ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಮುಂಬೈಯನ್ನು ಮಣಿಸಿದ ಚೆನ್ನೈನಿಂದ ಶುಭಾರಂಭ

ಅಬುಧಾಬಿ: ಅಂಬಟಿ ರಾಯುಡು ಮತ್ತು ಫಫ್ ಡು ಪ್ಲೆಸಿಸ್ ಅವರ 115 ರನ್‌ಗಳ ಜತೆಯಾಟದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಐಪಿಎಲ್ 2020 ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಮಣಿಸಿದೆ.
ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಆಯೋಜಿಸಲಾಗಿದ್ದು, ಶೇಖ್ ಅಬು ಝಾಯೇದ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ಉದ್ಘಾಟನಾ ಪಂದ್ಯ ನಡೆಯಿತು.

163 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಜೋಡಿಗಳಾದ ಶೇನ್ ವಾಟ್ಸನ್ (4) ಹಾಗೂ ಮುರಳಿ ವಿಜಯ್ (1) ಅವರನ್ನು ಸಿಎಸ್‌ಕೆ ಮೊದಲ ಎರಡು ಓವರ್‌ಗಳಲ್ಲೇ ಕಳೆದುಕೊಂಡಿತು. ಟ್ರೆಂಟ್ ಬೌಲ್ಟ್ ಅವರು ವಾಟ್ಸನ್ ಅವರ ವಿಕೆಟ್ ಕಿತ್ತರೆ, ಜೇಮ್ಸ್ ಪ್ಯಾಟಿನ್ಸನ್ ಅವರು ವಿಜಯ್ ಅವರ ವಿಕೆಟ್ ಸಂಪಾದಿಸಿದರು.

ಆದರೆ ನಂತರ ಬಂದ ರಾಯುಡು ಹಾಗೂ ಡು ಪ್ಲೆಸಿಸ್ ಅವರು ಮೂರನೇ ವಿಕೆಟ್‌ಗೆ ಭರ್ಜರಿ ಜತೆಯಾಟವಾಡಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಗೆಲುವಿನ ಸನಿಹ ಕೊಂಡೊಯ್ದರು. 48 ಎಸೆತಗಳಲ್ಲಿ ಭರ್ಜರಿ 71 ರನ್ ಗಳಿಸಿ ರಾಯುಡು ಔಟಾದರು. ಬಳಿಕ ಬಂದ ರವೀಂದ್ರ ಜಡೇಜಾ (10)ಬೇಗನೆ ನಿರ್ಗಮಿಸಿದರು. ಬಳಿಕ ಕ್ರೀಸ್‌ಗೆ ಬಂದ ಸ್ಯಾಮ್ ಕರನ್ 18 ರನ್ ಗಳಿಸಿದರೆ, ಡು ಪ್ಲೆಸಿಸ್ ಅವರು ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಸತತ ಎರಡು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಜಯದ ದಡ ಸೇರಿಸಿದರು. 44 ಎಸೆತಗಳಲ್ಲಿ 58 ರನ್ ಗಳಿಸಿದ ಡು ಪ್ಲೆಸಿಸ್ ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಧೋನಿ

ಇದಕ್ಕೂ ಮುನ್ನ, ಟಾಸ್ ಗೆದ್ದ ಚೆನ್ನೈ ಕಪ್ತಾನ ಎಂ.ಎಸ್.ಧೋನಿ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ಆರಂಭ ಉತ್ತಮವಾಗಿತ್ತಾದರೂ, ಅಂತಿಮ ಮೂರು ಓವರ್‌ಗಳಲ್ಲಿ ಕೇವಲ 22 ರನ್‌ಗಳ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ ಮುಂಬೈ ರನ್ ಓಟ 162 ರನ್‌ಗಳಿಗೆ ಸೀಮಿತವಾಯಿತು.

ಮೊದಲ 15 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ನಾಗಾಲೋಟಗೈಯುತ್ತಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಬ್ರೇಕ್ ಹಾಕುವಲ್ಲಿ ಲುಂಗಿ ಗಿಡಿ (3/38) ಹಾಗೂ ದೀಪಕ್ ಚಹರ್ (2/32) ಅವರು ಪ್ರಮುಖ ಪಾತ್ರವಹಿಸಿದ್ದರು.

ಮುಂಬೈ ಕಪ್ತಾನ ರೋಹಿತ್ ಶರ್ಮಾ (12) ಹಾಗೂ ಕ್ವಿಂಟನ್ ಡಿ ಕಾಕ್ (33) ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ಐದು ಓವರ್‌ಗಳಲ್ಲಿ 46 ರನ್ ಕಲೆ ಹಾಕಿತ್ತು. ಪಿಯೂಷ್ ಚಾವ್ಲಾ ಅವರು ರೋಹಿತ್ ಅವರ ವಿಕೆಟ್ ಸಂಪಾದಿಸಿ ಈ ಜೋಡಿಯನ್ನು ಮುರಿದರು. ನಂತರದ ಓವರ್‌ನಲ್ಲೇ ಡಿ ಕಾಕ್ ಅವರು ಕೂಡಾ ಔಟ್ ಆದರು. ಕರನ್ ಅವರು ಈ ವಿಕೆಟ್ ಸಂಪಾದಿಸಿದರು.

ಆದಾಗ್ಯೂ ನಂತರ ಬಂದ ಸೌರಭ್ ತಿವಾರಿ (42) ಹಾಗೂ ಸೂರ್ಯಕುಮಾರ್ ಯಾದವ್ (17) ತಂಡದ ರನ್ ಗಳಿಕೆಯ ಸ್ಥಿರತೆಯನ್ನು ಮುಂದಿನ 5 ಓವರ್‌ಗಳ ತನಕ ಕಾಪಾಡಿದರು. ಆದಾಗ್ಯೂ, 15ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅವರು ಎರಡು ವಿಕೆಟ್ ಸಂಪಾದಿಸುವ ಮೂಲಕ ಮುಂಬೈಯ ರನ್ ಗತಿಯನ್ನು ಬದಲಾಯಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೊರೊನಾ: ಭಾರತದಲ್ಲಿ ಸಾವಿನ ಸಂಖ್ಯೆ ದಿಢೀರ್ ಏರಿಕೆ

Upayuktha

ನೀಲಾವರ ಹೂವಿನಕೆರೆ ಗೋಶಾಲೆಗಳಿಗೆ ತುರ್ತು ಮೇವಿಗೆ ನೆರವು

Upayuktha

ಜಮ್ಮು ಮತ್ತು ಕಾಶ್ಮೀರ ಬಿ.ಡಿ.ಸಿ ಚುನಾವಣೆ: ಐತಿಹಾಸಿಕ ಶೇ 98 ಮತದಾನಕ್ಕೆ ಪ್ರಧಾನಿ ಮೋದಿ ಶ್ಲಾಘನೆ

Upayuktha

Leave a Comment