮೇಲೆ ತೀವ್ರ ಪ್ರಭಾವ ಬೀರುತ್ತದೆ ಎಂಬ ಅಂಶ ದೃಢೀಕರಣ ಆಗಿದೆ. ಅವುಗಳಿಗೆ ನರಕೋಶ ಗಳೊಂದಿಗೆ ಸಂಪರ್ಕಿಸುವ ಸಾಮರ್ಥ್ಯವಿದೆ.,ಸೈಟೋಕೈನ್ ಗಳ ಮೂಲಕ.
ದೀರ್ಘಕಾಲೀನ ಒತ್ತಡವು ಇಮ್ಯೂನ್ ಸಿಸ್ಟಮ್ ಮೇಲೆ ಪ್ರಭಾವಬೀರಿ ಚರ್ಮರೋಗಗಳನ್ನು ಸಹಿತ ಉಂಟುಮಾಡುತ್ತವೆ ಎಂಬ ಕಾರಣಕ್ಕೆ, ಇಂದು ಅಂತಹ ರೋಗಗಳಲ್ಲಿ ಮನಸ್ಸಿನ ಕಡೆಗೆ ಗಮನಕೊಟ್ಟು ಚಿಕಿತ್ಸೆ ನೀಡುವ ಪರಂಪರೆ ಶುರುವಾಗಿದೆ.

ಒತ್ತಡವು ದೇಹದ ಒಳಗೆ ಎಂಡೋಟಾಕ್ಸಿನ್ ಪ್ರಮಾಣವನ್ನು ಹಾಗೂ ದೇಹದಲ್ಲಿನ ಕೋಶಗಳ ಉರಿಯೂತವನ್ನು ಉಂಟುಮಾಡುತ್ತದೆ. ಸಾಂಕ್ರಾಮಿಕವಲ್ಲದ ಸಕ್ಕರೆ ಕಾಯಿಲೆ, ರಕ್ತದೊತ್ತಡದಂತಹ ರೋಗಗಳಲ್ಲಿ ಇಂತಹ ಸಣ್ಣ ಪ್ರಮಾಣದ ಆಂತರಿಕ ಇನ್ಫ್ಲಮ್ಮೇಶನ್ ಇರುವುದು ಸಂಶೋಧನೆಗಳಿಂದ ಕಂಡುಬಂದಿದೆ. ಒತ್ತಡವು ದೇಹದ ಒಳಗಿನ ಸಮಸ್ಥಿತಿಯಲ್ಲಿ (ಹೋಮಿಯೋಸ್ತಾಸಿಸ್) ವ್ಯತ್ಯಯಗಳನ್ನು ತರುವುದರ ಮೂಲಕ ಈ ರೀತಿಯ ಉರಿಯೂತವನ್ನು ಸೃಷ್ಟಿಸುತ್ತದೆ. ಶರೀರದ ಆಂತರಿಕ ಜೀವ ರಾಸಾಯನಿಕ ಕ್ರಿಯೆಗಳಿಗೆ ಬೇಕಾದ ನೀರು, ಸೋಡಿಯಂ, ಹಾಗೂ ಶಕ್ತಿ ನೀಡುವುದಕ್ಕೆ ಬೇಕಾದ ಅಂಶಗಳ ಅಗತ್ಯವನ್ನು ಹೆಚ್ಚು ಮಾಡುತ್ತದೆ. ಆಗ ಆ ಅಗತ್ಯವನ್ನು ಪೂರೈಸುವುದಕ್ಕೆ, ಕರುಳಿನಲ್ಲಿ ನ ಪರ್ಮಿಯೇಬಿಲಿಟಿ ಹೆಚ್ಚಾಗುತ್ತದೆ. ಆಗ ಅದು ಬ್ಯಾಕ್ಟೀರಿಯಾ ಗಳಂತಹ ರೋಗಾಣುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೆಚ್ಚುಹೆಚ್ಚಾಗಿ ರಕ್ತಪರಿಚಲನೆ ಯೊಳಗೆ ಸೇರಿಸುತ್ತದೆ. ಆ ವಿಷಕಾರಿ ಅಂಶಗಳು ದೇಹದೊಳಗಿನ ಕೋಶಗಳ ಇನ್ಫ್ಲಮ್ಮೇಶನ್ ಉಂಟುಮಾಡುತ್ತವೆ. ಇದನ್ನು ‘ಮಾರ್ಕರ್ಸ್ ಆಫ್ ಎಂಡೋಟಾಕ್ಸಿಮಿಯಾ ‘ ಅಂಶಗಳ ಪ್ರಮಾಣವು ರಕ್ತದಲ್ಲಿ ಹೆಚ್ಚಾದುದನ್ನು ವಿಜ್ಞಾನಿಗಳು ಪತ್ತೆ ಹಚ್ಚುವುದರ ಮೂಲಕ ಕಂಡುಕೊಂಡಿದ್ದಾರೆ. ಆದಕಾರಣ, ಮಾನಸಿಕ ಪ್ರಭಾವವನ್ನು ಬೀರುವ ಶಾಸ್ತ್ರೀಯವಾದ ಯೋಗದ ಅನುಸಂಧಾನದ ಮುಖೇನ ಮನಸ್ಸು ಹಾಗೂ ದೇಹಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು ಸಾಧ್ಯವಾಗುತ್ತದೆ.

– ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು, ವಾಗ್ಮಿ, ಚಿಂತಕ
ಪ್ರಸಾದ್ ಹೆಲ್ತ್ ಕೇರ್ ಸೆಂಟರ್, ಪುರುಷರಕಟ್ಟೆ, ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ.
rpbangaradka@gmail.com.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ತಲೆ ನೋವುಗಳ ರಾಜ ಮೈಗ್ರೇನ್: ಕಾರಣವೇನು? ಶಮನ ಹೇಗೆ?

Upayuktha

ಎಲ್ಲರ ಪರಮಾಪ್ತ ಪಾರಸಿಟಮೋಲ್: ಆದರೆ ದುರ್ಬಳಕೆ ಸಲ್ಲದು

Upayuktha

ಅಂತರಂಗದ ಚಳವಳಿ: ನಗರಗಳಲ್ಲಿ ನಿಜಕ್ಕೂ ‘ನಾಗರಿಕತೆ’ ಇದೆಯೇ…?

Upayuktha