ಕ್ರಿಕೆಟ್ ಕ್ರೀಡೆ ಸಂದರ್ಶನ

ಸಚಿನ್, ಕೊಹ್ಲಿ ನೆಚ್ಚಿನ ಭಂಡಾರಿಗೆ ಲಾಕ್‍ಡೌನ್ ಸಂಕಷ್ಟ!

4 ತಿಂಗಳಿನಿಂದ ಕೆಲಸವಿಲ್ಲ, ಮನೆ ಬಾಡಿಗೆ ಕಟ್ಟಲೂ ಪರದಾಟ
ಉಪಯುಕ್ತ ನ್ಯೂಸ್ ಜತೆ ನೋವು ಹಂಚಿಕೊಂಡ ರಾಮ್ ಭಂಡಾರಿ

 

ಹೇಮಂತ್ ಸಂಪಾಜೆ
ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ, ಹಾಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸೇರಿದಂತೆ ದೇಶ-ವಿದೇಶದ ನೂರಾರು ಯಶಸ್ವಿ ಕ್ರಿಕೆಟಿಗರ ಸಾಧನೆ ಹಿಂದೆ ನಮ್ಮ ಬೆಂಗಳೂರಿನ ನಂಟಿದೆ! ಅರೆ.. ಇದು ಹೇಗೆ ಸಾಧ್ಯ? ಎಂದು ನೀವು ಅಂದುಕೊಳ್ಳಬಹುದು, ಆದರೆ ಇದು ನಿಜ…ನೀವು ನಂಬಲೇಬೇಕು…

ಉದ್ಯಾನನಗರಿಯ ಉತ್ತರಹಳ್ಳಿಯ ರಾಮ್ ಭಂಡಾರಿ ಕಂಡರೆ ವಿಶ್ವದ ಖ್ಯಾತ ಕ್ರಿಕೆಟಿಗರಿಗೆಲ್ಲ ಅತೀವ ಪ್ರೀತಿ, ಬಹಳಷ್ಟು ಸಾಧಕ ಕ್ರಿಕೆಟಿಗರಿಗೆ ರಾಮ್ ಭಂಡಾರಿ ಬ್ಯಾಟ್ ಸಮತೋಲನ (ಬ್ಯಾಟ್ ಬ್ಯಾಲೆನ್ಸ್) ಮಾಡಿಕೊಟ್ಟು ಶತಕ ಬಾರಿಸಲು ನೆರವಾಗಿದ್ದಾರೆ. ಅವರ ಸಾಧನೆಯಲ್ಲಿ ತಾವೂ ಭಾಗಿಯಾಗುವ ಮೂಲಕ ಕ್ರಿಕೆಟಿಗರ ಪ್ರೀತಿ ಗೌರವಗಳನ್ನು ಸಂಪಾದಿಸಿದ್ದಾರೆ. ಇಷ್ಟೆಲ್ಲ ಸಂಪರ್ಕ ಇದ್ದರೂ ರಾಮ್ ಭಂಡಾರಿ ಶ್ರೀಮಂತರಲ್ಲ..! ಇಂದಿಗೂ ಬಾಡಿಗೆ ಮನೆಯಲ್ಲೇ ಜೀವನ ನಡೆಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅವರಿಗೆ ಕೆಲಸವಿಲ್ಲ, ಇದ್ದುದರಲ್ಲೇ ಜೀವನ, 60ರ ಇಳಿ ವಯಸ್ಸಿನಲ್ಲೂ ರಾಮ್ ಭಂಡಾರಿ ಜೀವನ ನಿರ್ವಹಿಸಲು ಒದ್ದಾಡುತ್ತಿದ್ದಾರೆ. ತಮ್ಮ ಕಷ್ಟದ ಬಗ್ಗೆ ಉಪಯುಕ್ತ ನ್ಯೂಸ್ ಸಂದರ್ಶನದಲ್ಲಿ ರಾಮ್ ಭಂಡಾರಿ ಮಾತನಾಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಆಗಿರುವ ಸಮಸ್ಯೆ, ಕುಸಿದಿರುವ ಉದ್ಯಮ, ಸಾಧಕ ಕ್ರಿಕೆಟಿಗರ ಜತೆಗಿನ ಒಡನಾಟ ಸೇರಿದಂತೆ ಹಲವಾರು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಸಂಪೂರ್ಣ ಪಾಠ ಇಲ್ಲಿದೆ ನೋಡಿ..

ಲಾಕ್‍ಡೌನ್ ನಿಮ್ಮ ಬದುಕಿನಲ್ಲಿ ಯಾವ ರೀತಿಯ ಪರಿಣಾಮ ಬೀರಿದೆ?
`ಕೆಲಸವಿಲ್ಲದೆ ಮೂರ್ನಾಲ್ಕು ತಿಂಗಳುಗಳೇ ಆಗಿವೆ. ಸದ್ಯ ರಾಜ್ಯ, ದೇಶದಲ್ಲಿ ಯಾವ ಕ್ರಿಕೆಟ್ ಚಟುವಟಿಕೆ ಇಲ್ಲದೆ ಇರುವುದರಿಂದ ಸ್ಥಳೀಯ ಹುಡುಗರು ಯಾರೂ ಬ್ಯಾಟ್ ಬ್ಯಾಲೆನ್ಸ್ ಮಾಡಿಸಲು ಬರುತ್ತಿಲ್ಲ. ಇದರಿಂದಾಗಿ ಮನೆ ಬಾಡಿಗೆ, ದಿನಸಿ, ಕರೆಂಟ್‍ಬಿಲ್, ವಾಟರ್‍ಬಿಲ್ ಇದೆಲ್ಲವನ್ನು ಕಟ್ಟಿಕೊಂಡು ಬೆಂಗಳೂರಿನಲ್ಲಿ ಕುಟುಂಬ ನಡೆಸುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ’.

ಯಾರ ಸಹಾಯವನ್ನೂ ನೀವು ಕೇಳಲಿಲ್ಲವೆ?
`ಬ್ಯಾಟ್ ಬ್ಯಾಲೆನ್ಸ್ ಮಾಡುವುದರಿಂದ ನನಗೆ ಕೋಟ್ಯಂತರ ರೂ. ಆದಾಯ ಬರುವುದಿಲ್ಲ, ಒಂದು ಬ್ಯಾಟ್‍ಗೆ ಸಿಗುವ ಹಣ 150ರಿಂದ 200 ರೂ. ವರೆಗೆ ಮಾತ್ರ, ಅದೇ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರಾದರೆ ಒಂದು ಬ್ಯಾಟಿಗೆ 1 ಸಾವಿರ ರೂ. ನೀಡುತ್ತಾರೆ. ಐಪಿಎಲ್ ಸೇರಿದಂತೆ ವಿವಿಧ ಕೂಟಗಳಿಗಾಗಿ ಬೆಂಗಳೂರಿಗೆ ಬರುವ ಕ್ರಿಕೆಟಿಗರು ನನ್ನನ್ನು ಅವರು ಉಳಿದುಕೊಂಡಿರುವ ಹೋಟೆಲ್‍ಗೆ ಬರಲು ಹೇಳುತ್ತಾರೆ, ಬ್ಯಾಟ್ ಬ್ಯಾಲೆನ್ಸ್ ಮಾಡಿಕೊಡುವಂತೆ ಕೇಳುತ್ತಾರೆ. ಅವರ ಮನಸ್ಸಿಗೆ ಒಪ್ಪುವಂತೆ ಕೆಲಸ ಮಾಡಿಕೊಡುತ್ತೇನೆ, ಅದರಲ್ಲಿ ಶತಕ ಹೊಡೆದರೆ ನನಗೆ -ÉÇೀನ್ ಮಾಡಿ ಧನ್ಯವಾದಗಳನ್ನು ಹೇಳುತ್ತಾರೆ. ಸಚಿನ್, ಧೋನಿ, ರೋಹಿತ್, ಕೊಹ್ಲಿಯನ್ನು ಹಲವು ಭಾರೀ ಭೇಟಿಯಾಗಿದ್ದೇನೆ, ಆದರೆ ಅವರ ಬಳಿ ಒಂದು ದಿನವೂ ನನ್ನ ಕಷ್ಟ ಹೇಳಿಕೊಂಡಿಲ್ಲ. ಅವರ ಸ್ನೇಹವನ್ನು ವೈಯಕ್ತಿಕ ಲಾಭಕ್ಕಾಗಿ ಎಂದೂ ಬಳಸಿಕೊಂಡಿಲ್ಲ’.

ಕ್ರಿಕೆಟಿಗರ ಜತೆ ನಿಮ್ಮ ಒಡನಾಟ ಹೇಗಿದೆ?
`ಮೊದಲು ನಾನು ರಾಹುಲ್ ದ್ರಾವಿಡ್‍ಗೆ ಬ್ಯಾಟ್ ಬ್ಯಾಲೆನ್ಸ್ ಮಾಡಿಕೊಟ್ಟಿದ್ದೆ. ಆನಂತರ ನನಗೆ ಅವಕಾಶಗಳು ಹೆಚ್ಚು ಸಿಕ್ಕಿದವು. ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಯುವರಾಜ್, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಕ್ರಿಕೆಟಿಗರೂ ನನಗೆ ಕೆಲಸ ಕೊಟ್ಟರು, ಈಗಲೂ ಎಲ್ಲ ಕ್ರಿಕೆಟಿಗರಿಗೆ ನನ್ನ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸವಿದೆ. ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ಎಬಿಡಿ ವಿಲಿಯರ್ಸ್, ಕ್ರೀಸ್ ಗೇಲ್ ಸೇರಿದಂತೆ ವಿದೇಶಿ ಕ್ರಿಕೆಟಿಗರಿಗೂ ನನ್ನನ್ನು ಕಂಡರೆ ಗೌರವಿಸುತ್ತಾರೆ. ಒಂದು ಸಲ ಧೋನಿ ನನ್ನನ್ನು ಐಪಿಎಲ್ ಸಮಯದಲ್ಲಿ ಬ್ಯಾಟ್ ಬ್ಯಾಲೆನ್ಸ್ ಮಾಡಿಸಿಕೊಳ್ಳಲು ಬೆಂಗಳೂರಿನ ಪಂಚತಾರಾ ಹೋಟೆಲ್‍ಗೆ ಕರೆಸಿಕೊಂಡಿದ್ದರು. ನಾನು ಅಲ್ಲಿಗೆ ಹೋಗಿ ತಲುಪುವಷ್ಟರಲ್ಲಿ ತಂಡದ ಸಹ ಆಟಗಾರರ ಜತೆಗೂಡಿ ಧೋನಿ ಕೇರಂ ಆಡುತ್ತಿದ್ದರು, ಈ ವೇಳೆ ನಾನು ಬಂದಿದ್ದನ್ನು ಗಮನಿಸಿದ ಧೋನಿ `ಭಂಡಾರಿಯವರೇ ಇಲ್ಲಿ ಬನ್ನಿ.. ಒಂದು ಗುರಿ ಇಡಿ’ ಎಂದು ಕರೆದು ನನ್ನ ಕೈಯಲ್ಲಿ ಕೇರಂ ಆಡಿಸಿದ್ದರು. ಮತ್ತೊಂದು ಸಲ ದಿಲ್ಲಿ ಹೋಟೆಲ್‍ವೊಂದರಲ್ಲಿ ಇಂತಹುದೇ ಘಟನೆ ನಡೆಯಿತು, ವಿಂಡೀಸ್ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ಜತೆ ಊಟಕ್ಕೆ ಕುಳಿತಿದ್ದೆ, ಊಟ ಮುಗಿಸುತ್ತಿದ್ದಂತೆ ಅವರ ತಟ್ಟೆಯ ಜತೆ ನನ್ನ ತಟ್ಟೆಯನ್ನೂ ಚಂದ್ರಪಾಲ್ ಎತ್ತಿದರು, ಅರೆ..ನಾನೇ ತೆಗೆಯುವೆ ನನ್ನ ತಟ್ಟೆಯನ್ನು ನೀವು ಯಾಕೆ ತೆಗೆಯುತ್ತಿದ್ದೀರಿ? ಎಂದು ತಡೆಯಲು ಪ್ರಯತ್ನಿಸಿದ್ದೆ, ಅದಕ್ಕೆ ಚಂದ್ರಪಾಲ್ ಹೇಳಿದರು…`ಭಂಡಾರಿಯವರೇ ನೀವು ವಯಸ್ಸಿನಲ್ಲಿ ಹಿರಿಯರು, ನಿಮಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದಿದ್ದರು’.

ಕ್ರಿಕೆಟಿಗರಲ್ಲಿ ಯಾರು ನಿಮಗಿಷ್ಟ, ಏಕೆ?
ಎಲ್ಲ ಕ್ರಿಕೆಟಿಗರು ನನಗೆ ಇಷ್ಟಾನೆ, ಆದರೆ ನನ್ನ ಪಾಲಿಗೆ ಸಚಿನ್ ಸ್ಪೆಷಲ್. 2010ರಲ್ಲಿ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಪಂದ್ಯದಲ್ಲಿ ಸಚಿನ್ 200 ರನ್ ಬಾರಿಸಿದ್ದರು, ಆ ಬ್ಯಾಟ್‍ಗೂ ನಾನೇ ಬ್ಯಾಲೆನ್ಸ್ ಮಾಡಿಕೊಟ್ಟಿದ್ದೆ. ಸಚಿನ್ ಅವರದ್ದು ಹಿತಮಿತವಾದ ಮಾತು, ಯಾರೇ ಭೇಟಿಯಾದರೂ ಅತ್ಯಂತ ಸೌಜನ್ಯಯುತವಾಗಿ ಮಾತನಾಡಿಸುತ್ತಾರೆ. ಅವರು ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಹಲವು ಸಲ ನನ್ನನ್ನು ಮುಂಬೈಗೆ ಕರೆಸಿಕೊಂಡಿದ್ದರು. ಪಂಚತಾರಾ ಹೋಟೆಲ್‍ನಲ್ಲಿ ಉಳಿಯಲು ವಾಸ್ತವ್ಯ, ವಿಮಾನ ಟಿಕೆಟ್ ಎಲ್ಲವನ್ನೂ ಸಚಿನ್ ಬುಕ್ ಮಾಡಿಸುತ್ತಿದ್ದರು. 2011ರ ವಿಶ್ವಕಪ್ ಬಳಿಕವೂ ಸಚಿನ್‍ಗೆ ಮೂರು ಸಲ ಬ್ಯಾಟ್ ಮಾಡಿಕೊಟ್ಟಿದ್ದೆ.

ಬ್ಯಾಟ್ ಬ್ಯಾಲೆನ್ಸ್ ಅಂದರೇನು?
ಕ್ರಿಕೆಟಿಗರು ಹೊಸದಾಗಿ ಬ್ಯಾಟ್ ಖರೀದಿ ಮಾಡುತ್ತಾರೆ. ಹೊಸ ಬ್ಯಾಟ್ ತಕ್ಷಣಕ್ಕೆ ಉಪಯೋಗಿಸಲು ಆಗುವುದಿಲ್ಲ, ಅಂತಹ ಸಂದರ್ಭದಲ್ಲಿ ಆಟಗಾರರಿಗೆ ಬೇಕಾದಂತೆ ಬ್ಯಾಟ್ ಅನ್ನು ಬ್ಯಾಲೆನ್ಸ್ ಮಾಡಿಕೊಡುವುದರಲ್ಲಿ ರಾಮ್ ಭಂಡಾರಿ ನಿಪುಣರು, ಉಳಿದಂತೆ ಮುರಿದು ಹೋದ ಬ್ಯಾಟ್‍ಗಳು, ಸಣ್ಣ ಪುಟ್ಟ ದೋಷಗಳಿರುವ ಬ್ಯಾಟ್‍ಗಳನ್ನು ಕೂಡ ರಾಮ್ ಭಂಡಾರಿಗೆ ನೀಡಿದರೆ ಅವರು ಅದನ್ನು ಸರಿಪಡಿಸಿ ಮತ್ತೆ ಉಪಯೋಗಕ್ಕೆ ಬರುವಂತೆ ಮಾಡುತ್ತಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಮದ್ರಾಸ್ ವಿವಿ ಚಾಂಪಿಯನ್, ಮಂಗಳೂರು ವಿ.ವಿ ಮೂರನೇ ಬಾರಿಗೆ ಚಾಂಪಿಯನ್ ರನ್ನರ್ಸ್

Upayuktha

ಐಪಿಎಲ್ 2020: ಚೆನ್ನೈ ವಿರುದ್ಧ ಹೀನಾಯ ಸೋಲು, ಟೂರ್ನಿಯಿಂದ ಪಂಜಾಬ್ ಔಟ್

Upayuktha News Network

ಐಪಿಎಲ್ 2020: ಪಂಜಾಬ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಜಸ್ಥಾನ

Upayuktha News Network