ಅಬುಧಾಬಿ: ಈ ಹಿಂದೆ ಚಾಂಪಿಯನ್ ಆಗಿ ಮೆರೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಲೀಗ್ ಹಂತದಲ್ಲೇ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕಳಪೆ ಆಟವಾಡಿ ಟೂರ್ನಿಯ ಅತ್ಯಂತ ಕನಿಷ್ಠ ಮೊತ್ತ ದಾಖಲಿಸಿದ ಚೆನ್ನೈ ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ಗಳಿಂದ ಹೀನಾಯವಾಗಿ ಸೋತಿದೆ. ಈ ಜಯದೊಂದಿಗೆ ರಾಜಸ್ಥಾನ ಮುಂದಿನ ಹಂತಕ್ಕೆ ಹೋಗುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸೋಮವಾರ ರಾತ್ರಿ ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂ ಈ ಟೂರ್ನಿಯ ಕಡಿಮೆ ಸ್ಕೋರ್ ಪಂದ್ಯಕ್ಕೆ ಸಾಕ್ಷಿಯಾಯಿತು.
ಟಾಸ್ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ದುಕೊಂಡರು. ಆರಂಭದಿಂದಲೂ ಮಂದಗತಿಯಲ್ಲಿ ಸಾಗಿದ ಚೆನ್ನೈ ಬ್ಯಾಟಿಂಗ್ ಕೊನೆಯವರೆಗೂ ಸುಧಾರಣೆಯಾಗಲೇ ಇಲ್ಲ. 5ನೇ ವಿಕೆಟ್ಗೆ ಬಂದ ರವೀಂದ್ರ ಜಡೇಜಾ ಗಳಿಸಿದ 35 ರನ್ ಚೆನ್ನೈನ ಆಟಗಾರರ ಸರ್ವಾಧಿಕ ಸ್ಕೋರ್ ಆಗಿತ್ತು. ಉಳಿದಂತೆ ಧೋನಿ 28, ಸ್ಯಾಮ್ ಕುರನ್ 22 ರನ್ ಗಳಿಸಿದರು. ಫಫ್ ಡಿ ಪ್ಲೆಸಿಸ್ (10), ಶೇನ್ ವ್ಯಾಟ್ಸನ್ (8), ಅಂಬಟಿ ರಾಯುಡು (13) ತಂಡಕ್ಕೆ ಆಧಾರವಾಗುವಲ್ಲಿ ವಿಫಲರಾದರು. ಯಾವುದೇ ಆಟಗಾರರು ಬ್ಯಾಟ್ ಝಳಪಿಸಲೂ ಇಲ್ಲ, ನೆಲಕ್ಕಚ್ಚಿ ನಿಂತು ಆಡುವ ಕೆಚ್ಚೂ ತೋರಲಿಲ್ಲ. ಅಂತಿಮವಾಗಿ ಚೆನ್ನೈ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಅಷ್ಟೇ ಗಳಿಸಲು ಶಕ್ತವಾಯಿತು.
ರಾಜಸ್ಥಾನದ ಪರ ಶ್ರೇಯಸ್ ಗೋಪಾಲ್ ಅತ್ಯಂತ ಮಿತವ್ಯಯಿ ಬೌಲರ್ ಎನಿಸಿದರು. 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಕಿತ್ತರು. ರಾಹುಲ್ ತೆವಾಟಿಯಾ 4 ಓವರ್ಗಳಲ್ಲಿ 18 ರನ್ ನೀಡಿ 1 ವಿಕೆಟ್ ಕಿತ್ತರು. ಉಳಿದಂತೆ ಜೋಫ್ರಾ ಆರ್ಚರ್ ಹಾಗೂ ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್ ಗಳಿಸಿದರು.
ಈ ಅಲ್ಪ ಮೊತ್ತವನ್ನು ಬೆಂಬತ್ತಿ ಹೊರಟ ರಾಜಸ್ಥಾನದ ಆರಂಭವೇನೂ ತೀರಾ ಉತ್ತಮವಾಗಿರಲಿಲ್ಲ. ರಾಬಿನ್ ಉತ್ತಪ್ಪ (4) ರನ್ಗೇ ಔಟಾದರು. ನಂತರ ಬಂದ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಪೆವಿಲಿಯನ್ಗೆ ಮರಳಿದರು. ಬೆನ್ ಸ್ಟೋಕ್ಸ್ 19 ರನ್ ಅಷ್ಟೇ ಗಳಿಸಿದರು. ಆದರೆ 4ನೇ ವಿಕೆಟ್ಗೆ ನಾಯಕ ಸ್ಟೀವನ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಮುರಿಯದ 98 ರನ್ ಜತೆಯಾಟವಾಡಿದ್ದಷ್ಟೇ ಅಲ್ಲ, ತಂಡಕ್ಕೆ ನಿರಾಯಾಸವಾದ ಗೆಲುವನ್ನೂ ದಕ್ಕಿಸಿಕೊಟ್ಟರು. ಸ್ಮಿತ್ 26 ರನ್ ಗಳಿಸಿದರೆ, ಬಟ್ಲರ್ ಕೇವಲ 34 ಎಸೆತಗಳಲ್ಲಿ 2 ಸಿಕ್ಸರ್, 7 ಬೌಂಡರಿ ಸಹಿತ ಭರ್ಜರಿ 70 ರನ್ ಸಿಡಿಸಿದರು. ಕೇವಲ 17.3 ಓವರ್ಗಳಲ್ಲಿ ರಾಜಸ್ಥಾನ 3 ವಿಕೆಟ್ ನಷ್ಟಕ್ಕೆ 126 ಗಳಿಸುವ ಮೂಲಕ ಜಯಮಾಲೆಯನ್ನು ಕೊರಳಿಗೆ ಹಾಕಿಕೊಂಡಿತು.
ಚೆನ್ನೈ ಪರ ದೀಪಕ್ ಚಹಾರ್ 4 ಓವರ್ಗಳಲ್ಲಿ 18 ರನ್ ನೀಡಿ 2 ವಿಕೆಟ್ ಕಿತ್ತು ಆರಂಭದಲ್ಲಿ ರಾಜಸ್ಥಾನದ ಪಾಳೆಯಕ್ಕೆ ಆತಂಕ ಮೂಡಿಸಿದರು. ಉಳಿದಂತೆ ಜೋಶ್ ಹಾಝ್ಲ್ವುಡ್ 1 ವಿಕೆಟ್ ಗಳಿಸಿದರು.
ಒಟ್ಟಾರೆ 10 ಪಂದ್ಯಗಳನ್ನು ಆಡಿರುವ ರಾಜಸ್ಥಾನ ರಾಯಲ್ಸ್ 4 ಪಂದ್ಯಗಳನ್ನಷ್ಟೇ ಗೆದ್ದುಕೊಂಡಿದೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯಗಳನ್ನು ಆಡಿದ್ದು, ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ.
ಐಪಿಎಲ್ 2020: ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಲಬ್ಬರಕ್ಕೆ ಬೆಚ್ಚಿದ ಚೆನ್ನೈ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ