ದೇಶ-ವಿದೇಶ ಪ್ರಮುಖ

ಮನಿ ಲಾಂಡರಿಂಗ್ ಕೇಸ್: ಬಂಧನದಿಂದ ಚಿದುಗೆ ರಕ್ಷಣೆ ಒಂದು ದಿನ ವಿಸ್ತರಣೆ

ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದ ವಿಚಾರಣೆಗಾಗಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಯತ್ನಕ್ಕೆ ನೀಡಿರುವ ತಡೆಯನ್ನು ಸುಪ್ರೀಂ ಕೋರ್ಟ್ ಒಂದು ದಿನ ವಿಸ್ತರಿಸಿದೆ.

ಜಸ್ಟಿಸ್ ಆರ್ ಭಾನುಮತಿ ಮತ್ತು ಎ.ಎಸ್ ಬೋಪಣ್ಣ ಅವರ ನ್ಯಾಯಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಚಿದಂಬರಂ ಪರ ವಕೀಲರ ವಾದಗಳನ್ನು ಆಲಿಸಿದ ಬಳಿಕ ಬಂಧನದ ವಿರುದ್ಧ ರಕ್ಷಣೆಯನ್ನು ಒಂದು ದಿನ ವಿಸ್ತರಿಸಿತು.

ಚಿದಂಬರಂ ಅವರು ಸಂತ್ರಸ್ತನಂತೆ ಬಿಂಬಿಸಿಕೊಂಡು ಅವರನ್ನು ಬಂಧಿಸಿದ ಪ್ರಕರಣದ ತನಿಖೆ ನಡೆಸುವ ಇ.ಡಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ವಾದಿಸಿದರು.

‘ಅವರು ಆರೋಪಿಸುತ್ತಿರುವಂತೆ ಇದು ದ್ವೇಷ ಸಾಧನೆಯ ಕ್ರಮವಲ್ಲ. ಅಕ್ರಮ ಹಣ ವರ್ಗಾವಣೆ (ಲೇವಾದೇವಿ) ವ್ಯವಹಾರದ ಈ ಪ್ರಕರಣ ಎಷ್ಟು ಗಂಭೀರ ಸ್ವರೂಪದ್ದು ಎಂಬುದಕ್ಕೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ಅಗತ್ಯವಿದೆ’ ಎಂದು ಮೆಹ್ತಾ ವಾದ ಮಂಡಿಸಿದರು.

ಪ್ರಕರಣದ ವಿಚಾರಣೆ ಗುರುವಾರವೂ ಮುಂದುವರಿಯಲಿದೆ. ಹೀಗಾಗಿ ಚಿದಂಬರಂಗೆ ಬಂಧನದ ವಿರುದ್ಧ ದೊರೆತಿರುವ ರಕ್ಷಣೆ ಕೂಡ ಒಂದು ದಿನ ವಿಸ್ತರಣೆಯಾಗಿದೆ. ಪ್ರಸ್ತುತ ಚಿದಂಬರಂ ಸಿಬಿಐ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿಕೆ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಚಿದಂಬರಂ ಆಗಸ್ಟ್ 20ರಂದು ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಈಗ ವಿಚಾರಣೆ ನಡೆಸುತ್ತಿದೆ.

ಚಿದಂಬರಂ ನಿರೀಕ್ಣಣಾ ಜಾಮೀನು ಕೋರಿಕೆಯನ್ನು ವಿರೋಧಿಸಿದ ಮೆಹ್ತಾ, ‘ಭೂತವೊಂದು ಬಲಿಪಶುವಿನಂತೆ ಬಿಂಬಿಸಿಕೊಳ್ಳಲು ಹವಣಿಸುತ್ತಿದೆ’ ಎಂದು ಬಣ್ಣಿಸಿದರು.

Related posts

ಕೊರೊನಾ ಆತಂಕ: ನಾಳೆಯಿಂದ ಒಂದು ವಾರ ಇವೆಲ್ಲ ಬಂದ್

Upayuktha

ಜನಪ್ರಿಯವಾಗುತ್ತಿದೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಆನ್‌ಲೈನ್ ಮಾರುಕಟ್ಟೆ

Upayuktha News Network

ಬೆಳಾಲು: ಆರ್ಥಿಕ ಧನ ಸಹಾಯ ಹಸ್ತಾಂತರ

Sushmitha Jain