ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನ ನೀಡಿ, ಡೆಲ್ಲಿ ಕ್ಯಾಪಿಟಲ್ಸ್ಗೆ ಶಾಕ್ ನೀಡಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ನಡೆದ ಅಲ್ಪ ಮೊತ್ತದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಕಪ್ತಾನ ಕಿರನ್ ಪೊಲಾರ್ಡ್ ಫೀಲ್ಡಿಂಗ್ ಆಯ್ದುಕೊಂಡರು. ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ದಾಂಡಿಗರು ಬ್ಯಾಟಿಂಗ್ ಮರೆತಂತೆ ಆಡಿದರು. ಮುಂಬೈಯ ಮೊನಚು ದಾಳಿಗೆ ಕಂಗಾಲಾದ ಬ್ಯಾಟ್ಸ್ಮನ್ಗಳು ಸಾಲಾಗಿ ಪೆವಿಲಿಯನ್ ಪರೇಡ್ ನಡೆಸುತ್ತಾ ಹೋದರು. ಡೆಲ್ಲಿ ಕಪ್ತಾನ ಶ್ರೇಯಸ್ ಅಯ್ಯರ್ (25) ಹಾಗೂ ಋಷಬ್ ಪಂತ್ (21) ತುಸು ಹೋರಾಟ ತೋರಿದರು. ಆದರೆ ಅದು ತಂಡಕ್ಕೆ ಗೌರವದ ಮೊತ್ತ ಸಂಪಾದಿಸಲೂ ಸಾಕಾಗಲಿಲ್ಲ. ಆರಂಭಿಕ ಆಟಗಾರ ಶಿಖರ್ ಧವನ್ ಶೂನ್ಯ ಸುತ್ತಿದರೆ, ಪೃಥ್ವಿ ಶಾ 10 ರನ್ ಅಷ್ಟೇ ಗಳಿಸಿದರು. ಮರ್ಕಸ್ ಸ್ಟೋನಿಸ್ 2, ಹರ್ಷಲ್ ಪಟೇಲ್ 5. ಶಿಮ್ರನ್ ಹೆಟ್ಮೇರ್ 11 ರನ್ ಗಳಿಸಿ ಔಟಾದರು. ಅಂತಿಮವಾಗಿ 20 ಓವರ್ಗಳಲ್ಲಿ ಡೆಲ್ಲಿ 9 ವಿಕೆಟ್ ಕಳೆದುಕೊಂಡು 110 ರನ್ಗಳ ಅಲ್ಪಮೊತ್ತವನ್ನು ಕಲೆ ಹಾಕಿತು.
ಮುಂಬೈ ಪರ ಜಸ್ಪ್ರೀತ್ ಬೂಮ್ರಾ ಹಾಗೂ ಟ್ರೆಂಟ್ ಬೋಲ್ಟ್ ತಲಾ 3 ವಿಕೆಟ್ ಸಂಪಾದಿಸಿ ಡೆಲ್ಲಿಯ ಬೆನ್ನೆಲುಬು ಮುರಿಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಬೂಮ್ರಾ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿದರೆ, ಬೋಲ್ಟ್ 4 ಓವರ್ಗಳಲ್ಲಿ ಕೇವಲ 21 ರನ್ ನೀಡಿದರು. ನಾಥಾನ್ ಕೋಟ್ಲರ್ ನೀಲ್ ಹಾಗೂ ರಾಹುಲ್ ಚಹಾರ್ ತಲಾ 1 ವಿಕೆಟ್ ಗಳಿಸಿದರು.
ಈ ಅಲ್ಪ ಮೊತ್ತವನ್ನು ಬೆನ್ನತ್ತಿದ ಮುಂಬೈಗೆ ಸುಲಭವಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟವರು ಆರಂಭಿಕ ಆಟಗಾರ ಇಶಾನ್ ಕಿಶನ್. ಕೇವಲ 47 ಎಸೆತಗಳಲ್ಲಿ 8 ಸಿಕ್ಸರ್, 3 ಬೌಂಡರಿಗಳ ಸುರಿಮಳೆಯ ಸಹಿತ 72 ರನ್ ಗಳಿಸಿ ಅಜೇಯರಾಗುಳಿದರು. ಉಳಿದಂತೆ, ಕ್ವಿಂಟನ್ ಡಿ ಕಾಕ್ 26 ರನ್ ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 12 ರನ್ ಮೂಲಕ ಅವರಿಗೆ ಸಾಥ್ ನೀಡಿದರು. ಅಂತಿಮವಾಗಿ 14.2 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ ಕೇವಲ 1 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಡೆಲ್ಲಿ ಪರ ಅನ್ರಿಕ್ ನಾರ್ಜೆ 1 ವಿಕೆಟ್ ಗಳಿಸಿದರು.
ಈ ಸೋಲಿನೊಂದಿಗೆ ಡೆಲ್ಲಿ ಮುಂದಿನ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಮುಂಬೈಗೆ ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ ಸಾಗಲು ಈ ಜಯ ನೆರವಾಯಿತು.
ಐಪಿಎಲ್ 2020: ಬೆಂಗಳೂರನ್ನು ಸೋಲಿಸಿ ಪ್ಲೇ ಆಫ್ ಸ್ಥಾನ ಗಟ್ಟಿಗೊಳಿಸಿದ ಮುಂಬೈ
ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ